ಹೊಸ ವಿವಿಪ್ಯಾಟ್ ಯಂತ್ರಗಳ ಸೇರ್ಪಡೆಯೊಂದಿಗೆ ಇವಿಎಂ ಬಗೆಗಿನ ಚರ್ಚೆ ಮುಕ್ತಾಯವಾಗಬೇಕಿತ್ತು. ಆದರೆ ವಿವಿಪ್ಯಾಟ್‍ನೊಂದಿಗೆ ಚರ್ಚೆ ಮತ್ತೆ ಶುರುವಾಗಿದೆ. ಕಳೆದ ವಾರ ನಡೆದ ಮಹತ್ವದ ಉಪಚುನಾವಣೆಗಳಲ್ಲಿ ಆಡಳಿತ ಪಕ್ಷ ಸೋತಿದ್ದರಿಂದ ವಿರೋಧಪಕ್ಷಗಳಿಗೆ ಇವಿಎಂ ಬಗ್ಗೆ ಭರವಸೆ ಹೆಚ್ಚಾಗುತ್ತದೇನೋ ಎಂದುಕೊಂಡರೆ, ಅನೇಕ ವಿರೋಧಪಕ್ಷದ ನಾಯಕರು ಪೇಪರ್ ಬ್ಯಾಲಟ್‍ಗೆ ಮರಳಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ. ಹೊಸ ಇವಿಎಂಗಳ ಬಗ್ಗೆ ಬಂದ ತಕರಾರುಗಳಿಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗವು ತಾನೇ ಮುಂದಾಗಿ ಹೆಚ್ಚಿನ ಮುತುವರ್ಜಿ ವಹಿಸಿ ಸಂಶಯಗಳನ್ನು ನಿವಾರಿಸಬೇಕಿತ್ತು. ಆದರೆ ಆಯೋಗದ ಅಧಿಕಾರಶಾಹಿ ನಿರಾಕರಣೆ ಮತ್ತು ನೀರಸ ಪ್ರತಿಕ್ರಿಯೆಗಳು ಈ ಅನವಶ್ಯಕ ಚರ್ಚೆಗೆ ಹೊಸ ಜೀವ ತುಂಬಿವೆ.
ಈ ಇವಿಎಂಗಳ ವಿಷಯದಲ್ಲಿ ಒಂದು ಸಂಗತಿಯನ್ನು ನಾನು ಒಪ್ಪಿಕೊಳ್ಳಲೇಬೇಕು. ಈ ವಿಚಾರದಲ್ಲಿ ನಾನು ನನ್ನ ಗೆಳೆಯರ ಮತ್ತು ಸಹೋದ್ಯೋಗಿಗಳ ಬಳಗದಲ್ಲಿ ಅಲ್ಪಸಂಖ್ಯಾತನಾಗಿದ್ದೇನೆ. ನನಗೆ ಗೊತ್ತಿರುವ ಮತ್ತು ನಾನು ಗೌರವಿಸುವ ಎಲ್ಲರೂ ಈ ಇವಿಎಂಗಳನ್ನು ಅಪನಂಬಿಕೆಯಿಂದ ನೋಡುವವರೇ ಆಗಿದ್ದಾರೆ. ಇವಿಎಂಗಳನ್ನು ಸ್ವಲ್ಪ ಮಟ್ಟಿಗಾದರೂ ತಿರುಚದೇ ಕಳೆದ ಮೂರು ವರ್ಷಗಳ ಚುನಾವಣೆಗಳಲ್ಲಿ ಬಿಜೆಪಿಯ ಭರ್ಜರಿ ಗೆಲುವುಗಳು ಸಾಧ್ಯವಿರಲಿಲ್ಲವೆಂದು ಇವರೆಲ್ಲರೂ ನಂಬಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗಳಲ್ಲೂ ಇದೇ ಆಟ ಪುನರಾವರ್ತನೆ ಆಗಬಹುದೆಂಬುದು