“ಎಲ್ಲರ ಮೇಲೂ ಕೇಸ್ ಹಾಕಿ. ಎಷ್ಟು ದಿನ ಅಂತ ನೋಡೋದು ಸಾರ್? ರಾತ್ರಿಯಿಂದ ಬೆಳಿಗ್ಗೆ ಆರು ಗಂಟೆತನಕ ಆನೆ ಓಡಿಸುತ್ತೇವೆ. ಯಾರೂ ಇರಲ್ಲ. ಒಂದು ಪಟಾಕಿ ಕೊಡೋ ಯೋಗ್ಯತೆ ಇಲ್ಲ, ಆನೆ ಓಡಿಸ್ತೀರೇನ್ರೀ ನೀವು?”- ಹೀಗೆ ಆನೆ ಹಾವಳಿಯಿಂದ ನೊಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆನೆ ಹಾವಳಿ ತಪ್ಪಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನರ ಆಕ್ರೋಶ ಭುಗಿಲೇಳುತ್ತಿದೆ. ಇತ್ತೀಚೆಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸ್ಥಳೀಯರು ಛೀಮಾರಿ ಹಾಕಿದ್ದರು. ಈಗ ಕಳ್ಳಬೇಟೆ ಶಿಬಿರಕ್ಕೆ ನುಗ್ಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲೂರು ವಲಯ ಚಿಕ್ಕಮಗಳೂರು ವಿಭಾಗದ ಕಳ್ಳ ಬೇಟೆ ನಿಗ್ರಹ ಶಿಬಿರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಳೀಯರು ನೊಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದಲ್ಲಿ ಮಹಿಳೆ ಆನೆ ದಾಳಿಯಿಂದ ಮೃತಪಟ್ಟಿದ್ದರು. ಕಳ್ಳ ಬೇಟೆ ಶಿಬಿರ ನಿಗ್ರಹ ಅಧಿಕಾರಿಗಳು ಆನೆ ದಾಳಿಯಿಂದ ಗ್ರಾಮ ಹಾಗೂ ಸ್ಥಳೀಯ ಜನರ ರಕ್ಷಣೆ ಮಾಡುವ ಬದಲು ರಾತ್ರಿ ಹಗಲು ಮಾಂಸವನ್ನು ಬೇಯಿಸಿ, ಎಣ್ಣೆ ಕುಡಿದು ತೇಲಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಶಿಬಿರಕ್ಕೆ ನುಗ್ಗಿದ್ದಾರೆ.
ಕುಂದೂರು ಎಸ್ಟೇಟ್‌ನಲ್ಲಿರುವ ಶಿಬಿರದೊಳಗೆ ನುಗ್ಗಿದ ಯುವಕರ ಗುಂಪು ಕಟ್ಟಡದೊಳಗಿನ ಉಪಕರಣಗಳನ್ನು ಹೊರಗೆಸೆದಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಸುಧೀರ್, ಕೃಷ್ಣನ್, ನಿಖಿಲ್ ಮರಿಗೌಡ, ಸುಚಿನ್, ಗಣೇಶ ಮೊದಲಾದ ಯುವಕರು ಘಟನೆಯಲ್ಲಿ ಭಾಗಿಯಾಗಿದ್ದಾರೆ.
“ಇವರಿಗೆ (ಅಧಿಕಾರಿಗಳಿಗೆ) ತಿನ್ನಲು ಸೋನಮುಸುರಿ ಅಕ್ಕಿ ಬೇಕು, ಪೊಲೀಸರು ಈ ಅಧಿಕಾರಿಗಳಿಗೆ ರಕ್ಷಣೆ ಕೊಡುತ್ತೀರಾ, ನಮಗೆ ನ್ಯಾಯ ಕೊಡಿಸಲು ಆಗುತ್ತಾ? ಇಲ್ಲೇ ಮಜಾ ಮಾಡ್ತಾರೆ, ಚಿಕನ್ ಫ್ರೈ ಮಾಡ್ಕೊಂಡು ತಿನ್ನುತ್ತಾರೆ. ಇಷ್ಟು ದೊಡ್ಡ ಬಿಲ್ಡಿಂಗ್ ಇಟ್ಟುಕೊಂಡು ಇಲ್ಲೇ ಪಟಾಕಿ ಹೊಡಿದುಕೊಂಡು ಇರುತ್ತಾರೆ” ಎಂದು ದೂರಿದ್ದಾರೆ.
“ಆನೆ ಎಲ್ಲಿ ಬಂದಿದ್ದವು ಎನ್ನುತ್ತಾರೆ? ನೋಡಿ ಅಲ್ಲಿ ಚಿಕನ್ ಫ್ರೈ ಮಾಡಿಕೊಂಡು ತಿಂದಿದ್ದಾರೆ. ಸ್ಥಳೀಯರಿಗೆ ರಕ್ಷಣೆ ಕೊಡುವುದಿಲ್ಲ” ಎಂದು ನೊಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ವಿಧಾಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಕುದೂರಿನ ಗ್ರಾಮಸ್ಥರು ‘ಕಳ್ಳ ಕಳ್ಳ’ ಎಂದು ಕರೆದು ಅಟ್ಟಾಡಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಇದರ ನಂತರ ಬಟ್ಟೆ ಹರಿದಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದ ಶಾಸಕ, ಗ್ರಾಮಸ್ಥರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದರು.
ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಶವವನ್ನು ಇಟ್ಟು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ಮೃತದೇಹ ನೋಡಲು ಶಾಸಕ ಕುಮಾರಸ್ವಾಮಿ ಕೂಡಾ ಬಂದಿದ್ದು, ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
#ಚಿಕ್ಕಮಗಳೂರು ಜಿಲ್ಲೆಯ #ಮೂಡಿಗೆರೆ #ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಕುದೂರಿನ ಗ್ರಾಮಸ್ಥರು ‘ಕಳ್ಳ ಕಳ್ಳ’ ಎಂದು ಕರೆದು ಅಟ್ಟಾಡಿಸಿದ ಘಟನೆ ನಡೆದಿದೆ. ಗ್ರಾಮಸ್ಥರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಶಾಸಕರು ಆರೋಪಿಸಿದ್ದಾರೆ.#NaanuGauri #BJP #Chikmagalur #Karnataka pic.twitter.com/GxBV8nigOX
— Naanu Gauri (@naanugauri) November 21, 2022
“ನನ್ನ ಮೇಲೆ ಸಂಚು ಮಾಡಿ ಹಲ್ಲೆ ಮಾಡಿದ್ದು, ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ” ಎಂದು ಎಂ.ಪಿ ಕುಮಾರಸ್ವಾಮಿ ಆರೋಪಿದ್ದರು. “ನಾನು ಅಲ್ಲೆ ಇರ್ತಿದ್ದೆ ಪೊಲೀಸರು ಮಿಸ್ ಗೈಡ್ ಮಾಡಿ ಹೊರಗೆ ಕಳುಹಿಸಿದ್ದಾರೆ. ಸಾರ್ವಜನಿಕರ ಸೇವೆ ಮಾಡಲು ಇರುವವರು ಎಲ್ಲ ತಾಗ್ಯಕ್ಕೂ ರೆಡಿ ಇರುತ್ತೇವೆ” ಎಂದು ಅವರು ಹೇಳಿದ್ದರು.
ಉದ್ರಿಕ್ತ ಜನರು ಅವರನ್ನು ಅಟ್ಟಾಡಿಸಿಕೊಂಡು ಬರುವಾಗ ಪೊಲೀಸರು ಅವರನ್ನು ರಕ್ಷಿಸಿ ಕಾರಿಗೆ ಕೂರಿಸುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿತ್ತು. ಈ ವೇಳೆ ಅವರ ಬಟ್ಟೆ ಹರಿದಿರಲಿಲ್ಲ. ಮತ್ತೊಂದು ವಿಡಿಯೊದಲ್ಲಿ ಅವರು ಬಟ್ಟೆ ಹರಿದಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಜನರು ಸಂಶಯ ವ್ಯಕ್ತಪಡಿಸಿದ್ದರು. ಘಟನೆಯ ನಂತರ ತಾನಾಗಿಯೆ ಬಟ್ಟೆ ಹರಿದು ವಿಡಿಯೊ ಮಾಡಿದ್ದಾರೆ ಎಂದು ಟೀಕಿಸಿದ್ದರು.



“ಸಾರ್ವಜನಿಕ ಸೇವಕರು” ಎಂದು ಕರೆಯಲಾಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಜನರ ಸಮಸ್ಯೆಗಳನ್ನು ಬಗೆಹರಿಸದೇ, ಕೇವಲ ಕಾನೂನನ್ನು ಚಲಾಯಿಸಲು ಮುಂದಾದಾಗ, ಜನ ರೊಚ್ಚಿಗೇಳುವುದು ಸಹಜ. ಅದರಲ್ಲೂ ನಮ್ಮ ರೈತರು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳು ನಾಶ ಮಾಡಿದಾಗ, ಅವರು ಆಕ್ರೋಶಗೊಳ್ಳುವುದು ಸಹಜ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನಂಚಿನ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.