Homeಕರ್ನಾಟಕಬೆಳಗಾವಿ ಮೂರು ಜಿಲ್ಲೆಗಳಾಗಬೇಕೆಂಬ ಕೂಗಿನ ಸುತ್ತ; ವಿಕೇಂದ್ರೀಕರಣ ಮತ್ತು ಜನಸತ್ತೆ

ಬೆಳಗಾವಿ ಮೂರು ಜಿಲ್ಲೆಗಳಾಗಬೇಕೆಂಬ ಕೂಗಿನ ಸುತ್ತ; ವಿಕೇಂದ್ರೀಕರಣ ಮತ್ತು ಜನಸತ್ತೆ

- Advertisement -
- Advertisement -

ಬೆಂಗಳೂರು ಭಾಷೆಯಲ್ಲಿ ಹೇಳೋದಾದರೆ ‘ಈಗಾ ನಾವ್ ಎಲ್ಲರೂ ಒಂದು ಕೆಲಸ ಮಾಡೋಣ’.

ನಂ ಅಮ್ಮಮ್ಮನ ಮನೆ ಪಕ್ಕದ ಛತ್ರದಲ್ಲಿ ನೆಂಟರ ಮದುವೆ ಮುನ್ನಾ ದಿನ ಕಸಿನ್‌ಸು ಎಲ್ಲಾ ಸಿಕ್ಕಾಗ, ಸಖತ್ ಮಜಾ ಮಾಡಿದ ಮೇಲೆ, ಬ್ಯಾಂಗ್‌ಲೋರ್ ಕ್ಲೈಮೇಟ್, ಮೈಸೂರು ಊಟ, ಸಕ್ರೆಬೈಲು ಟ್ರಿಪ್, ಚಿಕ್ಕಮಗಳೂರು ಕಾಫಿ, ಸಂಬಂಧಿಕರ ಮದುವೆ-ಮುಂಜಿ, ಇತ್ಯಾದಿ ಪಟ್ಟಾಂಗ ಎಲ್ಲಾ ಆದ ಮೇಲೆ ನೀವು, ‘ಟೈಮ್ ಕಿಲ್ ಮಾಡೋಕೆ ಈಗ ನಾವೆಲ್ಲಾ ಒಂದು ಕ್ವಿಜ್ ಮಾಡೋಣ’ ಅಂತ ಹೇಳಿ.

ಆ ನಿಮ್ಮ ಭೀಷಣ ಘೋಷಣೆಯ ನಂತರ ಅಲ್ಲಿ ಎಷ್ಟು ಜನ ಉಳಿತಾರೋ ಅವರಿಗೆ ಒಂದೇ ಒಂದು ಪ್ರಶ್ನೆ ಕೇಳಿ- “ಈ ಡೆಮೊಕ್ರಸೀ ಅಥವಾ ಪ್ರಜಾತಂತ್ರ ಅಥವಾ ಪ್ರಜಾಸತ್ತೆ ಅಥವಾ ಜನತಂತ್ರ ಅಥವಾ ಜನಸತ್ತೆ ಅಂದರೆ ಏನು?” ಅಂತ. ಹತ್ತರಲ್ಲಿ ಒಂಬತ್ತು ಜನ ಏನೋ ಒಂದು ಹೇಳುತ್ತಾರೆ. ಅದರಲ್ಲಿ ಸಮಾಧಾನಕರ ಬಹುಮಾನ ಕೊಡಬಹುದಾದ ಉತ್ತರಗಳು ಸುಮಾರು 6-7 ಇರತಾವೆ.

ಈಗ ಲಾಸ್ಟ್ ಬಾಲ್ ಹಿಟ್ ವಿಕೆಟ್ ಅಂತ ಇನ್ನೊಂದು ಪ್ರಶ್ನೆ ಕೇಳಿ- “ಈ ಒಕ್ಕೂಟ ವ್ಯವಸ್ಥೆ ಹಾಗೂ ವಿಕೇಂದ್ರೀಕರಣ ಅಂದರೆ ಏನು?” ಅಂತ. ಅರ್ಧಕ್ಕೆ ಅರ್ಧ ಮಂದಿಗೆ ನಿಮ್ಮ ಪ್ರಶ್ನೆ ಅರ್ಥ ಆಗುವುದಿಲ್ಲ. ಇನ್ನು ಕೆಲವರು ಏನೇನೋ ಹೇಳಲು ಹೋಗುತ್ತಾರೆ. ನೀವು ಏನು ಮಾತಾಡ್ತಾ ಇರಬಹುದು ಅಂತ ಐಡಿಯಾ ಇರುವ ಕೆಲವರು ಮಾತ್ರ- “ಅದು ಬೇರೆ, ಇದು ಬೇರೆ ಅಲ್ಲವಾ”, ಅಂತ ಅನ್ನಬಹುದು. ಅತಿ ಅಪರೂಪಕ್ಕೆ ನಿಮಗೆ ಒಂದೊಳ್ಳೆ ಉತ್ತರ ಸಿಗಬಹುದು- ಉತ್ತರ ಕರ್ನಾಟಕದ ಮೂಲೆಯ ಹಳ್ಳಿಯ ಗುಮಚಿ ಹೊಟೇಲ್ ಒಂದರಲ್ಲಿ ಒಂದ್ ಲೋಟ ಬಿಸ್ ಬಿಸಿ ಫಿಲ್ಟರ್ ಕಾಫೀ ಸಿಕ್ಕಂತೆ.

ಜೆ.ಹೆಚ್. ಪಟೇಲ್

ಅಲ್ ರೈಟ್, ಈಗ ಮುಂದಕ್ಕೆ ಹೋಗಿ ಇನ್ನೊಂದು ಪ್ರಶ್ನೆ ಕೇಳಿ. ನಮ್ಮ ದೇಶದಲ್ಲಿ ರಾಜ್ಯ ಹಾಗೂ ಕೇಂದ್ರಗಳ ಸಂಬಂಧ ಹೇಗಿರಬೇಕು. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಅಲ್ಲಿನ ಕೆಲವರು ‘ರಾಜ್ಯಗಳಿಗೆ ಹೆಚ್ಚಿನ ಹಣ- ಸ್ವಾತಂತ್ರ್ಯ ದೊರಕಬೇಕು’ ಅನ್ನಬಹುದು. ಅದರಲ್ಲಿ ಒಬ್ಬರು, ಇಬ್ಬರು “ಅದೆಲ್ಲಾ ನಮಗೆ ಯಾಕೆ ಸ್ವಾಮಿ?” ಅನ್ನಬಹುದು. ಅವರ ಫೋನ್ ನಂಬರ್ ತೊಗೊಂಡು ಇಟ್ಟುಕೊಳ್ಳಿ. ಅದು ನಶಿಸಿಹೋಗುತ್ತಿರುವ ಪ್ರಬೇಧ. ಅನೇಕರು “ರಾಜ್ಯ- ಅದಕ್ಕೊಂದು ಸರಕಾರ, ಒಂದು ಮುಖ್ಯಮಂತ್ರಿ, ಸಂಪುಟ, ಅಧಿಕಾರಿ ವರ್ಗ, ಯಾಕೆ ಇರಬೇಕು? ಎಲ್ಲ ವೇಸ್ಟ್ ಅಲ್ಲವಾ ಸಾರ್?” ಅನ್ನಬಹುದು. ಅವರ ಸಂಖ್ಯೆ ಹೆಚ್ಚು. ಅವರು “ಈ ದೇಶಕ್ಕೆ ಪ್ರಜಾತಂತ್ರ ಬೇಡ. ಒಬ್ಬ ಸಜ್ಜನ ಸರ್ವಾಧಿಕಾರಿ ಬೇಕು,” ಅಂತ ಅನ್ನುವವರೇ. ಅವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಅಲ್ಲಿಗೆ ಊಟದ ಸಮಯ ಆಗೋದರಿಂದ ನೀವು ಕ್ವಿಜ್ ನಿಲ್ಲಿಸಬಹುದು.

ಈಗ ನಮ್ಮೆಲ್ಲರ ಮುಂದೆ ಇರುವ ಪ್ರಶ್ನೆ ಎಂದರೆ- ‘ವಿಕೇಂದ್ರೀಕರಣ ಇಲ್ಲದ ಪ್ರಜಾತಂತ್ರ ಎಷ್ಟು ಉಪಯುಕ್ತ?’ ನಮ್ಮಲ್ಲಿ ಅನೇಕರು ಈ ಬಗ್ಗೆ ಗಂಭೀರ ವಿಚಾರ ಮಾಡುವುದಿಲ್ಲ. ಅನೇಕರು ಇವೆರಡೂ ಪದಗಳ ನಡುವೆ ಇರುವ ಅಂತರವನ್ನು ಅರಿಯುವುದಿಲ್ಲ.

ಅತಿ ಸರಳವಾಗಿ ಹೇಳಬೇಕೆಂದರೆ ಪ್ರಜಾತಂತ್ರ ಎಂದರೆ ಪ್ರಜೆಗಳಿಗೆ ಅಧಿಕಾರ ಸಿಗುವುದು ಎಂದಾದರೆ, ವಿಕೇಂದ್ರೀಕರಣ ಎಂದರೆ ಅಧಿಕಾರ ಪ್ರಜೆಗಳಿಗೆ ಎಷ್ಟು ಸಾಧ್ಯವೋ ಅಷ್ಟು ಹತ್ತಿರವಾಗುವುದು.

“ನಾವು ನಮ್ಮ ಪ್ರತಿನಿಧಿಗಳಿಗೆ ನೀಡಿದ ಅಧಿಕಾರವನ್ನು ಅವರು ದೆಹಲಿಯಿಂದ ಮಾತ್ರ ಚಲಾಯಿಸುತ್ತಾರೆ, ಬೆಂಗಳೂರಿಗೆ ಏನೂ ಇಲ್ಲ”, “ಎಲ್ಲಾ ಅಧಿಕಾರ ಬೆಂಗಳೂರಿನಲ್ಲಿ ಇದೆ, ನಮ್ಮ ಜಿಲ್ಲೆಗೆ ಏನೂ ಇಲ್ಲ”, “ಎಲ್ಲಾ ಅಧಿಕಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇದೆ, ತಾಲೂಕು ಪಂಚಾಯಿತಿ ಪೋಸ್ಟ್ ಆಫೀಸ್ ಆಗಿಬಿಟ್ಟಿದೆ”, “ಗ್ರಾಮ ಪಂಚಾಯತ್‌ನಲ್ಲಿ ಏನಿದೆ? ಒಂದು ಗ್ರಾಂ ಅಧಿಕಾರ ಕೂಡ ಇಲ್ಲ” ಎನ್ನುವ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ಇದು ಅತಿ ಕ್ಲಿಷ್ಟವಾದ ಸಂಗತಿ. ಇದಕ್ಕೆ ಅನೇಕ ಆಯಾಮಗಳು ಇವೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಕೇಂದ್ರೀಕರಣದ ಬೇರೆಬೇರೆ ರೀತಿಯ ಮಾದರಿಗಳೂ ನಮ್ಮ ಮುಂದೆ ಇವೆ. ಇದರ ಒಂದು ಆಯಾಮವನ್ನು ಮಾತ್ರ ನಾವು ಇವತ್ತು ತೆಗೆದುಕೊಳ್ಳೋಣ- ಅದು ಕರ್ನಾಟಕ ರಾಜ್ಯದ ವಿವಿಧ ಭಾಗಗಳ ಜಿಲ್ಲೆಗಳ ಗಾತ್ರ. ಈ ರಾಜ್ಯದಲ್ಲಿ ಮೂರೇ ಮೂರು ತಾಲೂಕು ಇರುವ ಕೊಡಗು ಜಿಲ್ಲೆ ಇದೆ, 15 ತಾಲೂಕುಗಳು, ಹಾಗೂ 18 ವಿಧಾನಸಭಾ ಕ್ಷೇತ್ರ ಇರುವ ಬೆಳಗಾವಿ ಜಿಲ್ಲೆಯೂ ಇದೆ.

ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ

ರಾಜಕೀಯ ಕಾರಣಗಳಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರೀತಿಪಾತ್ರವಾಗಿದ್ದ ಜತ್ತ ತಾಲೂಕು ಮಹಾರಾಷ್ಟ್ರದಲ್ಲಿ ಇದೆ. ಅದು ಅಥಣಿ ತಾಲೂಕಿನ ಪಕ್ಕದಲ್ಲಿ ಇದೆ. ಅಥಣಿ-ಜತ್ತದ ನಡುವಿನ ಗಡಿರೇಖೆಯಿಂದ ಜಿಲ್ಲಾ ಕೇಂದ್ರ ಬೆಳಗಾವಿಗೆ ಸುಮಾರು 200 ಕಿಲೋಮೀಟರ್ ದೂರ. ಅಥಣಿಯ ಹಳ್ಳಿಯೊಂದರ ರೈತ ಯಾವುದೋ ಕೆಲಸಕ್ಕೆ ಬೆಳಗಾವಿಗೆ ಬರಬೇಕು ಎಂದರೆ ಅವನಿಗೆ ಅದು ಎರಡು ದಿವಸದ ಪ್ರವಾಸದ ತಯಾರಿ.

ಇಲ್ಲಿ 500ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಇವೆ. ಬೆಳಗಾವಿಯಲ್ಲಿ ಕೂತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಒಂದೊಂದು ಪಂಚಾಯಿತಿಗೆ ಒಂದೊಂದು ದಿವಸ ಭೇಟಿ ನಿಡುತ್ತೇನೆ ಎಂದರೂ ಅವರಿಗೆ ಎಲ್ಲವನ್ನೂ ಕವರ್ ಮಾಡಲು ಒಂದೂವರೆ ವರ್ಷ ಬೇಕಾಗುತ್ತದೆ. ಇಲ್ಲಿನ 1500 ಹಳ್ಳಿಗಳಲ್ಲಿ ನಾನು ಪ್ರತಿಯೊಂದನ್ನೂ ಭೇಟಿ ಮಾಡುತ್ತೇನೆ ಎಂದು ಯಾರಾದರೂ ಜಿಲ್ಲಾಧಿಕಾರಿ ನಿರ್ಧಾರ ಮಾಡಿದರೆ ಅವರು ಆ ಕೆಲಸ ಮುಗಿಸುವುದರಲ್ಲಿ ಅವರಿಗೆ ವರ್ಗಾವಣೆ ಆಗಿಬಿಟ್ಟಿರುತ್ತದೆ.

ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎನ್ನುವ ಬೇಡಿಕೆ ದಶಕಗಳಿಂದ ಇದೆ. ಜೆ.ಎಚ್ ಪಟೇಲ್ ಅವರು 1997ರಲ್ಲಿ ಜಿಲ್ಲಾ ವಿಭಜನೆಗೆ ಹೊರಡಿಸಿದ ಆದೇಶವನ್ನು ಇಲ್ಲಿನ ಕನ್ನಡ ಸಂಘಟನೆಗಳು ತೀವ್ರ ವಿರೋಧ ಮಾಡಿದವು. ಅವುಗಳ ಪ್ರಕಾರ ಇದರಿಂದ ಮರಾಠಿ ಪ್ರಾಬಲ್ಯದ ಹೊಸ ಜಿಲ್ಲೆ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆಗ ಇಲ್ಲಿನ ಕನ್ನಡ ವಿರೋಧಿ ಮರಾಠಿ ಗುಂಪುಗಳಿಗೆ ಬಲ ಬರುತ್ತದೆ. “ನಮ್ಮ ಬೆನ್ನ ಮೇಲೆ ಬಡಿಯಲು ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರಿಗೆ ನಾವೇ ಬಾರುಕೋಲು ಕೊಟ್ಟಂತೆ ಆಗುತ್ತದೆ” ಅಂತ ವಾದಿಸಿದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರ ಮನೆಯ ಮುಂದೆ ಸಾಲು ಮೂತ್ರ ವಿಸರ್ಜನೆ ಚಳವಳಿ ಮಾಡಿದರು. ಒಂದು ತಿಂಗಳ ಗದ್ದಲದ ನಂತರ ರಾಜ್ಯ ಸರಕಾರ ಸುಮ್ಮನೆ ಆಯಿತು. ಆದೇಶ ವಾಪಸ್ ತೆಗೆದುಕೊಂಡಿತು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಅದು ಬರಖಾಸ್ತು ಆಗುವವರೆಗೆ ನಾವು ಈ ವಿಷಯದಲ್ಲಿ ಮುಂದುವರಿಯುವುದಿಲ್ಲ ಎನ್ನುವ ಸಬೂಬು ಹೇಳುವದನ್ನು ರಾಜ್ಯ ಸರಕಾರ ರೂಢಿಸಿಕೊಂಡಿತು. ಕಳೆದ ಕಾಲು ಶತಮಾನದಿಂದ ಬೆಂಗಳೂರಿನಲ್ಲಿ ಮೆರೆದ ವಿವಿಧ ಪಕ್ಷದ ರಾಜ್ಯ ಸರಕಾರಗಳು ಇದೇ ಸಬೂಬು ಹೇಳಿಕೊಂಡು ಕೂತಿವೆ. ಒಂದೇಒಂದು ಕಾಲು ಮುಂದೆ ಇಟ್ಟಿಲ್ಲ.

ಇದನ್ನೂ ಓದಿ: 5 ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ನೀಡುತ್ತೇವೆ: ಸಚಿವ ಮುನಿಯಪ್ಪ ಘೋಷಣೆ

ಇದರಲ್ಲಿ ಎರಡು ವಿಷಯಗಳಿವೆ. ಮೊದಲನೆಯದು ಜಿಲ್ಲೆಯನ್ನು ಮುರಿದು ಕಟ್ಟುವುದರಿಂದ ಮರಾಠಿ ಪ್ರಾಬಲ್ಯದ ಹೊಸ ಜಿಲ್ಲೆಯ ಜನನ ಸಾಧ್ಯವೇ? ಹಿಂದಿನಿಂದ ಚಾಲ್ತಿಯಲ್ಲಿ ಇರುವ ಹೊಸ ಜಿಲ್ಲಾ ಕೇಂದ್ರ ಎಂದರೆ ಚಿಕ್ಕೋಡಿ. ಸ್ಥಳೀಯ ನಾಯಕರಾದ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರು ಕಳೆದ 40 ವರ್ಷಗಳಿಂದ ಚಿಕ್ಕೋಡಿಯನ್ನು ಪುಟ್ಟ ಮಗುವಿನಂತೆ ಬೆಳೆಸಿಕೊಂಡು ಬಂದಿದ್ದಾರೆ. ಅನೇಕ ಜಿಲ್ಲಾ ಮಟ್ಟದ ಕಚೇರಿಗಳನ್ನು ಅಲ್ಲಿ ಆರಂಭ ಮಾಡಿದ್ದಾರೆ. ಬೆಳಗಾವಿಯಿಂದ ಸುಮಾರು 90 ಕಿಲೋಮೀಟರ್ ದೂರ ಇರುವ ಈ ನಗರದಲ್ಲಿ ಜಿಲ್ಲಾ ನ್ಯಾಯಾಲಯ, ಪ್ರತ್ಯೇಕ ಶೈಕ್ಷಣಿಕ ಜಿಲ್ಲೆ, ಮೂಲ ಸೌಕರ್ಯ ಇಲಾಖೆಗಳಾದ ಲೋಕೋಪಯೋಗಿ, ವಿದ್ಯುತ್, ನೀರಾವರಿ ಇತ್ಯಾದಿ ಕಚೇರಿಗಳು, ಆಸ್ತಿ ನೋಂದಣಿ ಅಧಿಕಾರಿ ಕಚೇರಿ, ಎರಡು ಕೇಂದ್ರೀಯ ವಿದ್ಯಾಲಯಗಳು, ಇತ್ಯಾದಿ ಅಲ್ಲಿ ಈಗಾಗಲೇ ಕೆಲಸ ಮಾಡುತ್ತಿವೆ. ತನ್ನ ಸುತ್ತಲೂ ಕನ್ನಡ ಭಾಷಿಕ ಪ್ರದೇಶಗಳನ್ನು ಒಳಗೊಂಡ ಚಿಕ್ಕೋಡಿ ಮರಾಠಿ ಪ್ರಾಬಲ್ಯದ ಜಿಲ್ಲೆ ಆಗುವ ಸಾಧ್ಯತೆ ಕಮ್ಮಿ.

ಸತೀಶ್ ಜಾರಕಿಹೊಳಿ

ಇನ್ನು ಉಪವಿಭಾಗ ಅಧಿಕಾರಿ ಕಚೇರಿ ಇರುವ ನಗರ ಬೈಲಹೊಂಗಲ. ಪೂರ್ವ ದಿಕ್ಕಿನಲ್ಲಿ ಇರುವ ಈ ತಾಲೂಕು ಮರಾಠಿಮಯ ಆಗುವ ಅಪಾಯ ಇಲ್ಲ.

ವೈಜ್ಞಾನಿಕ-ಭೌಗೋಳಿಕ ಕಾರಣಗಳು ಇಲ್ಲದೆ ಇದ್ದರು ಕೂಡ, ರಾಜಕೀಯ ಕಾರಣಗಳಿಗೆ ಹೊಸ ಜಿಲ್ಲೆ ಆಗುವ ಸಾಲಿನಲ್ಲಿ, ತುದಿಗಾಲಿನಲ್ಲಿ ನಿಂತಿರುವ ಪ್ರದೇಶ ಎಂದರೆ ಗೋಕಾಕು. ಇಲ್ಲಿನ ರಾಜಕಾರಣದಲ್ಲಿ ಏಕಸ್ವಾಮ್ಯ ಸಾಧಿಸಿರುವ ಐದು ಜನ ಜಾರಕಿಹೊಳಿ ಸಹೋದರರು ಒಬ್ಬೊಬ್ಬರು ಒಂದೊಂದು ಪಕ್ಷದಲ್ಲಿ ಇದ್ದಾರೆ ಅಥವಾ ಪಕ್ಷಾಂತರಿಸುವ ತಯಾರಿಯಲ್ಲಿ ಇದ್ದಾರೆ.

ಎರಡು ಪಕ್ಷದ ಶಾಸಕರಾಗಿ ಮೂವರು ಇದ್ದರೆ, ಒಬ್ಬರು ಸ್ವತಂತ್ರರು. ಆದರೆ ಏನಾದರೂ ಹೆಚ್ಚುಕಮ್ಮಿ ಆದರೆ ಅವರು ಕಮ್-ಭರ್ತಿ ಲೆಕ್ಕದಲ್ಲಿ ಯಾವ ಪಕ್ಷ ಸೇರಿದರೆ ಅನುಕೂಲವೋ ಆ ಪಕ್ಷ ಸೇರಲು ತಯಾರು ಇದ್ದಾರೆ. ಇನ್ನೊಬ್ಬರು ಇನ್ನೂ ಪ್ರತ್ಯಕ್ಷ ರಾಜಕೀಯದಲ್ಲಿ ಇಲ್ಲ. ಆಕಾಶದಲ್ಲಿ ನಕ್ಷತ್ರಗಳ ಜೋಡಣೆ ಸರಿಯಾದ ದಿವಸ ಅವರೂ ಸೇರಿಕೊಳ್ಳುತ್ತಾರೆ.

ಇವೆಲ್ಲಾ ಏನೇ ಇದ್ದರೂ ಗೋಕಾಕ ಜಿಲ್ಲೆ ಆದರೆ, ಅದು ಮರಾಠಿ ಜಿಲ್ಲೆ ಆಗುವ ಸಾಧ್ಯತೆ ಕಮ್ಮಿ.

ಆ ಸಾಧ್ಯತೆ ಇರುವುದು ಬೆಳಗಾವಿಗೆ ಮಾತ್ರ. ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ಮತದಾರರು ಮೂರು ಶಾಸಕರನ್ನು ಆರಿಸುತ್ತಾರೆ. ಪಕ್ಕದ ಖಾನಾಪುರದಲ್ಲಿ ಮರಾಠಿ ಪ್ರಾಬಲ್ಯ ಇದೆ. ಯಮಕನಮರಡಿಯಲ್ಲಿ ಅದು ಕಮ್ಮಿ. ಹುಕ್ಕೇರಿ, ಸವದತ್ತಿ, ರಾಮದುರ್ಗದಲ್ಲಿ ಇನ್ನೂ ಕಮ್ಮಿ. ಇವೆಲ್ಲ ಸೇರಿ ಜಿಲ್ಲೆ ಆದರೆ ಯಾವುದೇ ಒಂದು ಭಾಷೆ ಮೇಲುಗೈ ಪಡೆಯುವುದು ಅಸಾಧ್ಯ.

ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ಮರಾಠಿ ಪ್ರಾಬಲ್ಯದ ಜಿಲ್ಲೆ ಸೃಷ್ಟಿ ಆದರೆ ಎನಾಗಲಿದೆ? ಯಾವ ಮಹಾಸಂಕಟ ಹುಟ್ಟಿಕೊಳ್ಳಲಿದೆ? ಮಹಾರಾಷ್ಟ್ರದಲ್ಲಿ ಜತ್ತ ಇಲ್ಲವೇ? ಕೇರಳದಲ್ಲಿ ಕಾಸರಗೋಡು ಇಲ್ಲವೇ? ಆಂಧ್ರದಲ್ಲಿ ಆದೋನಿ ಇಲ್ಲವೇ? ಗುಜರಾತಿನಲ್ಲಿ ಮರಾಠಿ ಭಾಷಿಕ ಪ್ರದೇಶಗಳಿವೆ. ಬೆಂಗಳೂರಿನಲ್ಲಿ ಕನ್ನಡ ಒಂದು ಬಿಟ್ಟು ಬೇರೆ ಎಲ್ಲಾ ಭಾಷೆ ಮಾತಾಡುವ ಪ್ರದೇಶಗಳಿಗೆ ಏನೂ ಕಮ್ಮಿ ಇಲ್ಲ. ಅಲ್ಲಿ ಯಾವ ಅವಘಡ ನಡೆದುಹೋಗಿದೆ?

ಮೊದಲ ರಾಜ್ಯ ಮರುವಿಂಗಡನಾ ಆಯೋಗದ ಮುನ್ನುಡಿಯಲ್ಲಿ ಒಂದು ಮಾತು ಇದೆ. “ಪ್ರದೇಶಗಳ ವಿಂಗಡಣೆ, ಅಭಿವೃದ್ಧಿ, ಜನ ಕಲ್ಯಾಣ, ಆಡಳಿತದ ಅನುಕೂಲತೆ ಇತ್ಯಾದಿಗಳ ಆಧಾರದ ಮೇಲೆ ಆಗಬೇಕೆ ಹೊರತು, ಭಾಷಾ ಪ್ರೇಮದಂತಹ ಭಾವನಾತ್ಮಕ ವಿಷಯಗಳ ಮೇಲೆ ಅಲ್ಲ. ಇದನ್ನು ನಾವು ಜಿಲ್ಲಾ ಮರುವಿಂಗಡನಾ ವಿಷಯದಲ್ಲಿ ಆದರೂ ಪಾಲಿಸಬೇಕು.

ಲಕ್ಷ್ಮೀ ಹೆಬ್ಬಾಳ್ಕರ್

ಆಡಳಿತಕ್ಕೆ ಅನೇಕ ಅಡೆತಡೆ ನೀಡಬಹುದಾದ, ಕಾರ್ಯಸಾಧು ಅಲ್ಲದ, ಜನರಿಗೆ ತೊಂದರೆ ಆಗುವ, ಸಂಭಾಳಿಸಲಿಕ್ಕೆ ಸಾಧ್ಯ ಇಲ್ಲದಷ್ಟೂ ದೊಡ್ಡ ಜಿಲ್ಲೆಗಳನ್ನು ನಿರ್ವಹಿಸುವ ಬದಲಿಗೆ ಅಚ್ಚುಕಟ್ಟಾದ ಸಣ್ಣ ಜಿಲ್ಲೆಗಳನ್ನು ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಕಣ್ಣಿನ ಎದುರು ಪರದೆ ಹಾಕುವ ಭಾವನೆಗಳನ್ನು ಬದಿಗಿತ್ತು ದೊಡ್ಡ ಜಿಲ್ಲೆಗಳನ್ನು ಕೊರೆದು ಸಣ್ಣಸಣ್ಣ ಆಡಳಿತಾತ್ಮಕ ಘಟಕಗಳನ್ನು ಮಾಡುವುದು ಸುಲಭ ಹಾಗೂ ಪ್ರಾಯೋಗಿಕ.

ಇದನ್ನು ನಾವೆಲ್ಲ ತಿಳಿದುಕೊಳ್ಳಬೇಕು. ‘ನನಗೆಲ್ಲಾ ಗೊತ್ತು, ನನಗೆ ಗೊತ್ತಿರಲಾರದ್ದು ಈ ಬ್ರಹ್ಮಾಂಡದಲ್ಲಿ ಇರಲಿಕ್ಕೆ ಸಾಧ್ಯವೇ ಇಲ್ಲ’ ಎನ್ನುವ ಸಾಮಾನ್ಯ ಮನೋಭಾವದ ಭಾರತೀಯರಾದ ನಾವು ನಮಗೆ ತಿಳಿಯಲಾರದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಕಮ್ಮಿ.

ನಮಗೆ ಪ್ರಜಾತಂತ್ರ ಇದೆ, ಆದರೆ ವಿಕೇಂದ್ರೀಕರಣ ಇಲ್ಲ ಎಂದರೆ ಪ್ರಜಾಸತ್ತೆ ಇಲ್ಲ ಅಂತಲೇ ಅರ್ಥ. ಯುವ ಉರ್ದು ಕವಿ ಸಿರಾಜ್ ಸೋಲಾಪುರಿ ಅವರ ಶಾಯರಿ ಒಂದು ಹೀಗಿದೆ: “ನೀನಿರುವುದು ಪಂಜರದಲ್ಲಿ ಅಂತ ಗೋಳಾಡಬೇಡ. ಅದು ಚಿನ್ನದ್ದು ಎನ್ನುವುದು ನೆನಪಿರಲಿ. ನಿನಗೆ ಜೋರಾಗಿ ಚೀರುವ ಸ್ವಾತಂತ್ರ್ಯ ಇದೆ. ಆದರೆ ಪಂಜರದ ಹೊರಗೆ ದನಿ ಕೇಳಬಾರದು, ಅಷ್ಟೇ”.

ವಿಕೇಂದ್ರೀಕರಣ ಇಲ್ಲದ ಜನಸತ್ತೆ ಜನಪರ ಜನತಂತ್ರವಲ್ಲ. ಅದರಲ್ಲಿನ ಜನ ಸತ್ತಂತೆಯೇ. ಇದು ಆಳುವವರು ಹಾಗೂ ಆಳಿಸಿಕೊಳ್ಳುವವರು ಇಬ್ಬರಿಗೂ ಅರ್ಥ ಆಗಬೇಕು.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...