’82ನೇ ವೆನಿಸ್ ಚಲನಚಿತ್ರೋತ್ಸವ’ದಲ್ಲಿ ಚೊಚ್ಚಲ ಚಲನಚಿತ್ರ ನಿರ್ಮಾಪಕಿ ಅನುಪರ್ಣ ರಾಯ್ ಅವರು ತಮ್ಮ ‘ಸಾಂಗ್ಸ್ ಆಫ್ ಫಾರ್ಗಾಟನ್ ಟ್ರೀಸ್’ ಚಿತ್ರಕ್ಕಾಗಿ ಒರಿಝೋಂಟಿ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಅನುಪರ್ಣ ರಾಯ್ ವೆನಿಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ರಾಯ್ ಅವರು ಭಾವನಾತ್ಮಕ ಭಾಷಣ ಮಾಡಿದ್ದು, ಪ್ಯಾಲೆಸ್ತೀನ್‌ನ ಮಕ್ಕಳ ದುಃಸ್ಥಿತಿಯ ಬಗ್ಗೆ ಸಮಾರಂಭದಲ್ಲಿ ಹಾಜರಿದ್ದವರ ಗಮನ ಸೆಳೆದಿದ್ದಾರೆ.
“ನಾನು ಸ್ವಲ್ಪ ಸಮಯ ತೆಗೆದುಕೊಂಡು ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ಮತ್ತು ಅತ್ಯಂತ ವಿನಾಶಕಾರಿ ವಿಷಯದ ಬಗ್ಗೆ ಮಾತನಾಡಲು ಬಯಸುತ್ತೇನೆ. ಪ್ರತಿಯೊಂದು ಮಗುವೂ ಶಾಂತಿ, ಸ್ವಾತಂತ್ರ್ಯ, ವಿಮೋಚನೆಗೆ ಅರ್ಹವಾಗಿದೆ ಮತ್ತು ಪ್ಯಾಲೆಸ್ತೀನ್ ಅದಕ್ಕೆ ಹೊರತಾಗಿಲ್ಲ. ಇದಕ್ಕಾಗಿ ನಾನು ಯಾವುದೇ ಚಪ್ಪಾಳೆಯನ್ನು ಬಯಸುವುದಿಲ್ಲ. ಪ್ಯಾಲೆಸ್ತೀನ್ ಜೊತೆ ನಿಲ್ಲಲು ಒಂದು ಕ್ಷಣ ಯೋಚಿಸುವುದು ನಮ್ಮ ಜವಾಬ್ದಾರಿಯಾಗಿದೆ. ನನ್ನ ಮಾತುಗಳಿಂದ ನನ್ನ ದೇಶದಲ್ಲಿ ನಿರಾಸೆ ಉಂಟಾಗಬಹುದು, ಆದರೆ ನನಗೆ ಅದು ಮುಖ್ಯವಲ್ಲ” ಎಂದು ಸೆಪ್ಟೆಂಬರ್ 6ರಂದು ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ರಾಯ್ ಹೇಳಿದ್ದಾರೆ.
She is #AnuparnaRoy – A #Bengali #Indian who won the best director award at Venice Film Festival (Orizsonti Section)
How many leaders of this country have congratulated her? Did our #PMModi wish her – can’t find on ‘X’
Ms Roy from the global stage said she “might upset” her… pic.twitter.com/34UZnpU6sA
— Tamal Saha (@Tamal0401) September 8, 2025
“ನಾನು ಜಾಗತಿಕ ಪ್ರಜೆಯಾಗಿ ಜನರ ಸಮಸ್ಯೆಗಳು ಮತ್ತು ನೋವುಗಳ ಬಗ್ಗೆ ಮಾತನಾಡಲು ಬಯಸುತ್ತೇನೆ” ಎಂದು ಪಶ್ಚಿಮ ಬಂಗಾಳದ ಪುರುಲಿಯಾದವರಾದ ರಾಯ್ ತಿಳಿಸಿದ್ದಾರೆ.
