Homeಕರ್ನಾಟಕಕಲ್ಯಾಣದಲ್ಲಿ ಅನುಭಾವ ಮಂಟಪ ಹುಡುಕುತ್ತಾ...

ಕಲ್ಯಾಣದಲ್ಲಿ ಅನುಭಾವ ಮಂಟಪ ಹುಡುಕುತ್ತಾ…

- Advertisement -
- Advertisement -

ಮುಂಬೈಯಿಂದ ಹೈದರಾಬಾದಿಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಗಡೆಯ ಕರ್ನಾಟಕದ ಗಡಿ ದಾಟಿದ ನಂತರ ಒಂದು ಹಳೆಯ ಕಟ್ಟಡ ಸಿಗುತ್ತದೆ. ಅದರ ಹೆಸರು ಸಸ್ತಾಪುರ ಬಂಗಲಾ. ಇದರ ಹೆಸರು ಪಟ್ಟನೇ ಕೇಳಿದಾಗ ಆ ಎರಡು ದುಬಾರಿ ಮಹಾನಗರಗಳ ನಡುವೆ ಸಿಗುವ ಸೋವಿ ಕಟ್ಟಡ ಇದು ಇರಬಹುದೇ ಅಂತ ಅನ್ನಿಸುತ್ತದೆ.

ಆದರೆ ಅಲ್ಲಿನ ಪೂರ್ವಸೂರಿಗಳನ್ನು ಕೇಳಿದರೆ ಅವರು ಒಂದು ರೊಮ್ಯಾಂಟಿಕ್ ಉತ್ತರ ಕೊಡುತ್ತಾರೆ. “ವೋ ಷಾಯಿಸತಾ ಬಂಗಲಾ ಸಾಬ್” ಅಂತ. ಷಾಯಿಸತಾ ಅನ್ನುವುದು ಪರ್ಶಿಯನ್ ಪದ. ಅದರ ಅರ್ಥ ‘ನಮ್ರ’, ‘ಸೌಜನ್ಯ ಪೂರಿತ’ ಅಂತ. ಹೀಗಾಗಿ ಈ ಬಂಗಲೆ ಇರುವ ಊರನ್ನು ನಾವು ‘ವಿನಮ್ರ ನಗರಿ’ ಅಂತ ಕರೆಯಬಹುದೇನೋ.

ಇದೇ ಬಸವ ಕಲ್ಯಾಣ.

ಇದಕ್ಕೆ ಬಸವ ಎನ್ನುವ ಪೂರ್ವ ಪ್ರತ್ಯಯ ಸೇರಿದ್ದು 1966ರಲ್ಲಿ. ಅದಕ್ಕೂ ಮೊದಲು ಅದನ್ನು ‘ಕಲ್ಯಾಣಿ’ ಅಂತ ಕರೆಯುತ್ತಿದ್ದರು. ಇಂದಿಗೂ ಸಹ ಹಳ್ಳಿಯ ಜನ ’ನಾನು ಕಲ್ಯಾಣಿ ಜಾತ್ರೆಗೆ ಹೋಗಿದ್ದೆ’ ಅಂತಲೇ ಮಾತಾಡುತ್ತಾರೆ.

ಈ ಊರಿಗೆ ತನ್ನ ಹೆಸರನ್ನು ಕೊಟ್ಟ ಆ ಪವಿತ್ರ ಕಲ್ಯಾಣಿ ಇರುವುದು ನಗರದ ಬಾಗಿಲಲ್ಲಿ. ಆದರೆ ಇದು ಇತರ ದೇವಸ್ಥಾನಗಳ ಕಲ್ಯಾಣಿಗಳಂತೆ ಸಣ್ಣ ಬಾವಿಯಲ್ಲ. ನೋಡುವವರ ಕಣ್ಣಳತೆಗೂ ಮೀರಿ ವಿಶಾಲವಾಗಿರುವ, ಹೈದರಾಬಾದು ಕರ್ನಾಟಕದ ಜನರ ಮನಸ್ಸಿನಂತೆಯೇ ಸ್ವಚ್ಛ-ಸ್ಫುಟವಾಗಿರುವ, ತಂಬೆಲರು ಸೂಸುವ ತಿಳಿ ನೀಲಿ ಸರೋವರ. ಒಂದು ಸಾವಿರ ವರ್ಷದ ಹಿಂದೆ ಕಲ್ಯಾಣಿ ಚಾಲುಕ್ಯರು ಕಟ್ಟಿಸಿದ ಈ ನೀರಿನ ಸೆಲೆಯ ಇನ್ನೊಂದು ಹೆಸರು ತ್ರಿಪುರಾಂತ ಕೆರೆ.

ಅದರ ಹಿಂದೆ ಇರುವುದು 1980ರ ದಶಕದಲ್ಲಿ ನಿರ್ಮಿಸಲಾದ ಅನುಭವ ಮಂಟಪದ ಕಟ್ಟಡ. ಅದರ ಎದುರು ಇರುವುದು ಪ್ರಶಾಂತವದನದ ಸುಖಾಸನದಲ್ಲಿ ಕುಳಿತ ಬಸವಣ್ಣನ ಬೃಹತ್ ಪ್ರತಿಮೆ.

ಬಸವಣ್ಣನ ಹಾಗೂ ಅವನು ಹುಡುಕಿ, ಪ್ರೋತ್ಸಾಹಿಸಿ, ಬೆಳೆಸಿದ ಅಮರ ಗಣಂಗಳ ನೆಲೆವೀಡು ಇದಾಗಿದ್ದ ಕಾರಣಕ್ಕಾಗಿ ಈ ಊರು ‘ಬಸವ ಕಲ್ಯಾಣ’ ಆಯಿತು. ಅದೇ ಆಶಯ ಮುಂದುವರೆದು ಇಡೀ ಪ್ರದೇಶದ ಹೆಸರು ‘ಕಲ್ಯಾಣ ಕರ್ನಾಟಕ’ ಆಯಿತು.

