Homeಕರ್ನಾಟಕಅಜಾತಶತ್ರು ಆರ್‌.ಧ್ರುವನಾರಾಯಣ; ಸಜ್ಜನ ರಾಜಕಾರಣದ ಧ್ರುವತಾರೆ

ಅಜಾತಶತ್ರು ಆರ್‌.ಧ್ರುವನಾರಾಯಣ; ಸಜ್ಜನ ರಾಜಕಾರಣದ ಧ್ರುವತಾರೆ

- Advertisement -
- Advertisement -

“ಪಕ್ಷದೊಳಗೆ ಅಸಮಾಧಾನಗಳು ಉಂಟಾದಾಗ ಒಬ್ಬರನ್ನೊಬ್ಬರು ಎತ್ತಿಕಟ್ಟುವ ಕೆಲಸವನ್ನು ಅವರೆಂದೂ ಮಾಡಲಿಲ್ಲ. ಎಲ್ಲರನ್ನೂ ಸಮಾಧಾನ ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದರು. ಜನಸಾಮಾನ್ಯರು ಯಾರೇ ಭೇಟಿ ಮಾಡಲು ಬಂದರೂ ಅವರೊಂದಿಗೆ ಕುಳಿತು ಮಾತನಾಡುತ್ತಿದ್ದರು. ಜನರ ಒಡನಾಟದ ವಿಚಾರದಲ್ಲಿ ಅವರು ಎಂದಿಗೂ ಆಯಾಸಗೊಂಡವರಲ್ಲ, ಕಿರಿಕಿರಿಯಾದವರಲ್ಲ. ನಿಜಕ್ಕೂ ಅವರ ಸಾವು ಜನಕ್ಕೂ ಕಾಂಗ್ರೆಸ್ ಪಕ್ಷಕ್ಕೂ ತುಂಬಲಾಗದ ನಷ್ಟ” ಎನ್ನುತ್ತಾರೆ ಮೈಸೂರಿನ ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ್‌.

ಅತ್ಯುತ್ತಮ ಸಂಸದೀಯಪಟು ಎಂಬ ಪ್ರಶಂಸೆಗೂ ಪಾತ್ರರಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಆರ್‌.ಧ್ರುವನಾರಾಯಣ ಅವರ ಹಠಾತ್‌ ನಿರ್ಗಮನದಿಂದಾಗಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಿರ್ವಾತ ಸೃಷ್ಟಿಯಾಗಿದೆ ಎನ್ನುತ್ತಾರೆ ಅವರು.

ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯಲ್ಲಿ 1961ರ ಆಗಸ್ಟ್‌ 31ರಂದು ಜನಿಸಿದ ಧ್ರುವನಾರಾಯಣ ಅವರು ಕೃಷಿ ಸ್ನಾತಕೋತ್ತರ ಪದವೀಧರರು. ಬೆಂಗಳೂರಿನಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ ಅವರು, ಬಳಿಕ ರಾಜ್ಯ ಕಾರ್ಯದರ್ಶಿಯೂ ಆದರು. ಬೆಂಗಳೂರು ಕೃಷಿ ವಿವಿ ಸಿಂಡಿಕೇಟ್ ಸದಸ್ಯರಾಗಿ, ಕಾವೇರಿ ಗ್ರಾಮೀಣ ಬ್ಯಾಂಕ್ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ತಮ್ಮ ಗುರು ಎಂ.ರಾಜಶೇಖರಮೂರ್ತಿಯವರು ಬಿಜೆಪಿಗೆ ಹೋದ ಬಳಿಕ ಧ್ರುವ ಅವರೂ ಬಿಜೆಪಿಗೆ ಸೇರಿದರು. 1999ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಂತೇಮಾರಳ್ಳಿ ವಿಧಾನಸಭಾ ಕ್ಷೇತ್ರದಿಂದ ಧ್ರುವ ಸ್ಪರ್ಧಿಸಿದ್ದರು. ಆದರೆ ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಸೋಲುಕಂಡರು. ಮತ್ತೆ ತವರು ಪಕ್ಷಕ್ಕೆ ಮರಳಿದ ಧ್ರುವ ಅವರು 2004ರ ಚುನಾವಣೆಯಲ್ಲಿ ಗೆದ್ದ ರೀತಿ ಇಡೀ ದೇಶದಲ್ಲಿ ಗಮನ ಸೆಳೆಯಿತು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ ಕೇವಲ ಒಂದು ಮತದಂತರದಿಂದ ಧ್ರುವ ಗೆದ್ದದ್ದು ಇತಿಹಾಸ. ಭಾರತದ ಚುನಾವಣಾ ರಾಜಕಾರಣದಲ್ಲಿ ಈ ಫಲಿತಾಂಶ ಮಹತ್ವದ್ದಾಗಿ ಉಳಿದಿದ್ದು, ಪ್ರತಿ ಮತದ ಮೌಲ್ಯವನ್ನು ಸಾರಿತು.

