ಆರೋಗ್ಯಕರವಾಗಿ ಚಿಂತಿಸುವ, ಬರೆವ, ಜೀವಪರ ಆಶಯಗಳನ್ನಿಟ್ಟುಕೊಂಡು ಬದ್ಧತೆಯಿಂದ ದುಡಿಯುವ ಎಲೆಮರೆಯ ವ್ಯಕ್ತಿಗಳನ್ನು ಗುರುತಿಸುವ ಮತ್ತು ಹೊಸ ತಲೆಮಾರಿಗೆ ಪ್ರೇರಕವಾಗುವಂತಹ ಮಾದರಿಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನ `ಎಲೆಮರೆ’. ಇಲ್ಲಿ ಸಾಹಿತಿಗಳು, ಚಳವಳಿಗಾರರು, ಪತ್ರಕರ್ತರು, ಪ್ರಗತಿಪರ ಯುವ ರೈತರು, ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ನೌಕರರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಬೆಳಕಿಗೆ ಬಾರದ ಎಲ್ಲ ವಯೋಮಾನದವರನ್ನು ಒಳಗೊಳ್ಳಲಾಗುವುದು. ಎಲೆಮರೆಯಲ್ಲಿರುವ ಹಲವರನ್ನು ಪರಿಚಯಿಸಲು ಸಂಶೋಧಕರಾದ ಅರುಣ್ ಜೋಳದಕೂಡ್ಲಿಗಿಯವರ ಜೊತೆಗೆ ರಾಜ್ಯದ ವಿವಿಧ ಭಾಗಗಳ ಸ್ನೇಹಿತರು ಕೈಜೋಡಿಸಲಿದ್ದಾರೆ.
ಫೇಸ್‍ಬುಕ್‍ನಲ್ಲಿ ಕಳೆದ ಐದಾರು ವರ್ಷದಿಂದ ಸೂಕ್ಷ್ಮವಾಗಿ ಗಮನಿಸುವ ಪ್ರೊಫೈಲುಗಳಲ್ಲಿ ಹರ್ಷಿಯಾ ಬಾನುಳ ಪೇಜ್ ಕೂಡ ಒಂದು. ಕಣ್ಣಗೊಂಬೆಗಳು ಮೇಲೆ ಸರಿದ ಹರ್ಷಿಯಾ ಡಿಪಿ ನೋಡಿದಾಗಲೆಲ್ಲಾ ಇವರು ಹೇಗೆ ಫೇಸ್‍ಬುಕ್ ಬಳಸಬಹುದು ಎಂದುಕೊಂಡೆ. ನಂತರ ಟೀಚರ್ ಎನ್ನುವುದು ತಿಳಿದಾಗಲೂ ಹರ್ಷಿಯಾ ಹೇಗೆ ಪಾಠ ಮಾಡುತ್ತಾರೆ, ಮಕ್ಕಳು ಹೇಗೆ ರಿಯಾಕ್ಟ್ ಮಾಡಬಹುದೆಂಬ ಪ್ರಶ್ನೆಯೊಂದು ಸುಳಿಯಿತು. ಈಚೆಗೆ ಹರ್ಷಿಯಾ ಮಾದರಿ ಶಿಕ್ಷಕಿ ಎನ್ನುವ ಪತ್ರಿಕಾ ವರದಿಗಳು ಬಂದಾಗ ನಿಜಕ್ಕೂ ಖುಷಿಯಾಯಿತು. ಹರ್ಷಿಯಾ ಜತೆ ಮಾತನಾಡಿದಾಗ ಅವಳ ಕಠಿಣ ದಾರಿಯನ್ನು ನೆನಪಿಸಿಕೊಂಡರು.
ಅರಸೀಕೆರೆಯ ಕರೀಂಸಾಬ್ ಗೌರ್ನಮೆಂಟ್ ಹಾಸ್ಪಿಟಲ್‍ನಲ್ಲಿ ಕೆಲಸ ಮಾಡುತ್ತಿದ್ದಾಗ, ಪುಟ್ಟ ಹರ್ಷಿಯಾ ಅಪ್ಪನ ಜತೆಗೆ ಆಸ್ಪತ್ರೆಗೆ ಹೋಗುತ್ತಿದ್ದಳು. ಚೀಟಿ ಬರೆಯುವವರು ಇಲ್ಲದೆ ಇದ್ದಾಗ ಅವಳೇ ಕೌಂಟರಲ್ಲಿ ರೋಗಿಗಳಿಗೆ ಚೀಟಿ ಬರೆಯುತ್ತಿದ್ದಳು. ಎಷ್ಟೋ ಜನರಿಗೆ ಚೀಟಿ ಬರೆಸೋದಕ್ಕೆ ಎರಡು ರೂಪಾಯಿಯೂ ಇರುತ್ತಿರಲಿಲ್ಲ. ಇದು ಹರ್ಷಿಯಾ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಮುಂದೆ ವೈದ್ಯೆಯಾಗಿ ಬಡವರ ಸೇವೆ ಮಾಡಬೇಕೆಂಬ ಕನಸು ಕಟ್ಟಿದಳು. ಆದರೆ ಎಸ್‍ಎಸ್‍ಎಲ್‍ಸಿ ನಂತರ ಸೈನ್ಸ್ ತೆಗೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ದೃಷ್ಟಿದೋಶದ ಕಾರಣ ಸೈನ್ಸ್ ಸಿಗಲಿಲ್ಲ. ಪದವಿ ನಂತರವೂ ಕೆಎಎಸ್ ಪ್ರಿಲಿಮ್ಸ್ ಮೇನ್ಸ್ ಎಗ್ಜಾಮ್ ನಂತರ ಸಂದರ್ಶನಕ್ಕೆ ಹೋಗಬೇಕಾಗಿತ್ತು. ಆಡಳಿತದ ಹುದ್ದೆಯನ್ನು ನಿಭಾಯಿಸಲು ನಿನ್ನಿಂದ ಆಗದು ಎನ್ನುವ ಅಪ್ಪಅಮ್ಮನ ಒತ್ತಾಯಕ್ಕೆ ಈ ಕನಸೂ ಈಡೇರಲಿಲ್ಲ. ಆದರೆ ಬಿಇಡಿ ಮಾಡಿ ಇದೀಗ ಬಂಗಾರಪೇಟೆಯ ಆದರ್ಶ ಶಾಲೆಯಲ್ಲಿ ಆದರ್ಶ ಶಿಕ್ಷಕಿಯಾಗಿ ಗಮನ ಸೆಳೆದಿದ್ದಾಳೆ.
ಕನ್ನಡ ಶಾಲೆಗಳ ಅಳಿವುಉಳಿವಿನ ಚರ್ಚೆಗಳು ನಡೆಯುತ್ತಿರುವಾಗ ಶೇ.75ರಷ್ಟು ಅಂಧತ್ವವಿರುವ ಹರ್ಷಿಯಾ ಭಾನುವಿನ ಕನ್ನಡ ಪಾಠಗಳು ವಿಶೇಷವಾಗಿವೆ. ಪ್ರತೀ ಪಾಠವನ್ನು ಕಂಠಪಾಟ ಮಾಡಿ ಮರುದಿನ ಪುಸ್ತಕ ಹಿಡಿದು ಸಾಮಾನ್ಯ ಶಿಕ್ಷಕರು ಓದುವ ಹಾಗೆ ನೆನಪಿನಿಂದ ಪಾಠ ಓದುತ್ತಾಳೆ. ಇದರಿಂದ ಮಕ್ಕಳ ಗಮನ ಬೇರೆಡೆ ಹರಿಯುವುದಿಲ್ಲ. ಅಂತೆಯೇ ವ್ಯಾಕರಣಕ್ಕೆ ಸಂಬಂಧಿಸಿದ ಸರಳ ಕಲಿಕೆಗೆ ಅನುವಾಗುವಂತೆ ಹರ್ಷಿಯಾ ಮಾಡಿದ ಚಾರ್ಟ್‍ಗಳು ವಿಶೇಷವಾಗಿವೆ. ಪ್ರಾಥಮಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಹರ್ಷಿಯಾ ವ್ಯಾಕರಣ ಮಾದರಿಯನ್ನು ಎಲ್ಲಾ ಶಿಕ್ಷಕರು ಅನುಸರಿಸಲೆಂದು ಇಲಾಖೆಯ ಶಿಕ್ಷಣ ವಾರ್ತೆಯಲ್ಲಿ ಲೇಖನ ಪ್ರಕಟಿಸಿದ್ದರು.
ಪದವಿಯಲ್ಲಿ ಮೊದಲು ಪರಿಚಯವಾದ ಕನ್ನಡದ ಪ್ರೊಫೆಸರ್ ಮತ್ತು ಲೇಖಕಿ ಸ.ಉಷಾ ಅವರ ಒಡನಾಟದಿಂದ ಹರ್ಷಿಯಾ ಓದು ಮತ್ತು ತಿಳಿವಿನ ದಿಕ್ಕು ಬದಲಾಯಿತು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ನೆನಪಿನ ದೋಣಿ, ಮಾಸ್ತಿಯವರ ಕತೆ ಕಾದಂಬರಿಗಳು, ನಿಸಾರ್ ಅಹಮದ್‍ರ ಕವಿತೆ, ರಹಮತ್ ತರೀಕೆರೆಯವರ ಅಂಕಣ ಬರಹ, ಆನ್‍ಲೈನ್‍ನ ಅವಧಿ, ಕೆಂಡಸಂಪಿಗೆ ಹೀಗೆ ಸಾಹಿತ್ಯದ ಓದು ಕೂಡ ಹರ್ಷಿಯಾಳನ್ನು ವೈಚಾರಿಕವಾಗಿ ಸೂಕ್ಷ್ಮವಾಗಿಸಿದೆ. ಹರ್ಷಿಯಾ ಒಳ್ಳೆಯ ಕವಯಿತ್ರಿ ಕೂಡ. ಕವನ ಸಂಕಲನ ಇನ್ನಷ್ಟೇ ಪ್ರಕಟವಾಗಬೇಕಿದೆ. ಕಳೆದ ನಾಲ್ಕೂ ಎಸ್‍ಎಸ್‍ಎಲ್‍ಸಿ ಬ್ಯಾಚ್‍ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ನೂರರಷ್ಟು ಫಲಿತಾಂಶ ಬಂದಿದೆ. ಉಳಿದೆರಡು ಬ್ಯಾಚ್ 98.5. ಶೇ ಫಲಿತಾಂಶ ಬಂದಿದೆ. ಕಳೆದ ಬಾರಿ ಮೂರು ವಿದ್ಯಾರ್ಥಿನಿಯರು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅವರಿಗೆ ಹರ್ಷಿಯಾ ಸ್ವಂತ ಖಾತೆಯಿಂದ ಒಂದು ಸಾವಿರ ರೂ ನಗದು ಹಾಗು ಪದಕವನ್ನು ಶಾಲಾ ಮುಖ್ಯಸ್ಥರಿಂದ ಕೊಡಿಸಿ ಗೌರವಿಸಿ ಪ್ರೋತ್ಸಾಹಿಸಿದ್ದಾರೆ.
ಹರ್ಷಿಯಾ ವ್ಯಕ್ತಿತ್ವ ಮಾನವೀಯ ಮೌಲ್ಯಗಳ ನೆಲೆಗಳಲ್ಲಿ ರೂಪುಗೊಂಡಿದೆ. ಅಂತೆಯೇ ಸಮಾನತೆಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಹೊಣೆಗಾರಿಕೆಯನ್ನು ತುಂಬಾ ಎಚ್ಚರದಿಂದ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಹಂತಹಂತವಾಗಿ ತನಗಿರುವ ದೃಷ್ಟಿದೋಶದ ಸಮಸ್ಯೆಯನ್ನೂ, ಲೋಕದ ಕಣ್ಣಿನ ಅನುಕಂಪವನ್ನೂ ಮೀರಿದ ಛಲದಿಂದ ಬದುಕನ್ನು ಕಟ್ಟಿಕೊಂಡವರು. `ನನಗೆ ದೂರದೃಷ್ಟಿ ದೋಶವಿದೆ. ತೀರಾ ಹತ್ತಿರದಿಂದ ಓದಕೋಬೇಕು. ನನ್ನ ಐಬಾಲ್ ಶೇಕ್ ಆಗೋದ್ರಿಂದ ಅದು ಆಪರೇಷನ್‍ಗೂ ಸಪೋರ್ಟ್ ಮಾಡಲ್ಲ, ಮತ್ತೆ ಯಾವ ಗ್ಲಾಸ್ ಕೂಡ ನನ್ನ ಕಣ್ ಮೇಲೆ ವರ್ಕ್ ಆಗೋಲ್ಲ. ಈ ತರಹದ ಸಮಸ್ಯೆ ಆಗಿರೋದ್ರಿಂದ ನನ್ನ ಅಂಧತ್ವದ ಸ್ಥಿತಿಯನ್ನು ಸರ್ಜರಿಯಿಂದಲೋ, ಟ್ರೀಟ್‍ಮೆಂಟಿಂದಲೋ ವಾಸಿ ಮಾಡ್ಕೊಳ್ಳೋಕೆ ಆಗಲ್ಲ. ಹೀಗಾಗಿ ನನ್ನದೇ ಕೆಲಸಗಳಲ್ಲಿ ತೊಡಗಿಕೊಂಡು ಅಂಧತ್ವವನ್ನೂ ಮರೆತ್ತಿದ್ದೇನೆ’ ಎಂದು ಹರ್ಷಿಯಾ ಆತ್ಮವಿಶ್ವಾಸದಿಂದ ಮಾತನಾಡುತ್ತಾಳೆ.
ಹೀಗೆ ಅರಸೀಕೆರೆಯ ಕರೀಂಸಾಬ್ ಮತ್ತು ರಿಹಾನ್ ಭಾನು ದಂಪತಿಗಳ ಹಿರಿಯ ಮಗಳಾದ ಹರ್ಷಿಯಾ ಸಾಮಾನ್ಯ ಸ್ಕೂಲುಗಳಲ್ಲೆ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ ತನ್ನದೇ ಆದ ವಿಶಿಷ್ಟ ಬೋಧನೆಯ ಮೂಲಕ ಜಡಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾಳೆ. ಇದನ್ನು ಗುರುತಿಸಿ ಕರ್ನಾಟಕ ಕಾವಲು ಪಡೆಯ `ಆದರ್ಶ ಶಿಕ್ಷಕಿ’ ಪ್ರಶಸ್ತಿ, ದೆಹಲಿಯ ಆವಂತಿಕಾ ಸಂಸ್ಥೆಯ `ಡಾ.ಅಬ್ದುಲ್ ಕಲಾಂ’ ಪ್ರಶಸ್ತಿಯನ್ನು ಒಳಗೊಂಡಂತೆ ಹಲವು ಖಾಸಗಿ ಸಂಸ್ಥೆಗಳು ಗೌರವಿಸಿವೆ. ಹರ್ಷಿಯಾಳ ಕನಸುಗಳು ಮತ್ತಷ್ಟು ದೃಢವಾಗಲಿ. ತನ್ನ ಸುತ್ತಮುತ್ತಣ ಪರಿಸರದಲ್ಲಿ ಹರ್ಷಿಯಾಳ ಒಳಗಣ್ಣಿನ ಬೆಳಕು ಬದಲಾವಣೆಗೆ ನೆರವಾಗಲಿ.