ಆದರೆ ಜಿಲ್ಲಾ ಕೇಂದ್ರ ಬೀದರ್‌ಗಿಂತ ದೊಡ್ಡದಾದ ಭೂ ಪ್ರದೇಶದ ಈ ಪಟ್ಟಣಕ್ಕೆ ಏನೂ ಕಲ್ಯಾಣವಾಗಲಿಲ್ಲ. ಒಂದಾದ ಮೇಲೆ ಒಂದರಂತೆ ಬಂದ ಸರ್ಕಾರಗಳು ಹಾಗೂ ನಾಯಕರು ಬಸವಣ್ಣನ ಬೆಚ್ಚನೆಯ ನೆನಪಿನಲ್ಲಿ ಕೈ
ಕಾಯಿಸಿಕೊಂಡರೇ ಹೊರತು, ಈ ಊರಿನ ಬೆಳವಣಿಗೆಗೆ ಏನೂ ಮಾಡಲಿಲ್ಲ.

ಹಾಗಾದರೆ ಬೆಳವಣಿಗೆ-ಅಭಿವೃದ್ಧಿ ಅಂದರೆ ಏನು? ಹಿಂದೊಮ್ಮೆ ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಾಧಿಕಾರಿಯೊಬ್ಬರು ನನಗೆ ಹೇಳಿದ್ದರು: “ಬಸವ ಕಲ್ಯಾಣದ ಅಭಿವೃದ್ಧಿ ಎಲ್ಲರೂ ಅಂದುಕೊಂಡಷ್ಟು ಸರಳ ಅಲ್ಲ. ಇಲ್ಲಿನ ಭೂ ಪ್ರದೇಶ ಕೂಡಲ ಸಂಗಮಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಅಲ್ಲಿ ನಾವು ಒಂದೇ ಸ್ಮಾರಕದ ಸಂರಕ್ಷಣೆ ಮಾಡಬೇಕಿತ್ತು. ಇಲ್ಲಿ ಸುಮಾರು 30 ಸ್ಮಾರಕಗಳು ಇವೆ. ಅದರಲ್ಲಿ ಕೆಲವು ಕಲ್ಲಿನ ಕಟ್ಟಡಗಳಾಗಿದ್ದರೆ ಇನ್ನು ಕೆಲವು ಕೆಂಪು ಮಣ್ಣಿನ ಗುಹೆಗಳು.

“ಇಲ್ಲಿನ ದೊಡ್ಡ-ಸಣ್ಣ ರಸ್ತೆಗಳು ಸೇರಿದರೆ ನೂರಾರು ಕಿಲೋಮೀಟರ್ ಆಗುತ್ತವೆ. ಉದ್ಯಾನವನ, ಕಾಲುವೆ-ಕಾರಂಜಿಗಳನ್ನು ಸರಿಯಾಗಿ ನಿರ್ಮಿಸಲು ಹತ್ತಾರು ವರ್ಷಗಳು ಹಾಗೂ ನೂರಾರು ಕೋಟಿಗಳು ಬೇಕಾಗುತ್ತವೆ” ಅಂತ.

ಈ ಕೆಲಸ ಸರಿಸುಮಾರಾಗಿ ಸಂಪೂರ್ಣವಾಗಿದೆ. ಇತರ ಸರಕಾರಿ ಕೆಲಸಗಳಿಗೆ ಹೋಲಿಸಿದರೆ ತುಂಬಾ ಉತ್ತಮ ಗುಣಮಟ್ಟದಲ್ಲಿ ಆಗಿದೆ. ಇದಕ್ಕಾಗಿ ಕನ್ನಡಿಗರೆಲ್ಲರೂ ಅಭಿವೃದ್ಧಿ ಆಯುಕ್ತರಾಗಿದ್ದ ಎಸ್. ಎಂ ಜಾಮದಾರ ಹಾಗೂ ಅವರ ತಂಡವನ್ನು ಅಭಿನಂದಿಸಬೇಕು.

ಈ ಊರಿನ ಆ ತುದಿಗೆ ಕಲ್ಯಾಣದ ಕೋಟೆ ಇದೆ. ಇದು ಅಪರೂಪದ ವಾಸ್ತುಶೈಲಿಯಲ್ಲಿದೆ. ಸಾಮಾನ್ಯವಾಗಿ ಕೋಟೆಗಳು ನೆಲದ ಮೇಲೆ ಒಂದೇ ಅಂತಸ್ತಿನಲ್ಲಿ ಇದ್ದರೆ ಇದು ಮೂರು ಅಂತಸ್ತಿನಲ್ಲಿ ಇದೆ. ಪುಟ್ಟ ಜಾಗದಲ್ಲಿ ಮೂರು ಅರಮನೆಗಳನ್ನು ಹೊಂದಿರುವ ಇದು ಕುಂಡದಲ್ಲಿ ಹೂ ಬೆಳೆಸಿದಂತೆ ಓರಣವಾಗಿದೆ. ಇಂಜಿನಿಯರಿಂಗ್
ಕಾಲೇಜ್ ವಿದ್ಯಾರ್ಥಿಗಳ ಮಟ್ಟಿಗೆ ಇದು ಮುಕ್ತ ಪ್ರಯೋಗಾಲಯ.