2008ರ ಕ್ಷೇತ್ರ ಪುನರ್‌ ವಿಂಗಡೆಯಾದಾಗ ಸಂತೇಮರಳ್ಳಿ ಕ್ಷೇತ್ರವು ಕೊಳ್ಳೇಗಾಲದೊಂದಿಗೆ ವಿಲೀನವಾಯಿತು. ಈ ವರ್ಷದ ಚುನಾವಣೆಯಲ್ಲಿಯೂ ಧ್ರುವ ಅವರು ಆಯ್ಕೆಯಾದರು. 2009ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಧ್ರುವ ಅವರು ಹುರಿಯಾಳಾಗಿದ್ದರು. 4001 ಮತಗಳಿಂದ ಗೆದ್ದು ಸಂಸದರಾದರು. 2014ರಲ್ಲೂ ಸಂಸದರಾಗಿ ಪುನರಾಯ್ಕೆಯಾದರು.

ದಲಿತ ನಾಯಕರಾದ ವಿ.ಶ್ರೀನಿವಾಸ ಪ್ರಸಾದ್‌ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿಕೊಂಡು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಚುನಾವಣೆಯಲ್ಲಿ ಕತ್ತುಕತ್ತಿನ ಕಾಳಗವೇ ನಡೆಯಿತು. ಇಡೀ ದೇಶದಲ್ಲಿ ಬಿಜೆಪಿ ಸುಲಭವಾಗಿ ಗೆಲುತ್ತಿರುವಾಗ ಚಾಮರಾಜನಗರ ಕ್ಷೇತ್ರದ ಫಲಿತಾಂಶ ಕೊನೆಯ ಗಳಿಗೆಯವರೆಗೂ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ 1,817 ಮತಗಳ ಅಂತರದಲ್ಲಿ ಧ್ರುವ ಸೋತರು. ಆದರೆ ಚುನಾವಣೆ ಸೋತನೆಂದು ಮನೆಯಲ್ಲಿ ಕೂರದೆ ಅಂದೇ ಕ್ರಿಯಾಶೀಲರಾದರು. ಜನರೊಂದಿಗೆ ನಿರಂತರ ಒಡನಾಟ ನಡೆಸಿದರು. 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಧ್ರುವ ಸ್ಪರ್ಧಿಸುತ್ತಾರೆಂಬ ಸಂಗತಿ ನಿಚ್ಚಳವಾಗಿತ್ತು. ಇದರ ನಡುವೆ ಕಾಂಗ್ರೆಸ್‌ ಪಕ್ಷದ ಇವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು. ಒಂಬತ್ತು ಜಿಲ್ಲೆಗಳ ಚುನಾವಣಾ ಉಸ್ತುವಾರಿಯನ್ನೂ ಇವರಿಗೆ ವಹಿಸಲಾಗಿತ್ತು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಎಂ.ಲಕ್ಷ್ಮಣ್ ಅವರು, “ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಅವರಿಗೆ ಒಂಬತ್ತು ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿತ್ತು. ಈ ಜಿಲ್ಲೆಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು. ಮತದಾರರು ಮತ್ತು ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುತ್ತಿದ್ದರು. ಹಳೆ ಮೈಸೂರು ಭಾಗದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರ ಪ್ರಾಬಲ್ಯವಿದೆ. ನೂರೆಂಟು ಗುಂಪುಗಳಿವೆ. ದಲಿತ ಸಮುದಾಯಕ್ಕೆ ಸೇರಿದ್ದ ಧ್ರುವನಾರಾಯಣ ಅವರು ಎಲ್ಲರನ್ನೂ ಮನವೊಲಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಮಂಡ್ಯದಂತಹ ಜಿಲ್ಲೆಯಲ್ಲಿಯೇ ಧ್ರುವ ಅವರ ಮಾತನ್ನು ಉಲ್ಲಂಘಿಸಿದ ಮುಖಂಡರಾಗಲೀ, ಕಾರ್ಯಕರ್ತರಾಗಲೀ ಇಲ್ಲ. ಪ್ರತಿಯೊಬ್ಬರ ಹೆಸರು ನೆನಪಿಟ್ಟುಕೊಂಡು ಮಾತನಾಡಿಸುತ್ತಿದ್ದರು. ಪಕ್ಷಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿದ್ದರು” ಎಂದರು.

“ಅತಿ ಹಿಂದುಳಿದ ಜಿಲ್ಲೆ ಚಾಮರಾಜನಗರ, ಅಲ್ಲಿಗೆ ಸಿಎಂ ಕಾಲಿಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಢ್ಯ ರಾರಾಜಿಸುತ್ತಿದ್ದ ಕಾಲದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ ಕರೆದುಕೊಂಡು ಹೋದವರು ಧ್ರುವ ನಾರಾಯಣ. ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿದರು. ಈ ರೀತಿಯ ಪಕ್ಷ ಕಟ್ಟಾಳು ಸಿಗಲಾರರು. ಅವರ ಹಠಾತ್ ನಿರ್ಗಮನದಿಂದ ಚಾಮರಾಜನಗರ ಜಿಲ್ಲೆಯಲ್ಲಿ ನಿರ್ವಾತ ಸೃಷ್ಟಿಯಾಗಿದೆ. ಅದನ್ನು ಯಾರು ತುಂಬುತ್ತಾರೋ ಆ ದೇವರ ಬಲ್ಲ” ಎಂದು ವಿಷಾದಿಸಿದರು.

“ಪಕ್ಷದೊಳಗೆ ಅಸಮಾಧಾನವಿದ್ದರೂ ಒಬ್ಬರಿಗೊಬ್ಬರನ್ನು ಎತ್ತಿಕಟ್ಟುವ ಕೆಲಸವನ್ನು ಅವರು ಯಾವತ್ತೂ ಮಾಡಿದವರಲ್ಲ. ಎಲ್ಲರನ್ನೂ ಸಮಾಧಾನ ಮಾಡಿ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಅವರು ಮಾಡುತ್ತಿದ್ದರು. 535 ಸಂಸದರ ಪೈಕಿ ಎಲ್ಲ ವಿಧದ ಅನುದಾನವನ್ನು ಕ್ಷೇತ್ರಕ್ಕೆ ತಂದ ಎರಡನೇ ಅತ್ಯುತ್ತಮ ಸಂಸದೀಯ ಪಟು ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದರು. ಈ ರೀತಿಯ ರಾಜಕಾರಣಿಯನ್ನು ನನ್ನ ಜೀವನದಲ್ಲೇ ನೋಡಿಲ್ಲ. ಯಾವುದೇ ಸಂದರ್ಭದಲ್ಲಿ ಹೋದರೂ ಜನರನ್ನು ಮಾತನಾಡಿಸುತ್ತಿದ್ದರು. ಯಾರನ್ನೂ ನೆಗಲೆಟ್‌ ಮಾಡುತ್ತಿರಲಿಲ್ಲ. ಎಲ್ಲರನ್ನೂ ನಗುಮುಖದಿಂದ ಸ್ವಾಗತಿಸುತ್ತಿದ್ದರು. ಸಾಮಾನ್ಯವಾಗಿ ರಾಜಕಾರಣದಲ್ಲಿ ನಿರಂತರವಾಗಿ ಜನರನ್ನು ಸಂಪರ್ಕ ಮಾಡುತ್ತಿದ್ದಾಗ ರಾಜಕಾರಣಿಗಳು ಕಿರಿಕಿರಿಯಾಗುವುದುಂಟು. ಜನರು ಕಿರಿಕಿರಿ ಎಂದು ಧ್ರುವ ಅವರು ಭಾವಿಸಿದ್ದನ್ನು ನೋಡಿಯೇ ಇಲ್ಲ. ಅದರ ನಡುವೆ ಫೋನ್‌ಗಳನ್ನು ಅಟೆಂಡ್ ಮಾಡುತ್ತಿದ್ದರು. ಅಟೆಂಡ್ ಮಾಡಲು ಸಾಧ್ಯವಾಗದಿದ್ದರೆ ಮತ್ತೆ ವಾಪಸ್ ಕರೆ ಮಾಡುತ್ತಿದ್ದರು” ಎಂದು ಧ್ರುವ ಅವರ ವ್ಯಕ್ತಿತ್ವವನ್ನು ಸ್ಮರಿಸಿದರು.

ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಒತ್ತು

ಸಂತೆಮರಹಳ್ಳಿ ಹಾಗೂ ಕೊಳ್ಳೇಗಾಲ ಶಾಸಕರಾಗಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಹೆಸರು ಗಳಿಸಿದರು. ಬಳಿಕ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳಿಂದ ಅವರು ಕ್ಷೇತ್ರದಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಹೆಸರಾದರು. ಕೇಂದ್ರ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ ರಾಜ್ಯದ ನಂ. 1 ಸಂಸದ ಎಂಬ ಹೆಗ್ಗಳಿಕೆ ಅವರದ್ದು.

ಅವರ ಅವಧಿಯಲ್ಲಿ ಜಿಲ್ಲೆಗೆ 212 ಹಾಗೂ 150 ರಾಷ್ಟ್ರೀಯ ಹೆದ್ದಾರಿಗಳಾದವು. 212 ರಾಷ್ಟ್ರೀಯ ಹೆದ್ದಾರಿಯಿಂದಾಗಿ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರಕ್ಕೆ ಉತ್ತಮ ಗುಣಮಟ್ಟದ ರಸ್ತೆಗಳಾದವು. ತಮ್ಮೆಲ್ಲಾ ಭಾಷಣಗಳಲ್ಲೂ ಎಲ್ಲ ಸಮುದಾಯದವರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡುತ್ತಿದ್ದ ಅವರು, ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ, ಹೋಬಳಿಗೊಂದು ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು, ಕೃಷಿ ವಿಜ್ಞಾನ ಕೇಂದ್ರ, ಕಾನೂನು ಕಾಲೇಜುಗಳನ್ನು ತರಲು ಶ್ರಮಿಸಿದರು. ಒಬ್ಬ ಸಂಸದರು ಇಷ್ಟೊಂದು ಕೆಲಸಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟರು.

ಅವರ ಕೆಲಸಗಳನ್ನು ಅವರ ಪಕ್ಷದವರಿರಲಿ, ವಿರೋಧ ಪಕ್ಷದವರೂ ಮೆಚ್ಚುತ್ತಿದ್ದರು. ಪಕ್ಷಭೇದವಿಲ್ಲದೆ, ಜನರು ಅವರ ಬಳಿ ಹೋದಾಗ ಸಾಧ್ಯವಾದಷ್ಟೂ ಅವರ ಕೆಲಸಗಳನ್ನು ಮಾಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು. ಮೃದು ಮಾತಿನ, ಸೌಮ್ಯಾ ಸ್ವಭಾವದ ಧ್ರುವ ನಾರಾಯಣ ಅವರು ಪಕ್ಷದೊಳಗಿನ ದೊಡ್ಡ ದೊಡ್ಡ ನಾಯಕರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು.

ಚಾಮರಾಜನಗರದಲ್ಲಿ ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡದ ಉದ್ಘಾಟನೆಗೆ ಬಂದಿದ್ದ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್‌ ಅವರು, “ಧ್ರುವನಾರಾಯಣ ಅವರು ನನ್ನ ಮೆಚ್ಚಿನ ಸಂಸದರಲ್ಲಿ ಒಬ್ಬರು” ಎಂದು ಶ್ಲಾಘಿಸಿದ್ದರು. ಪಕ್ಷತೀತವಾಗಿ ಅವರನ್ನು ಗೌರವಿಸುವ ದೊಡ್ಡ ಜನಸಮೂಹವೇ ಮೈಸೂರು- ಚಾಮರಾಜನಗರ ಭಾಗದಲ್ಲಿದ್ದಾರೆ. ಧ್ರುವ ನಾರಾಯಣ ಅವರನ್ನು ಅಜಾತಶತ್ರು ಎಂದರೆ ತಪ್ಪಾಗಲಾರದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...