ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಿದೆ.
ತಮಿಳುನಾಡಿನಲ್ಲಿ ಕೈಬಿಡಲಾದ 97 ಲಕ್ಷ ಹೆಸರುಗಳಲ್ಲಿ 66.4 ಲಕ್ಷ ಜನರು ತಮ್ಮ ವಾಸಸ್ಥಳಗಳನ್ನು ಬದಲಾಯಿಸಿದ್ದಾರೆ, 26.9 ಲಕ್ಷ ಜನರು ಸಾವನ್ನಪ್ಪಿದ್ದಾರೆ ಮತ್ತು 3.9 ಲಕ್ಷ ಜನರ ಹೆಸರುಗಳು ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.
ಹೆಸರು ತೆಗೆದು ಹಾಕಲಾದ ಜನರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿ ಹೆಸರು ಸೇರ್ಪಡೆಗೆ ಜನವರಿ 18ರವರೆಗೆ ಅವಕಾಶ ನೀಡಲಾಗಿದೆ.
ಚುನಾವಣಾ ಆಯೋಗ ಪ್ರಕಟಿಸಿರುವ ತಮಿಳುನಾಡಿನ ಕರಡು ಮತದಾರರ ಪಟ್ಟಿಯಲ್ಲಿ 2.6 ಕೋಟಿ ಪುರುಷರು ಮತ್ತು 2.7 ಕೋಟಿ ಮಹಿಳಾ ಮತದಾರರಿದ್ದಾರೆ ಎಂದು ವರದಿಗಳು ಹೇಳಿವೆ.
ಚೆನ್ನೈ ನಗರದ ಸುಮಾರು 14.2 ಲಕ್ಷ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಇದರಿಂದ ಅತಿ ಹೆಚ್ಚು , ಅಂದರೆ ಶೇಕಡ 35ರಷ್ಟು ಮತದಾರರ ಪ್ರಮಾಣ ಕಡಿಮೆಯಾಗಿದೆ ವರದಿಗಳು ವಿವರಿಸಿವೆ.
ಎಸ್‌ಐಆರ್ ಬಳಿಕ ಗುಜರಾತ್‌ನ ಕರಡು ಪಟ್ಟಿಯಲ್ಲಿದ್ದ ಮತದಾರರ ಸಂಖ್ಯೆ 5 ಕೋಟಿಯಿಂದ 4.3 ಕೋಟಿಗೆ ಇಳಿದಿದೆ.
ತೆಗೆದು ಹಾಕಲಾದ ಒಟ್ಟು 73.7 ಲಕ್ಷ ಹೆಸರುಗಳಲ್ಲಿ 51.8 ಲಕ್ಷ ಜನರು ತಮ್ಮ ವಾಸಸ್ಥಳಗಳನ್ನು ಬದಲಾಯಿಸಿದ್ದಾರೆ. 18 ಲಕ್ಷ ಜನರು ಸಾವನ್ನಪ್ಪಿದ್ದಾರೆ ಮತ್ತು 3.8 ಲಕ್ಷ ಜನರ ಹೆಸರುಗಳು ಒಂದಕ್ಕಿಂತ ಹೆಚ್ಚು ಬಾರಿ ಇತ್ತು ಎಂದು ಚುನಾವಣಾ ಆಯೋಗ ಹೇಳಿದೆ.
ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಪರಿಷ್ಕೃತ ಎಣಿಕೆ ಅವಧಿ ಡಿಸೆಂಬರ್ 14 ರಂದು ಕೊನೆಗೊಂಡಿತ್ತು.
2026ರ ಮೊದಲಾರ್ಧದಲ್ಲಿ ತಮಿಳುನಾಡು ಮತ್ತು 2027ರ ಕೊನೆಯಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆ.
ಎಸ್‌ಐಆರ್ ಬಳಿಕ, ಮಂಗಳವಾರ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ತಮಿಳುನಾಡು, ಗುಜರಾತ್ ಮತ್ತು ಪಶ್ಚಿಮ ಬಂಗಾಳದ ಜೊತೆಗೆ, ಇತರ ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿದೆ.
ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಪರಿಷ್ಕರಣೆ ಪೂರ್ಣಗೊಂಡ ಬಿಹಾರದಲ್ಲಿ, ಕನಿಷ್ಠ 47 ಲಕ್ಷ ಮತದಾರರನ್ನು ಅಂತಿಮ ಮತದಾರರ ಪಟ್ಟಿಯಿಂದ ಹೊರಗಿಡಲಾಗಿತ್ತು.


