ದುರುಳ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಪಾದರಸ ಚುಚ್ಚುಮದ್ದು ನೀಡಿ, ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾವಿಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಿರುವ ಮಹಿಳೆ, ‘ತನ್ನ ಪತಿ ಮತ್ತು ಮಾವ ನನ್ನನ್ನು ಕೊಲ್ಲಲು ಸಂಚುಹೂಡಿ, ವೈದ್ಯಕೀಯ ದಂಪತಿಯ ನೆರವು ಪಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.
ಮೃತ ಮಹಿಳೆಯನ್ನು ವಿದ್ಯಾ ಎಂದು ಗುರುತಿಸಾಗಿದೆ. ಅವರು ಕಳೆದ ವಾರ ಮೃತಪಟ್ಟಿದ್ದಾರೆ. ಅವರು ತಮ್ಮ ಮೇಲಾದ ದೌರ್ಜ್ಯದ ಕುರಿತು ಪೊಲೀಸರಿಗೆ ವಿವರಿಸಿರುವಂತೆ, ಅವರಿಗೆ ಫೆಬ್ರವರಿ 26ರಂದು ಆಕೆಯ ಪತಿ ಪಾದರವನ್ನು ಇಂಜೆಕ್ಟ್ ಮಾಡಿದ್ದಾರೆ.
“SLN ಡಯಾಗ್ನೋಸ್ಟಿಕ್ ಸೆಂಟರ್ ಎಂಬಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ ಮತ್ತು ಆಕೆಯ ಪತಿ ನನ್ನ ಗಂಡನಿಗೆ ಕ್ಲೋರೋಪಾರ್ಫ್, ಸಿರಿಂಜ್ ಹಾಗೂ ಮರ್ಕ್ಯುರಿಯನ್ನು ನೀಡಿದ್ದರು. ಅವುಗಳನ್ನು ಬಳಸಿಕೊಂಡ ನನ್ನ ಪತಿ, ನಾನು ಫೆಬ್ರವರಿ 26ರ ರಾತ್ರಿ ಮಲಗಿದ್ದಾಗ, ಕ್ಲೋರೋಫಾರ್ಮ್ ಮೂಲಕ ನನ್ನ ಪ್ರಜ್ಞೆ ತಪ್ಪಿಸಿ, ಪಾದರಸವನ್ನು ಇಂಜೆಕ್ಟ್ ಮಾಡಿದ್ದಾರೆ” ಎಂದು ವಿವರಿಸಿರುವುದಾಗಿ ವರದಿಯಾಗಿದೆ.
“ಮರುದಿನ ಸಂಜೆ ವೇಳೆಗೆ ನನಗೆ ಪ್ರಜ್ಞೆ ಬಂದಿತು. ಆಗ, ನನ್ನ ಕಾಲು ಊದಿಕೊಂಡಿತ್ತು. ನನ್ನ ಬಲ ತೊಡೆಯಲ್ಲಿ ತೀವ್ರ ನೋವಾಗುತ್ತಿತ್ತು. ಕೆಲ ದಿನಗಳಲ್ಲಿಯೇ ನನ್ನ ಆರೋಗ್ಯ ಸ್ಥಿತಿ ಹದಗೆಟ್ಟು, ಮಾರ್ಚ್ 7ರಂದು ಅತ್ತಿಬೆಲೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಅಲ್ಲಿಂದ, ಆಕ್ಸ್‌ಫರ್ಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ವೈದ್ಯರು ಪರೀಕ್ಷಿಸಿದಾಗ, ನನ್ನ ದೇಹದಲ್ಲಿ ಪಾದರಸ ಇರುವುದು ಪತ್ತೆಯಾಯಿತು” ಎಂದು ಸಾವಿನ ಅಂಚಿನಲ್ಲಿದ್ದ ಮಹಿಳೆ ಪೊಲೀಸರಿಗೆ ವಿವರಿಸಿದ್ದರೆಂದು ತಿಳಿದುಬಂದಿದೆ.
“ನನ್ನ ಪತಿ ಬಸವರಾಜ್ ಮತ್ತು ಅವನ ತಂದೆ ಮರಿಶ್ವಾಮಾಚಾರಿ ನನ್ನನ್ನು ಕೊಲ್ಲುವ ಉದ್ದೇಶದಿಂದ ನನ್ನ ದೇಹಕ್ಕೆ ಪಾದರಸವನ್ನು ಚುಚ್ಚಿದ್ದಾರೆ. ಅವರಿಬ್ಬರು ನನಗೆ ನಿರಂತರ ಕಿರುಕುಳ ನೀಡಿ, ಅವಮಾನಿಸುತ್ತಿದ್ದರು. ಮನೆಯೊಳಗೆ ಕೂಡಿಹಾಕುತ್ತಿದ್ದರು” ಎಂದು ವಿದ್ಯಾ ಆರೋಪಿಸಿದ್ದರು.
ದೇಹದಲ್ಲಿ ಪಾದರಸ ಇದ್ದಿದ್ದರಿಂದ ಆಕೆಯ ಮೂತ್ರಪಿಂಡಗಳು ಸೇರಿದಂತೆ ಬಹು ಅಂಗಗಳು ಹಾನಿಯಾಗಿದ್ದವು. ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಅಲ್ಲಿ ನಿಯಮಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದಾಗ್ಯೂ, ಆಕೆ 9 ತಿಂಗಳ ಜೀವನ್ಮರಣ ಹೋರಾಟದ ಬಳಿಕ ಇತ್ತೀಚೆಗೆ ಮೃತಪಟ್ಟಿದ್ದಾರೆ.


