ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮಿತ್ರ ಎಲಾನ್ ಮಸ್ಕ್ ಅವರು ಶನಿವಾರ (ಜು.5) ‘ಅಮೆರಿಕ ಪಾರ್ಟಿ’ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ಅಮೆರಿಕದ ‘ಏಕಪಕ್ಷ ವ್ಯವಸ್ಥೆ’ಗೆ ಇದು ಸವಾಲು ಒಡ್ಡಲಿದೆ ಎಂದಿದ್ದಾರೆ.
ಅಧ್ಯಕ್ಷ ಟ್ರಂಪ್ ‘ಒನ್ ಬಿಗ್, ಬ್ಯೂಟಿಫುಲ್ ಮಸೂದೆ’ಗೆ ಸಹಿ ಹಾಕಿದ ಒಂದು ದಿನದ ನಂತರ, ಟೆಕ್ ದೈತ್ಯ ಎಲಾನ್ ಮಸ್ಕ್ ಅವರು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು 2024ರ ಚುನಾವಣೆಯಲ್ಲಿ ಟ್ರಂಪ್‌ರ ಅತಿದೊಡ್ಡ ದಾನಿಗಳಲ್ಲಿ ಒಬ್ಬರಾಗಿದ್ದ ಮಸ್ಕ್, ಟ್ರಂಪ್ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೊಸ ಹೊಸದಾಗಿ ರಚನೆ ಮಾಡಿದ್ದ ‘ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರಾಗಿದ್ದರು. ಈ ವೇಳೆ ಫೆಡರಲ್ ವೆಚ್ಚವನ್ನು ಕಡಿತಗೊಳಿಸಲು ಮತ್ತು ಸರ್ಕಾರಿ ಉದ್ಯೋಗಗಳನ್ನು ಕಡಿಮೆ ಮಾಡಲು ಅವರು ಪ್ರಯತ್ನಿಸಿದ್ದರು.
“ಇಂದು, ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನೀಡಲು ಅಮೆರಿಕ ಪಕ್ಷವನ್ನು ಪ್ರಾರಂಭಿಸಲಾಗಿದೆ” ಎಂದು ಮಸ್ಕ್ ಅವರು ಈ ಹಿಂದೆ ಎಕ್ಸ್‌ನಲ್ಲಿ ನಡೆಸಿದ ಸಮೀಕ್ಷೆಯನ್ನು ಉಲ್ಲೇಖಿಸಿ ಶನಿವಾರ ಬರೆದಿದ್ದಾರೆ.
“ಒಂದರಿಂದ ಎರಡು ಅಂಶಗಳಿಗೆ ನಿಮಗೆ ಹೊಸ ರಾಜಕೀಯ ಪಕ್ಷ ಅಗತ್ಯವಿದೆ; ನೀವು ಅದನ್ನು ಪಡೆದುಕೊಳ್ಳಿ. ನಾವು ದೇಶದಲ್ಲಿ ಹೊಂದಿರುವ ವ್ಯರ್ಥ ಮತ್ತು ಲಂಚದಿಂದ ದೇಶವನ್ನು ದಿವಾಳಿ ಮಾಡುವ ಏಕ ಪಕ್ಷ ವ್ಯವಸ್ಥೆಗೆ ಬಂದರೆ, ಅದು ಪ್ರಜಾಪ್ರಭುತ್ವ ಎನಿಸುವುದಿಲ್ಲ”ಎಂದಿದ್ದಾರೆ.
By a factor of 2 to 1, you want a new political party and you shall have it!
When it comes to bankrupting our country with waste & graft, we live in a one-party system, not a democracy.