ಇಲ್ಲಿಂದ ಕೊಂಚ ದೂರದಲ್ಲಿ ಇರುವ ಉಮಾಪುರ-ನಾರಾಯಣ ಪುರಜೋಡಿ ಗ್ರಾಮಗಳಲ್ಲಿ ಬೇಲೂರು-ಹಳೇಬೀಡುಗಳಿಗಿಂತ ಹಳೆಯ ಶಿಲಾಬಾಲಿಕೆ, ಮಾತೃಕೆಯರ ಶಿಲ್ಪಗಳಿವೆ.

ನಾರಾಯಣಪುರದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಗಾ ಇದೆ. ಇಡೀ ಜಗತ್ತಿನಲ್ಲಿ ಈ ಹೆಸರಿನ ಇನ್ನೊಂದು ದರ್ಗಾ ಇಲ್ಲ. ಹದಿನೈದನೇ ಶತಮಾನದ ಬಹಮನಿ ಸುಲ್ತಾನ್‌ರ ಕೊನೆಯ ತಮ್ಮ ಮಲ್ಲಿಕ ಅರಜಾನ, ಕಲ್ಲಪ್ಪಜ್ಜ ಎನ್ನುವ ಸಂತನ ಪ್ರಭಾವದಿಂದ ವೇದ-ಶಾಸ್ತ್ರಗಳನ್ನು ಓದಿ ಪಂಡಿತನಾಗುತ್ತಾನೆ. ಬಡವರ ಬಂಧು (ಗರೀಬ ನವಾಜ್) ಎನ್ನುವ ಹೆಸರು ಗಳಿಸಿ ಲೋಕ ಕಲ್ಯಾಣ ಮಾಡುತ್ತಾನೆ. ಕೊನೆಗೆ ತಮ್ಮ ಗುರುವಿನ ಸಮಾಧಿಯ ಪಕ್ಕ ಪ್ರಾಣಬಿಡುತ್ತಾನೆ. ಎರಡೂ ಸಮಾಧಿಗಳು ಒಂದೇ ಕಟ್ಟಡದಲ್ಲಿ ಇವೆ. ಈ ಎರಡೂ ಸಮಾಧಿಗಳಿಗೂ ಹಿಂದೂ-ಮುಸ್ಲಿಮರು ಸಮನಾಗಿ ನಡೆದುಕೊಳ್ಳುತ್ತಾರೆ.

ಪೀರ್ ಪಾಶಾ ಬಂಗಲಾ

ಊರಿನ ಹೃದಯ ಭಾಗದಲ್ಲಿ ಪೀರ್ ಪಾಶಾ ಬಂಗಲಾ ಇದೆ. ಇಲ್ಲಿ ಒಂದು ಖಾನಕಾ ಇತ್ತು. ಅಂದರೆ ಮಹಾ ಗುರುವಿನ ಪ್ರವಚನ ಭವನ. ಇದರ ಆವರಣದಲ್ಲಿ ಸೂಫಿ ಸಂತರ ಸಮಾಧಿಗಳು ಇವೆ. ಅದರ ನಡುವೆ ಇರುವ ಮಹಲಿನಲ್ಲಿ ಹೈದರಾಬಾದು ಸುಲ್ತಾನ್‌ರ ಅಳಿಯನ ಕುಟುಂಬ 1950ರವರೆಗೂ ವಾಸ ಮಾಡುತ್ತಿತ್ತು. ಅದೇ ಮೂಲ ಅನುಭವ ಮಂಟಪ ಎಂದು ಹೇಳಿಕೊಂಡು ಕೆಲವರು ಈಗ ರಾಜಕಾರಣ ಮಾಡುತ್ತಿದ್ದಾರೆ. “ಇದು 19-20ನೆ ಶತಮಾನದ ಕಟ್ಟಡ. ಇದು ಮೂಲ ಅನುಭವ ಮಂಟಪ ಎನ್ನುವರು ಮೂರ್ಖರು” ಎಂದು ಈಗಾಗಲೇ ಡಾ. ಜಾಮದಾರ ಹೇಳಿದ್ದಾರೆ.

“ಅನುಭವ ಮಂಟಪ ಎನ್ನುವುದು ಯಾವುದೋ ಒಂದು ಕಟ್ಟಡ ಅಲ್ಲ. ಅದು ಶರಣರ ಚರ್ಚೆ-ವಚನ ರಚನೆಯ ಕೇಂದ್ರ. ಅದು ಇವತ್ತು ಒಬ್ಬರ ಮನೆ, ನಾಳೆ ಇನ್ನೊಬ್ಬರ ಮನೆ ಎನ್ನುವ ರೀತಿಯಲ್ಲಿ ಇದ್ದಿರಬಹುದು. ಅಲ್ಲಿನ
ಮಾತು-ವಚನ ಮುಖ್ಯವೇ ಹೊರತು ಕಟ್ಟಡ ಅಲ್ಲ” ಎಂದು ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಭಾಲ್ಕಿ ಹಿರೇಮಠದ ಹಿಂದಿನ ಮುಖ್ಯಸ್ಥರಾದ ಶ್ರೀ ಬಸವಲಿಂಗ ಪಟ್ಟದೇವ್ರು ಹೇಳಿದ್ದಾರೆ.

ಪೀರ್ ಪಾಶಾ ಬಂಗಲಾದಿಂದ ಹೊರಗೆ ಬರುವ ದಾರಿಯಲ್ಲಿ ಪರುಷ ಕಟ್ಟೆ ಇದೆ. ಬಸವಣ್ಣನ ಮನೆಗೆ ಹೋಗುವವರು ಇಲ್ಲಿ ಕುಳಿತು ಮುಂದಕ್ಕೆ ಹೋಗುತ್ತಿದ್ದರು ಮತ್ತು ಮೌಲಿಕ ಚರ್ಚೆಗಳನ್ನು ನಡೆಸುತ್ತಿದ್ದರು. ಪರುಷ ಮಣಿ ಕಬ್ಬಿಣವನ್ನು ತನ್ನ ಸ್ಪರ್ಶದಿಂದ ಚಿನ್ನವಾಗಿಸಿದಂತೆ ಇಲ್ಲಿನ ಚರ್ಚೆ ಜನರ ಮನಸ್ಸನ್ನು ಪರಿವರ್ತಿಸುತ್ತಿತ್ತು ಎನ್ನುವ ನಂಬಿಕೆ ಜನರಲ್ಲಿದೆ.

ಇದರಿಂದ ಸ್ವಲ್ಪ ದೂರದಲ್ಲಿ ರಾಜಾ ಬಾಗ್ ಸವಾರ ದರ್ಗಾ ಇದೆ. ‘ಹುಲಿ ಏರಿ ಬಂದ ಸಂತನೊಬ್ಬ ಜನರ ಹಿತ ಕಾಯ್ದ’ ಎನ್ನುವ ಲಾವಣಿಗಳನ್ನು ಇಲ್ಲಿನ ಜಾನಪದರು ಹಾಡುತ್ತಾರೆ.

ಇಲ್ಲಿನ ಬಂದವರ ಓಣಿ ಹಾಗೂ ತ್ರಿಪುರಾಂತ ಉದ್ಯಾನವನಗಳು ಬೆಂಗಳೂರು-ಹೈದರಾಬಾದಿನ ಉದ್ಯಾನಗಳನ್ನು ನೆನಪಿಸುತ್ತವೆ.

ಆದರೆ ಈ ಊರಿನಲ್ಲಿ ಇರುವುದಕ್ಕಿಂತ ಇಲ್ಲಗಳ ಪಟ್ಟಿ ದೊಡ್ಡದಾಗಿದೆ. ನಗರದ ತುಂಬೆಲ್ಲ ಶರಣರ ಸ್ಮಾರಕಗಳು ಇದ್ದರೂ ಕೂಡ ಅವುಗಳನ್ನು ಓಡಾಡಿ ತೋರಿಸುವ ಗೈಡುಗಳು ಇಲ್ಲ. ಪ್ರವಾಸಿ ಟ್ಯಾಕ್ಸಿ ಇಲ್ಲ. ಸ್ಮಾರಕಗಳ ಬಗ್ಗೆ, ಪ್ರವಾಸಿಗಳಿಗೆ ಸರಳವಾಗಿ, ಬಹು ಭಾಷೆಯಲ್ಲಿ ಮಾಹಿತಿ ಕೊಡುವ ಆನ್‌ಲೈನ್ ಪರಿಕರಗಳು ಇಲ್ಲ. ಪ್ರವಾಸಿಗಳು ಇಳಿದುಕೊಳ್ಳಲು ರಾಷ್ಟ್ರೀಯ-ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಇರುವ ಹೊಟೇಲ್‌ಗಳು ಇಲ್ಲ.

ಪಟ್ಟಣದ ಅನೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೌಕರ್ಯ ಸರಿಯಾಗಿಲ್ಲ. ಪಟ್ಟಣದಲ್ಲಿ ಒಳ ಚರಂಡಿ ಇಲ್ಲ. ಹಳೆಯ ಪಟ್ಟಣದ ಅನೇಕ ರಸ್ತೆಗಳ ಮಧ್ಯದಲ್ಲಿ ನೀರು ಹರಿಯುವಂತೆ ಚರಂಡಿ ಕಟ್ಟಲಾಗಿದೆ. ಈ ಊರಿಗೆ ವರ್ತುಲ ರಸ್ತೆ ಅಥವಾ ಬೈ ಪಾಸ್ ರಸ್ತೆ ಇಲ್ಲ. ವಿದ್ಯುತ್ ಪೂರೈಕೆ ಅಸಮರ್ಪಕ.

ಇಡೀ ತಾಲೂಕಿಗೆ ಒಂದು ಸರ್ಕಾರಿ ಪದವಿ ಕಾಲೇಜು ಇದೆ. ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಇವೆ. ಉನ್ನತ ಶಿಕ್ಷಣ ಸಂಸ್ಥೆಗಳು ಇಲ್ಲ. ಗುಲ್ಬರ್ಗ ವಿಶ್ವವಿದ್ಯಾಲಯದವರು ಒಂದು ವಚನ ಸಂಶೋಧನೆ ಕೇಂದ್ರ ಮಾಡುತ್ತೇವೆ ಎನ್ನುವ ಆಶ್ವಾಸನೆ ಕೊಟ್ಟು ಮರೆತುಬಿಟ್ಟು ದಶಕಗಳೇ ಆದವು. ತಾಲೂಕಿನ 112 ಹಳ್ಳಿಗಳಲ್ಲಿ ಕೇವಲ 36 ಪ್ರೌಢ ಶಾಲೆಗಳಿವೆ.

ಇಲ್ಲಿನ ತಾಲೂಕು ಆಸ್ಪತ್ರೆ ಸುಸಜ್ಜಿತವಾಗಿಲ್ಲ. ಅದು ಹೆದ್ದಾರಿಯ ಪಕ್ಕದಲ್ಲೇ ಇದ್ದರೂ ಸಹಿತ ಇಲ್ಲಿ ಅಪಘಾತ ತುರ್ತು ಚಿಕಿತ್ಸೆ ವಾರ್ಡು ಇಲ್ಲ. ಹೆಚ್ಚಿನ ಚಿಕಿತ್ಸೆ ನೀಡಲು ಸುತ್ತಲು ಎಲ್ಲಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ.

ಇಲ್ಲಿಂದ ಬೆಂಗಳೂರು ಸುಮಾರು 750 ಕಿಲೋಮೀಟರ್ ದೂರ. ಹೈದರಾಬಾದು 180, ಸೋಲಾಪುರ 120, ಗುಲ್ಬರ್ಗ 65 ಕಿಮೀ. ಗಂಭೀರ ಪ್ರಕರಣಗಳಲ್ಲಿ ಬಡವರು ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ರಾಜಮಾರ್ಗದ ಲಾರಿಗಳಿಗಾಗಿ ಕಾಯಬೇಕು.

‘ಇದು ಇಡೀ ಕಲ್ಯಾಣ ಕರ್ನಾಟಕದ ಹಣೆಬರಹ. ಇದರಲ್ಲಿ ಹೊಸದೇನು?’ ಅಂತ ನೀವು ಕೇಳಬಹುದು. ಅದಕ್ಕೆ ನನ್ನಲ್ಲಿ ಉತ್ತರವಿಲ್ಲ.

ಇಂಥಾ ಬಸವ ಕಲ್ಯಾಣದಲ್ಲಿ ರಾಜ್ಯ ಸರಕಾರ ಸುಮಾರು 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲು ಹೊರಟಿದೆ. ಈ ಊರನ್ನು ನೋಡಿದವರಿಗೆ, ಇಲ್ಲಿ ಇದ್ದವರಿಗೆ, ಇದು ಬೆಳೆಯಬೇಕು, ವಿಶ್ವ ವಿಖ್ಯಾತಿ ಪಡೆಯಬೇಕು ಎಂದು ಆಶಿಸಿದವರಿಗೆ, ವಿಶ್ವದ ಇತರ ದಾರ್ಶನಿಕರಿಗೆ ಸಿಕ್ಕ ಮನ್ನಣೆ-ಮಹತ್ತು ಬಸವಣ್ಣನಿಗೆ, 12ನೆ ಶತಮಾನದ ಶರಣರಿಗೆ ಸಿಗಬೇಕು ಎಂದು ಹಂಬಲಿಸಿದ ನನ್ನಂತಹ ಅನೇಕರಿಗೆ ಇದು ಸಹಜವಾಗಿ ಬೇಜಾರಾಗಿದೆ.

“ಕಲ್ಯಾಣದಲ್ಲಿ ಅನುಭವ ಮಂಟಪ ಮಾಡುತ್ತೇವೆ ಅಂತ ಹೇಳಿ ಕಟ್ಟಡ ನಿರ್ಮಿಸುವುದು ಅತ್ಯಂತ ಹಾಸ್ಯಾಸ್ಪದ ವಿಷಯ. ಇದು ಬಸವಣ್ಣನ ನೆನಪಿಗೆ ಮಾಡುವ ಅಪಚಾರ” ಎನ್ನುತ್ತಾರೆ ಲೇಖಕ, ಚಿಂತಕ ಪ್ರೊ. ಆರ್. ಕೆ ಹುಡಗಿ. “’ಆನು ಹಾರುವನೆಂದರೆ, ಕೂಡಲಸಂಗಯ್ಯ ನಗುವನಯ್ಯ’ ಎನ್ನುವುದು ಜನಪ್ರಿಯ ವಚನ. ಅಂತೆಯೇ ’ನಮ್ಮ ಕಲ್ಯಾಣದಲ್ಲಿ ಅನುಭವ ಮಂಟಪ ಮಾಡಲು ಹೋಗಿ ಕಟ್ಟಡ ಕಟ್ಟಿದರಯ್ಯ’ ಅಂತ ಹೇಳಿ ಬಸವಣ್ಣ ನಗಲಾರೆನೇ” ಎನ್ನುತ್ತಾರವರು.

“ದೇವಾಲಯ ಸಂಸ್ಕೃತಿ ತಿರಸ್ಕಾರ ಮಾಡಿದ, ಇಷ್ಟಲಿಂಗದ ಕಲ್ಪನೆ ಕೊಟ್ಟ, ಸ್ಥಾವರ ಅಮುಖ್ಯ, ಜಂಗಮ ಮುಖ್ಯ, ಎಂದು ಪ್ರತಿಪಾದಿಸಿದ ಬಸವಣ್ಣನ ಹೆಸರಿನಲ್ಲಿ ಇಷ್ಟು ದೊಡ್ಡ ಸ್ಥಾವರ ಕಟ್ಟಲು ಸರಕಾರ ಹೊರಟಿರುವುದು ಐತಿಹಾಸಿಕ ವ್ಯಂಗ್ಯ” ಎನ್ನುತ್ತಾರೆ ಪತ್ರಕರ್ತ, ಹೋರಾಟಗಾರ ಗಂಧರ್ವ ಸೇನಾ.

“ಇದೇ ದುಡ್ಡಿನಲ್ಲಿ ಒಂದು ವಿಶ್ವವಿದ್ಯಾಲಯವನ್ನೋ ಅಥವಾ ಒಂದು ಸುಸಜ್ಜಿತ ಸಂಸ್ಕೃತಿ ಕೇಂದ್ರವನ್ನೋ ಮಾಡಬಹುದು. ಕಟ್ಟಡ ಮಾಡಿ ಕೈ ಬಿಡುವುದು ಒಪ್ಪಲಾರದ ವಿಷಯ” ಎನ್ನುತ್ತಾರೆ ಲೇಖಕ ಭಿಮಾಶಂಕರ ಬಿರಾದಾರ.

ಈ ಸುದ್ದಿ ಬಂದ ಕೆಲವು ದಿನಗಳ ನಂತರ ನಾನು ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟು ಹಾಕಿದೆ. ಅದು ಹೀಗಿದೆ: “ಪ್ರೊ. ನಂಜುಂಡಪ್ಪ ಸಮಿತಿ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಬಸವ ಕಲ್ಯಾಣದ ತಾಲೂಕಾ ಕೇಂದ್ರದಲ್ಲಿ, ಉತ್ತಮ ಗುಣಮಟ್ಟದ ಸಾರ್ವಜನಿಕ ಉನ್ನತ ಶಿಕ್ಷಣದ ಸಂಸ್ಥೆಗಳು ಇರಲಾರದಲ್ಲಿ, ಬಡವರಿಗೆ ಉತ್ತಮ ಆರೋಗ್ಯ ಸೇವೆ ದೊರಕದಲ್ಲಿ, ಕುಡಿಯುವ ನೀರು ಸಮರ್ಪಕ ಪೂರೈಕೆ ಆಗದಲ್ಲಿ ಒಳ್ಳೆಯ ರಸ್ತೆಗಳ ಜಾಲ ಇರದಲ್ಲಿ, ಹೀಗೆಂಬೋ ಕಲ್ಯಾಣವೆಂಬೋ ಪಟ್ಟಣದಲ್ಲಿ, ನಮ್ಮ ಘನ ಸರಕಾರವು ತೆರಿಗೆ ದಾರರ 600 ಕೋಟಿ ರೂಪಾಯಿ ಖರ್ಚು ಮಾಡಿ ಅನುಭವ ಮಂಟಪ ಕಟ್ಟಲಿದೆ. ಬೆಂಗಾವಲೂರಿನ ವಿಧಾನಸೌಧದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆದಂತೆ, ಇಲ್ಲಿ ‘ಸ್ಥಾವರಕ್ಕೆ ಅಳಿವು ಉಂಟು, ಜಂಗಮಕ್ಕೆ ಅಳಿವು ಇಲ್ಲ’ ಎಂದು ಬರೆಯಲಾಗುವುದು”.

ಅದನ್ನು ನೋಡಿದ ನನ್ನ ಪರಿಚಿತರೊಬ್ಬರು ’ಹಂಗ ಅಂದ್ರ ಏನು?’ ಅಂತ ಕೇಳಿದರು. ಅವರ ಹತ್ತಿರ ಕೆಲ ನಿಮಿಷ ಮಾತಾಯಿತು. “ಅದು ಸರಿಪಾ. ಆದರೆ ಇದನ್ನು ಓದಿದ ಕೆಲ ಇತರರಿಗೂ ಈ ಥರಾ ಸಂದೇಹ ಇರಬಹುದು ಹೌದಿಲ್ಲೋ” ಅಂತ ಅವರು ಅಂದ್ರು. ಅದಕ್ಕಾಗಿ ಹೊಟ್ಟೆಯಲ್ಲಿ ಸಂಕಟ ಇಟ್ಟುಕೊಂಡು ಇಷ್ಟೆಲ್ಲಾ ಬರೆಯಬೇಕಾಯಿತು.

ಕೆಲವು ವರ್ಷಗಳ ಹಿಂದೆ ಬೀದರ್‌ನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹಿರಿಯರೊಬ್ಬರು ಮಾತನಾಡುವಾಗ “ನಮಗ ಇವತ್ತ ಅನುಭವ ಮಂಟಪ ಬ್ಯಾಡ, ಆದರ ಅನುಭಾವ ಮಂಟಪ ಬೇಕು” ಅಂತ ಅಂದರು. ಅವರ ಮಾತನ್ನು ತಪ್ಪು ತಿಳಿದ ಕೆಲ ಭಕ್ತರು ಅವರೊಂದಿಗೆ ಜಗಳ ಆಡಿದರು. “ನೀವು ಮಾತಾಡೋದು ಅನುಭವ ಮಂಟಪ ಅನ್ನೋದು ಇರಲೇ ಇಲ್ಲ ಅನ್ನೋ ಅರ್ಥ ಬರೋ ಹಂಗ ಐತಿ. ಅದು ತಪ್ಪು. ಆ ರೀತಿ ಮಾತಾಡಬಾರದು” ಅಂತ ವಾದಿಸಿದರು. “ಆತಪಾ ಆತು” ಅಂತ ಹೇಳಿ ಆ ಹಿರಿಯರು ಸುಮ್ಮನೇ ಕೂತರು.

ನಾನು ಆ ಸಭೆಯಲ್ಲಿ ಇದ್ದೆ. ಅಲ್ಲಿ ಏನು ನಡೆಯಿತು? ಯಾಕಾಗಿ ಅಷ್ಟೊಂದು ಜಗಳ ಬಂತು ಅಂತ ನನಗೆ ಅವತ್ತು ಅರ್ಥ ಆಗಿರಲಿಲ್ಲ. ಆದರೆ ಇಂದು ನನಗೆ ಅದು ಚೂರುಚೂರಾಗಿ ಅರ್ಥ ಆಗುತ್ತಿದೆ. ಆ ಹಿರಿಯರನ್ನು ನಾನು ಇಂದು ನೆನೆಯುತ್ತೇನೆ. ನಮಗೆ ಇವತ್ತು ಬೇಕಾಗಿರುವುದು ಅನುಭಾವ ಮಂಟಪ ಎನ್ನುವ ಅವರ ಮಾತನ್ನು ಅನುಮೋದಿಸುತ್ತೇನೆ. ಇಂದಿಲ್ಲಾ ನಾಳೆ ಆ ಜಾಗೃತಿ ನಮಗೆ ಬಂದೀತು ಎಂದು ಆಶಿಸುತ್ತೇನೆ.

‘ಎಲ್ಲರಿಗೂ ಸದ್ಬುದ್ಧಿ ನೀಡು’ ಎಂದು ನನ್ನ ಕರಸ್ಥಲಕ್ಕೆ ಬಂದು ಚುಳುಕಾದ ಕೂಡಲ ಸಂಗಯ್ಯನಲ್ಲಿ ಪ್ರಾರ್ಥಿಸುತ್ತೇನೆ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ’ಇವ ನಮ್ಮವ’ ಪರಂಪರೆ ನಮ್ಮದು: ನಿಜ ಆಧ್ಯಾತ್ಮಿಕ ಮಠಾಧೀಶರ ಮನದಾಳದ ಮಾತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

 1. ಅರ್ಥ ಗರ್ಭಿತ,ಸುಂದರ,ಸತ್ಯಗಳಿಂದ ಕುಡಿದ ಲೆಖನ. ಹಿಂದು ಮುಸ್ಲಿಂರ ವಿಭಜನೆಯಲ್ಲಿ ಮತ ಗಳಿಸುವ ಹುನ್ನಾರದಲ್ಲಿರುವ ಪಕ್ಷಕ್ಕಿಗ ಲಿಂಗಾಯತರ ಮತ್ತು ಮುಸ್ಲಿಂರ ಮಧ್ಯ ಬೆಂಕಿ ಹಚ್ಚುವ ಕಾರ್ಯ ಪ್ರಾರಂಭಿಸಿದೆ. ಅದಕ್ಕೆ ಪ್ರಜ್ಞಾವಂತ ಲಿಂಗಾಯತ ಬಲಿಯಾಗಲಾರ.
  ದನ್ಯವಾದಗಳು ತಮ್ಮ ಈ ಒಳ್ಳೆಯ ಲೆಖನಕ್ಕಾಗಿ ದೇಸಾಯರ.

 2. ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ. ಪೀಠಾಧಿಪತಿಗಳು , ಅಲ್ಲಮಪ್ರಭು ಅನುಭಾವ ಪೀಠ, ಉಡುಪಿ

  !!ಗುರಬಸವಲಿಂಗಶರಣ!!
  【ಅ.ಸ.ಷ.】
  ==============
  ಶರಣ ಹೃಷಿಕೇಶ ಬಹದ್ದೂರ ದೇಸಾಯಿ ಅಣ್ಣಾವರೇ ಆಲಿಸಿ, ಸತತ ಪರಕೀಯರ ಹಾಗು ಅನ್ಯ ಮತಿಯರ ದಾಳಿಗೆ ಒಳಗಾದ ಅಂದಿನ ಹನ್ನೆರಡನೆಯ ಶತಮಾನದ ಕಲ್ಯಾಣವನ್ನು ಇಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಾಂತಿಯಿಂದ ಬಂದ ನಗರಗಳೇ ಇಂದು ಅನೇಕ ರೀತಿಯಲ್ಲಿ ಬದಲಾಗಿವೆ. ಅಂಥದರಲ್ಲಿ ಇಂದಿನ ಬಸವಕಲ್ಯಾಣ ನಿರಂತರ ದಾಳಿಗೆ ಒಳಗಾಗಿ ಈ ಲೋಕದ ಪ್ರತಿಯೊಂದು ಮತ ಪಂಥ ಸಂಪ್ರದಾಯ ಪಂಗಡಗಳೊಂದಿಗೆ ತನ್ನ ದೂರವನ್ನು ಕಾಯ್ದುಕೊಂಡ ಬಸವಾದಿ ಶರಣರ ಪವಿತ್ರ ವಚನ ಸಿದ್ಧಾಂತ ಆಧಾರಿತ ಲಿಂಗಂ ಧರ್ಮದ ಆಸ್ತಿತ್ವದ ನಾಶಕ್ಕಾಗಿ ಅನ್ಯರೆಲ್ಲರು ಭಾಗಿಯಾಗಿರುವುದು ಬೆಳಕಿನಷ್ಟೆ ಸತ್ಯವಾದ ವಿಷಯವೆಂಬುದು ತಾವು ಬಲ್ಲಿರಿ ಎಂದು ನಂಬಿದ್ದೆವೆ. ಇರಲಿ ಇನ್ನು ತಾವು ಜನರ ತೆರಿಗೆ ಹಣದಿಂದ ಕಟ್ಟುತ್ತಿರುವ ಇಂದಿನ ಸರ್ಕಾರದ “ಅನುಭವ ಮಂಟಪ” ದ ಬದಲು ಬೇರೆ ಸಾರ್ವಜನಿಕ ಇಲಾಖೆಗಳ ಕಟ್ಟಡ ಕಟ್ಟಬೇಕೆಂಬ ನಿಮ್ಮ ಹಾಗು ಜನಸಾಮಾನ್ಯರ ಇರಾದೆ ಸರಿಯಲ್ಲ. ಮಾದರಿ ಪ್ರಜಾಪ್ರಭುತ್ವದ ಬೀಜಗಳನ್ನು ಸಸಿಯಾಗಿ ಮಾಡಿ ಲೋಕಕ್ಕೆ ಪ್ರಜಾಪ್ರಭುತ್ವದೊಂದಿಗೆ ಇಂದಿನ ಹೆಮ್ಮರವಾಗಿ ಪ್ರಜ್ಞಾಪ್ರಭುತ್ವವನ್ನು ಸಾಕಾರ ಮಾಡಿದ ಅನುಭವ ಮಂಟಪದ ಹೆಗ್ಗಳಿಕೆ ಮುಂದಿನ ಪೀಳಿಗೆಗೆ ತೋರಿಸಬೇಕಾಗಿರುವುದು ಇಂದು ನಮ್ಮೆಲ್ಲರ ಕರ್ತವ್ಯವೆಂದು ತಾವು ಭಾವಿಸಿದಂತೆ ಕಾಣುತ್ತಿಲ್ಲ. ಪ್ರಜಾಪ್ರಭುತ್ವವೆಂಬ ಘನ ವ್ಯವಸ್ಥೆಯ ಬಗ್ಗೆ ಹೆಮ್ಮೆ ಉಳ್ಳವರು ತಕರಾರು ಮಾಡುವುದಿಲ್ಲ ಹಾಗು ಎರ್ಯಾಬಿರ್ಯಿ ಟೀಕಿಸುವುದಿಲ್ಲ. ಇನ್ನು ಅಪ್ಪ ಸಂಗನಬಸವಣ್ಣ ಅವರು ಸ್ಥಾವರಕ್ಕೆ ಅಳಿವುಂಟು ಅಂತ ಹೇಳಿರುವುದು ಮತ್ತು ಅದು ಲಿಂಗ ಧರ್ಮದಲ್ಲಿ ಬಂದಿರುವುದು ಸರಿಯಿದೆ. ಸ್ಥಾವರಕ್ಕೆ ಅಳಿವುಂಟು ಎಂದು ಹೇಳಿದ್ದಾರೆಯೆ ಹೊರತು ಸ್ಥಾವರವನ್ನು ತಿರಸ್ಕರಿಸಲಿಲ್ಲ.ಅನೇಕ ಪಂಡಿತರು ತಮ್ಮ ಮೂಗಿನ ನೇರಕ್ಕೆ ಇಲ್ಲಸಲ್ಲದ ವ್ಯಾಖ್ಯಾನ ಮಾಡುತ್ತಿರುವುದು ಸರಿಯಲ್ಲ. ಸ್ಥಾವರವಿಲ್ಲದೆ ಜಂಗಂ ನಿಲ್ಲದು ಎಂಬುದು ಬಸವಾದಿ ಶರಣರ ವಚನ ಸಾರ ಅನುಭಾವ ಅನೇಕರಿಗೆ ತಿಳಿದಂತೆ ಕಾಣುವುದಿಲ್ಲ. ಈಗ ಆಲಿಸಿ ನಿಮ್ಮ ದೇಹವೇ ಸ್ಥಾವರ, ಮತ್ತು ಮೆದುಳಿನ ಮಧ್ಯೆದಲ್ಲಿ ಸ್ಥಾಪಿತಗೊಂಡಿರುವುದೇ ಜಂಗಂ. ಆ ಜಂಗಂ ಅರ್ಥಾತ ಚೈತನ್ಯವನ್ನು ದೇಹವಿಲ್ಲದೆ ಇಡಲಿಕ್ಕಾಗುವುದಿಲ್ಲ. ಹಾಗಾಗಿ ಸ್ಥಾವರ ಬೇಕಣ್ಣ. ಸ್ಥಾವರದ ಸಹಾಯದಿಂದಲೆ ನಾವೆಲ್ಲರೂ ಸದ್ಗತಿ ಪಡೆಯಬೇಕಿದೆ. ಶರಣಾರ್ಥಿ. ಪೀಠಾಧಿಪತಿಗಳು, ಅಲ್ಲಮಪ್ರಭು ಅನುಭಾವ ಪೀಠ, ಮು!! ಕಾಂತಾವರ, ತಾ!! ಕಾರ್ಕಳ,.ಜಿ!! ಉಡುಪಿ ದೂ!! ೮೪೩೧೯೩೯೩೮೦
  😊😊😊

 3. ಓಟಿನ ರಾಜಕಾರಣಕ್ಕಾಗಿ ಬಸವ ಕಲ್ಯಾಣವನ್ನು ವಿಷಯ ವಸ್ತುವಾಗಿಸಿ ಬಸವಣ್ಣನ ವಿಚಾರದಲ್ಲಿ ಹುನ್ನಾರ ನಡೆಸಲು
  ಹೊರಟಿರುವ ಜೆಸಿಬಿ ಪಕ್ಷಗಳು ಅಧಿಕಾರವಿರುವಾಗ ಜನರಿಗೆ ನ್ಯಾಯಯುತವಾದ ಕೆಲಸ ಕಾರ್ಯಗಳನ್ನು ಮಾಡಿಕೊಡದ ಇವರು ಚುನಾವಣೆಗಳು ಬಂದಾಗ ಯಾವುದಾದರೂ ಮನಸ್ಸಿಗೆ ಆಘಾತ ಉಂಟು ಮಾಡುವಂತಹ ವಸ್ತು-ವಿಷಯಗಳನ್ನು ಹೊರಗೆ ಹಾಕಿ ಅಲ್ಲಿಯ ಜನರಿಗೆ ನೆಮ್ಮದಿ ಹಾಳು ಮಾಡುತ್ತಿರುವುದು ಉತ್ತಮ ವ್ಯವಸ್ಥೆಗೆ ವಿರುದ್ಧವಾಗಿದೆ ಇದು.

 4. ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ. ಪೀಠಾಧಿಪತಿಗಳು , ಅಲ್ಲಮಪ್ರಭು ಅನುಭಾವ ಪೀಠ,

  Save my name, email, and website in this browser for the next time I comment.

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...