ಹಲವೆಡೆಗಳಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ, ಲೋಕಸಭೆ ಚುನಾವಣೆಯ ಐದು ಹಂತಗಳಲ್ಲಿ ಚಲಾವಣೆಯಾದ ಮತಗಳ ಕ್ಷೇತ್ರವಾರು ಅಂಕಿ-ಅಂಶಗಳನ್ನು ಭಾರತೀಯ ಚುನಾವಣಾ ಆಯೋಗ ಇಂದು (ಮೇ 25) ಪ್ರಕಟಿಸಿದೆ.
ಒಟ್ಟು ಏಳು ಹಂತಗಳ ಮತದಾನದಲ್ಲಿ ಇಂದಿಗೆ (ಮೇ 25) 6 ಹಂತಗಳು ಪೂರ್ಣಗೊಂಡಿವೆ. ಈ ನಡುವೆ ಚುನಾವಣಾ ಆಯೋಗ ಐದು ಹಂತಗಳ ಅಂಕಿ-ಅಂಶ ಬಿಡುಗಡೆಗೊಳಿಸಿದ್ದು,”ಆಯೋಗವು ಚುನಾವಣಾ ಪ್ರಜಾಪ್ರಭುತ್ವದ ಉದ್ದೇಶಗಳನ್ನು ಅನಿರ್ಬಂಧಿತ ಗುರಿಯೊಂದಿಗೆ ಸಾಧಿಸುವ ಮಹತ್ವದ ಜವಾಬ್ದಾರಿ ಹೊಂದಿದೆ” ಎಂದು ಹೇಳಿದೆ.
ಐದು ಹಂತದ ಮತದಾದನ ಒಟ್ಟು ಅಂಕಿ-ಅಂಶಗಳು ಕೆಳಗಿದೆ

ಸಂಪೂರ್ಣ ಅಂಕಿ-ಅಂಶ ಇಲ್ಲಿದೆ
ಚುನಾವಣಾ ಆಯೋಗ ಮತದಾನದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವ ಒಂದು ದಿನ ಮುನ್ನ, ಅಂದರೆ, ಶುಕ್ರವಾರ, ಈ ಕುರಿತು ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಪ್ರತಿ ಮತಗಟ್ಟೆಯ ಮತದಾನದ ಅಂಕಿ-ಅಂಶಗಳನ್ನ ಬಿಡುಗಡೆ ಮಾಡುವಂತೆ ಹಾಗೂ ಮತದಾನದ ನಡೆದ 48 ಗಂಟೆಗಳ ಒಳಗೆ ನಮೂನೆ 17 ಸಿ ಅಪ್ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸುವುದಿಲ್ಲ ಎಂದಿತ್ತು. ಚುನಾವಣೆ ಮುಗಿಯುವವರೆಗೆ ಅರ್ಜಿ ವಿಚಾರಣೆ ಮುಂದೂಡಿರುವ ಕೋರ್ಟ್, ಚುನಾವಣೆಯ ನಡುವೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ವಿಚಾರಣೆಯಲ್ಲಿರುವ ಅರ್ಜಿಯು 2019ರಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯ ಮಧ್ಯಂತರ ಅರ್ಜಿಯಾಗಿದೆ. 2019ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಚಲಾವಣೆಯಾದ ಮತ್ತು ಎಣಿಸಿದ ಮತಗಳ ನಡುವೆ ವ್ಯತ್ಯಾಸ ಕಂಡು ಬಂದಿತ್ತು. ಇದನ್ನು ಪ್ರಶ್ನಿಸಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಸೇರಿದಂತೆ ಹಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಬಾರಿಯ ಸಾರ್ವತ್ರಿಕ ಚುನಾವಣೆಯ ಮೊದಲ ಎರಡು ಹಂತಗಳ ಮತದಾನದ ಅಧಿಕೃತ ಅಂಕಿ-ಅಂಶಗಳನ್ನು ಪ್ರಕಟಿಸಲು ಚುನಾವಣಾ ಆಯೋಗ 11 ದಿನಗಳ ಕಾಲ ವಿಳಂಬ ಮಾಡಿತ್ತು. ಇದು ಮತ ಎಣಿಕೆಯ ಸಂದರ್ಭದಲ್ಲಿ ಹೆಚ್ಚು ಅಥವಾ ಕಡಿಮೆ ಮತ ಬರುವ ಕಳವಳಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಮತ್ತು ಅನೇಕ ಸಂಘ, ಸಂಸ್ಥೆಗಳು ಈ ಹಿಂದಿನಂತೆ ಮತದಾನದ ನಡೆದ 24 ಗಂಟೆಯೊಳಗೆ ಅಂಕಿ- ಅಂಶ ಪ್ರಕಟಿಸಲು ಆಗ್ರಹಿಸಿದ್ದವು
ಇದನ್ನೂ ಓದಿ : ದ್ವೇಷ ಭಾಷಣ: ಪ್ರಧಾನಿ ಮೋದಿ ವಿರುದ್ದ ಬೆಂಗಳೂರಿನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು


