ಅರ್ನಾಬ್ ಗೋಸ್ವಾಮಿ ಮತ್ತು ನಟಿ ಕಂಗನಾ ವಿರುದ್ಧ ಆರೋಪ ಮಾಡಿದ್ದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಮನೆ ಮತ್ತು ಕಛೇರಿಗಳ ಮೇಲೆ ಮಹಾರಾಷ್ಟ್ರ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಮತ್ತು ಅವರ ಮಗ ವಿಹಾಂಗ್ ಸರ್ನಾಯಕ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ‘ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ’ ಹೋಲಿಸಿದ್ದರು. ಆಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕ ಪ್ರತಾಪ್ ಸರ್ನಾಯಕ್ ಒತ್ತಾಯಿಸಿದ್ದರು. ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಾಬ್ ಗೋಸ್ವಾಮಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿ ಅರ್ನಾಬ್ ಮತ್ತು ಇನ್ನಿತರರ ವಿರುದ್ಧ ಮರು ತನಿಖೆಗೆ ಒತ್ತಾಯಿಸಿದ್ದರು.
ಇದನ್ನೂ ಓದಿ: ನೋಟು ಅಮಾನ್ಯೀಕರಣದ ಸಂಭ್ರಮ ಸಮಾಧಿಯ ಮೇಲೆ ಕೇಕ್ ಕತ್ತರಿಸಿದಂತೆ- ಶಿವಸೇನೆ
ಶಿವಸೇನೆ ಶಾಸಕರೊಂದಿಗೆ ಸಂಪರ್ಕ ಹೊಂದಿದ್ದ ಥಾಣೆ ಮತ್ತು ಮುಂಬೈನ 10 ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿದೆ ಎಂದು ಎನ್‌ಡಿಟಿವಿ ಉಲ್ಲೇಖಿಸಿದೆ. ಈ ದಾಳಿಯನ್ನು ಖಂಡಿಸಿದ ಶಿವಸೇನೆ, “ಬಿಜೆಪಿಯ ರಾಜಕೀಯ ದುರುದ್ದೇಶಪೂರಿತ ದಾಳಿ ಇದು” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಮುಂದಿನ 25 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಬಿಜೆಪಿ ಪಕ್ಷವು ಮರೆತುಬಿಡಬೇಕು. ನೀವು ಇಂದು ಪ್ರಾರಂಭಿಸಿದ್ದೀರಿ, ಅದನ್ನು ಹೇಗೆ ಕೊನೆಗೊಳಿಸಬೇಕು ಎಂದು ನಮಗೆ ತಿಳಿದಿದೆ” ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ‘ಕರಾಚಿ ಸ್ವೀಟ್ಸ್’ ಅಂಗಡಿ ಹೆಸರು ಬದಲಿಸುವಂತೆ ಶಿವಸೇನೆ ಮುಖಂಡನ ಧಮಕಿ!
“ಶಾಸಕರು ಮನೆಯಲ್ಲಿ ಇಲ್ಲದಿದ್ದಾಗ ಅವರ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ನೀವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಜನರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದೀರಿ. ಈ ಕ್ರಮಗಳು ನಿಮಗೆ ಹಿನ್ನಡೆ ಉಂಟುಮಾಡುತ್ತವೆ. ನಿಮ್ಮ ಸಮಯ ಹತ್ತಿರವಾಗಿದೆ ಎಂದು ನಾನು ಭಾವಿಸುತ್ತೇನೆ. ಅದು ಸಿಬಿಐ ಅಥವಾ ಇ.ಡಿ ಆಗಿರಲಿ. ನಮ್ಮ ಸರ್ಕಾರ, ಶಾಸಕರು ಮತ್ತು ನಾಯಕರು ಯಾರಿಗೂ ಶರಣಾಗುವುದಿಲ್ಲ. ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ವಿವಾದದ ನಂತರ ಶಿವಸೇನೆ ಕಳೆದ ವರ್ಷ ಬಿಜೆಪಿಯೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಕಡಿದುಕೊಂಡಿತು. ನಂತರ ಸೈದ್ಧಾಂತಿಕ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಶಿವಸೇನೆ ಅಧಿಕಾರಕ್ಕೆ ಬಂದಿತು. ಅಂದಿನಿಂದು ಬಿಜೆಪಿ ಮತ್ತು ಶಿವಸೇನೆಯ ನಡುವೆ ಬಹಿರಂಗ ಗುದ್ದಾಟ ನಡೆಯುತ್ತಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಂಗನಾ ರಾಣಾವತ್ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?