ಅವರೆಲ್ಲರ ಆತಂಕ. ಅವರ ಈ ವಾದವನ್ನು ಇನ್ನಷ್ಟು ಗಟ್ಟಿಗೊಳಿಸಿ ಸಮರ್ಥಿಸಬೇಕೆಂದು ನನ್ನೆಡೆಗೆ ನೋಡುತ್ತಾರೆ. ಆದರೆ, ನಾನು ಹೊಸ ಇಗಿಒಗಳ ಪರವಾಗಿ ವಾದಿಸಿ ಅವರೆಲ್ಲರನ್ನು ನಿರಾಶೆಗೊಳಿಸುತ್ತೇನೆ. ಅವರು ನನ್ನ ಮಾತನ್ನು ಮೌನವಾಗಿ ಕೇಳಿಸಿಕೊಳ್ಳುತ್ತಾರಾದರೂ, ನನ್ನ ವಾದದಿಂದ ಅವರಿಗೆ ಮನವರಿಕೆಯಾಗುವುದಿಲ್ಲ. ಮಿಕ್ಕವರಿರಲಿ, ನನ್ನ ಸ್ನೇಹಿತರಾದ ಪ್ರಶಾಂತ್ ಭೂಷಣ್ ಅವರಿಗೂ ಮನವರಿಕೆ ಮಾಡಲು ನನ್ನಿಂದ ಸಾಧ್ಯವಾಗಿಲ್ಲ. ನನ್ನಲ್ಲೇ ಏನಾದರೂ ಕೊರತೆಯಿರಬಹುದು ಅನಿಸುತ್ತಿದೆ. ಆದರೂ ಇಷ್ಟಕ್ಕೇ ಬಿಡದೇ ಇನ್ನೊಂದು ಪ್ರಯತ್ನ ಮಾಡೋಣವೆನಿಸಿದ್ದರಿಂದ ಈ ಬರಹ ನಿಮ್ಮ ಮುಂದಿಡುತ್ತಿದ್ದೇನೆ.
ಮೂರು ಸಕಾರಣ ಆತಂಕಗಳ ಆಧಾರದ ಮೇಲೆ ಇವಿಎಂ ವಿರುದ್ಧದ ವಾದ ನಿಂತಿದೆ. ಮೊದಲನೆಯದು, ಹೌದು ಇವಿಎಂಗಳನ್ನು ತಿರುಚಲು ಸಾಧ್ಯ. ಎರಡನೆಯದು, ಮೋದಿ ಶಾ ಜೋಡಿ ಯಾವುದೇ ರೀತಿಯಲ್ಲಾದರೂ ಸರಿ, ಎಷ್ಟು ಬೆಲೆ ತೆತ್ತಾದರೂ ಸರಿ ಚುನಾವಣೆಗಳನ್ನು ಗೆಲ್ಲಲೇಬೇಕೆಂದು ಹೊರಟಿದ್ದಾರೆ. ಅವರು ಇಂಥದ್ದನ್ನು ಮಾಡಲಾರರು ಎಂದು ಹೇಳಲಾಗದು. ಮೂರನೆಯದು, ಚುನಾವಣಾ ಆಯೋಗ ಆಡಳಿತ ಪಕ್ಷದ ಅವಶ್ಯಕತೆಗನುಗುಣವಾಗಿ ಬಗ್ಗುವುದಿಲ್ಲ ಎನ್ನುವ ಭರವಸೆಯಿಲ್ಲದಿರುವುದು. ಈ ಮೂರೂ ಆತಂಕಗಳಿಗೆ ಖಂಡಿತವಾಗಿಯೂ ಆಧಾರಗಳಿವೆ. ಆದರೆ ಈ ಅಂಶಗಳಿಂದ ಇವಿಎಂಗಳನ್ನು ತಿರುಚಲಾಗುತ್ತಿದೆ ಮತ್ತು ಮುಂದೆಯೂ ತಿರುಚಲಾಗುವುದು ಎನ್ನಲಾಗದು, ಇವಿಎಂನಿಂದ ಬ್ಯಾಲಟ್ ಪೇಪರ್ ಕಡೆ ಹೋಗುವುದು ಅವಶ್ಯಕವೆಂದೂ ಮತ್ತು ಅದೇ ಈ ಸಮಸ್ಯೆಗೆ ಪರಿಹಾರವೆಂದೂ ಭಾವಿಸಲಾಗದು.
ದುರದೃಷ್ಟವಶಾತ್, ಇವಿಎಂ ಕುರಿತಾದ ಚರ್ಚೆ ಅದರ ದುರುಪಯೋಗದ ಸಂಭವನೀಯತೆಗಿಂತ ಸಾಧ್ಯತೆಯ ಮೇಲೇ ಕೇಂದ್ರೀಕೃತವಾಗಿದೆ. ಇವಿಎಂನ ಟೀಕಾಕಾರರು ಇವಿಎಂಗಳನ್ನು ತಿರುಚಬಹುದು ಎಂದು ಅತ್ಯಂತ ಪರಿಣಿತಿಯಿಂದಲೇ ತೋರಿಸಿದ್ದಾರೆ. ಚುನಾವಣಾ ಅಯೋಗವನ್ನು ಒಳಗೊಂಡಂತೆ ಇವಿಎಂನ ಬೆಂಬಲಿಗರು ಅದರ ವಿರುದ್ಧ ವಾದ ಮಾಡುವ ಸರಿಯಾದ ದಾರಿ ಬಿಟ್ಟುಕೊಟ್ಟು, ಇವಿಎಂಗಳನ್ನು ತಿರುಚಲು ಸಾಧ್ಯವೇ ಇಲ್ಲ ಎನ್ನುವ ವಾದ ಮಂಡಿಸಿದ್ದಾರೆ. ನಾನು ಎಲೆಕ್ಟ್ರಾನಿಕ್ ತಜ್ಞ ಅಲ್ಲ, ಆದರೆ ಯಾವುದೇ ಎಲೆಕ್ಟ್ರಾನಿಕ್ ಯಂತ್ರವನ್ನು ಪ್ರೋಗ್ರಾಮ್ ಮಾಡಬಹುದು ಮತ್ತು ತಿರುಚಬಹುದು ಎನ್ನುವುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ವಿಷಯ. ಇವಿಎಂಗಳನ್ನು ತಿರುಚಬಹುದೋ ಇಲ್ಲವೋ ಎನ್ನುವ ಚರ್ಚೆಗಿಂತ ಹಾಗೆ ಮಾಡಲು ಅವಶ್ಯವಿರುವ ವಾಸ್ತವಿಕ ಸ್ಥಿತಿಯೇನಾಗಿರಬೇಕು ಎಂಬುದು ಮುಖ್ಯವಾಗುತ್ತದೆ. ಆ ಯಂತ್ರದ ಡಿಸೈನ್ ಹೇಗಿರುತ್ತೆ ಎನ್ನುವುದರ ಬಗ್ಗೆ ನಮ್ಮ ಗಮನವನ್ನು ಕೇಂದ್ರೀಕರಿಸದೇ ಅದರ ಬಳಕೆಯ ಆಡಳಿತಾತ್ಮಕ ಪ್ರೋಟೋಕಾಲ್ ಬಗ್ಗೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.
ಇವಿಎಂಗಳ ಡಿಸೈನ್‍ನ ಎರಡು ಅಂಶಗಳು ಮಾತ್ರ ನಮ್ಮ ಈ ಚರ್ಚೆಗೆ ಪ್ರಸ್ತುತವಾಗುತ್ತವೆ. ಒಂದು, ಈ ಯಂತ್ರಗಳು ದೂರದಿಂದ ರಿಮೋಟ್ ಸಂದೇಶಗಳನ್ನು ಸ್ವೀಕರಿಸುವುದಿಲ್ಲ. ಹಾಗಾಗಿ, ಈ ಯಂತ್ರವನ್ನು ತಿರುಚಬೇಕಾದರೆ ಯಾರಾದರೂ ಪ್ರತಿಯೊಂದು ಯಂತ್ರವನ್ನು ಸ್ವತಃ ಕೈಯಿಂದಲೇ ತಿರುಚಬೇಕು. ಎರಡು, ಯಂತ್ರದಲ್ಲಿರುವ ಚಿಪ್ ಪಕ್ಷದ ಚಿನ್ಹೆ ಅಥವಾ ಹೆಸರುಗಳನ್ನು ಗುರುತಿಸುವುದಿಲ್ಲ; ಇದು ಅಭ್ಯರ್ಥಿಗಳ ಕ್ರಮಸಂಖ್ಯೆಯಿಂದ ಮತಗಳನ್ನು ದಾಖಲಿಸುತ್ತದೆ. ಹಾಗಾಗಿ ಯಾವುದೇ ಒಂದು ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಈ ಯಂತ್ರ ವರ್ತಿಸಬೇಕೆಂದು ಇಚ್ಛಿಸಿದ್ದಲ್ಲಿ, ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರ ಹಾಗೂ ಆ ನಿರ್ದಿಷ್ಟ ಯಂತ್ರವನ್ನು ಆ ಕ್ಷೇತ್ರಕ್ಕೆ ನೀಡಿದ ನಂತರವೇ ತಿರುಚಬೇಕಾಗುತ್ತದೆ. ಇದನ್ನೆಲ್ಲ ಮಾಡಲು ಮತದಾನಕ್ಕಿಂತ ಮುಂಚೆ ಸಾಮಾನ್ಯವಾಗಿ ಕೇವಲ 72 ಗಂಟೆಗಳಷ್ಟೆ ಉಳಿದಿರಲು ಸಾಧ್ಯ.
ಇವಿಎಂ ವಿರುದ್ಧ ಒಂದು ಸಕಾರಣ ವಾದ ಇರಬೇಕಾದರೆ, ಅದು ಮತದಾನದ ಕೆಲವು ದಿನಗಳ ಮುಂಚೆ ಆಡಳಿತಾತ್ಮಕ ಕಾರ್ಯವಿಧಾನ ಹಾಗೂ ಪ್ರೋಟೋಕಾಲ್‍ಗಳು ಇವಿಎಂಗಳನ್ನು ತಿರುಚಲು ವಾಸ್ತವದಲ್ಲಿ ಅನುವು ಮಾಡಿಕೊಡುತ್ತವೆ ಎಂದು ತೋರಿಸಬೇಕು. ಚುನಾವಣೆಗಳನ್ನು ರಿಗ್ ಮಾಡಲಾಗಿದೆ ಎಂದು ನಂಬುವ ಮೊದಲು, ಕೆಲವು ಸ್ಥಳಗಳಲ್ಲಿ ಇಂತಹ ಫಿಸಿಕಲ್ ಟ್ಯಾಂಪರಿಂಗ್ (ತಿರುಚುವಿಕೆ) ಆಗಿದೆ ಎನ್ನಲು ಕೆಲವು ಸಾಕ್ಷ್ಯಾಧಾರಗಳು ಬೇಕು; ಅವು ಸಾಂದರ್ಭಿಕ ಸಾಕ್ಷ್ಯವಾದರೂ ಸರಿ, ಸಾಕ್ಷ್ಯಾಧಾರಗಳು ಬೇಕೇ ಬೇಕು. ಇಂತಹ ಯಾವುದೇ ಸಾಕ್ಷ್ಯಾಧಾರಗಳು ಇಲ್ಲಿಯವರೆಗೂ ನನ್ನ ಗಮನಕ್ಕೆ ಬಂದಿಲ್ಲ. ಹಲವು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇರಲಿಲ್ಲ. ಆದರೂ ಅಲ್ಲಿ ಬಿಜೆಪಿ ಗೆದ್ದಿದೆಯೆಂದ ಮಾತ್ರಕ್ಕೆ ರಿಗ್ಗಿಂಗ್ ಆಗಿದೆ, ಇದೇ ರಿಗ್ಗಿಂಗ್‍ನ ಸಾಕ್ಷಿಯೆಂದು ನಂಬಲು ನಾನು ತಯಾರಿಲ್ಲ. ಭಾರತದ ಚುನಾವಣಾ ಇತಿಹಾಸದ ತುಂಬಾ ಇಂತಹ ಅಸಂಭವನೀಯ, ನಂಬಲಸಾಧ್ಯವಾದ ಎಷ್ಟೋ ಗೆಲುವುಗಳಿವೆ. ಇವಿಎಂ ಮುಖಾಂತರ ತನಗೆ ಬೇಕಾದ ಫಲಿತಾಂಶ ತಂದುಕೊಳ್ಳುವ ಸಾಧ್ಯತೆ ಇದ್ದಿದ್ದರೆ ಗುಜರಾತ್ ಮತ್ತು ಕರ್ನಾಟಕದಲ್ಲಿ ಇರಿಸುಮುರುಸಾಗುವಂತಹ ಫಲಿತಾಂಶವನ್ನು ಬಿಜೆಪಿ ತಂದುಕೊಳ್ಳುತ್ತಿರಲಿಲ್ಲ ಎನ್ನುವುದೂ ಸ್ಪಷ್ಟ. ಇದರ ಹೊರತಾಗಿ, ಚುನಾವಣೋತ್ತರ ಸಮೀಕ್ಷೆಗಳೂ ಕೂಡ ಉತ್ತರಪ್ರದೇಶವೊಂದನ್ನು ಬಿಟ್ಟು ಮಿಕ್ಕೆಲ್ಲ ಕಡೆ ಈ ಅಸಂಭವನೀಯ ಗೆಲವುಗಳನ್ನೇ ಖಚಿತಪಡಿಸಿವೆ. 
ವಿವಿಪ್ಯಾಟ್ ಯಂತ್ರಗಳನ್ನು ಜೋಡಿಸಿದ ಹೊಸ ತರಹದ ಇವಿಎಂಗಳಲ್ಲಿ ಮತದಾರ ಮತ ಹಾಕಿದ ತಕ್ಷಣವೇ ಒಂದು ಪೇಪರ್ ಪ್ರಿಂಟ್ ಆಗುತ್ತೆ, ಆ ಪೇಪರ್ನಲ್ಲಿ ಆ ಮತದಾರ ಹಾಕಿದ ಪಕ್ಷದ ಚಿನ್ಹೆ ಕಾಣಿಸುತ್ತೆ. ಆ ಮತದಾರ ಆ ಚಿಕ್ಕ ಪೇಪರನ್ನು ನೋಡಿ ಖಚಿತಪಡಿಸಿಕೊಂಡ ನಂತರ ಆ ಪೇಪರ್ ಅಲ್ಲಿರುವ ಒಂದು ಬಾಕ್ಸ್‍ಗೆ ಹೋಗುತ್ತದೆ. ಅವಶ್ಯಕತೆ ಬಿದ್ದರೆ ಆ ಬಾಕ್ಸ್‍ನಿಂದ ತೆಗೆದು ಮತಎಣಿಕೆ ಮಾಡಬಹುದು. ಇದು ಇವಿಎಂ ದುರ್ಬಳಕೆಯಾಗುತ್ತಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವ ಖಚಿತ ಮಾರ್ಗ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಈ ಯಂತ್ರಗಳು ಕೆಟ್ಟು, ಕಾರ್ಯನಿರ್ವಹಿಸದೇ ಇರುವುದರಿಂದ ವಿವಾದಗಳು ಆಗಿದ್ದವೇ ಹೊರತು ಮತಗಳ ಹೊಂದಿಕೆಯಾಗದೇ ಇರುವುದು ಅಥವಾ ವೋಟುಗಳ ತಪ್ಪು ದಾಖಲೆಗಳಿಂದ ಅಲ್ಲ. ಬರಲಿರುವ ಲೋಕಸಭೆ ಚುನಾವಣೆಯನ್ನು ಒಳಗೊಂಡು ಭವಿಷ್ಯದ ಎಲ್ಲಾ ಚುನಾವಣೆಗಳಲ್ಲಿ ವಿವಿಪ್ಯಾಟ್‍ಗಳಿರುವ ಇವಿಎಂಗಳನ್ನೇ ಬಳಸುವುದಾಗಿ ಚುನಾವಣಾ ಆಯೋಗ ಈಗಾಗಲೇ ಘೋಷಿಸಿದೆ.
ಹಾಗಾಗಿ, ಇವಿಎಂಗಳನ್ನು ನಂಬದ ನನ್ನ ಸ್ನೇಹಿತರಲ್ಲಿ ಒಂದು ವಿನಂತಿ. ಇನ್ನೂ ಹೆಚ್ಚಿನ ದುರ್ಬಳಕೆಗೆ ಸಾಧ್ಯವಿರುವ ಮತ್ತು ಅತ್ಯಂತ ತೊಡಕಿನ ಮತ್ತು ಸುದೀರ್ಘ ಬ್ಯಾಲೆಟ್ ಪೇಪರ್‍ಗೆ ಹಿಂತಿರುಗುವ ಬೇಡಿಕೆಯನ್ನಿಟ್ಟು ನಿಮ್ಮ ಶಕ್ತಿಯನ್ನು ವ್ಯಯಿಸದಿರಿ. ಅದರ ಬದಲಿಗೆ ವಿವಿಪ್ಯಾಟ್ ಜೊತೆಗಿರುವ ಇವಿಎಂಗಳ ದೋಷಾತೀತ ಪ್ರೋಟೋಕಾಲ್‍ಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಗಮನವಹಿಸಬೇಕು. ನನ್ನ ