ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಬಹುತೇಕರು ದಲಿತರು, ಆದಿವಾಸಿಗಳು, ಮುಸ್ಲಿಮರು ಸೇರಿದಂತೆ ಸಮಾಜದ ಬಡ ಮತ್ತು ಅಂಚಿಗೆ ತಳ್ಳಲ್ಪಟ್ಟ ವರ್ಗದವರು. ವಿಶ್ವದಾದ್ಯಂತ ಚಿತ್ರಹಿಂಸೆಯನ್ನು ತೊಲಗಿಸಲು ಕಟಿಬದ್ಧವಾಗಿರುವ ಸರಕಾರೇತರ ಸಂಸ್ಥೆಗಳ ಮಾನವ ಹಕ್ಕು ವೇದಿಕೆಯಾಗಿರುವ ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ಸಂಘಟನೆಯ ವಾರ್ಷಿಕ ವರದಿಯಲ್ಲಿ ಇದು ಬಹಿರಂಗವಾಗಿದೆ.
ಇತ್ತೀಚೆಗೆ “ಚಿತ್ರಹಿಂಸೆಯ ಸಂತ್ರಸ್ತರಿಗೆ ಅಂತರರಾಷ್ಟ್ರೀಯ ಬೆಂಬಲ ದಿನ”ದಂದು ಬಿಡುಗಡೆಗೊಳಿಸಲಾದ “ಇಂಡಿಯಾ: ಆನ್ಯುವಲ್ ರಿಪೋರ್ಟ್ ಆನ್ ಟಾರ್ಚರ್ 2019″ನಲ್ಲಿ ಭಾರತದಲ್ಲಿ 2019ರಲ್ಲಿ 1,731 ಮಂದಿ ಅಂದರೆ, ಪ್ರತೀದಿನ ಐವರು ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು UNCAT ಹೇಳಿದೆ. ಇವರಲ್ಲಿ 1,606 ಮಂದಿ ನ್ಯಾಯಾಂಗ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದರೆ, 125 ಸಾವುಗಳು ಪೊಲೀಸ್ ಕಸ್ಟಡಿ ಯಲ್ಲಿ ಸಂಭವಿಸಿವೆ. 2019ರಲ್ಲಿ 1,966 ಮಂದಿ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಇವರಲ್ಲಿ 1,819 ಮಂದಿ ನ್ಯಾಯಾಂಗ ಕಸ್ಟಡಿ ಯಲ್ಲಿ ಸಾವಿಗೀಡಾಗಿದ್ದರೆ, 147 ಸಾವುಗಳು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿವೆ. “ಈ ಅಂಕಿಅಂಶಗಳು ದೇಶದಲ್ಲಿ ವಾಸ್ತವವಾಗಿ ನಡೆಯುವ ಕಸ್ಟಡಿ ಮತ್ತು ಚಿತ್ರಹಿಂಸೆಯಿಂದ ಉಂಟಾದ ಸಾವುಗಳನ್ನು ಪ್ರತಿಫಲಿಸುವುದಿಲ್ಲ” ಎಂದು ವರದಿ ಎಚ್ಚರಿಸಿದೆ. ಅಂದರೆ, ಇದು ಅಧಿಕೃತ ಅಂಕಿಅಂಶವಾಗಿದ್ದು, ನೈಜ ಸಾವುಗಳ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರುವ ಸಂಭವವಿದೆ.

ಸಂಸ್ಥೆಯ ಭಾರತೀಯ ವಿಭಾಗವಾದ NCAT ನಿರ್ದೇಶಕ ಪಾರಿತೋಷ್ ಚಕ್ಮಾ ಹೇಳುವಂತೆ, “ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ 125 ಸಾವುಗಳ ಪೈಕಿ 70 ಮಂದಿ ಅಥವಾ 60 ಶೇಕಡಾ ಮಂದಿ ಬಡ ಮತ್ತು ಅವಗಣಿತ ಸಮುದಾಯಗಳಿಗೆ ಸೇರಿದವರು. ಇವರಲ್ಲಿ 13 ಮಂದಿ ದಲಿತರು ಮತ್ತು ಆದಿವಾಸಿಗಳು, 15 ಮಂದಿ ಮುಸ್ಲಿಮರು. 37 ಮಂದಿಯನ್ನು ಕಳವು, ವಂಚನೆ, ಅಕ್ರಮವಾಗಿ ಮದ್ಯ ಮಾರಾಟ, ಜೂಜಾಟ ಇತ್ಯಾದಿ ಸಣ್ಣಪುಟ್ಟ ಅಪರಾಧಗಳಿಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಮತ್ತು ಇದು ಅವರ ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುತ್ತದೆ.”
ಈ 125 ಸಾವುಗಳಲ್ಲಿ ಉತ್ತರ ಪ್ರದೇಶ 14 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ತಮಿಳುನಾಡು ಮತ್ತು ಪಂಜಾಬ್ ಇದ್ದು, ಅಲ್ಲಿ ತಲಾ11 ಸಾವುಗಳು ಸಂಭವಿಸಿವೆ. ಉಳಿದಂತೆ ಬಿಹಾರದಲ್ಲಿ 10, ಮಧ್ಯಪ್ರದೇಶದಲ್ಲಿ 9, ಗುಜರಾತಿನಲ್ಲಿ 8, ದಿಲ್ಲಿ ಮತ್ತು ಒಡಿಶಾದಲ್ಲಿ ತಲಾ 7, ಜಾರ್ಖಂಡ್‌ನಲ್ಲಿ 6, ಛತ್ತೀಸ್‌ಗಢ್, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ತಲಾ 5, ಆಂಧ್ರಪ್ರದೇಶ ಮತ್ತು ಹರ್ಯಾಣದಲ್ಲಿ ತಲಾ 4, ಕೇರಳ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ ಮತ್ತು ಮಣಿಪುರದಲ್ಲಿ ತಲಾ 2 ಹಾಗೂ ಅಸ್ಸಾಂ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ತ್ರಿಪುರದಲ್ಲಿ ತಲಾ 1 ಸಾವು ಸಂಭವಿಸಿದೆ.

ಈ 125 ಸಾವುಗಳಲ್ಲಿ 93 ಮಂದಿ ಅಂದರೆ, 74.4 ಶೇಕಡಾ ಮಂದಿ ಆರೋಪಿತ ಚಿತ್ರಹಿಂಸೆ/ ಸಂಚಿನ ಕಾರಣದಿಂದ ಸತ್ತಿದ್ದಾರೆ. 24 ಮಂದಿ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಸತ್ತಿದ್ದು, ಇವುಗಳಲ್ಲಿ 16 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ, ಏಳು ಮಂದಿ ಕಾಯಿಲೆಯಿಂದ ಮತ್ತು ಒಬ್ಬ ಗಾಯದಿಂದ ಸತ್ತಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಉಳಿದ ಐವರ ಕಸ್ಟಡಿ ಸಾವಿಗೆ ಕಾರಣ ತಿಳಿದುಬಂದಿಲ್ಲ.
ಚಕ್ಮಾ ಅವರ ಪ್ರಕಾರ ಹಿಂಸೆಯ ವಿಧಾನಗಳಲ್ಲಿ ದೇಹಕ್ಕೆ ಕಬ್ಬಿಣದ ಮೊಳೆಗಳನ್ನು ಹೊಡೆಯುವುದು, ಮರ್ಮಾಂಗಗಳಿಗೆ ಹೊಡೆಯುವುದು, ಮತ್ತು ಖಾರದ ಪುಡಿ ಹಚ್ಚುವುದು, ಬಾಯಿಗೆ ಮೂತ್ರ ಮಾಡುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು ಸೇರಿದೆ.
“ತಪ್ಪು ಒಪ್ಪಿಕೊಳ್ಳುವಂತೆ ಮಾಡಲು ಅಥವಾ ಲಂಚ ಸುಲಿಯಲು ಚಿತ್ರಹಿಂಸೆ ನೀಡಲಾಗುತ್ತದೆ. 2019ರಲ್ಲಿ ಬಳಸಲಾದ ಚಿತ್ರಹಿಂಸಾ ವಿಧಾನಗಳಲ್ಲಿ ದೇಹಕ್ಕೆ ಮೊಳೆ ಹೊಡೆಯುವುದು (ಬಿಹಾರದಲ್ಲಿ ಗುಫ್ರಾನ್ ಆಲಂ ಮತ್ತು ತಸ್ಲೀಂ ಅನ್ಸಾರಿ), ಕಾಲಿನ ಮೇಲೆ ರೋಲರ್ ಹರಿಸಿ ಬೆಂಕಿ ಹಚ್ಚುವುದು (ಕಾಶ್ಮೀರದಲ್ಲಿ ರಿಜ್ವಾನ್ ಅಸಾದ್ ಪಂಡಿತ್), “ಫಲಂಗ” ಅಂದರೆ ಕಾಲಿನ ಅಡಿಭಾಗಕ್ಕೆ ಹೊಡೆಯುವುದು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯುವುದು ( ಕೇರಳದಲ್ಲಿ ರಾಜ್‌ಕುಮಾರ್), ಮರ್ಮಾಂಗಗಳಿಗೆ ಹೊಡೆಯುವುದು (ಹರ್ಯಾಣದಲ್ಲಿ ಬ್ರಿಜ್‌ಪಾಲ್ ಮೌರ್ಯ ಮತ್ತು ಲಿನಾ ನರ್ಜಿನಾರಿ), ದೇಹಕ್ಕೆ ಸೂಜಿ ಚುಚ್ಚುವುದು (ತಮಿಳುನಾಡಿನಲ್ಲಿ ಮೂರು ವರ್ಷಗಳ ಮಗುವಿನ ಮೇಲೆ), ಬತ್ತಲೆಗೊಳಿಸಿ ಹೊಡೆಯುವುದು (ಹರ್ಯಾಣದಲ್ಲಿ ಮೊಹಮ್ಮದ್ ತನ್ವೀರ್ ಮತ್ತು ಲಿನಾ ನರ್ಜಿನಾರಿ, ಅಸ್ಸಾಂನಲ್ಲಿ ಮಿನುವಾರ ಬೇಗಂ, ಸನುವಾರ ಮತ್ತು ರುಮೇಲಾ), ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದೆಯುವುದು (ಅಸ್ಸಾಂನಲ್ಲಿ ಮಿನುವಾರ ಬೇಗಂ) ಇತ್ಯಾದಿ ಸೇರಿವೆ” ಎಂದು ಚಕ್ಮಾ ಹೇಳಿದ್ದಾರೆ.
ಉಳಿದ ಚಿತ್ರಹಿಂಸಾ ವಿಧಾನಗಳಲ್ಲಿ ವಿದ್ಯುತ್ ಶಾಕ್ ನೀಡುವುದು, ಮರ್ಮಾಂಗಗಳಿಗೆ ಪೆಟ್ರೋಲ್ ಸುರಿಯುವುದು, ಬೇಡಿ ತೊಡಿಸಿ ಹೊಡೆಯುವುದು, ದೇಹಕ್ಕೆ ಸೂಜಿ ಚುಚ್ಚುವುದು, ಕಾದ ಸರಳಿನಿಂದ ಬರೆ ಹಾಕುವುದು, ಗುದದ್ವಾರಕ್ಕೆ ಗಟ್ಟಿಯಾದ ವಸ್ತುಗಳನ್ನು ತುರುಕುವುದು, ಕೈಕಾಲು ಕಟ್ಟಿ ತಲೆಕೆಳಗಾಗಿ ನೇತಾಡಿಸಿ ಹೊಡೆಯುವುದು, ಮುಖಮೈಥುನ ಮಾಡುವಂತೆ ಬಲಾತ್ಕರಿಸುವುದು, ಕಟ್ಟಿಂಗ್ ಪ್ಲಯರ್‌ನಲ್ಲಿ ಉಗುರುಗಳನ್ನು ಅದುಮುವುದು, ಕೈಕಾಲು ಕಟ್ಟಿ ಎರಡು ಮೇಜುಗಳ ನಡುವೆ ನೇತಾಡಿಸಿ ಕಬ್ಬಿಣದ ಸರಳಿನಿಂದ ಹೊಡೆಯುವುದು ಇತ್ಯಾದಿ ಸೇರಿವೆ.
ಹಲವಾರು ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕಡ್ಡಾಯವಾದ ಮರಣೋತ್ತರ ಪರೀಕ್ಷೆಯನ್ನೂ ಮಾಡದೆ, ಶವಗಳನ್ನು ತರಾತುರಿಯಲ್ಲಿ ಸುಟ್ಟು ಚಿತ್ರಹಿಂಸೆಯ ಎಲ್ಲಾ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂಬುದನ್ನು ವರದಿ ಎತ್ತಿಹೇಳಿದೆ. ತಮಿಳುನಾಡಿನಲ್ಲಿ ಕಸ್ಟಡಿಯಲ್ಲಿ ಸತ್ತ 17 ವರ್ಷಗಳ ಹುಡುಗನ (ಹೆಸರು ತಡೆಹಿಡಿಯಲಾಗಿದೆ) ಮರಣೋತ್ತರ ಪರೀಕ್ಷೆ ನಡೆಸದಿರುವುದು. ಗುಜರಾತಿನಲ್ಲಿ ಹೀರಾ ಬಜನಿಯಾ ಎಂಬಾತನ ಶವವನ್ನು ಸಂಬಂಧಿಕರಿಗೆ ಅಂತಿಮ ಕ್ರಿಯೆಗಳನ್ನು ನಡೆಸಲೂ ಅವಕಾಶ ಕೊಡದೆ, ದಹನ ಮಾಡಿ ಚಿತ್ರಹಿಂಸೆಯ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕಿದುದು, ತ್ರಿಪುರದಲ್ಲಿ ಮಂಗಲ್ ದಾಸ್ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ ಬಲವಂತವಾಗಿ ದಹನ ಮಾಡಿದುದು, ಅದೇ ರೀತಿ ರಾಜಸ್ಥಾನದ ಹನುಮಾನ್ ಕೋಳಿ ಎಂಬಾತನ ಶವದ ಮರಣೋತ್ತರ ಪರೀಕ್ಷೆ ನಡೆಸದೆ, ಆತನ ಮಕ್ಕಳಿಗೆ ಕೊನೆಯ ಬಾರಿ ಮುಖನೋಡಲೂ ಅವಕಾಶ ಕೊಡದೆ ದಹನ ಮಾಡಿದುದು- ಹೀಗೆ ಕನಿಷ್ಟ ನಾಲ್ಕು ಇಂತಹಾ ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯರಿಗೆ ಚಿತ್ರಹಿಂಸೆ ನೀಡುವುದು ಮತ್ತು ಹೆಚ್ಚಾಗಿ ಲೈಂಗಿಕ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದ್ದು, ಹೆಚ್ಚಿನ ಬಾರಿ ಇವರು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಾರೆ. 2019ರಲ್ಲಿ ಕನಿಷ್ಟ ನಾಲ್ವರು ಮಹಿಳೆಯರು ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ. ಮಕ್ಕಳನ್ನು ಕೂಡಾ ಚಿತ್ರಹಿಂಸೆಗೆ ಗುರಿಪಡಿಸುವುದು ಮುಂದುವರಿದಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) “ಕೈಂ ಇನ್ ಇಂಡಿಯಾ- 2018” ವರದಿಯಲ್ಲಿ ಪೊಲೀಸರು ಅಪ್ರಾಪ್ತ ಸಂತ್ರಸ್ತರಿಗೆ 3,164 ಪ್ರಕರಣಗಳಲ್ಲಿ ಸಾಧಾರಣ ಮತ್ತು 3,467 ಪ್ರಕರಣಗಳಲ್ಲಿ ಗಂಭೀರ ಸ್ವರೂಪದ ಹಾನಿಯುಂಟುಮಾಡಿರುವುದನ್ನು ದಾಖಲಿಸಿದೆ.

