ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್ ಅವರ ಸಂಸ್ಥೆ ಹಾಗೂ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿದೆ.
ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿದ್ದಾರೆಂದು ದೆಹಲಿಯ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಹರ್ಷ ಮಂದರ್ ಅವರ ಮೇಲೆ ಕಳೆದ ಫೆಬ್ರುವರಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಅದರ ಭಾಗವಾಗಿ ಇಂದು ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ.
ವಸಂತ್ ಕುಂಜ್‌ನಲ್ಲಿನ ಮಂದರ್ ಅವರ ಮನೆ ಹಾಗೂ ಅದ್ಚುನಿಯಲ್ಲಿನ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ (ಸಿಇಎಸ್) ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಎರಡು ಮಕ್ಕಳ ಗೃಹಗಳು ಮಂದರ್ ಅವರ ಎನ್‌ಜಿಒ ವತಿಯಿಂದ ನಡೆಯುತ್ತಿವೆ.
ಜರ್ಮನಿಯ ಬರ್ಲಿನ್‌ನ ರಾಬರ್ಟ್ ಬಾಷ್ ಅಕಾಡೆಮಿಯಲ್ಲಿ ಆರು ತಿಂಗಳ ಫೆಲೋಶಿಪ್ ತೆಗೆದುಕೊಂಡಿರುವ ಮಂದರ್ ಮತ್ತು ಅವರ ಪತ್ನಿ, ಜರ್ಮನಿಗೆ ತೆರಳಿದ ಕೆಲವು ಗಂಟೆಗಳ ನಂತರ ದಾಳಿಗಳನ್ನು ನಡೆಸಲಾಗಿದೆ. ವಸಂತ್ ಕುಂಜ್‌ನ ನಿವಾಸದಲ್ಲಿ ಮಂದರ್ ಅವರ ಮಗಳು ಮತ್ತು ಅವರ ಅಳಿಯ ಇದ್ದರು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಸೂಚನೆಯಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಂದರ್ ಅವರು ನಡೆಸುತ್ತಿರುವ ಎರಡು ಮಕ್ಕಳ ಮನೆಗಳಾದ ‘ಉಮೀದ್ ಅಮರ್ ಖರ್ (ಗುಂಡುಮಕ್ಕಳಿಗೆ), ಖುಷಿ ರೈನ್‌ಬೋ ಮನೆ (ಹೆಣ್ಣುಮಕ್ಕಳಿಗೆ)’ ಹಣಕಾಸಿನ ಅಕ್ರಮಗಳಲ್ಲಿ ಭಾಗಿಯಾಗಿವೆ ಎಂದು ಆರೋಪಿಸಲಾಗಿದೆ.
ಆಯೋಗದ ಆರೋಪವನ್ನು ಮಂದರ್ ಅಲ್ಲಗಳೆದಿದ್ದರು. ಜಾರಿ ನಿರ್ದೇಶನಾಲಯದ ದಾಳಿ ಸಂಬಂಧ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, “ಹರ್ಷ ಮಂದರ್ ಮಧ್ಯಪ್ರದೇಶದಲ್ಲಿ ಐಎಎಸ್ ಕೇಡರ್ ಅಧಿಕಾರಿಯಾಗಿದ್ದಾಗಿನಿಂದ ಹಿಡಿದು ಸುಮಾರು ನಲವತ್ತು ವರ್ಷಗಳಿಂದ ನಾನು ಅವರು ನೋಡುತ್ತಿದ್ದೇನೆ. ಅವರು ಅತ್ಯಂತ ಸೂಕ್ಷ್ಮ ವ್ಯಕ್ತಿ” ಎಂದಿದ್ದಾರೆ.
ಮಂದರ್ ಪರ ಸಹಿ ಅಭಿಯಾನ
ಹರ್ಷ ಮಂದರ್ ಅವರ ಮನೆ ಹಾಗೂ ಇಕ್ವಿಟಿ ಸೆಂಟರ್ ಮೇಲೆ ಇ.ಡಿ. ದಾಳಿ ಮಾಡಿರುವುದನ್ನು ಅನೇಕರು ಖಂಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಹಿ ಸಂಗ್ರಹ ಅಭಿಯಾನ ಕೈಗೊಂಡಿದ್ದಾರೆ.
“ಹರ್ಷ ಮಂದರ್ ಮತ್ತು ಅವರ ಇಕ್ವಿಟಿ ಅಧ್ಯಯನ ಕೇಂದ್ರದ ಮೇಲೆ ಮೊದಲಿನಿಂದಲೂ ಕಿರುಕುಳ ನಡೆಯುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸುಳ್ಳು ಆಪಾದನೆಯನ್ನು ಹೊರಿಸಿದೆ. ಆರ್ಥಿಕ ಅಪರಾಧಗಳ ವಿಭಾಗ, ಐಟಿ ಇಲಾಖೆಯಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ” ಎಂದು ವಿಷಾದಿಸಿದ್ದಾರೆ.
ಎಂಕೆಎಸ್‌ಎಸ್‌ನ ಅರುಣ್ ರಾಯ್, ಯೋಜನಾ ಆಯೋಗದ ಮಾಜಿ ಸದಸ್ಯರಾದ ಡಾ.ಸೈಹಿದಾ ಅಮೀದ್, ಆರ್ಥಶಾಸ್ತ್ರಜ್ಞ ಪ್ರೊ.ಜೀನ್ ಡ್ರೋಜ್, ಪ್ರೊ.ಅಪೂರ್ವನಂದ್, ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಪಿಯುಸಿಎಲ್‌ನ ಜನರಲ್ ಸೆಕರೆಟ್ರರಿ ಡಾ.ವಿ.ಸುರೇಶ್, ಪಿಯುಸಿಎಲ್ ಅಧ್ಯಕ್ಷ ರವಿಕಿರಣ್ ಜೈನ್ ಸೇರಿದಂತೆ ನೂರಾರು ಮಂದಿ ಸಹಿಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ನಿಮ್ಮ ಮಾತನ್ನು ಈಗ ಕೇಳುವುದಿಲ್ಲ: ಹರ್ಷಮಂದರ್ PIL ತಿರಸ್ಕರಿಸಿದ ಸುಪ್ರೀಂ


