ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ 3,000 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಲುಕ್ ಔಟ್ ನೋಟಿಸ್ ಹೊರಡಿಸಿದೆ.
ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಅಂಬಾನಿಗೆ ಇಡಿ ಶುಕ್ರವಾರ ಸಮನ್ಸ್ ನೀಡಿದೆ. ಈ ಬೆನ್ನಲ್ಲೇ ಅವರ ವಿರುದ್ದ ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವ ಬಗ್ಗೆ ವರದಿಯಾಗಿದೆ.
ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಗಳು ದೇಶ ತೊರೆಯುವುದನ್ನು ತಡೆಯಲು ಲುಕ್ ಔಟ್ ನೋಟಿಸ್ ಹೊರಡಿಸಲಾಗುತ್ತದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಬಂದರುಗಳು ಸೇರಿದಂತೆ ದೇಶ ತೊರೆಯಲು ಸಾಧ್ಯವಾಗುವ ಎಲ್ಲಾ ಮಾರ್ಗಗಳಿಗೆ ಇದನ್ನು ರವಾನಿಸಲಾಗುತ್ತದೆ. ಕಾನೂನು ಕ್ರಮ ಎದುರಿಸುತ್ತಿರುವ ವ್ಯಕ್ತಿ ವಿದೇಶಗಳಿಗೆ ಪಲಾಯನ ಮಾಡಲು ಮುಂದಾದರೆ ಈ ಮೂಲಕ ಸಿಕ್ಕಿ ಬೀಳುತ್ತಾರೆ.
2017 ರಿಂದ 2019ರ ನಡುವೆ ಯೆಸ್ ಬ್ಯಾಂಕ್ ರಿಲಯನ್ಸ್ ಗ್ರೂಪ್ ಕಂಪನಿಗಳಿಗೆ ನೀಡಿದ ಸುಮಾರು 3,000 ಕೋಟಿ ರೂಪಾಯಿ ಸಾಲವನ್ನು ಬೇರೆಡೆಗೆ ತಿರುಗಿಸಿದ ಆರೋಪದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಸಾಲ ಮಂಜೂರು ಮಾಡುವ ಮುನ್ನ ಬ್ಯಾಂಕಿನ ಪ್ರವರ್ತಕರು ಅಥವಾ ಪ್ರಮೋಟರ್ಸ್ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳ ಮೂಲಕ ಸ್ವೀಕರಿಸಿದ್ದಾರೆ. ನಿಯಮಗಳನ್ನು ಮೀರಿ ಅಂಬಾನಿಗೆ ಲಾಭ ಮಾಡಿ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ‘ಕ್ವಿಡ್ ಪ್ರೊ ಕ್ವೋ’ ಅಥವಾ ಕೊಡು ಕೊಳ್ಳುವಿಕೆ ಎಂದು ಪರಿಗಣಿಸಲಾಗಿದೆ.
ಜುಲೈ 24ರಂದು ಪ್ರಕರಣಕ್ಕೆ ಸಂಬಂಧಿಸಿದ ಅಂಬಾನಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿತ್ತು ಮತ್ತು ಕನಿಷ್ಠ ಮೂರು ದಿನಗಳವರೆಗೆ ಪರಿಶೀಲನೆ ಮಾಡಿತ್ತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಈ ದಾಳಿ ನಡೆಸಲಾಗಿದೆ.
ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಎಂಬ ಎರಡು ಸಮೂಹ ಕಂಪನಿಗಳು ತಮ್ಮ ವಿರುದ್ಧ ತೆಗೆದುಕೊಂಡ ಕ್ರಮವನ್ನು ಒಪ್ಪಿಕೊಂಡರೂ, ಈ ದಾಳಿಯಿಂದ ತಮ್ಮ ವ್ಯವಹಾರ ಕಾರ್ಯಾಚರಣೆಗಳು, ಆರ್ಥಿಕ ಕಾರ್ಯಕ್ಷಮತೆ, ಷೇರುದಾರರು, ಉದ್ಯೋಗಿಗಳು ಅಥವಾ ಯಾವುದೇ ಇತರ ಪಾಲುದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿವೆ.
ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ ಎಂದು ತನಗೆ ತಿಳಿದುಬಂದಿದೆ: ಟ್ರಂಪ್


