Homeನ್ಯಾಯ ಪಥಕೇಶವಕೃಪಾದಲ್ಲಿ ಸಿದ್ಧವಾಯಿತೇ ಬಿಬಿಎಂಪಿ ವಾರ್ಡ್ ವಿಂಗಡಣೆಯ ವರದಿ?

ಕೇಶವಕೃಪಾದಲ್ಲಿ ಸಿದ್ಧವಾಯಿತೇ ಬಿಬಿಎಂಪಿ ವಾರ್ಡ್ ವಿಂಗಡಣೆಯ ವರದಿ?

- Advertisement -
- Advertisement -

ರಾಜ್ಯದ ರಾಜಧಾನಿ, ದೇಶದ ಅತೀ ದೊಡ್ಡ ನಗರಗಳಲ್ಲಿ ಒಂದಾದ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 243 ವಾರ್ಡ್‌ಗಳ ಅಂತಿಮ ವಿಂಗಡನೆಯ (ಡಿಲಿಮಿಟೇಶನ್) ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದ್ದು ಕಳೆದ ವಾರ ಅಧಿಸೂಚನೆ ಹೊರಡಿಸಿದೆ. ಅದಕ್ಕೂ ಮುಂಚೆ ಬಿಬಿಎಂಪಿ ಅಧಿಕಾರಿಗಳು ನೀಡಿದ್ದ ಡಿಲಿಮಿಟೇಷನ್ ವರದಿಯನ್ನು ಸರ್ಕಾರ ತಿರಸ್ಕರಿಸಿತ್ತು. ಬಿಬಿಎಂಪಿ ಚುನಾವಣೆಯನ್ನು ಎರಡು ವರ್ಷಗಳ ಕಾಲ ವಿಳಂಬಗೊಳಿಸಿದ್ದ ಕಸರತ್ತು ಕೊನೆಗೂ ಪೂರ್ಣಗೊಂಡಿದೆ. ಈ ನಡುವೆ ಚುನಾವಣೆ ನಡೆಸದೇ ಇದ್ದ ಕಾರಣಕ್ಕೆ ಸುಪ್ರೀಂಕೋರ್ಟ್ ಕೂಡಾ ಸರ್ಕಾರದ ಕಿವಿ ಹಿಂಡಿ, ಎಂಟು ವಾರಗಳಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸುವಂತೆ ಸೂಚಿಸಿತ್ತು. ಸುಪ್ರೀಂಕೋರ್ಟ್ ನೀಡಿದ್ದ ಅವಧಿ ಈ ವಾರಕ್ಕೆ ಮುಗಿಯಲಿದೆ.

ಬೆಂಗಳೂರು ಮಹಾನಗರದ ಗಡಿಗಳನ್ನು ಕಳೆದ ಆರು ದಶಕಗಳಲ್ಲಿ ಒಟ್ಟು ಹತ್ತು ಬಾರಿ ವಿಸ್ತರಿಸಲಾಗಿದೆ. ಈ ಹಿಂದೆ ’ಬೆಂಗಳೂರು ಮಹಾನಗರ ಪಾಲಿಕೆ’ (ಬಿಎಂಪಿ) ಎಂದು ಕರೆಯುತ್ತಿದ್ದ ಪಾಲಿಕೆಯನ್ನು 2007ರಲ್ಲಿ ಮತ್ತಷ್ಟು ವಿಸ್ತರಿಸಿ ’ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ (ಬಿಬಿಎಂಪಿ) ಎಂದು ಕರೆಯಲಾಯಿತು. ಬಿಬಿಎಂಪಿ ಎಂದು ಹೆಸರು ಬದಲಾದ ನಂತರ ಮೊದಲ ಬಾರಿಗೆ ಚುನಾವಣೆ ನಡೆದಿದ್ದು 2010ರಲ್ಲಿ. ಇದರ ನಂತರ 2015ರಲ್ಲಿ ಮತ್ತೆ ಚುನಾವಣೆ ನಡೆದು ಅದರ ಅಧಿಕಾರ ಅವಧಿ 2020ರಲ್ಲಿ ಮುಗಿದಿದೆ. ಇದಾಗಿ ಎರಡು ವರ್ಷಗಳ ಕಾಲ ವಾರ್ಡ್ ವಿಂಗಡನೆ ಮತ್ತು ಮೀಸಲಾತಿಯ ಹೆಸರಿನಲ್ಲಿ ಸರ್ಕಾರವು ಚುನಾವಣೆಯನ್ನೇ ನಡೆಸಿರಲಿಲ್ಲ.

ನಗರವೊಂದು ಬೆಳೆಯುತ್ತಿದ್ದಂತೆ ಅವುಗಳ ವಾರ್ಡ್‌ಗಳನ್ನು ವಿಂಗಡಿಸಿ ಆಡಳಿತಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಳ್ಳುವುದು ಸರಿಯಾದ ಕ್ರಮವೇ ಅಗಿದೆ. 2007ರ ಬಿಎಂಪಿಯ 100ವಾರ್ಡುಗಳಿಂದ ಬಿಬಿಎಂಪಿ ಎಂದು ಹೆಸರು ಬದಲಿಸಿ, ಪಾಲಿಕೆಯನ್ನು ವಿಸ್ತರಿಸಿ 198 ವಾರ್ಡುಗಳನ್ನಾಗಿ ಮಾಡಲಾಗಿತ್ತು. ಅದರ ನಂತರದ ಹದಿನೈದು ವರ್ಷಗಳಲ್ಲಿ ಇದೀಗ ಮತ್ತೆ ಪಾಲಿಕೆಯನ್ನು ವಿಂಗಡನೆ ಮಾಡಲಾಗುತ್ತಿದೆ. ಆದರೆ ಈ ಬಾರಿ ಕೇವಲ 25%ರಷ್ಟು ಹೆಚ್ಚಿಸಿ ವಾರ್ಡ್‌ಗಳನ್ನು ವಿಂಗಡಿಸಲಾಗುತ್ತಿದ್ದು ಅಂದರೆ 243 ವಾರ್ಡ್‌ಗಳನ್ನು ಸರಾಸರಿ 34,700 ಜನ ಸಂಖ್ಯೆಯ ಆಧಾರದಲ್ಲಿ ಮರು ವಿಂಗಡಿಸಲಾಗಿದೆ.

ವಾರ್ಡ್ ವಿಂಗಡನೆಯ ನಂತರ ಸುಮಾರು 3833 ಆಕ್ಷೇಪಣೆಗಳು ಸಲ್ಲಿಕೆಯಾಗಿದೆ ಎಂದು ಸ್ವತಃ ಬಿಬಿಎಂಪಿ ಹೇಳಿಕೊಂಡಿದೆ. ಅವುಗಳಲ್ಲಿ ಬಹುತೇಕ ಆಕ್ಷೇಪಗಳು ವಾರ್ಡ್‌ಗಳ ಹೆಸರುಗಳ ಬಗ್ಗೆ ಬಂದಿದೆ ಎಂದಿರುವ ಬಿಬಿಎಂಪಿ ಅದನ್ನೇ ತೋರಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಉಳಿದಂತೆ ಯಾವ ಆಕ್ಷೇಪಣೆಗಳು ಬಂದಿದೆ ಎಂಬುವುದರ ಬಗ್ಗೆ ಬಿಬಿಎಂಪಿ ಚರ್ಚಿಸಿಲ್ಲ. ಹೆಸರನ್ನು ಮಾತ್ರ ಬದಲಾವಣೆ ಮಾಡಿ ಕರಡಿನಲ್ಲಿ ಮಾಡಿದ್ದನ್ನೇ ಮತ್ತೆ ಘೋಷಿಸಿದ್ದಾರೆ.

