ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ಮೂರನೇ ಅವಧಿಗೆ ಅಧಿಕಾರ ವಿಸ್ತರಿಸುವ ಕೇಂದ್ರ ಸರ್ಕಾರದ ಆದೇಶವನ್ನು ಕಾನೂನುಬಾಹಿರ ಎಂದು ಕರೆದಿರುವ ಸುಪ್ರೀಂ ಕೋರ್ಟ್ ಆ ಆದೇಶವನ್ನು ವಜಾ ಮಾಡಿದೆ.
ಜುಲೈ 31ರ ಒಳಗೆ ಇಡಿ ಮುಖ್ಯಸ್ಥರ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ಪೀಠವು ಮಿಶ್ರಾಗೆ ನೀಡಲಾದ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮತ್ತು ಇತರರು ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ನವೆಂಬರ್ 19, 2018ರಂದು 1984-ಬ್ಯಾಚ್ ಭಾರತೀಯ ಕಂದಾಯ ಸೇವಾ ಅಧಿಕಾರಿ ಮಿಶ್ರಾ ಅವರನ್ನು ಮೊದಲು 2 ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಿಸಲಾಯಿತು. 2020ರಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅವರ ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿತು.
ಆ ಬಳಿಕ ಸೆಪ್ಟೆಂಬರ್ 2021 ರಲ್ಲಿ, ಮಿಶ್ರಾ ಅವರ ಅಧಿಕಾರಾವಧಿಯನ್ನು ಇನ್ನು ಮುಂದೆ ವಿಸ್ತರಿಸದಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳದ ನಿರ್ದೇಶಕರು ಐದು ವರ್ಷಗಳವರೆಗೆ ಅಧಿಕಾರಾವಧಿಯನ್ನು ಹೊಂದಿರಬಹುದು ಎಂದು ಸರ್ಕಾರವು ನವೆಂಬರ್ 2021ರಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ ಮತ್ತು ಕೇಂದ್ರ ವಿಜಿಲೆನ್ಸ್ ಕಮಿಷನ್ ಕಾಯಿದೆ ಸುಗ್ರೀವಾಜ್ಞೆಗಳನ್ನು ತಂದಿತು. ಇದರಿಂದ ಮಿಶ್ರಾ ಅವರು ಇನ್ನೊಂದು ವರ್ಷ ಮುಂದುವರಿಯಲು ಸಾಧ್ಯವಾಯಿತು.
ಇಂದಿನ ತೀರ್ಪಿನಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ ಮತ್ತು ಕೇಂದ್ರ ವಿಜಿಲೆನ್ಸ್ ಕಮಿಷನ್ ಕಾಯಿದೆಯಲ್ಲಿನ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ದೃಢಪಡಿಸಿತು. ಸಿಬಿಐ ಮುಖ್ಯಸ್ಥ ಮತ್ತು ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಅವರ ಕಡ್ಡಾಯ ಎರಡು ವರ್ಷಗಳ ನಂತರ ಸಂಭವನೀಯ ಮೂರು ವರ್ಷಗಳವರೆಗೆ ವಿಸ್ತರಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡಿದೆ. ಆದರೆ ಆನಂತರ ಮತ್ತೆ ಅಧಿಕಾರ ಅವಧಿ ವಿಸ್ತರಿಸುವುದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರಾಜಕೀಯ ಎದುರಾಳಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಇಡಿ, ಸಿಬಿಐ ನಂತಹ ತನಿಖಾ ಸಂಸ್ಥೆಗಳ ಸ್ವಾಯುತ್ತತೆ ಕಸಿದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇದನ್ನೂ ಓದಿ; ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿ ನಿರ್ಧಾರ ಸಮರ್ಥಿಸಿ ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ


