ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನ್ ಅವರ ಆಡಳಿತದಲ್ಲಿ ನಡೆದ ಬಲವಂತದ ಕಣ್ಮರೆಯಲ್ಲಿ ಭಾರತದ ಪಾತ್ರವಿದೆ ಎಂದು ನಾಪತ್ತೆಗಳ ಕುರಿತು ತನಿಖೆ ನಡೆಸಲು ದೇಶದ ಮಧ್ಯಂತರ ಸರ್ಕಾರ ರಚಿಸಿರುವ ಆಯೋಗವು ಆರೋಪಿಸಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 16 ವರ್ಷಗಳ ಆಡಳಿತದಲ್ಲಿ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವು ಆಯೋಗವೊಂದನ್ನು ರಚಿಸಿತ್ತು. ಶೇಖ್ ಹಸೀನಾ ಆಡಳಿತದಲ್ಲಿ
“ಬಾಂಗ್ಲಾದೇಶದ ಬಲವಂತದ ಕಣ್ಮರೆ ವ್ಯವಸ್ಥೆಯಲ್ಲಿ ಭಾರತೀಯರ ಕೈವಾಡವಿರುವುದು ಸಾರ್ವಜನಿಕ ದಾಖಲೆಯ ವಿಷಯವಾಗಿದೆ” ಎಂದು ಬಲವಂತದ ಕಣ್ಮರೆಯ ಕುರಿತ ತನಿಖಾ ಆಯೋಗ ಹೇಳಿದೆ ಎಂದು ಬಾಂಗ್ಲಾದೇಶದ ಸರ್ಕಾರಿ ಸುದ್ದಿ ಸಂಸ್ಥೆ ಹೇಳಿದೆ.
ಆಗಸ್ಟ್ 27 ರಂದು, ಢಾಕಾದ ಮಧ್ಯಂತರ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಮೈನುಲ್ ಇಸ್ಲಾಂ ಚೌಧರಿ ನೇತೃತ್ವದ ಐದು ಸದಸ್ಯರ ಆಯೋಗವನ್ನು ರಚಿಸಿ, ಶೇಖ್ ಹಸೀನಾ ಅವರ ಅಧಿಕಾರಾವಧಿಯಲ್ಲಿ ಭದ್ರತಾ ಪಡೆಗಳಿಂದ ನಡೆದ ಬಲವಂತದ ಕಣ್ಮರೆಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿತ್ತು. ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ಮತ್ತು ವಿವಿಧ ಗುಪ್ತಚರ ಮತ್ತು ಕಾನೂನು ಜಾರಿ ಏಜೆನ್ಸಿಗಳಿಂದ ಅವರು ಕಣ್ಮರೆಯಾದ ಕಾರಣಗಳನ್ನು ತನಿಖೆ ಮಾಡಲು ಆಯೋಗವನ್ನು ಕೇಳಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಿಸೆಂಬರ್ 14 ರಂದು ಆಯೋಗವು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರಿಗೆ ವರದಿಯನ್ನು ಸಲ್ಲಿಸಿದೆ. ಬಾಂಗ್ಲಾದೇಶ ಮತ್ತು ಭಾರತದ ನಡುವೆ “ಬಂಧಿತರ ವಿನಿಮಯ” ಪ್ರಕ್ರಿಯೆಯ ಬಗ್ಗೆ ಆಯೋಗವು ಗುಪ್ತಚರವನ್ನು ಕಂಡುಕೊಂಡಿದೆ ಎಂದು ಈ ವರದಿ ಹೇಳಿದೆ. ಬಾಂಗ್ಲಾದ ಕಾನೂನು ಜಾರಿ ವಲಯಗಳ ನಿರಂತರ ಸಲಹೆಯ ಮೇರೆಗೆ ಕೆಲವು ಕೈದಿಗಳು ಇನ್ನೂ ಭಾರತೀಯ ಜೈಲುಗಳಲ್ಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಶೇಖ್ ಹಸೀನಾ ಆಡಳಿತದಲ್ಲಿ
“ಭಾರತದಲ್ಲಿ ಬಂಧಿಯಾಗಿ ಜೈಲಿನಲ್ಲಿ ಇರಬಹುದಾದ ಯಾವುದೇ ಬಾಂಗ್ಲಾದೇಶದ ನಾಗರಿಕರನ್ನು ಗುರುತಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕು ಎಂದು ನಾವು ಶಿಫಾರಸು ಮಾಡುತ್ತೇವೆ. ಬಾಂಗ್ಲಾದೇಶದ ಹೊರಗೆ ಇದನ್ನು ತನಿಖೆ ನಡೆಸಲು ಆಯೋಗಕ್ಕೆ ಅಧಿಕಾರವಿಲ್ಲ” ಎಂದು ತನಿಖಾ ಆಯೋಗದ ವರದಿ ಹೇಳಿದೆ.
