’ನನ್ನ ಮಗನಿಗೆ ಈಗೀಗ ಯಾಕೋ ಒಸಿ ಮೈಗೆ ಸರಿಯಿಲ್ಲ. ರಾತ್ರಿ ಎಲ್ಲಾ ನಿದ್ರೇನೇ ಮಾಡಲ್ಲ. ನರಳಾಡ್ತಿರ್ತಾನೆ. ಯಾವ ದೇವ್ರಿಗೆ ಹರಸ್ಕೊಂಡ್ರೂ, ಯಾವ ದೇವ್ರಿಗೆ ಹೋದ್ರೂ ಏನೂ ಪ್ರಯೋಜನ ಆಗ್ತಿಲ್ಲ’ ಅಂತ ನಮ್ಮಮ್ಮ ನನ್ನನ್ನ ತೊಡೆಮೇಲೆ ಮಲಗಿಸಿಕೊಂಡು ತಲೆಮೇಲೆ ಕೈ ಆಡಿಸ್ತಾ, ಪಕ್ಕದ್ಮನೆ ಶಿವಮ್ಮನ ಜೊತೆ ಹೇಳ್ತಿದ್ಲು. ’ನೋಡು ಸಾವಿತ್ರಿ ಇಂಥವುಕ್ಕೆಲ್ಲಾ ದೇವ್ರು ದಿಂಡ್ರು ಪ್ರಯೋಜನಕ್ಕೆ ಬರಲ್ಲ. ಏನಾಗಿದೆ ಅಂತ ನಾನೇ ನೋಡ್ತಿನಿ ಇರು. ಮುಸ್ಸಂಜೆ ಹೊತ್ತಿಗೆ ಕರ್ಕೊಂಡ್ ಬಾ’ ಅಂದ್ರು.
ಆಗ ನಾನಿನ್ನೂ ಆರನೇ ಕ್ಲಾಸು. ನನ್ನ ಮಾತಿಗೆ ಅಲ್ಲಿ ಬೆಲೆನೂ ಇರ್ಲಿಲ್ಲ, ಸರೀಗೆ ಮಾತಾಡೋಕೂ ಬರ್ತಿರ್ಲಿಲ್ಲ. ಇದಕ್ಕೆಲ್ಲಾ ದೆವ್ವಾನೇ ಕಾರಣ ಅಂತ ಹೇಳೋಕೆ ಇದ್ನೆಲ್ಲಾ ಮಾಡ್ತಿದಾರೆ ಅಂತ ಮಾತ್ರ ಗೊತ್ತಾಗ್ತಿತ್ತು.
ಆವಮ್ಮ ಹೇಳ್ದಂಗೆ ಒಂದೆರಡು ಹಿಡಿ ಬೇವಿನ ಸೊಪ್ಪು, ಅರಿಶಿನ-ಕುಂಕುಮ, ಎರಡು ಬಿಂದಿಗೆ ನೀರು ಇನ್ನೂ ಏನೇನೋ ತಗೊಂಡು ಮನೆಹತ್ರ ಹೋದ್ವಿ. ಹೋದ ತಕ್ಷಣ ನನ್ನನ್ನು ಮನೆಮುಂದೆ ಉತ್ತರದಿಕ್ಕಿನ ಕಡೆಗೆ ಮುಖ ಮಾಡಿ ಕೂರ್ಸಿದ್ರು. ಒಂದು ಚೊಂಬಲ್ಲಿ ನೀರು ತುಂಬುಸ್ಕೊಂಡು ಅದರ ಬಾಯಿಮೇಲೆ ಅಂಗೈ ಇಟ್ಟು ಕಣ್ಣು ಮುಚ್ಕೊಂಡು ಶಬ್ದ ಮಾಡ್ದೇ, ಏನೋ ಬೈಯ್ತಿರೋ ಥರ ಇತ್ತು. ಆದ್ರೆ ಅದು ನನಗಾ, ದೆವ್ವಕ್ಕಾ ಅಂತ ಗೊತ್ತಾಗ್ತಿರ್ಲಿಲ್ಲ. ಬೈದು ಮುಗುದ್ಮೇಲೆ ಆ ನೀರನ್ನ ಕೆಳಗಿಟ್ಟು ಒಂದು ಹಿಡಿ ಬೇವಿನ ಸೊಪ್ಪು ತಗೊಂಡು ಮತ್ತೆ ಕಣ್ಣುಮಚ್ಚಿದ್ರು. ಈಸರಿ ಅವ್ರು ಜೋರಾಗೇ ಹೇಳ್ತಿದ್ದಿದ್ರಿಂದ ಅವ್ರು ಏನ್ ಹೇಳ್ತಿದಾರೆ ಅಂತ ಕೇಳಿಸ್ತಿತ್ತು. ನಾನು ಕಣ್ಣು ಮುಚ್ಕೊಂಡಿದ್ದೆ. ’ಈ ಅರಿಯದ ಹುಡುಗನ ಮೈಮೇಲೆ ಬಂದಿರೋದು ಯಾರು, ಯಾಕೆ ಅಂತ ಗೊತ್ತಾಗ್ದಿದ್ರೆ ನಾನ್ ಏನ್ ಮಾಡ್ತಿನೋ ನಂಗೇ ಗೊತ್ತಿಲ್ಲ’ ಅಂದ್ರು. ಹೌದು, ಅದು ನಿಜ ಅಂತ ಸ್ವಲ್ಪ ಹೊತ್ತಲ್ಲೇ ನನಗೆ ಗೊತ್ತಾಗಿತ್ತು!?
ಅರ್ಧ ಗಂಟೆ ಹಿಂಗೆ ಏನೇನೋ ಮಾಡಿ ಆಮೇಲೆ ನನ್ನ ಹಣೆ, ಮುಂಗೈ, ಕಾಲಿಗೆ ಅರಿಶಿಣ ಕುಂಕುಮ ಇಟ್ಟು, ಕಣ್ಣು ಮುಚ್ಚು ಅಂದ್ರು. ಮುಚ್ಚಿದೆ. ಯಾರೋ ಕಡ್ಡಿ ಪೊರಕೇಲಿ ಮುಖಕ್ಕೆ ಹೊಡ್ದಂಗಾಯ್ತು. ಚೊಂಬಲ್ಲಿ ತುಂಬಿದ್ದ ನೀರು ತಗೊಂಡು ರಪ್ಪಂತ ಮುಖಕ್ಕಿ ರಾಚಿಸಿದ್ರು. ’ಅದು ನೀರು’ ಅಂತ ಕಣ್ಣು ಬಿಟ್ಟಾಗ್ಲೇ ಗೊತ್ತಾಗಿದ್ದು. ಅಷ್ಟು ಜೋರಾಗಿ ಬಿದ್ದಿತ್ತು ಏಟು. ಈ ನೋವನ್ನೇ ತಡ್ಕೊಳೋಕಾಗ್ತಿರ್ಲಿಲ್ಲ, ಅಷ್ಟರಲ್ಲೇ ಬೇವಿನ ಸೊಪ್ಪಲ್ಲೂ ಅದೇಥರ ಏಟು ಬಿತ್ತು. ’ನೀರು ಹಾಕಿ ಹೊಡೆಯೋದು’ ಅಂದ್ರೆ ಇದೇ ಇರ್ಬೇಕು. ಆಮೇಲೆ ಅಮ್ಮನ ಜೊತೆ ಏನೋ ಮಾತಾಡ್ತಿದ್ರು. ಮುಗೀತು ಅಂತ ಅನ್ಕೊಂಡೆ.
ಆದ್ರೆ ಈಗ ಮಾಡಿದ್ದು ಟ್ರಯಲ್ ಅಂತ ಸ್ವಲ್ಪ ಹೊತ್ತಲ್ಲೇ ಗೊತ್ತಾಯ್ತು. ಮತ್ತೆ ಶುರುವಾಯ್ತು, ನೀರು ಹಾಕಿ ಹೊಡೆಯೋ ಸಂಪ್ರದಾಯ. ಎರಡು ಬಿಂದಿಗೆ ನೀರು ಖಾಲಿ ಆಯ್ತು, ಬೇವಿನ ಸೊಪ್ಪಲ್ಲಿ ಸೊಪ್ಪೇ ಇರ್ಲಿಲ್ಲ, ಬರೀ ಕಡ್ಡಿ ಇದ್ವು. ಅಷ್ಟು ಏಟು ಬಿದ್ದಿತ್ತು, ಬರೀ ಮುಖಕ್ಕೆ! ಬೇಡ ಅಂತ ಹಠ ಮಾಡಿದ್ರೆ ಎಲ್ಲಿ ಇನ್ನೂ ಜಾಸ್ತಿ ಆಗುತ್ತೋ ಅಂತ ಹಲ್ಲು ಕಚ್ಕೊಂಡು ಸುಮ್ನಿದ್ದೆ. ಆದ್ರೆ ಕಣ್ಣೀರು ನನ್ನ ಮಾತು ಕೇಳ್ತಿರ್ಲಿಲ್ಲ. ಅದು ’ಅಳು’ ಅಂತಾನೂ ಗೊತ್ತಾಗ್ತಿರ್ಲಿಲ್ಲ, ನೀರು ಎರಚಿದ್ರಲ್ಲ ಮುಖಕ್ಕೆ! ಶಿವಮ್ಮ ನಮ್ಮಮ್ಮನ್ನ ಕರೆದು “ಇದು ಗಾಳಿ ಕೆಲ್ಸ, ಇದ್ಕೆ ಸರಿಯಾಗಿ ಮಾಡವ್ರು ನಂಗೆ ಗೊತ್ತು. ನಾನ್ ಹೇಳ್ತಿನಿ ಅಲ್ಲಿಗೆ ಹೋಗು” ಅಂದ್ರು. ಮೈಮೇಲೆ ದೆವ್ವ ಇದಿಯೋ-ಇಲ್ವೋ ಅಂತ ತಿಳ್ಕೊಳೋಕೆ ಇಷ್ಟೆಲ್ಲಾ ಅಂತ ಗೊತ್ತಾಯ್ತು, ಇನ್ನೇನು ಕೊನೆಯ ಹಂತ ತಲುಪಿದ್ವಿ ಅಂತಾನೂ ಗೊತ್ತಾಗ್ತಿತ್ತು. ಇದೆಲ್ಲಾ ಮುಗಿಯೋ ಹೊತ್ತಿಗೆ ರಾತ್ರಿ ಊಟದ ಸಮಯ ಆಗಿತ್ತು.

ಮಾರನೇ ದಿನ ದುಡ್ಡು ಹೊಂದಿಸ್ಕೊಂಡು, ಕೆ ಆರ್ ನಗರದಿಂದ ಸಾಲಿಗ್ರಾಮಕ್ಕೆ ಹೋಗುವಾಗ, ಮಿರ್ಲೆ ಮಾರ್ಗದಲ್ಲಿ ಸಿಗುವ ನಾಟನಹಳ್ಳಿಗೆ ಹೊರಟಿದ್ವಿ. ಇಲ್ಲಿ ಏನೇನು ಕಾದಿದೇಯೋ ಅನ್ಕೊಂಡು ಭಯದಲ್ಲೇ ನಾನೂ ಹೊರಟಿದ್ದೆ. ಶಿವಮ್ಮ ಸರಿಯಾಗಿ ಮಾಹಿತಿ ಕೊಟ್ಟಿದ್ದರಿಂದ, ಜೊತೆಗೆ ನಾಟನಹಳ್ಳಿಯವನು ಶಿವಮ್ಮನಿಗೆ ಪರಿಚಯ ಇದ್ದಿದ್ರಿಂದ ಅವರ ಮನೆಗೆ ಸರಿಯಾಗೇ ತಲುಪಿದ್ವಿ.
ನಮ್ಮನ್ನ ಒಳಗೆ ಕರೆದು ಕೂರ್ಸಿದ್ರು. ತುಂಬಾ ಹೊತ್ತಾದ್ಮೇಲೆ ಒಬ್ಬ ಐವತ್ತರವನು ಬಂದು ನಮಗಿಂತ ಮೊದಲು ಬಂದಿದ್ದ ಒಂದಿಬ್ಬರಿಗೆ ಪರಿಹಾರ ಹೇಳಿ ಕಳುಹಿಸಿದ. ನನಗೋ ’ದೆವ್ವ ಇದಿಯಾ ಇಲ್ವಾ ಅಂತ ತಿಳ್ಕೊಳೋಕೇ ಅರೆಜೀವ ಮಾಡ್ಬಿಟ್ಟಿದ್ರು. ಇನ್ನು ಈಗ ಇದೆ ಅಂತ ಗೊತ್ತಾಗಿದೆ. ಇನ್ನೇನು ಕಾದಿದೆಯೋ’ ಅಂತ ಯೋಚ್ನೆ ಹತ್ತಿತ್ತು. ಆದರೆ ನೋಡೋಕೆ ಸ್ವಾಮೀಜಿ/ಮಂತ್ರವಾದಿಗೆ ಇರಬೇಕಾದ ಯಾವ ಲಕ್ಷಣವೂ ಅವನಲ್ಲಿ ಇರಲಿಲ್ಲ. ಹಂಗಾಗಿ ಇವನಿಂದ ನನ್ನ ಪ್ರಾಣಕ್ಕೇನೂ ಅಪಾಯವಿಲ್ಲ ಅಂತ ಸಮಾಧಾನ ಮಾಡ್ಕೊಂಡೆ.
ಈಗ ನಮ್ಮ ಸರದಿ. ಸಂಪ್ರದಾಯದಂತೆ ಎಲೆ-ಅಡಿಕೆಯ ಮೇಲೆ ಹತ್ತುರೂಪಾಯಿ ದಕ್ಷಿಣೆ ಇಟ್ಟಮೇಲೇ ನಮ್ಮ ಸಮಸ್ಯೆಯನ್ನು ಕೈಗೆತ್ತಿಕೊಂಡಿದ್ದು. ನಮಗೆ ಏನು ತೊಂದ್ರೆ ಅಂತಾನೂ ಕೇಳದೇ, ನನ್ನ ಮುಖ ನೋಡಿ ಆಪ್ತಮಿತ್ರ ಸಿನಿಮಾದ ಅವಿನಾಶ್ ಥರ (ಆಚಾರ್ಯರು) ಮುಖ ಮಾಡ್ಕೊಂಡು ’ಖಂಡಿತ ಸಮಸ್ಯೆ ಇದೆ’ ಅಂದ್ರು. ನಮ್ಮಮ್ಮ ’ಅದ್ಕೆ ಅಲ್ಲುವ್ರಾ ನಿಮ್ಮತ್ರ ಬಂದಿರೋದು’ ಅಂದ್ರು. ಅದಕ್ಕೆ ಆ ಮಾಡ್ರನ್ ಸ್ವಾಮೀಜಿ ’ಸರಿಯಾದ ಸಮಯಕ್ಕೆ ಬಂದಿದ್ದೀರಿ. ಸ್ವಲ್ಪ ತಡವಾಗಿದ್ರೂ ದೊಡ್ಡ ಅನಾಹುತ ಆಗ್ಬಿಡ್ತಿತ್ತು’ ಅಂದು, ಒಂದು ಲೋಟದಲ್ಲಿ ನೀರು ತುಂಬಿ, ಅದರ ಮೇಲೆ ಒಂದು ಅಗರಬತ್ತಿ ಹತ್ತಿಸಿಟ್ಟರು. ಅದ್ರಿಂದ ಬರ್ತಿದ್ದ ಹೊಗೆಗೆ ಒಂದು ನಿಂಬೆಹಣ್ಣು ಹಿಡ್ಕೊಂಡು ಕಣ್ಣು ಮುಚ್ಕೊಂಡು ಒಂದೇ ಕೈಲಿ ಹಿಸುಕ್ತಿದ್ರು, ಜೂಸ್ ಮಾಡೋಕೆ ಹಿಸ್ಕೋಥರ. ಆಮೇಲೆ ಕಣ್ಣುಬಿಟ್ಟು ನನ್ನನ್ನೇ ಸ್ವಲ್ಪಹೊತ್ತು ನೋಡಿ, ನಮ್ಮಮ್ಮನ ಕಡೆ ತಿರುಗಿ “ಇವ್ನು ಈಗ ಮೂರು ತಿಂಗಳ ಹಿಂದೆ ಸೈಕಲ್ ಓಡುಸ್ಕೊಂಡು ಒಂದು ತೋಟದತ್ರ ಹೋಗಿ ಅಲ್ಲಿ ಬಿದ್ದಿದಾನೆ. ಆಗ ಅಲ್ಲೇ ಓಡಾಡ್ತಿದ್ದ ಒಂದು ಹುಡುಗಿಯ ಆತ್ಮ ಇವನನ್ನು ಎಬ್ಬಿಸಿ ಬೆನ್ನುತಟ್ಟಿ ಕಳುಹಿಸಿದೆ. ಆದರೆ ಯಾಕೋ ಗೊತ್ತಿಲ್ಲ ಇವನು ಇಷ್ಟ ಆಗಿ ಇವನ ಹಿಂದೆನೇ ಬಂದುಬಿಟ್ಟಿದೆ” ಅಂದು ಮಾತು ಮುಗಿಸೋ ಅಷ್ಟ್ರಲ್ಲಿ ನಮ್ಮಮ್ಮ ಭಯದಿಂದ “ಅಯ್ಯೋ ಸ್ವಾಮಿ, ಇದ್ಕೆ ಪರಿಹಾರ ಏನೂ ಇಲ್ವಾ ಅಂತ ಕೇಳ್ತಿದ್ದಂಗೆನೆ ಆ ಸ್ವಾಮೀಜಿ “ಇದೆ, ಇರಮ್ಮ ಹೇಳ್ತಿನಿ” ಅಂದ್ರು.
ನಾನು ಕಣ್ಣು-ಬಾಯಿ ಬಿಡ್ತಾ ಸುಮ್ನೆ ಕೂತಿದ್ದೆ. ಆಮೇಲೆ “ನೋಡಮ್ಮ, ಈ ಮಗುವಿನ ಮೈಮೇಲೆ ಆ ಆತ್ಮ ಇನ್ನೂ ಪೂರ್ತಿ ಇಳ್ದಿಲ್ಲ. ಹಂಗಾಗಿ ತೊಂದ್ರೆ ಏನೂ ಇಲ್ಲ. ನಾನ್ ಹೇಳಿದ್ನ ಮಾಡಿದ್ರೆ ಸಾಕು. ನಿಮ್ಮ ಮನೆಯ ಹಿಂದೆ ಒಂದು ತೇಗದ ತೋಟ ಇದೆ, ಅದರ ದಕ್ಷಿಣಕ್ಕೆ ಒಂದು ಎಕ್ಕದ ಗಿಡ ಇದೆ. ಅಮಾವಾಸ್ಯೆಯ ದಿನ ಮುಸ್ಸಂಜೆ ಹೊತ್ತಿಗೆ ಮೊಸರನ್ನ ಮಾಡಿ ಇವನ ಕೈಗೆ ಕೊಟ್ಟು, ಒಬ್ಬನೇ ಹೋಗಿ ಇಟ್ಟು, ತಿರುಗಿ ನೋಡದೇ ಬರಲು ಹೇಳಿ. ಅದನ್ನು ತಿಂದು ತೃಪ್ತಿಯಾದ ಆತ್ಮ ಇವನನ್ನು ಬಿಟ್ಟು ಹೋಗುತ್ತದೆ” ಎಂದರು. ಮಾತು ಕಥೆ ಎಲ್ಲಾ ಮುಗಿದ ಮೇಲೆ ಅಮ್ಮ ಪರಿಹಾರ ಮಾಡೋಕೆ ಒಪ್ಕೊಂಡು ಇನ್ನೇನು ಹೊರಡಬೇಕು ಅನ್ನುವಾಗ “ಇವನಿಗೆ ಹಸಿವಾಗ್ತಿದೆ ಅನ್ಸುತ್ತೆ” ಅಂತ ಅಲ್ಲೇ ಕೂರ್ಸಿ ಒಂದು ದೊಡ್ಡ ತಟ್ಟೇಲಿ ಅನ್ನ, ಅವರೇ ಕಾಳು-ಸೀಗಡಿ ಸಾಂಬಾರು ಹಾಕಿ ಮುಂದೆ ಇಟ್ಟರು. ಸದ್ಯ ಮುಗೀತಲ್ಲ ಅಂತ ಖುಷಿಯಾಗಿದ್ದ ನನಗೆ ಇಂಥಾ ಆಘಾತ ಆಗುತ್ತೆ ಅನ್ಕೊಂಡಿರ್ಲಿಲ್ಲ.

ಯಾಕಂದ್ರೆ ಹಸಿವಾಗ್ತಿರೋದು ನನಗಲ್ಲ, ನನ್ನ ಮೇಲಿರೋ ಆತ್ಮಕ್ಕೆ, ಹಂಗಾಗಿ ಅದಕ್ಕೆ ತೃಪ್ತಿ ಆಗೋತನಕ ನಾನು ತಿನ್ತಾನೇ ಇರ್ಬೇಕು ಅಂತ ಹೇಳಿದ್ರು. ಅಡಿಗೆ ಅಷ್ಟೇನೂ ರುಚಿಯಾಗಿರ್ಲಿಲ್ಲ, ನನಗೆ ಎರಡು ತುತ್ತೂ ಒಳಗೆ ಹೋಗ್ಲಿಲ್ಲ. ಇವ್ರು ಬಿಡೋಥರ ಕಾಣ್ತಿಲ್ಲ. ಶಿವಮ್ಮ ’ಹೊಡ್ದು ಸಾಯ್ಸೋಕೆ ನೋಡಿದ್ರು, ಇವ್ರು ತಿನ್ಸಿ ಸಾಯ್ಸೋಕೆ’ ನೋಡ್ತಿದಾರೆ. ಇದರ ಜೊತೆಗೆ ’ಸೂರ್ಯ ಮುಳುಗಿದ ಮೇಲೆ ಉಚ್ಚೆ ಉಯ್ಯೋಕೂ ಯಾರಾದ್ರೂ ಜೊತೆಗೆ ಬರ್ಬೇಕು ಅಂತ ಅಳ್ತಿದ್ದ ನಾನು, ಅಮಾವಾಸ್ಯೆಯ ಮುಸ್ಸಂಜೆ ಹೊತ್ತಿಗೆ ದೆವ್ವಕ್ಕೆ ಡಿನ್ನರ್ ಕೊಟ್ಟು ಬರ್ಬೇಕಲ್ಲಾ’ ಅಂತ ಭಯ, ಕೋಪ, ಅಳು ಎಲ್ಲಾ ಒಟ್ಟೊಟ್ಟಿಗೇ ಬರ್ತಿತ್ತು. ಆಗ ನನ್ನ ಮುಖ ನೋಡಿದ ಸ್ವಾಮೀಜಿ “ಹಾ, ನನಗೆ ಈಗ ಅರ್ಥ ಆಯ್ತು. ನೀನು ಈ ಊಟವನ್ನು ಮನೆಯ ಹಿಂದೆ ಚೆಲ್ಲಿಬಿಡು” ಅಂದ್ರು. ಉಸ್ಸಪ್ಪ ಅನ್ಸಿ ಎದ್ದು ಹೋಗಿ ತಟ್ಟೆ ಇಟ್ಟು ಬಂದೆ. ಅಷ್ಟ್ರಲ್ಲಿ ಅಮ್ಮನಿಗೆ ಸ್ವಾಮೀಜಿ ಏನೋ ಹೇಳಿದ್ದ. ಸರಿ ನಾವಿನ್ನು ಬರ್ತೀವಿ ಅಂದು ಹೊರೆಟೆವು.