ಕೈದಿಗಳ ಜೀವನ ಪರಿಸ್ಥಿತಿಯನ್ನು ಸುಧಾರಿಸಬೇಕೆಂದು ಸೆಪ್ಟೆಂಬರ್ 2017ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳ ಸರಮಾಲೆಯನ್ನೇ ನೀಡಿದರೂ, ಜೈಲುಗಳು ನರಕಗಳಾಗಿಯೇ ಉಳಿದಿವೆ. 2019ರಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ 1,606 ಸಾವುಗಳು ಸಂಭವಿಸಿವೆ. ಈ ಸಾವುಗಳಲ್ಲಿ ಹಲವಾರು ಸಾವುಗಳು ಚಿತ್ರಹಿಂಸೆಯ ಕಾರಣದಿಂದ ಸಂಭವಿಸಿವೆ.
“ಚಿತ್ರಹಿಂಸೆ ನಡೆಸುವವರಿಗೆ ಸಂಪೂರ್ಣ ರಕ್ಷಣೆ ಇದೆ. ಭಾರತ ಸರಕಾರದ ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ)ದ 2005ರಿಂದ 2018ರ ತನಕದ ವರದಿಗಳ ಪ್ರಕಾರ “ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಪ್ರಕರಣಗಳಲ್ಲಿ” 500 ಸಾವುಗಳು ಸಂಭವಿಸಿದ್ದು, 281 ಪ್ರಕರಣಗಳು ದಾಖಲಾಗಿವೆ ಮತ್ತು ಒಬ್ಬನೇ ಒಬ್ಬ ಪೊಲೀಸನಿಗೆ ಶಿಕ್ಷೆಯಾಗಿಲ್ಲ” ಎಂದು ಚಕ್ಮಾ ಹೇಳಿದ್ದಾರೆ.
ಚಿತ್ರಹಿಂಸೆಯ ವಿರುದ್ಧ ವಿಶ್ವಸಂಸ್ಥೆಯ ಒಪ್ಪಂದವನ್ನು ಅಂಗೀಕರಿಸಿ, ಚಿತ್ರಹಿಂಸೆ ವಿರುದ್ಧ ರಾಷ್ಟ್ರೀಯ ಕಾನೂನು ತಂದು, ಚಿತ್ರಹಿಂಸಕರು ಯಾವುದೇ ಶಿಕ್ಷೆಯಿಲ್ಲದೇ ಪಾರಾಗುವುದನ್ನು ನಿಲ್ಲಿಸಬೇಕು ಎಂದು ಯುನೈಟೆಡ್ ಎನ್‌ಜಿಓ ಕ್ಯಾಂಪೇನ್ ಎಗೈನ್ಸ್ಟ್ ಟಾರ್ಚರ್ (UNCAT) ಎಂಬ ಜಾಗತಿಕ ಮಾನವ ಹಕ್ಕು ವೇದಿಕೆಯು ಭಾರತವನ್ನು ಒತ್ತಾಯಿಸಿದೆ.
–ಅಬ್ದುಲ್ ಬಾರಿ ಮಸೌದ್
ಮೂಲ: ಮುಸ್ಲಿಂ ಮಿರರ್
ಅನುವಾದ: ನಿಖಿಲ್ ಕೋಲ್ಪೆ
ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರ ಬಂಧನ


