Homeಕರ್ನಾಟಕಚುನಾವಣಾ ಮುನ್ನ ಮೂರ್ತಿ ಅನಾವರಣ - ಬಡವರ ಬವಣೆ ಮುಚ್ಚುವ ಅಮೂರ್ತ ರಾಜಕಾರಣ

ಚುನಾವಣಾ ಮುನ್ನ ಮೂರ್ತಿ ಅನಾವರಣ – ಬಡವರ ಬವಣೆ ಮುಚ್ಚುವ ಅಮೂರ್ತ ರಾಜಕಾರಣ

- Advertisement -
- Advertisement -

ಬೆಳಗಾವಿಯಿಂದ ಸ್ವಲ್ಪ ದೂರ ಇರುವ ಯಳ್ಳೂರು ಈಗ ಸುದ್ದಿಯಲ್ಲಿ ಇದೆ. ಅಲ್ಲಿನ ರಾಜ ಹಂಸಗಡ್ ಕೋಟೆಯ ಮೇಲೆ ಇರುವ ಛತ್ರಪತಿ ಶಿವಾಜಿ ಮಹಾರಾಜ ಅವರ ಮೂರ್ತಿ ಒಂದೇ ವಾರದಲ್ಲಿ ಎರಡು ಬಾರಿ ಅನಾವರಣ ಗೊಂಡಿದೆ.

ಒಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರ್ತಿ ಅನಾವರಣ ಮಾಡಿದರು. ಆಗ ಭಾಜಪ ಶಾಸಕ ಹಾಗೂ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರು ಹಾಜರು ಇದ್ದರು. ಇನ್ನೊಮ್ಮೆ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಶಿವಾಜಿ ವಂಶಸ್ಥರಾದ ಸಂಭಾಜಿ ರಾಜೆ ಛತ್ರಪತಿ ಅವರು ಅನಾವರಣ ಮಾಡಿದರು. ಆ ಹೊತ್ತಿನಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಆವೇಶಭರಿತ ಭಾಷಣ ಮಾಡಿದರು. ‘ತಮ್ಮ ರಾಜಕೀಯ ವಿರೋಧಿಗಳ ಕುತಂತ್ರಕ್ಕೆ ತಾವು ಬಗ್ಗುವುದಿಲ್ಲ’ ಎನ್ನುವ ಅವರ ಮಾತು ಅಬ್ಬರದ ಚಪ್ಪಾಳೆಗಳಲ್ಲಿ ಮುಳುಗಿಹೋಯಿತು.

ಕೆಲ ವರ್ಷಗಳ ಹಿಂದೆಯೂ ಯಳ್ಳೂರು ಸುದ್ದಿಯಲ್ಲಿ ಇತ್ತು. ಅಲ್ಲಿನ ಕೆಲವು ಮರಾಠಿ ಸಂಘಟನೆಗಳ ಸದಸ್ಯರು ಊರ ಹೊರಗೆ ಒಂದು ಫಲಕ ನೆಟ್ಟು ಅದರ ಮೇಲೆ ಯಳ್ಳೂರು, ಮಹಾರಾಷ್ಟ್ರ ರಾಜ್ಯ ಎಂದು ಬರೆದಿದ್ದರು. ಅದನ್ನು ಕನ್ನಡ ಸಂಘಟನೆಗಳು ಕಿತ್ತುಹಾಕಲು ಹೋಗಿ ಗದ್ದಲ ಆಗಿತ್ತು. ಕೊನೆಗೆ ಸರ್ಕಾರಿ ಅಧಿಕಾರಿಗಳು ಅದನ್ನು ತೆಗೆದುಹಾಕಿದರು.

ಈ ಎರಡೂ ಸುದ್ದಿಗಳನ್ನು ಜೊತೆಯಲ್ಲಿ ಓದಿದಾಗ ಇವು ಎರಡಕ್ಕೂ ಸಂಬಂಧ ಇದೆ ಎನ್ನುವುದು ಸುಲಭವಾಗಿ ಗೊತ್ತಾಗುತ್ತದೆ.

ಬಸವರಾಜ್ ಬೊಮ್ಮಾಯಿ

ಕರ್ನಾಟಕದ ಹೊಸ ಮುಖ್ಯಮಂತ್ರಿಯನ್ನು ಮೇ 25ರೊಳಗೆ ಆಯ್ಕೆ ಮಾಡುವ ಜವಾಬುದಾರಿ ರಾಜ್ಯದ ಮತದಾರರಿಗೆ ಇದೆ. ಅದನ್ನು ಅನುವು ಮಾಡಿಕೊಡಲು ಕೇಂದ್ರ ಚುನಾವಣಾ ಆಯೋಗ ಮಾರ್ಚ್ ಕೊನೆಗೆ ಚುನಾವಣೆಯನ್ನು ಘೋಷಣೆ ಮಾಡುವ ತಯಾರಿಯಲ್ಲಿದೆ. ಎಲ್ಲರಿಗೂ ಗೊತ್ತಿರುವ ಈ ಸುದ್ದಿಯನ್ನು ಇನ್ನೊಮ್ಮೆ ಓದಿದಾಗ ಮೇಲಿನ ಎರಡು ಸುದ್ದಿಗಳ ಹಿನ್ನೆಲೆ ಇನ್ನೂ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಚುನಾವಣೆಗೂ ಮುನ್ನ ಮರಾಠಾ ಮತದಾರರ ಬೆಂಬಲ ಗಳಿಸಿಕೊಳ್ಳಲು ಆ ಕ್ಷೇತ್ರದ ಆಮದಾರ್ (ಮರಾಠಿಯಲ್ಲಿ ಶಾಸಕಿ) ಲಕ್ಷ್ಮಿ ಹೆಬ್ಬಾಳಕರ ಅವರು ಪ್ರಯತ್ನ ಮಾಡುತ್ತಿದ್ದಾರೆ. ತಾನು ಆರಿಸಿ ಬರುವುದಕ್ಕೂ ಮೊದಲು ಈ ಕೋಟೆ ಪಾಳು ಬಿದ್ದುಹೋಗಿತ್ತು, ತಾನು ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರಗಳಲ್ಲಿ ಮಂತ್ರಿಗಳ ದುಂಬಾಲುಬಿದ್ದು ಇಲ್ಲಿಗೆ ಸುಮಾರು 3.5 ಕೋಟಿ ರೂಪಾಯಿ ಮಂಜೂರು ಮಾಡಿಸಿ ಇದನ್ನು ಅಭಿವೃದ್ಧಿ ಮಾಡಿಸಿರುವುದಾಗಿಯೂ, ಹಣ ಕಮ್ಮಿಬಿದ್ದಾಗ ತನ್ನ ಕೈಯ್ಯಿಂದ ಹಣ ಹಾಕಿ ಈ ಯೋಜನೆ ಪೂರ್ಣಮಾಡಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಾರೆ.

“ಲಕ್ಷ್ಮಿ ಹೆಬ್ಬಾಳಕರ ಅವರ ಪ್ರತಿ ಮಾತಿನಂತೆ ಇದು ಕೂಡ ಶುದ್ಧ ಸುಳ್ಳು. ಈ ಪ್ರತಿಮೆಗೆ ಹಣ ಕೊಟ್ಟಿದ್ದು ಭಾಜಪ ಸರಕಾರ. ಇದರ ಉದ್ಘಾಟನೆ ಆಗಬೇಕಾದ್ದು ಸರ್ಕಾರಿ ಶಿಷ್ಟಾಚಾರದ ಪ್ರಕಾರ. ಕಾಂಗ್ರೆಸ್ ಶಾಸಕಿ ಈ ಕಾರ್ಯಕ್ರಮವನ್ನು ತಮ್ಮ ಪಕ್ಷದ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ” ಎಂದು ರಮೇಶ್ ಜಾರಕಿಹೊಳಿ ಆರೋಪಿಸುತ್ತಾರೆ.

ಇಬ್ಬರೂ ನಾಯಕರೂ ತಮ್ಮ ಮಾತುಗಳನ್ನು ಪುಷ್ಠೀಕರಿಸಲು ಕಾಗದ-ಪತ್ರ ದಾಖಲಾತಿ ತೋರಿಸುತ್ತಾರೆ. ಇಲ್ಲಿನ ಜನ ಮಾತ್ರ ಈ ಇಬ್ಬರು ನಾಯಕರು ಆಯೋಜಿಸಿದ ಎರಡೂ ಅನಾವರಣ ಕಾರ್ಯಕ್ರಮಗಳಿಗೆ ಹಾಜರಾಗಿ ಸಂಭ್ರಮಿಸುತ್ತಾರೆ.

ಈ ಗಡಿ ಜಿಲ್ಲೆಯಲ್ಲಿ ಕನ್ನಡ-ಮರಾಠಿ ಗದ್ದಲ ದಶಕಗಳಿಂದ ಇದೆ. ಬೆಳಗಾವಿ ಸೇರಿದಂತೆ 865 ಹಳ್ಳಿ-ಪಟ್ಟಣಗಳು ಮರಾಠಿ ಭಾಷಿಕ ಪ್ರದೇಶಗಳು. ಇವು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಒತ್ತಾಯ ಮಾಡುತ್ತಾ ಇರುತ್ತದೆ. ಒಂದು ಕಾಲಕ್ಕೆ ಐದು ಶಾಸಕರನ್ನು ಹೊಂದಿದ್ದ ಪಕ್ಷ ಈಗ ಬಲ ಕಳೆದುಕೊಂಡಿದೆ. ಇದರ ಬೆಂಬಲಿಗರಾಗಿದ್ದ ಮರಾಠಾ ಯುವ ಜನಾಂಗ ಭಾಜಪದ ಹಿಂದೆ ಬಿದ್ದಿದ್ದರಿಂದ ಈ ಬದಲಾವಣೆ ಆಗಿದೆ ಎಂದು ಕೆಲ ರಾಜಕೀಯ ನಿಗರಾಣಿಕಾರರು ಹೇಳುತ್ತಾರೆ.

ಇದನ್ನೂ ಓದಿ: ಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿರುವ ಈ ಮರಾಠಾ ಸಮುದಾಯದ ಒಲವು ಗಳಿಸಲು ಬೆಳಗಾವಿಯ ಎಲ್ಲಾ ರಾಜಕೀಯ ನಾಯಕರು ಆಸೆ ಪಡುತ್ತಾರೆ. ಅದಕ್ಕೇ ಎಂಇಎಸ್ ವಿಷಯ ಬಂದಾಗ ಅನೇಕರು ಮೌನವಹಿಸುತ್ತಾರೆ. ಈ ರಾಜಕೀಯ ಹಿತಾಸಕ್ತಿಯೇ ಈ ಪ್ರತಿಮಾ ರಾಜಕಾರಣಕ್ಕೆ ಕಾರಣ ಎಂದು ಕೆಲವರು ಛೇಡಿಸುತ್ತಾರೆ.

“ಎಂಇಎಸ್‌ನ ಹೋರಾಟ ಹಾಗೂ ನಮ್ಮ ಚಳವಳಿಗಳಲ್ಲಿ ವ್ಯತ್ಯಾಸ ಇದೆ. ಅದು ಮರಾಠಿ ಹೋರಾಟ, ನಮ್ಮದು ಮರಾಠಾ ಹೋರಾಟ. ಅದು ರಾಜಕೀಯ ಪ್ರೇರಿತವಾದದ್ದು. ಅದೇ ಬೇರೆ, ಅಭಿವೃದ್ಧಿ, ರಾಜಕೀಯ ಪ್ರಾತಿನಿಧ್ಯ ಹಾಗೂ ಕಲ್ಯಾಣಕ್ಕಾಗಿ ನಾವು ನಡೆಸುತ್ತಿರುವ ಚಳವಳಿಯೇ ಬೇರೆ. ಅಷ್ಟಾಗಿಯೂ ‘ಠಾ’ ಹಾಗೂ ‘ಠೀ’ ಯಲ್ಲಿ ವ್ಯತ್ಯಾಸ ಇಲ್ಲವೇ?” ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಾರುತಿ ರಾವ್ ಮುಳೆ ಕೇಳುತ್ತಾರೆ.

ಎಂಇಎಸ್‌ನಂತಹ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಜೋರಾಗಿ ಘೋಷಣೆ ಕೂಗುವ ಜನಾಂಗಗಳ ಯುವಕರಿಗೆ ತಮ್ಮ ಸಮಾಜ ಸಮಾನ ಶಿಕ್ಷಣ ಹಾಗೂ ಉದ್ಯೋಗಗಳ ಅವಕಾಶಗಳಿಂದ ವಂಚಿತರಾಗಿರುವ ಬಗ್ಗೆ ಗಮನ ಇದ್ದಂತಿಲ್ಲ. ಮೂರ್ತಿ ಕೂಡಿಸಿ ಪೂಜೆ ಮಾಡುವ ರಾಜಕಾರಣಿಗಳು ನಮ್ಮ ಸಮಾಜದ ನಿಜವಾದ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆಯನ್ನು ಅವರು ಕೇಳಿಕೊಳ್ಳುವುದಿಲ್ಲ. ಅದರ ಬಗ್ಗೆ ಸಾರ್ವಜನಿಕ ಚರ್ಚೆ ಆಗುವುದೂ ಕಮ್ಮಿ. ಇದೇ ಸ್ಥಿತಿ ಇತರ ಜಾತಿಯ, ಭಾಷಾ ಸಮೂಹದ ಯುವಜನರ ಬಗ್ಗೆ ಇದ್ದಂತೆ ಕಾಣುತ್ತದೆ.

ರಮೇಶ್ ಜಾರಕಿಹೊಳಿ

ಇನ್ನು ಶಿವಾಜಿ ಕನ್ನಡ ವಿರೋಧಿಯಾಗಿದ್ದ, ಅವನನ್ನು ಯಾಕೆ ನಾವು ಪೂಜೆ ಮಾಡಬೇಕು? ಎಂದು ಕೆಲ ಹೋರಾಟಗಾರರು ಕೇಳುತ್ತಾರೆ. ಅದಕ್ಕೆ ಅವರು ಕೊಡುವ ಕಾರಣಗಳು ಎರಡು. ಶಿವಾಜಿಯ ಸೈನ್ಯ ಬೆಳವಡಿ ಮಲ್ಲಮ್ಮನ ರಾಜ್ಯದ ಮೇಲೆ ದಾಳಿ ಮಾಡಿ, ಸೋಲಿಸಿ ಅವಳನ್ನು ಸೆರೆಹಿಡಿಯಿತು. ಇದು ಮರಾಠಿ ರಾಜನೊಬ್ಬನಿಂದ ಕನ್ನಡ ರಾಜ್ಯದ ಸೋಲು ಎಂದು ಅವರು ವಾದಿಸುತ್ತಾರೆ. ಇನ್ನೊಂದು ಶೃಂಗೇರಿ ಮಠದ ಕಾಷ್ಟ ಮಂಟಪಕ್ಕೆ ಬೆಂಕಿ ಹಾಕಿದ್ದು ಮರಾಠಾ ಸೈನಿಕರು. ಇದು ಅವಮಾನಕರ. ಅದನ್ನು ಮತ್ತೆ ಮರು ನಿರ್ಮಾಣ ಮಾಡಲು ಧನ ಸಹಾಯ, ಜಮೀನು ದತ್ತಿ ನೀಡಿದವನು ಟಿಪ್ಪು ಸುಲ್ತಾನ್. ಹೀಗಾಗಿ ಮರಾಠಾ ದೊರೆಯಾದ ಶಿವಾಜಿ ಕನ್ನಡಿಗರ ಗೌರವಕ್ಕೆ ಅರ್ಹನಲ್ಲ ಎಂದು ಅವರ ಅಂಬೋಣ.

ಈ ಮೇಲಿನ ಬೀಸು ಹೇಳಿಕೆಗಳಲ್ಲಿ ಕೆಲವು ಸುಳ್ಳುಗಳು ಹಾಗೂ ಕೆಲ ತಪ್ಪು ಗ್ರಹಿಕೆಗಳೂ ಇವೆ. ಮೊದಲನೆಯದಾಗಿ ಶಿವಾಜಿ ಹಾಗೂ ಬೆಳವಡಿ ಮಲ್ಲಮ್ಮನ ಸೈನಿಕರ ನಡುವೆ ಎಷ್ಟು ಬಾರಿ ಯುದ್ಧಗಳು ನಡೆದವು ಹಾಗೂ ಅವುಗಳಲ್ಲಿ ಯಾರು ಯಾರನ್ನು ಸೋಲಿಸಿದರು ಎನ್ನುವುದು ಅಸ್ಪಷ್ಟ. ಕೆಲವು ಮರಾಠಿ ಲೇಖಕರು ಶಿವಾಜಿಯ ಸೈನ್ಯ ಗೆದ್ದಿತು ಎಂದರೆ, ಕೆಲ ಕನ್ನಡ ಲೇಖಕರು ಮಲ್ಲಮ್ಮ ಗೆದ್ದಳು ಎನ್ನುತ್ತಾರೆ. ಕೆಲವರು ಮಲ್ಲಮ್ಮ ಶಿವಾಜಿಯನ್ನು ಸೆರೆಹಿಡಿದು ಆಮೇಲೆ ಬಿಟ್ಟುಕೊಟ್ಟಳು ಎಂದರೆ ಇನ್ನೂ ಕೆಲವರು ಶಿವಾಜಿ ಮಲ್ಲಮ್ಮಳನ್ನು ಸೆರೆಹಿಡಿದ ನಂತರ ನೀನು ನನ್ನ ಸಹೋದರಿಯಂತೆ ಎಂದು ಹೇಳಿ ಗೌರವದಿಂದ ಕಳಿಸಿಕೊಟ್ಟ ಎನ್ನುತ್ತಾರೆ. ಇವು ಯಾವುದಕ್ಕೂ ನಿಖರ ಆಧಾರಗಳು ಇಲ್ಲ.

ಆದರೆ 1650ರ ಸುಮಾರಿಗೆ ನಡೆದಿರಬಹುದಾದ ಈ ಘಟನೆ ಬಗೆಗಿನ ಸಾಮಾನ್ಯ ಜ್ಞಾನ ನಮಗೆ ಒಂದು ಸರಳ ಒಳನೋಟವನ್ನು ನೀಡುತ್ತದೆ. ರಾಯಗಡದಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದ ಶಿವಾಜಿಯ ರಾಜ್ಯ ಈಗಿನ ದಕ್ಷಿಣ ಮಹಾರಾಷ್ಟ್ರದ ಗಡಿ ದಾಟಿತ್ತು. ಅದರ ಪಕ್ಕದ ರಾಜ್ಯವೇ ಬೆಳವಡಿ. ಅದನ್ನು ಜಯಿಸಿ ತನ್ನ ರಾಜ್ಯ ವಿಸ್ತಾರ ಮಾಡಬೇಕು ಎನ್ನುವುದು ಶಿವಾಜಿಗೋ ಅಥವಾ ಅವನ ಸೈನ್ಯದ ಅಧಿಕಾರಿಗಳಿಗೋ ಅನ್ನಿಸಿರಬೇಕು. ಅವರು ಯುದ್ಧ ಮಾಡಿರಬೇಕು. ಇದೇ ಮಾತು ಮಲ್ಲಮ್ಮನಿಗೂ ಅನ್ವಯವಾಗಬಹುದು. ಇದರಲ್ಲಿ “ನಾವು ಬೇರೆ ಭಾಷೆಯವರು, ಅವರು ಬೇರೆ ಭಾಷೆಯವರು, ನಡೆಯಿರಿ ಯುದ್ಧ ಮಾಡೋಣ” ಅಂತ ಇಬ್ಬರೂ ಅಂದುಕೊಂಡಿರಲಾರರು.

ಪ್ರಜಾತಂತ್ರಪೂರ್ವದ ಎಲ್ಲ ರಾಜರೂ, ಸುಲ್ತಾನರು, ಎಂಪರರ್‌ಗಳೂ ತಮ್ಮತಮ್ಮ ರಾಜ್ಯದ ಗಡಿಗಳನ್ನು ವಿಸ್ತರಿಸಬೇಕು ಎನ್ನುವ ಇರಾದೆ ಇದ್ದವರೇ. ಮಹಾಭಾರತದಲ್ಲಿ ಭೀಷ್ಮ ದುರ್ಯೋಧನನಿಗೆ, ’ದೇಶದ ಗಡಿ ತಾಯಿಯ ಸೀರೆಯ ಅಂಚು ಇದ್ದಂತೆ. ಅದನ್ನು ಬೆಳೆಸುತ್ತಲೇ ಹೋಗಬೇಕು’ ಎಂದು ಬುದ್ಧಿಮಾತು ಹೇಳುತ್ತಾನೆ. ಪೆಟ್ರೋಲ್ ಹಾಗೂ ಅಣುಶಕ್ತಿ ಗಣಿಗಳ ಆಸೆಗೆ ರಷಿಯಾದ ಚುನಾಯಿತ ಸರಕಾರ ತಮ್ಮ ನೆರೆಯ ದೇಶ ಯುಕ್ರೇನ್ ಮೇಲೆ ಯುದ್ಧ ಮಾಡುವುದನ್ನು ಗಮನಿಸಿದಾಗ ಭೀಷ್ಮನ ಮಾತು ಸರ್ವ ಕಾಲಕ್ಕೂ ಸಲ್ಲುವ ದುರಂತ ಎಂದು ಅನ್ನಿಸುವುದು ಸಹಜ.

ಇನ್ನು 1750ರಲ್ಲಿ ಹುಟ್ಟಿದ ಟಿಪ್ಪು ಸುಲ್ತಾನ್ ಹಾಗೂ 1680ರಲ್ಲಿ ಮರಣ ಹೊಂದಿದ ಶಿವಾಜಿ ಮುಖಾಮುಖಿ ಆಗಲು ಸಾಧ್ಯ ಇಲ್ಲ. ಶೃಂಗೇರಿಯ ಮಠದ ಮೇಲೆ ದಾಳಿ ನಡೆದದ್ದು 1770ರ ವೇಳೆಗೆ. ಆಗ ಮರಾಠಾ ರಾಜ್ಯ ಅಳುತ್ತಿದ್ದ ರಾಜ ಪೇಶ್ವೆ ಮಾಧವ ರಾವ್. ದಕ್ಷಿಣದ ರಾಜ್ಯಗಳ ಮೇಲೆ ದಾಳಿ ನಡೆಸಿ ವಾಪಸ್ ಬರುತ್ತಿದ್ದ ಮರಾಠಾ ಸೈನಿಕರು ಕಾಷ್ಟ ಮಂಟಪವನ್ನು ಸುಟ್ಟಿರಬಹುದಾದ ಸಂಗತಿಯ ಹಿಂದೆ ಶತ್ರು ರಾಜ್ಯದ ದ್ವೇಷ ಇರಬಹುದೇ ಹೊರತು ಭಾಷಾ ದುರಭಿಮಾನ ಕಾರಣವಾಗಿರಲು ಸಾಧ್ಯ ಇಲ್ಲ. ಅಂದಿನ ಶಕ್ತಿ ರಾಜಕಾರಣದ ಸಿಟ್ಟಿಗೆ ಇಂದಿನ ಎರಡು ಭಾಷಾ ಸಮುದಾಯಗಳು ಬಲಿಯಾಗುವುದನ್ನು ಸ್ವತಃ ಶಿವಾಜಿ-ಮಲ್ಲಮ್ಮರೇ ಒಪ್ಪಲಿಕ್ಕಿಲ್ಲ.

ಲಕ್ಷ್ಮಿ ಹೆಬ್ಬಾಳ್ಕರ್

ಇನ್ನು ಪ್ರತಿಮಾ ರಾಜಕಾರಣ ಕೇವಲ ಶಿವಾಜಿಯನ್ನು ಸುತ್ತಿಕೊಂಡಿಲ್ಲ. ಎರಡು ವರ್ಷಗಳ ಹಿಂದೆ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಸಂಬಂಧ ಪಟ್ಟಂತೆ ಬೆಳಗಾವಿಯಲ್ಲಿ ಎರಡು ಸಣ್ಣ ಪ್ರಮಾಣದ ಗಲಾಟೆಗಳು ನಡೆದವು. ಕಲಬುರ್ಗಿಯ ಮುಖ್ಯ ವೃತ್ತವೊಂದರಲ್ಲಿ ರಜಾಕಾರ ವಿರುದ್ಧ ಹೋರಾಟ ನಡೆಸಿದ ಇಬ್ಬರು ಸ್ಥಳೀಯ ನಾಯಕರ ಮೂರ್ತಿ ಕೂಡಿಸುವ ವಿವಾದ ಎದ್ದಾಗ ಅದರಲ್ಲಿ ಜಾತಿ ರಾಜಕಾರಣ ನುಸುಳಿತು. ಕೊನೆಗೆ ಇಬ್ಬರೂ ಬೇಡ ಅಂತ ಸರದಾರ ವಲ್ಲಭ ಭಾಯಿ ಪಟೇಲ್ ಮೂರ್ತಿ ಅನಾವರಣಗೊಂಡಿತು.

ಶಾಂತಿಯ ಸಂದೇಶ ಬೀರಿದ ತಿರುವಳ್ಳುವರ್ ಹಾಗೂ ‘ಎಲ್ಲರೊಳು ಒಂದೊಂದು ನುಡಿ ಕಲಿತ’ ಸರ್ವಜ್ಞನ ಮೂರ್ತಿಗಳ ಟಕ್ಕರ್ ಅನೇಕ ದಶಕಗಳ ಕಾಲ ನಡೆಯಿತು. ’ಎನ್ನ ಕಾಲೇ ಕಂಬ, ದೇಹವೇ ದೇಗುಲ’ ಎಂದು ಸಾರಿದ ಬಸವಣ್ಣನ ಮೂರ್ತಿಗಳು ರಾಜ್ಯದ ಪ್ರತಿ ಹಳ್ಳಿ-ಪಟ್ಟಣಗಳಲ್ಲಿ ಇವೆ. ಬಡತನ-ಅನಕ್ಷರತೆ ಇತ್ಯಾದಿಗಳಿಂದ ಹಿಂದೆ ಉಳಿದಿರುವ ಬಸವ ಕಲ್ಯಾಣದಲ್ಲಿ ಘನ ಸರಕಾರ 600 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪದ ಪ್ರತಿಕೃತಿ ಕಟ್ಟಡ ಕಟ್ಟುತ್ತಿದೆ.

ಮೂರ್ತಿ ಪೂಜೆ ಮಾಡಬೇಡಿ ಎಂದು ತಿಳಿಹೇಳಿ ಮಾನವ ಜನಾಂಗದ ಕಣ್ಣು ತೆರೆಸಿದ ಭಗವಾನ್ ಬುದ್ಧನ ಮೂರ್ತಿಗಳು ಜಗತ್ತಿನಾದ್ಯಂತ ಇವೆ.

ಕೆಲ ತಿಳಿಗೇಡಿ ತಾಲೀಬಾನಿಗಳು ಬಾಮಿಯಾನನ ಬುದ್ಧನ ಮೂರ್ತಿಗಳನ್ನು ಸ್ಫೋಟಿಸಿದಾಗ ಬಿಕ್ಷು ತಿಚ್ ನಾಥ ಹಾನ್‌ರವರು ಅದನ್ನು ‘ಅದೊಂದು ಸಣ್ಣ ವಿಷಯ’ ಎಂದು ತಳ್ಳಿಹಾಕಿದರು. ‘ಬುದ್ಧ ಇರುವುದು ನಮ್ಮ ಹೃದಯದಲ್ಲಿ. ಅಲ್ಲಿ ಇದ್ದದ್ದು ಬುದ್ಧನ ಕಾಲ್ಪನಿಕ ಚಿತ್ರ ಮಾತ್ರ. ಅದಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ’ ಎಂದರು.

ಈ ಮಟ್ಟದ ಪ್ರಬುದ್ಧತೆ ಎಲ್ಲರಲ್ಲಿಯೂ ಬಂದಾಗ ನಮ್ಮ ಪ್ರಜಾಸತ್ತೆಯ ಮುಂದಿನ ದಾರಿ ಸುಸೂತ್ರವಾದೀತು. ತಮ್ಮ ಜೀವಮಾನದಲ್ಲಿ ಒಂದು ಬಾರಿ ದೊಡ್ಡ ಜಾತ್ರೆ ಮಾಡಿ ಸಲೀಸಾಗಿ ಚುನಾವಣೆ ಗೆಲ್ಲುವ ಪುಢಾರಿಗಳು ಬಡವರ-ದಮನಿತರ ಬವಣೆ ನೀಗಿಸುವ ನಿಟ್ಟಿನಲ್ಲಿ ಗಟ್ಟಿಯಾದ ಕ್ರಮಗಳನ್ನು ಕೈಗೊಂಡು ನಾಲ್ಕು ಜನಕ್ಕೆ ಅನುಕೂಲವಾಗುವ ಅಭಿವೃದ್ಧಿ ಯೋಜನೆ, ಕಲ್ಯಾಣ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಬೇಕಾದೀತು.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...