ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಇಂದು ಸಂಜಯ್ ರಾವುತ್ ಅವರ ನಿವಾಸವನ್ನು ತಲುಪಿದೆ. “ಕೇಂದ್ರೀಯ ಸಂಸ್ಥೆಯ ತನಿಖೆಯು ನಕಲಿ ಸಾಕ್ಷ್ಯ ಆಧರಿಸಿದೆ” ಎಂದು ಶಿವಸೇನೆ ನಾಯಕ ರಾವುತ್ ಟ್ವೀಟ್ ಮಾಡಿದ್ದಾರೆ.
ಸಂಜಯ್ ರಾವುತ್ ಅವರಿಗೆ ಜುಲೈ 20 ಮತ್ತು ಜುಲೈ 27 ರಂದು ಎರಡು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಇ.ಡಿ. ಮುಂದೆ ಹಾಜರಾಗದ ಕಾರಣ, ಇ.ಡಿ. ತನಿಖಾಧಿಕಾರಿಗಳು ಇಂದು ರಾವುತ್ ಮನೆಗೆ ತಲುಪಿದ್ದಾರೆ. ಮುಂಬೈನಲ್ಲಿ ಚಾಲ್ (ವಠಾರ) ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ಸಂಜಯ್ ಅವರನ್ನು ಪ್ರಶ್ನಿಸಲು ಅಧಿಕಾರಿಗಳು ಆಗಮಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತರಾಗಿರುವ ರಾವುತ್ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ದ್ವೇಷದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.
“ನನಗೂ ಯಾವುದೇ ಹಗರಣಕ್ಕೂ ಸಂಬಂಧವಿಲ್ಲ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಾಮಾಣ ಮಾಡಿ ಇದನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಟವನ್ನು ಮುಂದುವರಿಸುತ್ತೇನೆ” ಎಂದು ಅವರು ಇಂದು ಬೆಳಿಗ್ಗೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ. “ನಕಲಿ ಕ್ರಮವಿದು. ಸುಳ್ಳು ಸಾಕ್ಷ್ಯಗಳಿವು. ನಾನು ಶಿವಸೇನೆಯನ್ನು ಬಿಡುವುದಿಲ್ಲ. ಸತ್ತರೂ ನಾನು ಶರಣಾಗುವುದಿಲ್ಲ. ಜೈ ಮಹಾರಾಷ್ಟ್ರ” ಎಂದು ರಾವುತ್ ತಿಳಿಸಿದ್ದಾರೆ.
ಬಿಜೆಪಿ ಶಾಸಕ ರಾಮ್ ಕದಂ ಅವರು, “ಶಿವಸೇನಾ ನಾಯಕ ಏಕೆ ಸಮನ್ಸ್‌ಗೆ ಉತ್ತರ ನೀಡಿಲ್ಲ? ರಾವುತ್ ಅವರು ಅಮಾಯಕರಾಗಿದ್ದರೆ ಜಾರಿ ನಿರ್ದೇಶನಾಲಯಕ್ಕೆ ಏಕೆ ಹೆದರುತ್ತಾರೆ? ಅವರು ಪತ್ರಿಕಾಗೋಷ್ಠಿಗಳನ್ನು ನಡೆಸಲು ಸಮಯ ಹೊಂದಿದ್ದಾರೆ. ಆದರೆ ವಿಚಾರಣೆಗಾಗಿ ತನಿಖಾ ಸಂಸ್ಥೆಯ ಕಚೇರಿಗೆ ಭೇಟಿ ನೀಡಲು ಸಮಯ ಹೊಂದಿಲ್ಲ” ಎಂದು ಟೀಕಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 1 ರಂದು ರಾವುತ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಜುಲೈ 20 ರಂದು ಮತ್ತೆ ಹಾಜರಾಗುವಂತೆ ಅವರಿಗೆ ಸಮನ್ಸ್ ನೀಡಲಾಯಿತು. ಆದರೆ ಸಂಸತ್ ಅಧಿವೇಶನದ ಕಾರಣ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದರು. ಜುಲೈ 27 ರಂದು ಹಾಜರಾಗುವಂತೆ ತಿಳಿಸಲಾಯಿತು. ಆದರೆ ಅವರು ಹಾಜರಾಗಿರಲಿಲ್ಲ.
ಇದನ್ನೂ ಓದಿರಿ: ಕೇಶವಕೃಪಾದಲ್ಲಿ ಸಿದ್ಧವಾಯಿತೇ ಬಿಬಿಎಂಪಿ ವಾರ್ಡ್ ವಿಂಗಡಣೆಯ ವರದಿ?
ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿ, ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದ ಏಕನಾಥ್ ಶಿಂಧೆಯವರ ಬಂಡಾಯದ ನಂತರ ಶಿವಸೇನೆಯ ಬಿಕ್ಕಟ್ಟನ್ನು ಶಮನ ಮಾಡುವಲ್ಲಿ ಸಂಜಯ್ ನಿರತರಾಗಿದ್ದಾರೆ. ಉದ್ಧವ್ ಠಾಕ್ರೆಯವರ ಬೆಂಬಲಕ್ಕೆ ರಾವುತ್ ನಿಂತಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ರಾಜಕೀಯ ನಾಟಕದ ನಡುವೆಯೇ ಜೂನ್ 28ರಂದು ಅವರಿಗೆ ಸಮನ್ಸ್ ನೀಡಿದಾಗ, “ಇಡಿ ನನ್ನನ್ನು ಕರೆಸಿದೆ ಎಂದು ನನಗೆ ಈಗಷ್ಟೇ ತಿಳಿದು ಬಂದಿದೆ. ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಾಳಾಸಾಹೇಬರ ಶಿವಸೈನಿಕರು ದೊಡ್ಡ ಕದನವನ್ನೇ ನಡೆಸುತ್ತಿದ್ದಾರೆ. ಇದು ನನ್ನನ್ನು ತಡೆಯುವ ಸಂಚು. ನೀವು ನನ್ನ ತಲೆ ಕಡಿದರೂ, ನಾನು ಗುವಾಹಟಿ ಮಾರ್ಗವನ್ನು ಹಿಡಿಯುವುದಿಲ್ಲ. ನನ್ನನ್ನು ಬಂಧಿಸಿ! ಜೈ ಹಿಂದ್!” ಎಂದು ಟ್ವೀಟ್ ಮಾಡಿದ್ದರು.


