ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರ ವಿರುದ್ಧದ ಸಮನ್ಸ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ವಿರುದ್ಧ ಜಾರಿ ನಿರ್ದೇಶನಾಲಯದ ಮೇಲ್ಮನವಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಜಾರಿ ನಿರ್ದೇಶನಾಲಯವನ್ನು “ರಾಜಕೀಯ ಹೋರಾಟಗಳಿಗೆ” ಏಕೆ ಬಳಸಲಾಗುತ್ತಿದೆ ಎಂದು ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ವಿಚಾರಣೆ ನಡೆಸಿತು. “ರಾಜಕೀಯ ಕದನಗಳನ್ನು ಚುನಾವಣಾ ಕ್ಷೇತ್ರದಲ್ಲಿ ಹೋರಾಡಲಿ; ನೀವು ಏಕೆ ಬಳಸುತ್ತೀರಿ?” ಎಂದು ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದೆ.
“ದಯವಿಟ್ಟು ನಮ್ಮನ್ನು ಬಾಯಿ ತೆರೆಯಲು ಕೇಳಬೇಡಿ. ಇಲ್ಲದಿದ್ದರೆ, ನಾವು ಇ.ಡಿ ಬಗ್ಗೆ ಕೆಲವು ಕಠಿಣ ಟೀಕೆಗಳನ್ನು ಮಾಡಬೇಕಾಗಿ ಬರುತ್ತದೆ. ದುರದೃಷ್ಟವಶಾತ್, ನನಗೆ ಮಹಾರಾಷ್ಟ್ರದಲ್ಲಿ ಸ್ವಲ್ಪ ಅನುಭವವಿದೆ. ನೀವು ಈ ರೀತಿಯ ಹಿಂಸಾಚಾರವನ್ನು ಮುಂದುವರಿಸಬೇಡಿ. ರಾಜಕೀಯ ಕದನಗಳು ಮತದಾರರ ಮುಂದೆ ನಡೆಸಲಿ. ನಿಮ್ಮನ್ನು ಏಕೆ ಇದಕ್ಕಾಗಿ ಬಳಸಲಾಗುತ್ತಿದೆ?” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಪ್ರಶ್ನಿಸಿ ಇ.ಡಿಯ ಮೇಲ್ಮನವಿಯನ್ನು ವಜಾಗೊಳಿಸಿದರು.
ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು 1860 ರ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು 1988 ರ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಮೈಸೂರಿನಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತು.
ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಮುಡಾ ಸ್ವಾಧೀನಪಡಿಸಿಕೊಂಡ ಮೂರು ಎಕರೆ 16 ಗುಂಟೆ ಭೂಮಿಗೆ ಬದಲಾಗಿ ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿರುವ 14 ನಿವೇಶನಗಳಿಗೆ ಪರಿಹಾರವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಭೂಮಿಯನ್ನು ಮೂಲತಃ ಮುಡಾ 3.24 ಲಕ್ಷ ರೂ.ಗೆ ಸ್ವಾಧೀನಪಡಿಸಿಕೊಂಡಿತು. ಮೈಸೂರಿನ ಐಷಾರಾಮಿ ವಿಜಯನಗರ ಪ್ರದೇಶದಲ್ಲಿ 14 ನಿವೇಶನಗಳ ರೂಪದಲ್ಲಿ ಪರಿಹಾರವು ಸುಮಾರು 56 ಕೋಟಿ ರೂ.ಗಳ ಮೌಲ್ಯದ್ದಾಗಿದೆ.
ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಆರೋಪ: ‘ಸೌಜನ್ಯಾ ನ್ಯಾಯಕ್ಕಾಗಿ ಹೋರಾಟ ಸಮಿತಿ’ಯಿಂದ ತುರ್ತು ಕರೆ!