Today, the America Party is formed to give you back your freedom. https://t.co/9K8AD04QQN
— Elon Musk (@elonmusk) July 5, 2025
ಇದಕ್ಕೂ ಮೊದಲು, ಜುಲೈ 4 ರಂದು ಯುಎಸ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಮಸ್ಕ್ ಒಂದು ಸಮೀಕ್ಷೆಯನ್ನು ಪೋಸ್ಟ್ ಮಾಡಿ, “ನೀವು ಎರಡು ಪಕ್ಷಗಳ (ಕೆಲವರು ಏಕಪಕ್ಷೀಯ ಎಂದು ಹೇಳುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯ ಬಯಸುತ್ತೀರಾ ಎಂದು ಕೇಳಲು ಸ್ವಾತಂತ್ರ್ಯ ದಿನವು ಸೂಕ್ತ ಸಮಯ! ನಾವು ಅಮೆರಿಕ ಪಕ್ಷವನ್ನು ರಚಿಸಬೇಕೇ?” ಎಂದು ಕೇಳಿದ್ದರು. ಈ ಸಮೀಕ್ಷೆಯ ಫಲಿತಾಂಶದಲ್ಲಿ ಶೇಕಡ 65.4ರಷ್ಟು ಜನರು “ಹೌದು” ಮತ್ತು ಶೇಕಡ 34.6ರಷ್ಟು ಜನರು “ಇಲ್ಲ” ಎಂದು ಮತ ಚಲಾಯಿಸಿದ್ದರು.
ಕಳೆದ ತಿಂಗಳ ಕೊನೆಯಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಮಸೂದೆ’ ಮೂಲಕ ಜಾರಿಗೆ ತರಲು ಉದ್ದೇಶಿಸಿರುವ ತಮ್ಮ ದೇಶೀಯ ಕಾರ್ಯಸೂಚಿಯನ್ನು ಬೆಂಬಲಿಸುವಂತೆ ರಿಪಬ್ಲಿಕನ್ನರಿಗೆ ಟ್ರಂಪ್ ಒತ್ತಾಯಿಸಿದ್ದರು. ಇದು ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು.
ಮಸ್ಕ್ ಈ ಮಸೂದೆಯನ್ನು ಬಲವಾಗಿ ವಿರೋಧಿಸಿದ್ದರು. ಇದನ್ನು ‘ಸಾಲದ ಗುಲಾಮಗಿರಿ’ ಎಂದು ಟೀಕಿಸಿದ್ದರು ಮತ್ತು ಹಣದ ವ್ಯಯದ ಬಗ್ಗೆ ತಿಳಿಸಿ ಹೇಳಿದರೂ ಅದನ್ನು ಬೆಂಬಲಿಸದ ರಿಪಬ್ಲಿಕನ್ ಸಂಸದರ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಅವರು ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.
ಅರ್ಥಶಾಸ್ತ್ರಜ್ಞರು ಟ್ರಂಪ್ ಮಸೂದೆಯು ಮುಂದಿನ ದಶಕದಲ್ಲಿ ರಾಷ್ಟ್ರೀಯ ಕೊರತೆಯನ್ನು 3.4 ಟ್ರಿಲಿಯನ್ ಡಾಲರ್ ಹೆಚ್ಚಿಸಲಿದೆ ಎಂದು ಅಂದಾಜಿಸಿರುವುದಾಗಿ ವರದಿಯಾಗಿದೆ.
ಮಸ್ಕ್ ಅವರ ಬಹಿರಂಗ ಟೀಕೆಗೆ ತಿರುಗೇಟು ನೀಡಿದ್ದ ಟ್ರಂಪ್, ಮಸ್ಕ್ ಕಂಪನಿಗಳಿಂದ ಫೆಡರಲ್ ನಿಧಿಯನ್ನು ಕಸಿದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಮತ್ತು ಮಸ್ಕ್ ಅವರ ಸಂಭಾವ್ಯ ಗಡಿಪಾರು ಬಗ್ಗೆ ಎಚ್ಚರಿಕೆ ನೀಡಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಜನಿಸಿ 2002ರಲ್ಲಿ ಅಮೆರಿಕದ ಪ್ರಜೆಯಾದ ಮಸ್ಕ್ ಅವರನ್ನು ಗಡಿಪಾರು ಮಾಡುವ ಬಗ್ಗೆ ಯೋಚಿಸುತ್ತೀರಾ? ಎಂದು ವರದಿಗಾರರು ಕೇಳಿದಾಗ, ‘ನೋಡೋಣ’ ಎಂದು ಟ್ರಂಪ್ ಹೇಳಿದ್ದರು.
ಟೆಕ್ಸಾಸ್ ಪ್ರವಾಹ: ಕನಿಷ್ಠ 13 ಮಂದಿ ಸಾವು, 20 ಕ್ಕೂ ಹೆಚ್ಚು ಹುಡುಗಿಯರು ನಾಪತ್ತೆ