ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕ ಭೇಟಿಯ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳ ಆರೋಪ ಮಾಡುವ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ಸೋಮವಾರ ಹೇಳಿದ್ದು, ಅವರನ್ನು “ದೇಶದ್ರೋಹಿ” ಎಂದು ಕರೆದಿದೆ. ಚುನಾವಣಾ ಆಯೋಗ ರಾಜಿಯಾಗಿದೆ
ರಾಹುಲ್ ಅವರು ಭಾರತದ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವವನ್ನು ವಿದೇಶಗಳಲ್ಲಿ ಅವಮಾನಿಸಿದ್ದಾರೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ ಅವರು ಹೇಳಿದ್ದು, ಜೊತೆಗೆ ನ್ಯಾಷನಲ್ ಹೆರಾಲ್ಡ್ ಮೂಲಕ ರಾಷ್ಟ್ರೀಯ ಸಂಪತ್ತನ್ನು ಅವರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಉಲ್ಲೇಖಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ಭಾನುವಾರ ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್ ಅವರು, ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಚುನಾವಣಾ ಆಯೋಗವು “ರಾಜಿ ಮಾಡಿಕೊಂಡಿದೆ” ಮತ್ತು “ವ್ಯವಸ್ಥೆಯಲ್ಲಿ ಏನೋ ದೋಷವಿದೆ” ಎಂದು ಆರೋಪಿಸಿದ್ದರು ಎಂದು ANI ವರದಿ ಮಾಡಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ರಾಜ್ಯದ ಮತದಾರರಿಗಿಂತ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ ಎಂಬ ತಮ್ಮ ಹೇಳಿಕೆಯನ್ನು ರಾಹುಲ್ ಪುನರುಚ್ಚರಿಸಿದ್ದಾರೆ. “ಚುನಾವಣಾ ಆಯೋಗವು ಸಂಜೆ 5.30 ಕ್ಕೆ ನಮಗೆ ಮತದಾನದ ಸಂಖ್ಯೆಯನ್ನು ನೀಡಿತ್ತು. ಆದರೆ ಸಂಜೆ 5.30 ರಿಂದ ಸಂಜೆ 7.30 ರ ನಡುವೆ 65 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
“ಇದು ಭೌತಿಕವಾಗಿ ಸಂಭವಿಸುವುದು ಅಸಾಧ್ಯ. ಒಬ್ಬ ಮತದಾರ ಮತ ಚಲಾಯಿಸಲು ಸುಮಾರು ಮೂರು ನಿಮಿಷಗಳನ್ನು ತೆಗೆದುಕೊಳ್ಳುತ್ತಾನೆ. ಇದನ್ನು ನೀವು ಲೆಕ್ಕಾಚಾರ ಮಾಡಿದರೆ, ಬೆಳಗಿನ ಜಾವ 2 ಗಂಟೆಯವರೆಗೆ ಮತದಾರರ ಸಾಲುಗಳು ಇದ್ದವು ಎಂದರ್ಥ, ಆದರೆ ಇದು ಸಂಭವಿಸಲಿಲ್ಲ.” ಎಂದು ಅವರು ಹೇಳಿದ್ದಾರೆ.
ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಗುಂಪು ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಬಣವನ್ನು ಒಳಗೊಂಡ ರಾಜ್ಯದ ಆಡಳಿತರೂಢ ಮೈತ್ರಿಕೂಟವು 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್ ಪಕ್ಷ ಇರುವ ಮಹಾ ವಿಕಾಸ್ ಅಘಾಡಿ 46 ಸ್ಥಾನಗಳನ್ನು ಗೆದ್ದಿತು.
“ತಮ್ಮ ಪಕ್ಷವು ಚುನಾವಣಾ ಪ್ರಕ್ರಿಯೆಯ ವೀಡಿಯೊಗಳನ್ನು ಕೇಳಿದಾಗ, ಅವರು ನಿರಾಕರಿಸಿದ್ದಲ್ಲದೆ, ಕಾನೂನನ್ನು ಸಹ ಬದಲಾಯಿಸಿದರು. ಆದ್ದರಿಂದ ಈಗ ನಮಗೆ ವೀಡಿಯೊಗ್ರಫಿ ಕೇಳಲು ಅವಕಾಶವಿಲ್ಲ” ಎಂದು ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಚುನಾವಣಾ ಆಯೋಗವು ರಾಜಿ ಮಾಡಿಕೊಂಡಿದೆ ಎಂಬುದು ನಮಗೆ ಸ್ಪಷ್ಟವಾಗಿದೆ ಮತ್ತು ವ್ಯವಸ್ಥೆಯಲ್ಲಿ ಏನೋ ತಪ್ಪಿದೆ ಎಂಬುದು ಬಹಳ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣಾ ನೀತಿ ನಿಯಮಗಳ ನಿಯಮ 93(2)(ಎ) ಅನ್ನು ತಿದ್ದುಪಡಿ ಮಾಡಿತು. ಈ ನಿಯಮವು, “ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರ ಪತ್ರಿಕೆಗಳು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರಬೇಕು” ಎಂದು ಹೇಳುತ್ತದೆ. ಆದರೆ, ಇದನ್ನು ಸರ್ಕಾರ ತಿದ್ದುಪಡಿ ಮಾಡಿ, “ಚುನಾವಣೆಗೆ ಸಂಬಂಧಿಸಿದ ನಿರ್ದಿಷ್ಟಪಡಿಸಿದ ಈ ನಿಯಮಗಳಲ್ಲಿ ಎಲ್ಲಾ ಇತರ ಪತ್ರಿಕೆಗಳು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರಬೇಕು.” ಬದಲಾಯಿಸಿತ್ತು.
ಈ ಬದಲಾವಣೆಯೊಂದಿಗೆ ಎಲ್ಲಾ ಮತದಾನ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕರು ಪರಿಶೀಲಿಸಲು ಸಾಧ್ಯವಿಲ್ಲ. 1961 ರ ಚುನಾವಣಾ ನೀತಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಮಾತ್ರ ಸಾರ್ವಜನಿಕರು ಪರಿಶೀಲಿಸಬಹುದಾಗಿದೆ. ಈ ನಿಯಮದ ಅಡಿಯಲ್ಲಿ, ಚುನಾವಣಾ ಸಂಬಂಧಿತ ಎಲ್ಲಾ ದಾಖಲೆಗಳನ್ನು ಸಾರ್ವಜನಿಕ ಪರಿಶೀಲನೆಗಾಗಿ ಒದಗಿಸುವಂತೆ ನ್ಯಾಯಾಲಯಗಳು ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸಾಧ್ಯವಾಗುವುದಿಲ್ಲ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಡಿಸೆಂಬರ್ 9 ರಂದು ಚುನಾವಣಾ ಆಯೋಗಕ್ಕೆ ವೀಡಿಯೊಗ್ರಫಿ, ಭದ್ರತಾ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಇತ್ತೀಚಿನ ಹರಿಯಾಣ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ ಮತಗಳಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ಒದಗಿಸುವಂತೆ ನಿರ್ದೇಶಿಸಿದ ಕೆಲವು ದಿನಗಳ ನಂತರ ಕೇಂದ್ರ ಸರ್ಕಾರ ಈ ನಿಯಮಗಳಿಗೆ ತಿದ್ದುಪಡಿ ಮಾಡಿ ನಿಯಮಗಳನ್ನು ಬದಲಾಯಿಸಿತ್ತು. ಕಾಂಗ್ರೆಸ್ ಚುನಾವಣಾ ನಿಯಮಗಳ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಚುನಾವಣಾ ಆಯೋಗ ರಾಜಿಯಾಗಿದೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮಹಾರಾಷ್ಟ್ರ | ಶಾಲೆಗಳಲ್ಲಿ ಹಿಂದಿ ಕಡ್ಡಾಯಕ್ಕೆ ಸರ್ಕಾರಿ ಭಾಷಾ ಸಮಾಲೋಚನಾ ಸಮಿತಿ ವಿರೋಧ
ಮಹಾರಾಷ್ಟ್ರ | ಶಾಲೆಗಳಲ್ಲಿ ಹಿಂದಿ ಕಡ್ಡಾಯಕ್ಕೆ ಸರ್ಕಾರಿ ಭಾಷಾ ಸಮಾಲೋಚನಾ ಸಮಿತಿ ವಿರೋಧ

