ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಿಹಾರದ ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ 65 ಲಕ್ಷ ಹೆಸರುಗಳನ್ನು ಚುನಾವಣಾ ಆಯೋಗ ಸೋಮವಾರ (ಆ.18) ಬಹಿರಂಗಪಡಿಸಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಬಳಿಕ, ಆಗಸ್ಟ್ 1ರಂದು ಚುನಾವಣಾ ಆಯೋಗ ಬಿಹಾರದ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ ವಿವಿಧ ಕಾರಣಗಳನ್ನು ನೀಡಿ 65 ಲಕ್ಷ ಹೆಸರುಗಳನ್ನು ಕೈಬಿಟ್ಟಿತ್ತು.
ಚುನಾವಣಾ ಆಯೋಗದ ಕ್ರಮ ವಿರೋಧಿಸಿ ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಮತದಾರರ ಪಟ್ಟಿಯಿಂದ ಕೈ ಬಿಟ್ಟ 65 ಲಕ್ಷ ಹೆಸರುಗಳು ಮತ್ತು ಅವುಗಳನ್ನು ಕೈಬಿಟ್ಟ ಕಾರಣವನ್ನು ಆಗಸ್ಟ್ 19ರೊಳಗೆ ಬಹಿರಂಗಪಡಿಸುವಂತೆ ನಿರ್ದೇಶಿಸಿತ್ತು ಮತ್ತು ಆಗಸ್ಟ್ 22ರ ಒಳಗೆ ಅನುಸರಣಾ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಚುನಾವಣಾ ಆಯೋಗವು ಎಲ್ಲಾ ಮತಗಟ್ಟೆಗಳಲ್ಲಿ ಗೈರುಹಾಜರಿ, ಸ್ಥಳಾಂತರಗೊಂಡ ಮತ್ತು ಮೃತ (ಎಎಸ್‌ಡಿ) ಮತದಾರರ ಹೆಸರುಗಳನ್ನು ಪ್ರಕಟಿಸುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆನ್‌ಲೈನ್‌ನಲ್ಲಿಯೂ ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪ್ರಕಾರ, ರೋಹ್ತಾಸ್, ಬೇಗುಸರಾಯ್, ಅರ್ವಾಲ್ ಮತ್ತು ಇತರ ಸ್ಥಳಗಳ ಮತಗಟ್ಟೆಗಳಲ್ಲಿ ಎಎಸ್‌ಡಿ ಪಟ್ಟಿಗಳನ್ನು ಪ್ರದರ್ಶಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಚುನಾವಣಾ ಆಯೋಗ ಹೇಳಿದಂತೆ ಗೈರುಹಾಜರಿ, ಸ್ಥಳಾಂತರಗೊಂಡ ಮತ್ತು ಮೃತ ಮತದಾರರ ಹೆಸರುಗಳು ಒಳಗೊಂಡಿರುವ ಪಟ್ಟಿಯನ್ನು ಪಂಚಾಯತ್ ಮಟ್ಟದ ಕಚೇರಿ ಮತ್ತು ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಕಾರಣಗಳೊಂದಿಗೆ ಪ್ರದರ್ಶಿಸಲು ನ್ಯಾಯಾಲಯ ನಿರ್ದೇಶಿಸಿದೆ.
ಪಟ್ಟಿ ಲಭ್ಯವಿರುವ ಸ್ಥಳಗಳ ಬಗ್ಗೆ ಜನರಿಗೆ ತಿಳಿಸಲು ದೂರದರ್ಶನ ಸುದ್ದಿ ವಾಹಿನಿಗಳು ಮತ್ತು ರೇಡಿಯೋಗಳ ಜೊತೆಗೆ ಸ್ಥಳೀಯ ಮತ್ತು ಇಂಗ್ಲಿಷ್ ಸೇರಿದಂತೆ ಪತ್ರಿಕೆಗಳ ಮೂಲಕ ವ್ಯಾಪಕ ಪ್ರಚಾರವನ್ನು ಮಾಡುವಂತೆ ನ್ಯಾಯಪೀಠ ಒತ್ತಿ ಹೇಳಿದೆ.
ಆಗಸ್ಟ್ 22ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಪೀಠ, ಚುನಾವಣಾ ಆಯೋಗವು ತನ್ನ ನಿರ್ದೇಶನದ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ, ಪಟ್ಟಿಯಿಂದ ಕೈಬಿಡಲಾದ 65 ಲಕ್ಷ ಮತದಾರರ ಪೈಕಿ 22.34 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ, 36.28 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಪರಿಶೀಲನೆಯ ವೇಳೆ ಗೈರುಹಾಜರಾದವರು ಮತ್ತು 7.01 ಲಕ್ಷ ಜನರ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಿತ್ತು ಎಂದಿದೆ.
ಮತಗಳ್ಳತನ ಆರೋಪ| ಪ್ರಮಾಣಪತ್ರ ಸಲ್ಲಿಸಲು ಅನುರಾಗ್ ಠಾಕೂರ್‌ಗೆ ಏಕೆ ಕೇಳಿಲ್ಲ: ಚು. ಆಯೋಗಕ್ಕೆ ರಾಹುಲ್ ಗಾಂಧಿ ಪ್ರಶ್ನೆ


