ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ತಮಿಳುನಾಡಿನ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬುಧವಾರ (ಅ.8) ದಾಳಿ ನಡೆಸಿದ್ದಾರೆ.
ಮಲಯಾಳಂ ಸಿನಿಮಾ ನಟರಾದ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಿತ್ ಚಕ್ಕಲಕ್ಕಲ್ ಅವರ ಮನೆ ಮತ್ತು ಇತರ ಸಂಸ್ಥೆಗಳು ಹಾಗೂ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ, ಕೊಯಮತ್ತೂರಿನಲ್ಲಿರುವ ಕೆಲವು ವಾಹನ ಮಾಲೀಕರು, ಆಟೋಮೊಬೈಲ್ ಕಾರ್ಯಾಗಾರಗಳು ಮತ್ತು ವ್ಯಾಪಾರಿಗಳಿಗೆ ಸಂಬಂಧಿಸಿದ ಜಾಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.
ದುಲ್ಕರ್ ಸಲ್ಮಾನ್ ಅವರ ತಂದೆ ಮಲಯಾಳಂ ಸಿನಿಮಾ ರಂಗದ ಹಿರಿಯ ನಟ ಮಮ್ಮುಟ್ಟಿ ಅವರ ಕೊಚ್ಚಿಯ ಪನಂಪಿಲ್ಲಿ ನಗರದಲ್ಲಿರುವ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದು ಹಳೆಯ ಮನೆಯಾಗಿದ್ದು, ಪ್ರಸ್ತುತ ಮಮ್ಮುಟ್ಟಿ ಅಲ್ಲಿ ವಾಸ ಇಲ್ಲ ಎಂದು ವರದಿಯಾಗಿದೆ.
ಇನ್ನುಳಿದಂತೆ ಚೆನ್ನೈಯ ಗ್ರೀನ್‌ವೇಸ್ ರೋಡ್‌ನಲ್ಲಿರುವ ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಅವರಿಗೆ ಸೇರಿದ ‘ವೇಫೇರ್ ಫಿಲ್ಮ್ಸ್’ ಸಂಸ್ಥೆ ಮೇಲೂ ಇಡಿ ದಾಳಿ ಮಾಡಿದೆ.
ದುಲ್ಕರ್ ಸಲ್ಮಾನ್ ಅವರ ಕೊಚ್ಚಿ ಮತ್ತು ಚೆನ್ನೈನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಸೆಪ್ಟೆಂಬರ್ 23ರಂದು ಕೊಚ್ಚಿಯ ಕಸ್ಟಮ್ಸ್ (ಪ್ರಿವೆಂಟಿವ್) ಕಮಿಷನರೇಟ್, ನಟರ ಮನೆಗಳು ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತ್ತು. ಈ ದಾಳಿಗಳಲ್ಲಿ, ಕಳೆದ ಕೆಲವು ವರ್ಷಗಳಿಂದ ಭೂತಾನ್‌ನಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾದ 37 ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂಡೋ-ಭೂತಾನ್/ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್ ಮತ್ತು ಮಸೆರಾಟಿಯಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ಜಾಲ ನೀಡಿದ ಮಾಹಿತಿಯ ಆಧಾರದ ಮೇಲೆ ಶೋಧ ನಡೆಸಲಾಗಿದೆ ಎಂದು ಇಡಿ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಸೇನೆ, ಅಮೆರಿಕ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದ ನಕಲಿ ದಾಖಲೆಗಳನ್ನು ಬಳಸಿಕೊಂಡು ಕೊಯಮತ್ತೂರು ಮೂಲದ ಜಾಲವೊಂದು ವಂಚನೆ ನಡೆಸುತ್ತಿದೆ. ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳ ಆರ್‌ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ) ನೋಂದಣಿಗಳಲ್ಲಿ ವಂಚನೆ ಎಸಗುತ್ತಿದೆ. ನಂತರ ಈ ವಾಹನಗಳನ್ನು ಸಿನಿಮಾ ನಟರು ಸೇರಿದಂತೆ ಸೆಲೆಬ್ರೆಟಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪ್ರಕಟಣೆ ಹೇಳಿದೆ.
ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಎಫ್‌ಇಎಂಎ), 1999 ರ ಕಲಂ 3, 4, ಮತ್ತು 8 ರ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಇಡಿ ಕ್ರಮ ಕೈಗೊಂಡಿದೆ. ಅನಧಿಕೃತ ವಿದೇಶಿ ವಿನಿಮಯ ವ್ಯವಹಾರಗಳು ಮತ್ತು ಹವಾಲಾ ಮಾರ್ಗಗಳ ಮೂಲಕ ಗಡಿಯಾಚೆಗಿನ ಪಾವತಿಗಳು ಉಲ್ಲಂಘನೆಯಲ್ಲಿ ಒಳಗೊಂಡಿವೆ. ಹಣದ ಮಾರ್ಗ, ಫಲಾನುಭವಿಗಳ ಜಾಲ ಮತ್ತು ವಿದೇಶಿ ವಿನಿಮಯ ಚಲನೆಯನ್ನು ಕಂಡುಹಿಡಿಯಲು ಮುಂದಿನ ತನಿಖೆ ನಡೆಯುತ್ತಿದೆ.
ಕಸ್ಟಮ್ಸ್ ವಿಭಾಗವು ‘ನುಮ್‌ಖೋರ್’ ಎಂಬ ಕಾರ್ಯಾಚರಣೆಯನ್ನು ಕೇರಳದಾದ್ಯಂತ ಆರಂಭಿಸಿದೆ. ‘ನುಮ್‌ಖೋರ್’ ಎಂಬ ಪದವು ಭೂತಾನಿನ ಭಾಷೆಯಲ್ಲಿ ‘ವಾಹನ’ ಎಂಬ ಅರ್ಥವನ್ನು ಹೊಂದಿದೆ. ಈ ಕಾರ್ಯಾಚರಣೆಯ ಉದ್ದೇಶವು ಕಾನೂನುಬಾಹಿರವಾಗಿ ತರಲಾದ ವಾಹನಗಳನ್ನು ಗುರುತಿಸಿ, ಜಪ್ತಿ ಮಾಡುವುದಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಡೇಟಾಬೇಸ್‌ನಲ್ಲಿ 150 ರಿಂದ 200 ವಾಹನಗಳ ದಾಖಲೆಗಳಲ್ಲಿ ತಪ್ಪು ಮಾಹಿತಿ, ನಕಲಿ ದಾಖಲೆಗಳು ಮತ್ತು ಸುಂಕದಿಂದ ತಪ್ಪಿಸಿಕೊಂಡಿರುವುದನ್ನು ಗುರುತಿಸಿವೆ. ಈ ವಾಹನಗಳು ಕಾನೂನುಬಾಹಿರವಾಗಿ ದೇಶಕ್ಕೆ ತರಲಾದವು ಎಂಬ ಶಂಕೆಯಿದೆ.
ದುಲ್ಕರ್ ಸಲ್ಮಾನ್ ಮತ್ತು ಅಮಿತ್ ಚಕ್ಕಲಕ್ಕಲ್ ಅವರಿಗೆ ಸೇರಿದ ಹಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಕೊಚ್ಚಿಯಲ್ಲಿರುವ ಪೃಥ್ವಿರಾಜ್ ಅವರ ಮನೆ ಮೇಲೆ ದಾಳಿ ಮಾಡಿದ್ದರೂ, ಅವರ ಯಾವುದೇ ವಾಹನಗಳನ್ನು ವಶಪಡಿಸಿಕೊಂಡಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.
ದುಲ್ಕರ್ ಸಲ್ಮಾನ್ ತಮ್ಮ ವಾಹನಗಳನ್ನು ಬಿಡುಗಡೆ ಮಾಡುವಂತೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಂಗಳವಾರ, ನ್ಯಾಯಾಲಯವು ಅವರ ಐಷಾರಾಮಿ ಎಸ್‌ಯುವಿಗಳಲ್ಲಿ ಒಂದನ್ನು ಬಿಡುಗಡೆ ಮಾಡಲು ಕಸ್ಟಮ್ಸ್ ಕಾಯ್ದೆಯಡಿಯಲ್ಲಿ ನ್ಯಾಯನಿರ್ಣಯ ಪ್ರಾಧಿಕಾರವನ್ನು ಸಂಪರ್ಕಿಸಲು ನಿರ್ದೇಶಿಸಿದೆ.
ದಲಿತ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣ; ಸಾವಿಗೆ ಕಾರಣವೇನು?