ರಾಜ್ಯ ವಕ್ಫ್ ಮಂಡಳಿಗೆ ಸೇರಿದ 4 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಿದ್ದ 3.82 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ರಾಜ್ಯ ವಕ್ಫ್ ಮಂಡಳಿಗೆ ವಾಪಸ್ ನೀಡಿದೆ.
ವಕ್ಫ್ ಮಂಡಳಿಯಿಂದ ಸ್ಥಿರ ಠೇವಣಿಗಾಗಿ ಬಿಡುಗಡೆಯಾಗಿದ್ದ ಹಣದಲ್ಲಿ ಮರ್ಸಿಡಿಸ್-ಬೆನ್ಝ್ ಕಾರು ಖರೀದಿಸಲಾಗಿತ್ತು ಮತ್ತು ಉಳಿದ ಹಣವನ್ನು ಕಂಪನಿಯೊಂದಕ್ಕೆ ವರ್ಗಾಯಿಸಲಾಗಿತ್ತು. ಈ ಸಂಬಂಧ ಇಡಿ ತನಿಖೆ ಕೈಗೊಂಡಿತ್ತು.
ಜುಲೈ 8ರಂದು ಇಡಿ ನೀಡಿದ ಮಾಹಿತಿ ಪ್ರಕಾರ, ರಾಜ್ಯ ವಕ್ಫ್ ಮಂಡಳಿಗೆ ಸೇರಿದ 4 ಕೋಟಿ ರೂ. ಹಣವನ್ನು ಬೆಂಗಳೂರಿನ ಬೆನ್ಸನ್‌ಟೌನ್‌ನ ಇಂಡಿಯನ್ ಬ್ಯಾಂಕ್ ಶಾಖೆಯ ಖಾತೆಗೆ ಜಮಾ ಮಾಡ ಲಾಗಿತ್ತು. ಈ ಹಣವನ್ನು ಮಂಡಳಿ ಗಮನಕ್ಕೆ ತರದೆ 2017ನೇ ಸಾಲಿನಲ್ಲಿ ಚಿಂತಾಮಣಿಯ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆದು ವರ್ಗಾಯಿಸಲಾಗಿತ್ತು. ಬಳಿಕ ಹಣವನ್ನು ವಿರ್ಕೀಸ್ ರಿಯಾಲಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.
ಈ ಸಂಬಂಧ ವಿಜಯಾ ಬ್ಯಾಂಕ್‌ನ ಇಬ್ಬರು ಅಧಿಕಾರಿಗಳು, ವಕ್ಫ್ ಮಂಡಳಿಯ ಪ್ರಥಮ ದರ್ಜೆ ಸಹಾಯಕ ಸೈಯದ್ ಸಿರಾಜ್ ಅಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳು 4 ಕೋಟಿ ರೂ. ಹಣದಲ್ಲಿ 1.10 ಕೊಟಿ ರೂ. ಮೌಲ್ಯದ ಮರ್ಸಿಡಿಸ್ ಬೆನ್ಝ್ ಕಾರು ಖರೀದಿಸಿದ್ದರು. ಉಳಿದ 2.72 ಕೋಟಿ ರೂ. ಅನ್ನು ಮತ್ತೊಂದು ಖಾತೆಗೆ ವರ್ಗಾಯಿಸಿದ್ದರು.
ಆರೋಪಿಗಳ ವಿರುದ್ದ ತನಿಖೆ ಕೈಗೊಂಡಿದ್ದ ಇಡಿ ಅಧಿಕಾರಿಗಳು ಅವರಿಂದ 3.82 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿತ್ತು. ವಿರ್ಕೀಸ್ ರಿಯಾಲಿಟೀಸ್ ಕಂಪನಿ ಹಾಗೂ ಆರು ಜನ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಇದೀಗ ನ್ಯಾಯಾಲಯದ ಅನುಮತಿ ಮೇರೆಗೆ ತನಿಖೆ ವೇಳೆ ಆರೋಪಿಗಳಿಂದ ಜಪ್ತಿ ಮಾಡಿದ್ದ 3.82 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ರಾಜ್ಯ ವಕ್ಫ್ ಮಂಡಳಿಗೆ ಹಸ್ತಾಂತರಿಸಲಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸಿಇಒ (ಹೆಚ್ಚುವರಿ ಹುದ್ದೆ ) ಜೀಲಾನಿ ಹೆಚ್. ಮೊಕಾಶಿ ಅವರಿಗೆ 3,82,74,444 ರೂ.ಗಳ ಬ್ಯಾಂಕ್ ಚೆಕ್ ಅನ್ನು ಹಸ್ತಾಂತರಿಸಲಾಗಿದೆ ಎಂದು ಇಡಿ ತಿಳಿಸಿದೆ.
ದುರುಪಯೋಗಪಡಿಸಿಕೊಂಡ ಹಣವನ್ನು ಅನ್ಯಾಯಕ್ಕೊಳಗಾದವರಿಗೆ ಹಿಂದಿರುಗಿಸುವ ತನ್ನ ನಿರಂತರ ಕಾರ್ಯಾಚರಣೆಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಇಡಿ ಹೇಳಿಕೊಂಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣ| ವಶಪಡಿಸಿಕೊಂಡ ಚಿನ್ನ ಬಿಡುಗಡೆಗೆ ಜನಾರ್ದನ ರೆಡ್ಡಿ ಮನವಿ; ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