ಅಷ್ಟೆ ಅಲ್ಲದೆ, ಆಯೋಗವು ಬಲವಂತದ ಕಣ್ಮರೆಯ ಎರಡು ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ. ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಆವರಣದಿಂದ ಅಪಹರಣಕ್ಕೊಳಗಾಗಿ ನಂತರ ಭಾರತೀಯ ಜೈಲಿನಲ್ಲಿ ಸಿಕ್ಕಿದ್ದ ಶುಖ್ರಂಜನ್ ಬಾಲಿ ಹಾಗೂ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ನಾಯಕ ಸಲಾವುದ್ದೀನ್ ಅಹ್ಮದ್ ಅವರ ನಾಪತ್ತೆ ಘಟನೆಯನ್ನು ಅದು ಉಲ್ಲೇಖಿಸಿದೆ. 2015 ರಲ್ಲಿ ಢಾಕಾದ ಉತ್ತರಾದಲ್ಲಿ ತಲೆಮರೆಸಿಕೊಂಡಿದ್ದ ಸಲಾವುದ್ದೀನ್ ಅಹ್ಮದ್ ಅವರನ್ನು ಭಾರತ-ಬಾಂಗ್ಲಾದೇಶ ಗಡಿಗೆ ಸಾಗಿಸಲಾಯಿತು ಮತ್ತು ಅಲ್ಲಿ ಅವರನ್ನು ಭಾರತದ ಕಡೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ವರದಿ ಉಲ್ಲೇಖಿಸಿದೆ.
ಔಪಚಾರಿಕ ಹಸ್ತಾಂತರ, ಮಾರುವೇಷದಲ್ಲಿ ಬಾಂಗ್ಲಾದೇಶದ ಭದ್ರತಾ ಸಿಬ್ಬಂದಿಯೊಂದಿಗೆ ಭಾರತದ ಭೂಪ್ರದೇಶದೊಳಗಿನ ಕಾರ್ಯಾಚರಣೆಗಳು ಎರಡು ಸರ್ಕಾರಗಳು ಮತ್ತು ಅವರ ಭದ್ರತಾ ಪಡೆಗಳ ನಡುವಿನ ಉನ್ನತ ಮಟ್ಟದ ಸಮನ್ವಯವನ್ನು ಸೂಚಿಸುತ್ತದೆ ಎಂದು ವರದಿ ಆರೋಪಿಸಿದೆ.
ಬಲವಂತದ ಕಣ್ಮರೆಗಳ ಬಗ್ಗೆ 1,676 ದೂರುಗಳನ್ನು ದಾಖಲಿಸಲಾಗಿದೆ ಎಂದು ಆಯೋಗವು ಹೇಳಿದ್ದು, ಈ ಪೈಕಿ 758 ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ ಎಂದು ಅದು ತಿಳಿಸಿದೆ. ಅದಾಗ್ಯೂ, ಬಾಂಗ್ಲಾದೇಶದಲ್ಲಿ ಬಲವಂತದ ಕಣ್ಮರೆಗಳ ಸಂಖ್ಯೆ 3,500 ದಾಟಿರಬಹುದು ಎಂದು ಅದು ಹೇಳಿದ್ದು, ಮಾನವ ಹಕ್ಕುಗಳ ದುರುಪಯೋಗದ ಆರೋಪ ಹೊತ್ತಿರುವ ಭಯೋತ್ಪಾದನಾ ವಿರೋಧಿ ಸಂಘಟನೆ ರಾಪಿಡ್ ಆಕ್ಷನ್ ಬೆಟಾಲಿಯನ್ ಅನ್ನು ವಿಸರ್ಜಿಸುವಂತೆ ವರದಿ ಶಿಫಾರಸು ಮಾಡಿದೆ.
ವರದಿ ಕುರಿತ ಹೇಳಿಕೆಯಲ್ಲಿ ಆಯೋಗದ ಅಧ್ಯಕ್ಷ ಚೌಧರಿ ಅವರು, “ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ರಕ್ಷಣಾ ಸಲಹೆಗಾರ, ಮೇಜರ್ ಜನರಲ್ (ನಿವೃತ್ತ) ತಾರಿಕ್ ಅಹ್ಮದ್ ಸಿದ್ದಿಕ್ ಸೇರಿದಂತೆ ಭದ್ರತಾ ಪಡೆಗಳ ಮತ್ತು ಅವರ ಸರ್ಕಾರದ ಕೆಲವು ಉನ್ನತ ಮಟ್ಟದ ಅಧಿಕಾರಿಗಳು ಬಲವಂತದ ಕಣ್ಮರೆ ಪ್ರಕರಣಗಳಲ್ಲಿ ಪ್ರಾಥಮಿಕವಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅದಾಗ್ಯೂ, ಅವಾಮಿ ಲೀಗ್ ಸರ್ಕಾರವು ಬಲವಂತದ ಕಣ್ಮರೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂಬ ಆರೋಪವನ್ನು ಶೇಖ್ ಹಸೀನಾ ಈ ಹಿಂದೆ ಸತತವಾಗಿ ನಿರಾಕರಿಸಿದ್ದಾರೆ. ಹಸೀನಾ ರಾಜೀನಾಮೆ ನೀಡಿ ಆಗಸ್ಟ್ 5 ರಂದು ಭಾರತಕ್ಕೆ ಬಂದಿಳಿದ ನಂತರ ಆಗಸ್ಟ್ 8 ರಂದು ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಯೂನಸ್ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ: ‘ಪುಷ್ಪ-2’ ಕಾಲ್ತುಳಿತ ಪ್ರಕರಣ : ಸಿಎಂ ರೇವಂತ್ ರೆಡ್ಡಿ- ನಟ ಅಲ್ಲು ಅರ್ಜುನ್ ನಡುವೆ ತಾರಕಕ್ಕೇರಿದ ವಾಗ್ಯುದ್ಧ
‘ಪುಷ್ಪ-2’ ಕಾಲ್ತುಳಿತ ಪ್ರಕರಣ : ಸಿಎಂ ರೇವಂತ್ ರೆಡ್ಡಿ- ನಟ ಅಲ್ಲು ಅರ್ಜುನ್ ನಡುವೆ ತಾರಕಕ್ಕೇರಿದ ವಾಗ್ಯುದ್ಧ


