ಧರ್ಮಸ್ಥಳದ ಪಾಂಗಳ ಕ್ರಾಸ್‌ನಲ್ಲಿ ಬುಧವಾರ (ಆ.6) ನಡೆದ ಯೂಟ್ಯೂಬ್ ಮಾಧ್ಯಮದವರ (ಪತ್ರಕರ್ತರ) ಮೇಲಿನ ಮಾರಣಾಂತಿಕ ದಾಳಿಯನ್ನು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳ್ತಂಗಡಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ.
ದಲಿತ ಪತ್ರಕರ್ತನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲು ಆಗ್ರಹಿಸಿದೆ.
ಹಲ್ಲೆಗೊಳಗಾದ ನಾಲ್ವರು ಪತ್ರಕರ್ತರ ಪೈಕಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ದಲಿತ ಸಮುದಾಯದ ಅಭಿ ಕೂಡ ಒಬ್ಬರು. ವರದಿಗಳ ಪ್ರಕಾರ, ಅಭಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಲ್ಲ. ಕುಡ್ಲ ರ‍್ಯಾಂಪೇಜ್ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್ ಅವರು ನೀಡಿರುವ ದೂರು ಆಧರಿಸಿ ಅಭಿ ಅವರ ಹೇಳಿಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ (ಆ.8) ಉಜಿರೆಯ ಬೆನಕ ಆಸ್ಪತ್ರೆಗೆ ಭೇಟಿ ನೀಡಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳ್ತಂಗಡಿಯ ಮುಖಂಡರು ಹಲ್ಲೆಗೊಳಗಾದ ದಲಿತ ಸಮುದಾಯದ ಪತ್ರಕರ್ತ ಅಭಿ ಮತ್ತು ಇತರರ ಆರೋಗ್ಯ ವಿಚಾರಿಸಿದ್ದಾರೆ.

ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಅದರ ಅಂಗವೆನಿಸಿಕೊಂಡಿರುವ ಮಾಧ್ಯಮದವರ ಮೇಲೆ ಸವಾರಿ ಮಾಡುವುದೆಂದರೆ, ಅಂದು ಸಂವಿಧಾನದ ಮೇಲೆ ಮಾಡುವ ದಾಳಿಯಾಗುತ್ತದೆ ಎಂದು ದಸಂಸ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿರುವ ದಸಂಸ ಬೆಳ್ತಂಗಡಿ ತಾಲೂಕು ಸಮಿತಿಯ ಮುಖಂಡ ಬಿ.ಕೆ ವಸಂತ್, ಹಲ್ಲೆಗೊಳಗಳಾದ ದಲಿತ ಪತ್ರಕರ್ತ ಅಭಿ ಅವರಿಂದ ಪೊಲೀಸರು ಕೇವಲ ಹೇಳಿಕೆ ಪಡೆದುಕೊಂಡಿದ್ದಾರೆ. ಇದು ಸಾಲದು, ಆರೋಪಿಗಳ ವಿರುದ್ದ ಪೊಲೀಸರು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು. ಅಲ್ಲದೆ, ಹಲ್ಲೆ ಮಾಡುವಾಗ ವಿಡಿಯೋ ಮಾಡುವುದಕ್ಕೆ ತಡೆಯೊಡ್ಡಿದ್ದಕ್ಕೆ ಮತ್ತು ಕ್ಯಾಮಾರ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾನಿ ಮಾಡಿದ್ದಕ್ಕೆ ದರೋಡೆ ಮತ್ತು ಸಾಕ್ಷ್ಯನಾಶ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಭಿ ಹಲ್ಲೆಗೊಳಗಾಗಿ ಅಸ್ವಸ್ಥರಾಗಿದ್ದಾಗ ಪೊಲೀಸರು ಅವರಿಂದ ಹೇಳಿಕೆ ಪಡೆದಿದ್ದಾರೆ. ಅದು ಸರಿಯಾಗಿಲ್ಲ. ಹಾಗಾಗಿ, ಪೊಲೀಸರು ಮತ್ತೊಮ್ಮೆ ಅವರಿಂದ ಹೇಳಿಕೆ ಪಡೆದು ಸರಿಯಾಗಿ ಪ್ರಕರಣ ದಾಖಲಿಸಬೇಕು. ದಲಿತ ದೌರ್ಜನ್ಯ ಸೇರಿದಂತೆ ಸೂಕ್ತ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು ಎಂದು ವಸಂತ್ ಒತ್ತಾಯಿಸಿದ್ದಾರೆ.
ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸಲು ಕಾಣದ ಕೈಗಳು ಮಾಧ್ಯಮದವರ ಮೇಲೆ ದಾಳಿ ಮಾಡಿಸಿದೆ ಎಂದು ವಂಸತ್ ಆರೋಪಿಸಿದ್ದಾರೆ.
ಉಜಿರೆ ಬೆನಕ ಆಸ್ಪತ್ರೆಗೆ ಭೇಟಿ ನೀಡಿದ ದಸಂಸ ಬೆಳ್ತಂಗಡಿ ನಿಯೋಗದಲ್ಲಿ ಶೇಖರ್ ಕುಕ್ಕೇಡಿ, ರಮೇಶ್ ಆರ್., ಬಿ.ಕೆ ವಸಂತ್ ಬೆಳ್ತಂಗಡಿ, ವೆಂಕಣ್ಣ ಕೊಯ್ಯೂರು, ನೇಮಿರಾಜ್ ಕಿಲ್ಲೂರ್, ಶ್ರೀಧರ್ ಎಸ್ ಕಳೆಂಜ, ಶಂಕರ್ ಮಾಲಾಡಿ, ಪ್ರಭಾಕರ್ ಶಾಂತಿಕೋಡಿ, ಹರೀಶ್ ಲಾಯಿಲ, ಕೂಸ ಅಳದಂಗಡಿ, ಸುಂದರ ನಾಲ್ಕೂರು, ಪುಷ್ಪರಾಜ್ ಶಿರ್ಲಾಲ್, ಸಂದೀಪ್ ಹೊಸಪಟ್ನ, ಶೇಖರ್ ಮಾಲಾಡಿ, ರಮೇಶ್ ಗಾಂಧಿನಗರ ಹಾಗೂ ಇತರರು ಇದ್ದರು.
ಧರ್ಮಸ್ಥಳ ಶವ ಶೋಧ: ಬಾಹುಬಲಿ ಬೆಟ್ಟದಲ್ಲಿ ಹೊಸ ಪಾಯಿಂಟ್ ತೋರಿಸಿದ ದೂರುದಾರ