ವಾರ್ಡ್ ಮರುವಿಂಗಡನೆಯಲ್ಲಿ ರಾಜಕೀಯ ಪಿತೂರಿ!
ವಾರ್ಡ್‌ಗಳನ್ನು ಮರುವಿಂಗಡನೆ ಮಾಡುವ ವಿಧಾನ ಮತ್ತು ಅದರ ಹಿಂದಿನ ಉದ್ದೇಶಗಳ ಬಗ್ಗೆ ರಾಜಕೀಯ ಆಕ್ರೋಶ ಕೂಡಾ ವ್ಯಕ್ತವಾಗಿದೆ. ಈ ಹಿಂದೆ ವಾರ್ಡ್ ವಿಂಗಡನೆಯನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರ ಈ ಮಾದರಿಯನ್ನು ಕೈಬಿಟ್ಟು, ಬಿಬಿಎಂಪಿ ಮುಖ್ಯ ಆಯುಕ್ತರನ್ನು ವಾರ್ಡ್ ವಿಂಗಡನೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ಇತರ ಕೆಲವು ಅಧಿಕಾರಿಗಳನ್ನು ಸಮಿತಿಯ ಸಂಚಾಲಕರನ್ನಾಗಿ ಮಾಡಿ ಕೆಲಸ ಮುಗಿಸಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, “ಮಹಾನಗರ ಪಾಲಿಕೆ, ಪುರಸಭೆ, ನಗರ ಸಭೆ ಸೇರಿದಂತೆ ಯಾವುದೇ ನಾಗರಿಕ ಸಂಸ್ಥೆಗಳ ವಾರ್ಡ್ ವಿಂಗಡನೆ ಮಾಡುವಾಗ, ಜನಸಂಖ್ಯೆಯ ಮಾರ್ಗಸೂಚಿಗಳಂತೆ ಕಂದಾಯ ಕಚೇರಿಯಲ್ಲಿ ಗಡಿಗಳನ್ನು ನಿರ್ಧಾರ ಮಾಡಿ ಅವುಗಳನ್ನು
ನಿರ್ಧರಿಸಲಾಗುತ್ತದೆ. ಆದರೆ ಈ ಬಾರಿ ಈ ಯಾವುದೇ ವಿಧಾನವನ್ನು ಪಾಲಿಸಿಲ್ಲ. ವಾರ್ಡ್‌ಗಳಲ್ಲಿರುವ ಯಾವುದೇ ಕಂದಾಯ ಅಧಿಕಾರಿಗಳ ಗಮನಕ್ಕೆ ಬಾರದೆ ವಾರ್ಡ್ ವಿಂಗಡನೆ ಮಾಡಲಾಗಿದೆ” ಎಂದು ಆರೋಪಿಸಿದರು.

“ಬಿಜೆಪಿ ಶಾಸಕರಿರುವ ಕ್ಷೇತ್ರಗಳ ವಾರ್ಡ್‌ಗಳನ್ನು ಅವರಿಗೆ ಬೇಕಾದಂತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳ ವಾರ್ಡ್‌ಗಳನ್ನು ಬಿಜೆಪಿಯ ಸಂಸದರ ಕಚೇರಿಯಲ್ಲಿ ಕೂತು ಅವರ ಮೂಗಿನ ನೇರಕ್ಕೆ ವಾರ್ಡ್ ವಿಂಗಡನೆ ಮಾಡಲಾಗಿದೆ. ಬಿಜೆಪಿಯ ನಾಯಕರು ಆರೆಸ್ಸೆಸ್ಸಿನ ಕಚೇರಿಯಾದ ’ಕೇಶವ ಕೃಪಾ’ದ ಮುಖಂಡರ ಅನುಮತಿ ಪಡೆದು, ಖಾಸಗಿ ಸಲಹೆಗಾರರಿಂದ ನಿರ್ದೇಶನ ಪಡೆದು ಪ್ರಸ್ತುತ ವಾರ್ಡ್‌ಗಳ ವಿಂಗಡನೆ ಮಾಡಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದು, ವಾರ್ಡ್ ವಿಂಗಡನೆ ಮಾಡಲು ಎಷ್ಟು ಸಭೆಗಳನ್ನು ನಡೆಸಲಾಗಿದೆ ಎಂದು ಆರ್‌ಟಿಐ ಮೂಲಕ ಮಾಹಿತಿ ಕೇಳಿದ್ದೆವು. ಅವರು ನೀಡಿದ ಮಾಹಿತಿಯಂತೆ 11ಸಭೆಗಳನ್ನು ಮಾಡಲಾಗಿದೆ. ಇದು ’ಅಪ್ಪಟ ಸುಳ್ಳು” ಎನ್ನುವ ರಾಮಲಿಂಗಾ ರೆಡ್ಡಿಯವರು, “ಅವರು ಒಂದೇ ಒಂದು ಸಭೆಯನ್ನು ನಡೆಸಿಲ್ಲ. ವಾರ್ಡ್‌ಗಳನ್ನು ವಿಂಗಡನೆ ಮಾಡುವಾಗ ಕೂಡಾ ಚಿತ್ರವಿಚಿತ್ರವಾಗಿ ಅಮೀಬಾ ತರ, ಬಿಜೆಪಿಗೆ ಅನುಕೂಲ ಆಗುವ ರೀತಿಯಲ್ಲಿ ಮಾಡಿದ್ದಾರೆ. ಕಾಂಗ್ರೆಸ್ ಮತದಾರರು ಇರುವ ವಾರ್ಡ್‌ಗಳನ್ನು ಹಾಗೂ ಮುಸ್ಲಿಮರು ಹೆಚ್ಚಿರುವ ವಾರ್ಡ್‌ಗಳನ್ನು ಒಡೆದು, ಬಿಜೆಪಿಗೆ ಅನುಕೂಲವಾಗುವಂತೆ ಮಾಡಲಾಗಿದೆ” ಎಂದು ತಿಳಿಸಿದರು.

ವಾರ್ಡ್ ವಿಂಗಡನೆಯನ್ನು ನಿಯಮದಂತೆ 2011ರ ಜನಣತಿ ಪ್ರಕಾರ ಮಾಡಬೇಕಿದೆ. ಆದರೆ ಇದು ಕೂಡಾ ಉದ್ದೇಶಪೂರ್ವಕ ತಾರತಮ್ಯದಿಂದ ಕೂಡಿದೆ ಎಂದು ರಾಜಕೀಯ ಕಾರ್ಯಕರ್ತರೊಬ್ಬರು ಸೂಚಿಸಿದ್ದಾರೆ. ಕಾಂಗ್ರೆಸ್ ಪ್ರಭಾವ ಇರುವ ಎಲ್ಲಾ ವಾರ್ಡ್‌ಗಳ ಜನಸಂಖ್ಯೆಯ ಸರಾಸರಿ ಲೆಕ್ಕ ಹಾಕಿದರೆ 37 ಸಾವಿರಕ್ಕೆ ಒಂದು ವಾರ್ಡ್‌ಗಳಿದ್ದರೆ, ಬಿಜೆಪಿ ಪ್ರಭಾವ ಇರುವಲ್ಲಿ ಸರಾಸರಿ 33 ಸಾವಿರಕ್ಕೆ ಒಂದರಂತೆ ವಾರ್ಡ್‌ಗಳಿವೆ. ಒಟ್ಟಿನಲ್ಲಿ ಬಿಜೆಪಿಯ ಸೀಟುಗಳನ್ನು ಜಾಸ್ತಿ ಮಾಡುವುದಕ್ಕಾಗಿ ಈ ವಾರ್ಡ್ ವಿಂಗಡನೆ ಮಾಡಲಾಗಿದೆ ಎಂಬುವುದು ಅವರ ಆರೋಪವಾಗಿದೆ.

ಕಂದಾಯ ಅಧಿಕಾರಿಗಳಿಗೆ ತಿಳಿಸದೆ ವಾರ್ಡ್ ವಿಂಗಡನೆ
ವಾರ್ಡ್ ವಿಂಗಡಣೆ ಬಗ್ಗೆ ಬಿಬಿಎಂಪಿಯ ಯಾವುದೇ ಅಧಿಕಾರಿಗಳಿಗೂ ಗೊತ್ತಿಲ್ಲ ಎಂದು ರಾಮಲಿಂಗಾ ರೆಡ್ಡಿಯವರು ಆರೋಪಿಸಿದ್ದು, “ಬೆಂಗಳೂರು ನಗರದ 28 ವಿಧಾನಸಭೆಯ ಯಾವುದೇ ಕ್ಷೇತ್ರಗಳ ಕಂದಾಯ ಅಧಿಕಾರಿಗಳಿಗೆ ಕೇಳಿದರೂ ಅವರಿಗೆ ಈ ಬಗ್ಗೆ ವಿಚಾರವೇ ಗೊತ್ತಿಲ್ಲ. ಅವರ ಬಳಿ ಈ ಬಗ್ಗೆ ಯಾವುದೇ ದಾಖಲೆಗಳೂ ಇಲ್ಲ. ಎಲ್ಲವನ್ನೂ ಬಿಜೆಪಿ ಮತ್ತು ಆರೆಸ್ಸೆಸ್‌ನವರು ಕೇಶವಕೃಪಾದಲ್ಲಿ ಕೂತು ಮಾಡಿದ್ದಾರೆ” ಎನ್ನುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ 4 ಮಂಕಿಪಾಕ್ಸ್ ಪ್ರಕರಣಗಳು: ಕೋವಿಡ್ ರೀತಿ ವೇಗವಾಗಿ ಹರಡುವುದಿಲ್ಲ ಎಂದ ತಜ್ಞರು

ಬೆಂಗಳೂರು ನಗರದ ಸಮಸ್ಯೆಗಳ ಬಗ್ಗೆ ವರದಿ ಮಾಡುವ ಪತ್ರಕರ್ತರೊಬ್ಬರು ಹೇಳುವಂತೆ, “ವಾರ್ಡ್ ವಿಗಂಡನೆ ಮಾಡಿ ಅಂತಿಮ ಕರಡನ್ನು ಸಾರ್ವಜನಿಕರ ಮುಂದೆ ಇಟ್ಟು, ಮಾಧ್ಯಮದೊಂದಿಗೆ ಸಭೆಯನ್ನು ನಡಸಬೇಕಿತ್ತು. ಆದರೆ ಇವರು ಯಾವುದೇ ಸಭೆಯನ್ನು ನಡೆಸಿಲ್ಲ. ವಿಂಗಡನೆಯ ಬಗ್ಗೆ ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿದೆ ಎಂದು ಹೇಳುತ್ತಾರೆ. ಆದರೆ ಏನು ಆಕ್ಷೇಪಣೆಗಳು ಬಂದಿದೆ ಎಂದು ಅವರು ಮಾಧ್ಯಮಗಳ ಮುಂದೆ ಇಡಲೇ ಇಲ್ಲ. ಕೇವಲ ಬಾಯಿ ಮಾತಿನಲ್ಲಿ ’ವಾರ್ಡ್ ಹೆಸರಿನ ಬಗ್ಗೆ’ ಆಕ್ಷೇಪಣೆ ಬಂದಿದೆ ಎಂದು ಹೇಳಿದ್ದಾರೆ. ಅದು ಮಾತ್ರ ಬಂದಿದೆ ಎಂದು ಹೇಳಲು ಹೇಗೆ ಸಾಧ್ಯ? ಉಳಿದ ಆಕ್ಷೇಪಣೆಗಳೇನು? ಅವುಗಳ ಬಗ್ಗೆ ಇವರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
“ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಮತ್ತು ರಾಜಕೀಯ ದುರುದ್ದೇಶದಿಂದ ವಾರ್ಡ್ ವಿಂಗಡನೆ ಮಾಡಲಾಗಿದೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸುವಂತೆ ಇದು 100% ಆರೆಸ್ಸೆಸ್ಸಿನ ಕೇಶವಕೃಪಾದಲ್ಲಿ ಕೂತು ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಆಗಲಿ, ನಗರಾಭಿವೃದ್ಧಿ ಇಲಾಖೆಯಲ್ಲಾಗಲಿ ಸಭೆಯನ್ನು ನಡೆಸಿಲ್ಲ. ಬಿಬಿಎಂಪಿ ಯೋಜನಾ ವಿಭಾಗಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಕೂಡಾ ಇಲ್ಲ. ಅವರನ್ನು ಬಿಟ್ಟು ವಾರ್ಡ್ ವಿಂಗಡನೆಯನ್ನು ಹೇಗೆ ಮಾಡಲು ಸಾಧ್ಯ? ಬಿಬಿಎಂಪಿಯ ಬೇರುಮಟ್ಟದಲ್ಲಿ ಕೆಲಸ ಮಾಡುವವರು ಹಾಗೂ ಅದರ ನರನಾಡಿಗಳ ಅರಿವಿರುವವರು ಯೋಜನಾ ವಿಭಾಗದ ಅಧಿಕಾರಿಗಳೇ ಆಗಿದ್ದಾರೆ. ಅವರಿಗೆ ಈ ಯಾವ ವಿಚಾರವೂ ಗೊತ್ತಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

Photo Courtesy: ANI

ಔಟ್‌ಡೇಟೆಡ್ ವಾರ್ಡ್ ವಿಂಗಡನೆ
ವಾರ್ಡ್ ವಿಂಗಡನೆ ಮಾಡುವಾಗ ಮುಂದಿನ ಹತ್ತು ವರ್ಷಗಳನ್ನು ದೃಷ್ಟಿಯಲ್ಲಿಟ್ಟು ಮಾಡಬೇಕಾಗಿತ್ತು ಎಂಬ ಅಭಿಪ್ರಾಯ ಕೂಡಾ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಪ್ರಸ್ತುತ ವಾರ್ಡ್ ವಿಂಗಡನೆಯನ್ನು ಮಾರ್ಗಸೂಚಿ ತಿಳಿಸುವಂತೆ 2011ರ ಜನಗಣತಿಯಂತೆ ಮಾಡಲಾಗಿದೆ. ಆದರೆ ಈ ಜನಗಣತಿ ನಡೆದು 11 ವರ್ಷಗಳಾಗಿದ್ದು ಅಂಕಿ ಅಂಶಗಳೆಲ್ಲವೂ ಹಳೆಯದಾಗಿದೆ. 2021ರ ಜನಗಣತಿ ಇನ್ನೂ ನಡೆದಿಲ್ಲದ ಕಾರಣ ಬೇರೆ ಯಾವುದಾದರೂ ವೈಜ್ಞಾನಿಕ ಅಂಕಿಅಂಶಗಳ ಆಧಾರದಲ್ಲಿ ಮಾಡಬಹುದಿತ್ತು. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿಲ್ಲ. ತಮ್ಮ ಪಕ್ಷದ ಅಧಿಕಾರಕ್ಕೆ ಸಹಾಯವಾಗಬೇಕು ಎಂಬಂತೆ ವರ್ತಿಸಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಜನಸಂಖ್ಯೆ ತೀರಾ ಹೆಚ್ಚಿರುವ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮತ್ತು ಜನ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಈ ವಾರ್ಡ್ ವಿಂಗಡನೆ ಕಷ್ಟಕರವಾಗಿ ಪರಿಣಮಿಸಲಿದೆ. ಕೊನೆಯ ಬಾರಿ ಮಾಡಿದ ವಾರ್ಡ್ ವಿಂಗಡನೆಯ ನಂತರ, ಈ ಹದಿನೈದು ವರ್ಷಗಳಲ್ಲಿ ಕನಿಷ್ಠ ನಗರದ ಜನಸಂಖ್ಯೆ 60% ಬೆಳೆದಿದೆ ಎಂಬುವುದು ಅಂದಾಜು. ಹೀಗಾಗಿ ಒಂದು ಲಕ್ಷದಷ್ಟು ಜನಸಂಖ್ಯೆಯಿರುವ ವಾರ್ಡ್ ಸಮಸ್ಯೆಗಳನ್ನು ಕಾರ್ಪೊರೇಟರ್ ಪ್ರತಿನಿಧಿಸುವುದು ಸರಿಯೆ ಎಂಬ ಪ್ರಶ್ನೆಗಳು ಕೂಡಾ ಎದ್ದಿದೆ.

ಬಿಎಸ್ ಪಾಟೀಲ್ ನೇತೃತ್ವದ ಬಿಬಿಎಂಪಿ ಪುನರ್ ರಚನಾ ಸಮಿತಿಯು 400 ವಾರ್ಡ್‌ಗಳನ್ನು ನಿರ್ವಹಣೆ ಮಾಡಲು ಶಿಫಾರಸು ಮಾಡಿತ್ತು ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿಮಾಡಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಸರಿಸುಮಾರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ ಎಂಬುವುದು ಅಂದಾಜು.
“ಜನಗಣತಿಯ ಅಂಕಿಅಂಶಗಳೆಲ್ಲವೂ ಹಳೆಯದಾದುದರಿಂದ, ಕನಿಷ್ಠ ಪಕ್ಷ ಮತದಾರರ ಸಂಖ್ಯೆಗಳನ್ನು ಆಧಾರವಾಗಿ ಇಟ್ಟುಕೊಂಡು ವಾರ್ಡ್ ವಿಂಗಡನೆಯನ್ನು ಮಾಡಬಹುದಿತ್ತು. ಬಿಜೆಪಿ ಸರ್ಕಾರ ಇದನ್ನೂ ತೆಗೆದುಕೊಂಡಿಲ್ಲ. ಇದರಲ್ಲಿ ಯಾವುದೇ ಸಾರ್ವಜನಿಕ ಹಿತ ಕಾಯುವ ವಿಚಾರ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪ್ರಸ್ತುತ ಇರುವ ಬಹುತೇಕ ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ
ಬಿಬಿಎಂಪಿಯಲ್ಲಿ ಈಗ ಇರುವ 198 ವಾರ್ಡ್‌ಗಳಲ್ಲಿ ಬಹುತೇಕ ಕಡೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ನಾಲ್ಕೈದು ವಾರ್ಡ್‌ಗಳಿಗೆ ಒಂದೊಂದು ರೆಫರಲ್ ಆಸ್ಪತ್ರೆಗಳಿವೆ. 243 ವಾರ್ಡ್ ವಿಂಗಡನೆಗಾಗಿ ಬಜೆಟ್ ಅಧಿವೇಶನದಲ್ಲಿ ಬೆಂಗಳೂರಿಗೆ ’ನಮ್ಮ ಕ್ಲಿನಿಕ್ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದೇ ಯೋಜನೆಯ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬದಲಾಯಿಸಿ ನಮ್ಮ ಕ್ಲಿನಿಕ್ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ ಕಡೆ ಹೊಸದಾಗಿ ನಮ್ಮ ಕ್ಲಿನಿಕ್ ಅನ್ನು ನಿರ್ಮಿಸಲಾಗುತ್ತದೆ.
’ಹಾಗೆ ನೋಡಿದರೆ ವಾರ್ಡ್ ವಿಂಗಡನೆ ವಿಚಾರದ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ತಕರಾರು ಇದ್ದಂತೆ ಕಾಣುತ್ತಿಲ್ಲ. ಈ ಯಾವುದೇ ವಿಂಗಡನೆ ಅವರನ್ನು ತಟ್ಟಿಲ್ಲ ಎಂದೇ ಹೇಳಬಹುದು’ ಎಂದು ಪತ್ರಕರ್ತರೊಬ್ಬರು ಹೇಳುತ್ತಾರೆ. ಬಿಜೆಪಿಯು ವಾರ್ಡ್‌ನ ಹೆಸರಿನ ವಿಚಾರದ ಬಗ್ಗೆಯೇ ಮಾತನಾಡುತ್ತಾ, ಜನರು ಉಳಿದ ವಿಚಾರಗಳ ಬಗ್ಗೆ ಪ್ರಶ್ನಿಸದಂತೆ ದಾರಿ ತಪ್ಪಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...