“ಪ್ಯಾಲೆಸ್ತೀನ್ ಸಮಸ್ಯೆ ಜಾಗತಿಕ ಬಿಕ್ಕಟ್ಟಾಗಿದ್ದು, ಇಸ್ರೇಲ್‌ನಂತಹ ಪ್ರಬಲ ದೇಶವು ನ್ಯಾಯ, ಶಾಂತಿ ಮತ್ತು ಜೀವನವನ್ನು ನಾಶಪಡಿಸುತ್ತಿದೆ. ಇದು ನಾಚಿಕೆಗೇಡಿನ ಸಂಗತಿ. ಜಾಗತಿಕ ನಾಗರಿಕಳಾಗಿ ನಾನು ಈ ಸಮಸ್ಯೆಗಳು ಮತ್ತು ಸಂಕಟಗಳ ಬಗ್ಗೆ ಮಾತನಾಡಲೇಬೇಕು. ನನ್ನ ಬಳಿ ಮೈಕ್ ಇತ್ತು, ಹಾಗಾಗಿ, ಪ್ಯಾಲೆಸ್ತೀನ್ ನೋವುಗಳ ಬಗ್ಗೆ ಮಾತನಾಡದೆ ಇರಲು ನನಗೆ ಸಾಧ್ಯವಾಗಲಿಲ್ಲ” ಎಂದು ರಾಯ್ ವೆನಿಸ್‌ನಿಂದ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.
ನನ್ನ ಗೆಲುವು ಪುರುಲಿಯಾದ ಗೆಲುವು:ಅನುಪರ್ಣ ರಾಯ್
“ಇದು ಜನರ ನಂಬಿಕೆಗೆ ಮತ್ತು ರಂಗಮತಿಗೆ ಸಿಕ್ಕ ಜಯ. ದೇಬ್ಜಿತ್ ಸಮಂತ, ಸಕ್ಯಾದೇಬ್ ಚೌಧರಿ, ದೇಬ್ಜಿತ್ ಬ್ಯಾನರ್ಜಿ, ರೋಹಿತ್ ರಾಜ್, ಹರ್ಷ ಪಟೇಲ್, ಆದಿತ್ಯ ಪಂಡಿತ್, ಪ್ರದೀಪ್ ವಿಘ್ನವೇಲು, ಅಂಜಲಿ ಮುಲ್ಗೆ ಮತ್ತು ಆದಿತ್ಯ ರಾಜ್ ಸೇರಿದಂತೆ ನನ್ನ ಕ್ಯಾಮರಾ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ರಾಯ್ ಹೇಳಿದ್ದಾರೆ.
“ಸಾಂಗ್ಸ್ ಆಫ್ ಫಾರ್ಗಾಟನ್ ಟ್ರೀಸ್” ಚಿತ್ರವು ಮುಂಬೈನಲ್ಲಿ ವಾಸಿಸುವ ಇಬ್ಬರು ವಲಸೆ ಮಹಿಳೆಯರ ಬದುಕಿನ ಕಥೆಯನ್ನು ಸ್ಪರ್ಶಿಸುತ್ತದೆ. ಮಹತ್ವಾಕಾಂಕ್ಷಿ ನಟಿ ಥೂಯಾ ಮತ್ತು ಕಾರ್ಪೊರೇಟ್ ವೃತ್ತಿಪರೆ ಶ್ವೇತಾ ನಡುವಿನ ಒಂಟಿತನ, ಹೋರಾಟ ಮತ್ತು ಮಾನವೀಯ ಬಾಂಧವ್ಯದ ಕಥೆಯನ್ನು ಹೃದಯಸ್ಪರ್ಶಿಯಾಗಿ ಈ ಚಿತ್ರ ತೆರೆದಿಡುತ್ತದೆ. ನಾಝ್ ಶೇಖ್ ಮತ್ತು ಸುಮಿ ಬಾಘೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅನುರಾಗ್ ಕಶ್ಯಪ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ರಾಯ್ ಅವರ ಸಾಧನೆಯನ್ನು ಭಾರತೀಯ ಸ್ವತಂತ್ರ ಚಲನಚಿತ್ರ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದು ಶ್ಲಾಘಿಸಿವೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಗಣ್ಯರು ರಾಯ್ ಅವರನ್ನು ಅಭಿನಂದಿಸಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಥಾ ಹಂದರದವನ್ನು ತೆರೆದಿಟ್ಟಿರುವುದಕ್ಕೆ ದೊರೆತಿರುವ ಮಾನ್ಯತೆಯನ್ನು ಉಲ್ಲೇಖಿಸಿದ್ದಾರೆ.
ಹಮಾಸ್ ಗುರಿಯಾಗಿಸಿ ದೋಹಾ ಮೇಲೆ ದಾಳಿ: ಇಸ್ರೇಲ್ ಕೃತ್ಯಕ್ಕೆ ಜಾಗತಿಕ ಖಂಡನೆ


