Homeಮುಖಪುಟತ್ರಿಪುರದಲ್ಲಿ ಕಾಂಗ್ರೆಸ್, ಎಡಪಕ್ಷದ ನಾಯಕರ ಮೇಲೆ ದಾಳಿ; ಆರೋಪ

ತ್ರಿಪುರದಲ್ಲಿ ಕಾಂಗ್ರೆಸ್, ಎಡಪಕ್ಷದ ನಾಯಕರ ಮೇಲೆ ದಾಳಿ; ಆರೋಪ

- Advertisement -
- Advertisement -

ಚುನಾವಣೋತ್ತರ ಹಿಂಸಾಚಾರಗಳ ಕುರಿತು ತಿಳಿಯಲು ಹೋಗಿದ್ದ ಕಾಂಗ್ರೆಸ್ ಮತ್ತು ಎಡಪಕ್ಷದ ನಾಯಕರ ಮೇಲೆ ತ್ರಿಪುರಾದಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

“ಅಗರ್ತಲಾದಿಂದ 30 ಕಿಮೀ ದೂರದಲ್ಲಿರುವ ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ನೆಹಲ್‌ಚಂದ್ರನಗರದಲ್ಲಿ ದುಷ್ಕರ್ಮಿಗಳ ಗುಂಪಿನಿಂದ ದಾಳಿ ನಡೆದಿದೆ” ಎಂದು ಇಬ್ಬರು ಸಂಸದರು ಸೇರಿದಂತೆ ಎಡ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿದ್ದ ತಂಡ ಹೇಳಿದೆ.

ಕಾಂಗ್ರೆಸ್‌ ಮತ್ತು ಎಡಪಕ್ಷದ ನಾಯಕರ ಮೇಲೆ ಮೇಲೆ ದಾಳಿ ನಡೆಸಿದಾಗ ಕನಿಷ್ಠ ಮೂರು ಕಾರುಗಳನ್ನು ಹಾನಿಗೊಳಿಸಲಾಗಿದೆ. ಹಲ್ಲೆ ನಡೆಸಿದವರು ‘ಜೈ ಶ್ರೀ ರಾಮ್’ ಎಂದು ಕೂಗಿದರು ಎಂದು ಆರೋಪಿಸಲಾಗಿದೆ. ನಿಯೋಗದಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಜೊತೆಯಲ್ಲಿದ್ದ ಭದ್ರತಾ ಸಿಬ್ಬಂದಿಗಳೂ ಮಧ್ಯಪ್ರವೇಶಿಸಲಿಲ್ಲ ಎಂದು ಸಂಸದರೊಬ್ಬರು ಆರೋಪಿಸಿದ್ದಾರೆ. ಘಟನೆಯ ನಂತರ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಅವರು ಪ್ರತಿಕ್ರಿಯಿಸಿದ್ದು, “ಎರಡು ದಿನಗಳ ಪ್ರವಾಸ ಹಮ್ಮಿಕೊಳ್ಳಲಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ.

ಎಡ ಮತ್ತು ಕಾಂಗ್ರೆಸ್ ನಾಯಕರ ತಂಡವು ನೆಹಲ್‌ಚಂದ್ರನಗರಕ್ಕೆ ದಿಢೀರ್‌ ಭೇಟಿ ನೀಡಿತು ಎಂದು ಪೊಲೀಸರು ಹೇಳಿದ್ದಾರೆ. ಈ ಸಮಯದಲ್ಲಿ ಕೆಲವು ಘೋಷಣೆಗಳನ್ನು ಕೂಗಲಾಗಿದೆ.

ಸಹಾಯಕ ಪೊಲೀಸ್ ಮಹಾನಿರೀಕ್ಷಕ ಜ್ಯೋತಿಷ್ಮನ್ ದಾಸ್ ಚೌಧರಿ ಪ್ರತಿಕ್ರಿಯಿಸಿ,  “ತಂಡದ ಜೊತೆಗಿದ್ದ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಲಿಲ್ಲ ಎಂಬುದು ಸುಳ್ಳು” ಎಂದಿದ್ದಾರೆ.

“ಜೊತೆಗಿದ್ದ ಪೊಲೀಸ್ ಬೆಂಗಾವಲು ತಂಡವು ತ್ವರಿತವಾಗಿ ಸ್ಪಂದಿಸಿ ನಿಯೋಗವನ್ನು ರಕ್ಷಿಸಿತು. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಸ್ಥಳೀಯವಾಗಿ ಯಾವುದೇ ವ್ಯಕ್ತಿಗೆ ಗಾಯವಾಗಿಲ್ಲ ಎಂದು ವರದಿಯಾಗಿದೆ. 2-3 ವಾಹನಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಇತರ ದುಷ್ಕರ್ಮಿಗಳನ್ನು ಗುರುತಿಸಲು ಮತ್ತು ಬಂಧಿಸಲು ಕ್ರಮ ಜರುಗಿಸಲಾಗಿದೆ” ಎಂದು ಹೇಳಿದ್ದಾರೆ.

ಮಾರ್ಚ್ 2 ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದಾಗಿನಿಂದ ಸಂಭವಿಸಿದ ಹಿಂಸಾಚಾರದ ಪ್ರಮಾಣವನ್ನು ತಿಳಿಯಲು ರಾಜ್ಯಕ್ಕೆ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನ ಎಡರಂಗ ಮತ್ತು ಕಾಂಗ್ರೆಸ್ ಸಂಸದರ ತಂಡ ಆಗಮಿಸಿತ್ತು. ಸೆಪಹಿಜಾಲಾ, ಗೋಮತಿ, ಪಶ್ಚಿಮ ತ್ರಿಪುರಾ, ಖೋವೈ ಮತ್ತು ಧಲೈ ಜಿಲ್ಲೆಗಳ ವಿವಿಧ ಭಾಗಗಳಿಗೆ ಭೇಟಿ ನೀಡಲಾಗಿತ್ತು.

ಸಿಪಿಐಎಂ ರಾಜ್ಯಸಭಾ ಸಂಸದ ಎಲರಾಮ್ ಕರೀಂ ಮತ್ತು ಕಾಂಗ್ರೆಸ್ ಲೋಕಸಭಾ ಸಂಸದ ಅಬ್ದುಲ್ ಖಲೇಕ್ ಅವರಿದ ತಂಡವು ಸಿಪಹಿಜಾಲಾದ ಬಿಶಾಲ್ಗಢ ಮತ್ತು ಪಶ್ಚಿಮ ತ್ರಿಪುರದ ಕೆಲವು ಭಾಗಗಳಿಗೆ ಭೇಟಿ ನೀಡಿದ್ದರು.

ಕಾಂಗ್ರೆಸ್ ಲೋಕಸಭಾ ಸಂಸದರಾದ ರಂಜಿತಾ ರಂಜನ್, ಸಿಪಿಐ(ಎಂ) ರಾಜ್ಯಸಭಾ ಸಂಸದರಾದ ಎ ಎ ರಹೀಮ್ ಮತ್ತು ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರನ್ನೊಳಗೊಂಡ ಎರಡನೇ ತಂಡವು ಪಶ್ಚಿಮ ತ್ರಿಪುರಾದ ಕಲ್ಕಾಲಿಯಾ ಗ್ರಾಮಕ್ಕೆ ಭೇಟಿ ನೀಡಿತ್ತು.

ಸಿಪಿಐ(ಎಂ) ಲೋಕಸಭಾ ಸಂಸದ ಪಿ ಆರ್ ನಟರಾಜನ್ ಮತ್ತು ಬಿನೋಯ್ ಬಿಸ್ವಾಮ್ ಅವರ ಮೂರನೇ ತಂಡವು ಜಿಲ್ಲೆಯ ದುರ್ಗಬರಿ, ಉಷಾಬಜಾರ್, ಕಾಳಿಕಾಪುರ ಮತ್ತು ಇತರ ಕೆಲವು ಗ್ರಾಮಗಳ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿತು. ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮತ್ತು ವಿಧಾನಸಭೆಯ ಮಾಜಿ ಉಪ ಸ್ಪೀಕರ್ ಪಬಿತ್ರಾ ಕರ್ ಇದ್ದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ತ್ರಿಪುರಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಡಾ ಅಜಯ್ ಕುಮಾರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿರಾಜಿತ್ ಸಿನ್ಹಾ, ಹಿರಿಯ ಕಾಂಗ್ರೆಸ್ ನಾಯಕ ಗೋಪಾಲ್ ಚಂದ್ರ ರಾಯ್ ಮತ್ತು ಜಿತೇಂದ್ರ ಚೌಧರಿ ಮುಂತಾದ ನಾಯಕರು ಕರೀಂ ಮತ್ತು ಖಲೇಕ್ ಅವರೊಂದಿಗೆ ಇದ್ದರು.

ಸ್ಥಳದಿಂದ ಹಿಂತಿರುಗಿದ ನಂತರ, ಅಬ್ದುಲ್ ಖಲೇಕ್ ಅವರು ಪ್ರತಿಕ್ರಿಯಿಸಿ,“ನೆಹಲ್‌ಚಂದ್ರನಗರದಲ್ಲಿ ಸುಮಾರು 20 ಅಂಗಡಿಗಳನ್ನು ಸುಟ್ಟುಹಾಕಲಾಯಿತು. ಮಧ್ಯಾಹ್ನ ನಿಯೋಗವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ತಲುಪಿದ ನಂತರ ದಾಳಿಗೆ ಒಳಗಾಯಿತು. ಬಿಶಾಲ್‌ಗಢದ ನೇಹಲ್‌ಚಂದ್ರನಗರದಲ್ಲಿ ಸುಮಾರು 20 ಅಂಗಡಿಗಳನ್ನು ಸುಟ್ಟುಹಾಕಲಾಗಿದೆ” ಎಂದು ತಿಳಿಸಿದ್ದಾರೆ.

“ನಾವು ಅವರನ್ನು ಭೇಟಿ ಮಾಡಲು ಮತ್ತು ಸಂತ್ರಸ್ತ ಜನರೊಂದಿಗೆ ಮಾತನಾಡಲು ಹೋಗಿದ್ದೆವು. ಇದ್ದಕ್ಕಿದ್ದಂತೆ ಕೆಲವರು ಬಂದು ತಾವು ಬಿಜೆಪಿ ಬೆಂಬಲಿಗರೆಂದು ಹೇಳಿಕೊಂಡು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ನಾವು ಅವರೊಂದಿಗೆ ಮಾತನಾಡಲು ಪ್ರಾರಂಭಿಸಿದೆವು. ಆದರೆ ಕೆಲವರು ಇದ್ದಕ್ಕಿದ್ದಂತೆ ನಮ್ಮ ವಾಹನಗಳ ಮೇಲೆ ಕಲ್ಲು ತೂರಿದರು. ನಮ್ಮ ನಾಲ್ಕು ವಾಹನಗಳಿಗೆ ಹಾನಿಯಾಗಿದೆ. ಪೊಲೀಸರು ನಮಗೆ ಸಹಾಯ ಮಾಡಲು ಒಂದೇ ಒಂದು ಕೆಲಸವನ್ನು ಮಾಡದಿರುವುದು ತುಂಬಾ ಆಶ್ಚರ್ಯಕರವಾಗಿದೆ” ಎಂದು ದೂರಿದ್ದಾರೆ.

ಹಗಲು ಹೊತ್ತಿನಲ್ಲಿ ನಿಯೋಗಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿರುವಾಗ ಜನರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಮಾತನಾಡುವುದು ವ್ಯರ್ಥ ಎಂದು ಖಲೇಕ್ ಟೀಕಿಸಿದ್ದಾರೆ.

ರಂಜೀತಾ ರಂಜನ್ ಮಾತನಾಡಿ, “ಇಲ್ಲಿ ಹಗಲಿರುಳು ಗೂಂಡಾಗಿರಿ ನಡೆಯುತ್ತಿದ್ದು, ಪ್ರತಿಪಕ್ಷಗಳು ಒಗ್ಗಟ್ಟಾಗಿ ನಿಲ್ಲಲು ಬಯಸಿದರೆ ದಾಳಿ ನಡೆಸಲಾಗುತ್ತಿದೆ. ತ್ರಿಪುರಾದಲ್ಲಿ ಏಳು ಸಂಸದರು ಮತ್ತು ಹಲವಾರು ಶಾಸಕರು ಸುರಕ್ಷಿತವಾಗಿಲ್ಲದಿದ್ದರೆ, ಇಲ್ಲಿ ಸಾಮಾನ್ಯ ಜನರು ಎಷ್ಟು ಸುರಕ್ಷಿತವಾಗಿರಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...