ಸ್ವಾಮೀಜಿ ಹೇಳಿದ ಕೆಲಸ ಮಾಡಿ ಹದಿನೈದು ದಿನ ಆಗಿತ್ತು. ಆದ್ರೆ ನನಗೆ ಇದ್ದ ಸಮಸ್ಯೆ ಕಡಿಮೆ ಆಗಿರ್ಲಿಲ್ಲ. ನನ್ನ ಉಗುರೆಲ್ಲಾ ಹಳದಿ ಬಣ್ಣಕ್ಕೆ ತಿರುಗುತ್ತಿತ್ತು. ಬಿಟ್ಟು ಬಿಟ್ಟು ಜ್ವರ ಬರ್ತಿತ್ತು. ಇದಕ್ಕೂ ಏನಾದ್ರೂ ಉಪಾಯ ಮಾಡ್ಲೇಬೇಕಲ್ಲ, ಅದ್ಕೆ ಯಾರೋ ಹೇಳಿದ್ದನ್ನ ಕೇಳಿ “ಇದೆಲ್ಲಾ ’ಒಂದು’ ದೆವ್ವದ ಕಾಟ ಅಲ್ಲ. ಯಾರೋ ಮಾಟ ಮಾಡ್ಸಿದಾರೆ. ಜೊತೆಗೆ ತುಂಬಾ ಗಾಳಿ ಸೋಕಿದ್ರೆ ಹಿಂಗಾಗುತ್ತೆ. ಅದ್ಕೆ ನಾವು ರಾಣೆಬೆನ್ನೂರು ಹತ್ರ ಇರೋ ಉಕ್ಕಡಗಾತ್ರಿಯ ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ಬರ್ಬೇಕು” ಅಂತ ಹೇಳಿ, ಕರ್ಕೊಂಡೋಗೋಕೆ ಎಲ್ಲಾ ಏರ್ಪಾಡೂ ನಡೀತು. ನಮ್ಮ ಜೊತೆ ’ನಮ್ಮಂಥಾ’ ಒಂದು ಗುಂಪೇ ಇಲ್ಲಿಂದ ಹೊರಟಿತ್ತು.
ಮೈಸೂರಿನಿಂದ ರಾಣೆಬೆನ್ನೂರಿಗೆ ನೇರವಾಗಿ ರೈಲುಗಾಡಿ ಇರ್ಲಿಲ್ಲ. ಅರಸೀಕೆರೆಯಲ್ಲಿ ಇಳಿದು ಬೇರೆ ಗಾಡಿ ಹತ್ತಿ ಹೋಗ್ಬೇಕು. ಅಲ್ಲಿಂದ ನಮ್ಮ ಜೊತೆಗೆ ನಮ್ಮಂಥ ನೂರಾರು ಗುಂಪು ಜೊತೆ ಆಯ್ತು. ಪ್ರತಿ ಅಮಾವಾಸ್ಯೆಗೂ ಅಲ್ಲಿಗೆ ಈಗಲೂ ಹೀಗೇ ಜನ ಹೋಗುತ್ತಾರೆ. ಅವರಲ್ಲಿ ಬಹುಪಾಲು ಜನರು ದೆವ್ವದ ಸಮಸ್ಯೆಯಿಂದಲೇ ಅಲ್ಲಿಗೆ ಹೋಗುತ್ತಾರೆ. ನಾವೂ ಹೋದ್ವಿ.
ರಾಜ್ಯದ ಮೂಲೆಮೂಲೆಯಿಂದ ದೆವ್ವಗಳು ಬಂದಿದ್ದರಿಂದ ಅವತ್ತು ಅಲ್ಲಿ ಕಾಲಿಡುವುದಕ್ಕೂ ಜಾಗ ಇರ್ಲಿಲ್ಲ. ದೇವಸ್ಥಾನಕ್ಕೆ ಹೋಗುವುದಕ್ಕೂ ಮೊದಲು ಪಕ್ಕದಲ್ಲಿರುವ ನದಿಯಲ್ಲಿ ಸ್ನಾನ ಮಾಡಬೇಕು. ಸರಿ ಎಂದು ನದಿಗೆ ಇಳಿದರೆ ಅಲ್ಲಿ ಇನ್ನೊಂದು ಅಘಾತ. ದೇವಸ್ಥಾನಕ್ಕೆ ದೆವ್ವಗಳು ಬಂದಿರುವಂತೆಯೇ ದೇವರುಗಳೂ ಬಂದಿರುತ್ತವೆ. ಅಂದರೆ ಹರಕೆ ಹೊತ್ತು ದೇವಸ್ಥಾನಕ್ಕೆ ಬಂದಿರುವವರು. ಇವ್ರ ಕೆಲಸ, ನದಿಗೆ ಸ್ನಾನಕ್ಕೆಂದು ಬರುವ ದೆವ್ವಗಳನ್ನು ಹೊಡೆದು ಓಡಿಸುವುದು. ನಾನು ನದಿಗೆ ಇಳಿಯುವಾಗ ನೂರಾರು ದೇವರುಗಳು ಸಾವಿರಾರು ದೆವ್ವಗಳನ್ನು ಹಿಗ್ಗಾಮುಗ್ಗಾ ಚಚ್ಚುತ್ತಿದ್ದವು. ಈಗ ನಾನು ನದಿಗೆ ಇಳಿಯಬೇಕೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ನಮ್ಮಮ್ಮನಿಗೆ ಆ ದೃಶ್ಯ ನೋಡಿ ಭಕ್ತಿ ಹೆಚ್ಚಾಗಿ ನನ್ನನ್ನು ನದಿಗೆ ಇಳಿಸಿಯೇಬಿಟ್ಟರು. ಆಗ ಸಮಯ ಮಧ್ಯರಾತ್ರಿ ಒಂದು ಗಂಟೆ, ಡಿಸಂಬರ್ ತಿಂಗಳ ಚಳಿಗಾಲ.
ನನ್ನ ಪುಣ್ಯಕ್ಕೆ ಯಾವ ದೇವರೂ ನನ್ನನ್ನು ಮುಟ್ಟಲಿಲ್ಲ. ಆದರೆ ನಮ್ಮಮ್ಮ ಬಿಡಬೇಕಲ್ಲ. ಯಾವುದೋ ಒಬ್ಬ ಆಂಟಿಯ ಮೈಮೇಲಿನ ದೇವರಿಗೆ ಅವತ್ತು ಬೋಣಿ ಆಗದೇ ಸುಮ್ಮನೇ ನಿಂತಿತ್ತು. ನನ್ನಿಂದಲಾದರೂ ಬೋಣಿ ಆಗಲಿ ಎಂದು ಕರೆದು ನಿಲ್ಲಿಸಿಯೇಬಿಟ್ಟಳು. ಆ ದೇವರು ನನ್ನ ತಲೆಯ ಮೇಲೆ ಕೈಯಿಟ್ಟು, ಕಣ್ಮುಚ್ಚಿ, ಯೋಚಿಸಿ “ಇನ್ನೂ ಇವನ ಮೈಮೇಲೆ ಪೂರ್ತಿ ಬಂದಿಲ್ಲ. ಹಾಗಾಗಿ ಇವನು, ಒಂಬತ್ತು ನಿಂಬೆಹಣ್ಣು ತೆಗೆದುಕೊಂಡು, ಅದನ್ನು ನದಿಯ ಒಂದೊಂದೇ ಮೆಟ್ಟಿಲಮೇಲೆ ಇಟ್ಟು ಹಿಮ್ಮಡಿಯಿಂದ ತುಳಿದು, ಮೇಲೆ ಹೋಗಿ ದೇವಸ್ಥಾನದ ಸುತ್ತ ಮೂರು ಬಾರಿ ಉರುಳುಸೇವೆ ಮಾಡಿ, ಪೂರ್ವದಲ್ಲಿರುವ ಗೋಪುರದ ಬಳಿಯಿರುವ ಕಲ್ಲನ್ನು ತಲೆಯ ಮೇಲಿಟ್ಟು ಕಣ್ಣುಮುಚ್ಚಿ ಕೂರಬೇಕು. ಆಗ ಗಾಳಿ ಪೂರ್ತಿ ಬರುತ್ತದೆ” ಎಂದು ಹೇಳಿತು. ಸದ್ಯ ತಪ್ಪಿಸಿಕೊಂಡೆ ಎಂದು ಅವರು ಹೇಳಿದಂತೆ ಮಾಡಲು ಶುರುವಿಟ್ಟುಕೊಂಡೆ. ನಿಂಬೆಹಣ್ಣು ತುಳಿದು ಕಲ್ಲು ಮರಳು ತುಂಬಿದ ರಸ್ತೆಯಲ್ಲಿ ಉರುಳುಸೇವೆ ಮಾಡಿ ಗೋಪುರದ ಮುಂದೆ ಕೂತು ದೊಡ್ಡ ಕಲ್ಲನ್ನು ತಲೆಯ ಮೇಲಿಟ್ಟುಕೊಂಡೆ. ಕತ್ತಲೆ, ಚಳಿ, ಬರಿ ಚಡ್ಡಿಯಲ್ಲಿ ಕೂತಿದ್ದೇನೆ. ಸುತ್ತಮುತ್ತ ಹೆಚ್ಚು ಕೊಳಚೆಯಿದ್ದುದರಿಂದ ಸೊಳ್ಳೆಗಳೂ ಹೆಚ್ಚಾಗಿದ್ದವು. ಜೊತೆಗೆ ಅವೆಲ್ಲವೂ ಹೈಬ್ರಿಡ್ ಸೊಳ್ಳೆಗಳಾಗಿದ್ದವು.
ಬರಿಮೈಯಲ್ಲಿದ್ದ ನನ್ನ ಮೇಲೆ ದಾಳಿಮಾಡಲು ಶುರುವಿಟ್ಟವು. ಸೊಳ್ಳೆ ಕಡಿಯುತ್ತಿದ್ದಾಗ ಕೆರೆದುಕೊಳ್ಳಲು ಕೈಬಿಟ್ಟರೆ ಕಲ್ಲು ತೊಡೆಯಮೇಲೆ ಬೀಳುತ್ತಿತ್ತು. ಒಂದು ಕ್ಷಣದಲ್ಲಿ ಲೆಕ್ಕವಿಲ್ಲದಷ್ಟು ಸೊಳ್ಳೆಗಳು ಮುಚ್ಚಿಕೊಂಡವು. ಇದರ ಕಾಟ ತಡೆಯಲಾಗದೇ ಕುಳಿತಲ್ಲಿಯೇ ಮಿಸುಕಾಡುತ್ತಿದ್ದೆ. ಇದನ್ನು ನೋಡಿದ ನಮ್ಮಮ್ಮ “ಹಾ… ಈಗ ದೆವ್ವ ಮೈಮೇಲೆ ಬರ್ತಿದೆ, ಬರ್ಲಿ ಬರ್ಲಿ” ಅಂತಿದ್ರು. ನನ್ನ ಕರ್ಮ ನನ್ನ ದೇಹ, ಮನಸ್ಸು ಎರಡೂ ದಾಳಿಗೊಳಗಾಗಿತ್ತು. ಏನು ಮಾಡಬೇಕೋ ಗೊತ್ತಾಗದೇ ಇದ್ದಾಗ ಒಬ್ಬ ಪೂಜಾರಿ ಬಂದು “ಇವನು ಮೈಮೇಲೆ ಏನು ಇಲ್ಲ, ಕರೆದುಕೊಂಡು ಹೋಗಿ” ಎಂದರು. ಅವರ ಮಾತಿಗೆ ಬೆಲೆಕೊಟ್ಟು ಎದ್ದು, ಮೈಯೆಲ್ಲಾ ಕಲ್ಲು, ಮಣ್ಣಾಗಿದ್ದರಿಂದ ಸ್ನಾನ ಮಾಡಲು ನದಿಗಿಳಿದೆ. ಅಲ್ಲಿ ಇನ್ಯಾವುದೋ ದೇವರು ನನ್ನ ತಲೆಯ ಮೇಲೆ ಕೈಯಿಟ್ಟು ಮೊದಲ ದೇವರು ಹೇಳಿದ್ದ ಪರಿಹಾರವನ್ನೇ ಹೇಳಿತು. ಮತ್ತೆ ಅದೇ ನಿಂಬೆಹಣ್ಣು, ಉರುಳುಸೇವೆ, ಕಲ್ಲು, ಸೊಳ್ಳೆ. ಇದು ಸುಮಾರು ಬೆಳಗಿನ ಜಾವ ಐದು ಗಂಟೆಯವರೆಗೂ, ಹದಿನೈದರಿಂದ ಇಪ್ಪತ್ತುಬಾರಿ ನಡೆದು ನಾನು ಹೈರಾಣಾಗಿಬಿಟ್ಟಿದ್ದೆ. ನಮ್ಮಮ್ಮನಿಗೆ ನನ್ನ ಕಷ್ಟ ಅರ್ಥವಾಗಿ ಅಲ್ಲಿಗೇ ನಿಲ್ಲಿಸಿ, ಪೂಜೆ ಮುಗಿಸಿಕೊಂಡು ಊರಿನ ಕಡೆಗೆ ಹೊರಟೆವು.
ಇಷ್ಟೆಲ್ಲಾ ಆದರೂ ದಿನೇದಿನೇ ಜ್ವರ ಹೆಚ್ಚುತ್ತಿದ್ದುದನ್ನು ಕಂಡ ಯಾರೋ ಹೇಳಿದರಂತೆ, “ಹುಣಸೂರಿನಲ್ಲಿ ಆನಂದರಾವ್ ಅಂತ ಯಾರೋ ಒಳ್ಳೆ ಡಾಕ್ಟರ್ ಇದಾರೆ. ಅವ್ರು ಚೆನ್ನಾಗಿ ನೋಡ್ತಾರೆ” ಅಂತ. ನಮ್ಮಮ್ಮ ಒಲ್ಲದ ಮನಸ್ಸಿನಿಂದ ಕರೆದುಕೊಂಡು ಹೋದಳು. ಅವರು ಚೆಕಪ್ ಮಾಡಿ ಇಂಜೆಕ್ಷನ್ ಹಾಕಿ ಸುಮಾರು ಮೂರು ತಿಂಗಳಿಗೆ ಔಷಧಿ ಬರೆದುಕೊಟ್ಟರು. ಅದನ್ನು ತೆಗೆದುಕೊಂಡ ನಂತರ ಆರೋಗ್ಯ ಸರಿಹೋಯ್ತು.
ತುಂಬಾ ದಿನ ಆದ್ಮೇಲೆ ಗೊತ್ತಾಗಿದ್ದು, ನನಗೆ ಯಾವ ದೆವ್ವಾನೂ ಹಿಡ್ಕೊಂಡಿರ್ಲಿಲ್ಲ, ಹಿಡಿದುಕೊಂಡಿದ್ದು ’ಜಾಂಡೀಸ್’ ಅಂತ!

ಪ್ರತಾಪ್ ಹುಣಸೂರು
ಸಂಶೋಧನಾ ವಿಧ್ಯಾರ್ಥಿ. ಸದ್ಯ ನಾನುಗೌರಿ.ಕಾಂನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


