ರಾಜ್ಯ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಸರ್ಕಾರ ಉಳಿದೆ ಉಳಿಯುತ್ತೆ, ವಿಶ್ವಾಸಮತ ಯಾಚನೆ ಮಾಡುತ್ತೇನೆ ಅನ್ನೊ ಕಾನ್ಫಿಡೆನ್ಸಿನಲ್ಲಿ ಕುಮಾರಸ್ವಾಮಿ ಮಾತಾಡುತ್ತಿದ್ದರೆ, ಅತ್ತ ಬಿಜೆಪಿ ಅದಾಗಲೆ ಸಚಿವ ಸಂಪುಟದ ಲಿಸ್ಟನ್ನೆ ತಯಾರಿ ಮಾಡಿಕೊಂಡು ಕೂತ ವರ್ತಮಾನ ಕೇಳಿಬರುತ್ತಿದೆ.
ಈ ನಡುವೆ ಜೆಡಿಎಸ್.ನ ಸಾರಾ ಮಾಹೇಶ್ ನಿನ್ನೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಈಶ್ವರಪ್ಪರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಯಾಕೆಂದರೆ ಸಾರಾ ಮಹೇಶ್ ಕೇವಲ ಜೆಡಿಎಸ್ ಪಕ್ಷದ ಮಾಮೂಲಿ ಶಾಸಕರಷ್ಟೆ ಅಲ್ಲ, ಕುಮಾರಸ್ವಾಮಿ ಅತ್ಯಾಪ್ತ. ಕುಮಾರಸ್ವಾಮಿಯ ಅಷ್ಟೂ ಫೈನಾನ್ಷಿಯಲ್ ಬೇಕು ಬೇಡಗಳನ್ನು ಈಡೇರಿಸುತ್ತಿರೋದು ಇದೇ ಮಹೇಶ್. ಹಾಗಾಗಿ ಸರ್ಕಾರದ ಆಡಳಿತದಲ್ಲಿ ಸಾರಾ ಮಹೇಶ್ ವಿಪರೀತ ಹಸ್ತಕ್ಷೇಪ ಮಾಡುತ್ತಿರುವ ಅರೋಪಗಳೂ ಕೇಳಿಬಂದಿದ್ದವು.
ಈಗ ಅತೃಪ್ತ ಅವಾಂತರಿಯಾಗಿ ಬಾಂಬೆ ಸೇರಿಕೊಂಡಿರುವ ಎಚ್.ವಿಶ್ವನಾಥ್ ಗೆ ಇರುವ ಅಸಮಾಧಾನಗಳಲ್ಲಿ ಸಾರಾ ಫ್ಯಾಕ್ಟರ್ ಕೂಡಾ ಒಂದು. ಅಂಥಾ ವ್ಯಕ್ತಿ ಈ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ಭೇಟಿ ಆಗಿರುವುದರ ಹಿಂದೆ ಒಂದು ರಾಜಕೀಯ ಲೆಕ್ಕಾಚಾರ ಇರಲೇಬೇಕಲ್ಲವಾ?
