ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ (ಇಡಿ) ಕ್ರಮವನ್ನು ಖಂಡಿಸಿ, ಸೋಮವಾರ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ನವದೆಹಲಿಯಲ್ಲಿ ಬೆಳಗ್ಗೆಯೇ ಪ್ರತಿಭಟನೆ ಆರಂಭಿಸಿ, ತಮ್ಮ ನಾಯಕರನ್ನು ಬೆಂಬಲಿಸಿ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಸ್‌ಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ, ಪಕ್ಷವು ಶಕ್ತಿ ಪ್ರದರ್ಶನವಾಗಿ ಈ ಪ್ರತಿಭಟನೆಯನ್ನು ಯೋಜಿಸಿರುವ ಕಾರಣ ಇಂದು ಇನ್ನಷ್ಟು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ.
ಮನಿ ಲಾಂಡರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ರಾಹುಲ್ ಗಾಂಧಿ ಇಂದು ಹಾಜರಾಗಲಿದ್ದಾರೆ. ಏಜೆನ್ಸಿ ಕಚೇರಿ ಬಳಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಹುಲ್ ಗಾಂಧಿ ಅವರೊಂದಿಗೆ ಇಡಿ ಕಚೇರಿಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಯುಪಿ: ಪ್ರತಿಭಟನಾಕಾರರ ಮನೆ ಮೇಲೆ 2ನೇ ದಿನವೂ ಮುಂದುವರೆದ ಬುಲ್ಡೋಜರ್ ದಾಳಿ
#WATCH 'Rahul Gandhi zindabad, zindabad' song resonates at Congress party headquarters in Delhi as RG is set to march to Enforcement Directorate to appear before it in National Herald case
Top Congress leaders are present at the party HQ to show solidarity with party leadership pic.twitter.com/6NaCL6QuiK
— ANI (@ANI) June 13, 2022
ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರಿಗೂ ಕೇಂದ್ರ ಸಂಸ್ಥೆ ಸಮನ್ಸ್ ನೀಡಿದೆ. ಅವರು ಕೋವಿಡ್‌ನಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಅವರು ಜೂನ್ 23 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಲು ಜಾರಿ ನಿರ್ದೇಶನಾಲಯ ಮತ್ತು ಇತರ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದ್ದಾರೆ. ತನ್ನ ನಾಯಕರ ವಿರುದ್ಧದ ಆರೋಪಗಳು “ನಕಲಿ ಮತ್ತು ಆಧಾರರಹಿತ” ಮತ್ತು ಬಿಜೆಪಿಯು “ಸೇಡಿನ ರಾಜಕೀಯ” ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ ಯಂಗ್ ಇಂಡಿಯನ್‌ನಲ್ಲಿ ಹಣಕಾಸಿನ ಅಕ್ರಮಗಳು ನಡೆದಿವೆ ಎಂದು ತನಿಖೆ ನಡೆಸಲಾಗುತ್ತಿದೆ. 2013ರಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಪರಿಗಣಿಸಿದ ನಂತರ ಇ.ಡಿ.ಯು ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ನಿಬಂಧನೆಗಳ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದೆ.
ಇದನ್ನೂ ಓದಿ: ಇಂದು ಇ.ಡಿ. ಎದುರು ರಾಹುಲ್ ಹಾಜರಿ: ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜು


