ಚುನಾವಣಾ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ಪ್ರಕಟಿಸುವ ಭರವಸೆ ಅಥವಾ ಬದ್ಧತೆಗಳು ಜನರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆರ್ಥಿಕ ಸಹಾಯಕ್ಕೆ ಕಾರಣವಾಗಬಹುದೇ ವಿನಃ, ಜನ ಪ್ರತಿನಿಧಿ ಕಾಯ್ದೆಯಡಿ ಭ್ರಷ್ಟಾಚಾರಕ್ಕೆ ಕಾರಣವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2023ರ ವಿಧಾನಸಭೆ ಚುನಾವಣೆಯ ವೇಳೆ ಕರ್ನಾಟಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಕುರಿತು ಕುರಿತು ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಝಡ್ ಝಮೀರ್ ಅಹ್ಮದ್ ಖಾನ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಪೀಠ, “ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳು ಭ್ರಷ್ಟ ವ್ಯವಹಾರಕ್ಕೆ ಸಮವಲ್ಲ” ಎಂದು ಹೇಳಿದ್ದು, ಮೇಲ್ಮನವಿಯನ್ನು ವಜಾಗೊಳಿಸಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ 2023ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಗಳು ಸಾರ್ವಜನಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆರ್ಥಿಕ ಸಹಾಯ ಕಲ್ಪಿಸಿದ್ದು, ಇದು ಅಭ್ಯರ್ಥಿಯ ಭ್ರಷ್ಟ ವ್ಯವಹಾರಕ್ಕೆ ಕಾರಣವಾಗುತ್ತದೆ ಎಂಬ ವಕೀಲರ ವಾದ ನಂಬಲರ್ಹವಲ್ಲ ಹಾಗೂ ಅದನ್ನು ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಝಮೀರ್ ಅಹ್ಮದ್ ಖಾನ್ ಅವರ ಆಯ್ಕೆ ಪ್ರಶ್ನಿಸಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರೊಬ್ಬರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.
2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳು ಸಾರ್ವಜನಿಕರಿಗೆ ನೇರ ಮತ್ತು ಪರೋಕ್ಷ ಆರ್ಥಿಕ ಸಹಾಯ ಕಲ್ಪಿಸಿದ್ದು, ಇದು ಭ್ರಷ್ಟ ಚುನಾವಣಾ ವ್ಯವಹಾರ ಎಂದು ದೂರುದಾರರು ವಾದಿಸಿದ್ದರು.
ವಾದ ಆಲಿಸಿದ್ದ ಕರ್ನಾಟ ಹೈಕೋರ್ಟ್ ಇದು ತಪ್ಪು ನೀತಿಗೆ ಉದಾಹರಣೆಯಾಗಿರಬಹುದಾದರೂ, ಜನ ಪ್ರತಿನಿಧಿ ಕಾಯ್ದೆಯಡಿ ಭ್ರಷ್ಟ ವ್ಯವಹಾರ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿತ್ತು.
“ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಸಮಾಜ ಕಲ್ಯಾಣ ನೀತಿಗಳೆಂದು ಪರಿಗಣಿಸಬೇಕು. ಅವು ಆರ್ಥಿಕವಾಗಿ ಕಾರ್ಯ ಸಾಧುವೇ ಅಥವಾ ಇಲ್ಲವೇ ಎಂಬುವುದು ಬೇರೆ ವಿಚಾರ. ಭರವಸೆಗಳ ಜಾರಿಯಿಂದ ರಾಜ್ಯದ ಬೊಕ್ಕಸ ಹೇಗೆ ಬರಿದಾಗುತ್ತದೆ? ಅದು ಅಸಮರ್ಪಕ ಆಡಳಿತಕ್ಕೆ ಹೇಗೆ ಕಾರಣವಾಗುತ್ತದೆ? ಎಂಬುವುದನ್ನು ಉಳಿದ ಪಕ್ಷದವರು ತೋರಿಸಬೇಕು. ಪ್ರಕರಣದ ನಿರ್ದಿಷ್ಟ ಸಂದರ್ಭ ಸನ್ನಿವೇಶಗಳ ಅಡಿಯಲ್ಲಿ ಅವುಗಳನ್ನು ತಪ್ಪು ನೀತಿ ಎಂದು ಕರೆಯಬಹುದು. ಆದರೆ, ಭ್ರಷ್ಟ ನಡೆ ಎನ್ನಲಾಗದು” ಎಂದು ಹೈಕೋರ್ಟ್ ಹೇಳಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆ ಭ್ರಷ್ಟ ವ್ಯವಹಾರಕ್ಕೆ ಸಮವೇ? ಎಂಬ ಬಗ್ಗೆ ಕಾನೂನಿನ ಪ್ರಶ್ನೆಗೆ ಹೋಗಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಮೇಲ್ಮನವಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ : ಯಡಿಯೂರಪ್ಪ ವಿರುದ್ಧ ಪೋಕ್ಸೋ ದೂರು ದಾಖಲಿಸಿದ್ದ ಮಹಿಳೆ ದಿಢೀರ್ ಸಾವು: ತನಿಖೆಗೆ ಆಗ್ರಹಿಸಿದ ಜನವಾದಿ ಮಹಿಳಾ ಸಂಘಟನೆ