ಆ ಭೇಟಿಯನ್ನು ಅರ್ಥೈಸುವ ಹೊಸ ಚರ್ಚೆಯೊಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಮಂತ್ರಿ ಕಂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರೆ ಕುದ್ದಾಗಿ ಈ ಆಪರೇಷನ್ ಹಿಂದೆ ಕೆಲಸ ಮಾಡುತ್ತಿರೋದ್ರಿಂದ ಹೇಗೂ ಈ ಮೈತ್ರಿ ಸರ್ಕಾರ ಉಳಿಯಲಾರದು ಎಂಬ ತೀರ್ಮಾನಕ್ಕೆ ಬಂದಿರುವ ದೇವೇಗೌಡರು ಇದೀಗ ಹೊಸ ದಾಳ ಉರುಳಿಸಿದ್ದಾರೆ ಎನ್ನುತ್ತಿದೆ ಈ ವಾದ.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಹಿಂದೆ ತಮ್ಮ ಜೊತೆ ಜಟಾಪಟಿ ಮಾಡಿಕೊಂಡಿದ್ದ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ದೂರ ಇಡುವ ಸಲುವಾಗಿ ಈಶ್ವರಪ್ಪರನ್ನು ಸಿಎಂ ಮಾಡುವ ಪ್ರಸ್ತಾಪವನ್ನು ಗೌಡರು ಚಲಾವಣೆಗೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈಶ್ವರಪ್ಪ ಸಿಎಂ ಆಗುವುದಾದರೆ, ಜೆಡಿಎಸ್ ಪಕ್ಷವು ಬಿಜೆಪಿಗೆ ಬಾಹ್ಯ ಬೆಂಬಲ ನೀಡುತ್ತದೆ ಎಂಬ ಸಂದೇಶವನ್ನು ತಲುಪಿಸುವುದಕ್ಕೆಂದೆ ಸಾರಾ ಮಹೇಶ್ ಮುರಳೀಧರ್ ರಾವ ಮತ್ತು ಈಶ್ವರಪ್ಪರನ್ನು ಭೇಟಿಯಾಗಿದ್ದು ಎನ್ನಲಾಗುತ್ತಿದೆ. ಆ ಭೇಟಿಯ ಬೆನ್ನಲ್ಲೇ ಮುರಳೀಧರ್ ರಾವ್ ಅತ್ತ ಹೈದ್ರಾಬಾದ್ ಸೇರಿಕೊಂಡರೆ, ಇತ್ತ ಈಶ್ವರಪ್ಪ ಯಾರ ಸಂಪರ್ಕಕ್ಕು ನಿಲುಕದೆ ಇರುವುದು ಯಡ್ಯುರಪ್ಪನವರನ್ನು ತಬ್ಬಿಬ್ಬಾಗುವಂತೆ ಮಾಡಿದೆ ಅನ್ನೋದು ಲೇಟೆಸ್ಟ್ ವರ್ತಮಾನ.
ಈ ಹಿಂದೆ ಟ್ವೆಂಟಿ ಟ್ವೆಂಟಿ ಸರ್ಕಾರದಲ್ಲಿ ಜೆಡಿಎಸ್ ಮಾಡಿದ್ದ ನಂಬಿಕೆದ್ರೋಹವನ್ನು ಮರೆತಿಲ್ಲದ ಬಿಜೆಪಿ ಸುತಾರಾಂ ದೇವೆಗೌಡರ ಈ ಪ್ರಸ್ತಾಪವನ್ನು ಒಪ್ಪೋದಿಲ್ಲ ಎಂದು ಒಂದು ಬಣ ಹೇಳಿದರೆ, ಪಕ್ಷದೊಳಗೇ ಯಡಿಯೂರಪ್ಪಗೆ ಸಿಎಂ ಸೀಟು ತಪ್ಪಿಸಬೇಕೆಂದು ತಂತ್ರ ಹೂಡಿರುವ ಮತ್ತೊಂದು ಬಣ, ಶಾಸಕರ ರಾಜೀನಾಮೆ-ಅನರ್ಹತೆ, ಸ್ಪೀಕರ್, ಸುಪ್ರಿಂ ಕೋರ್ಟ್ ಜಂಜಡ, ಅವರಿಗೆ ಮಂತ್ರಿಗಿರಿ ಕೊಡುವ ಇಕ್ಕಟ್ಟಿಗಿಂತ ಇದೇ ವಾಸಿ ಎಂದು ವಾದಿಸುತ್ತಿರೋದಾಗಿ ಕೇಳಿಬಂದಿದೆ.
ಕರ್ನಾಟಕದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಯಾವುದನ್ನೂ ತಳ್ಳಿ ಹಾಕುವಂತಿಲ್ಲ.


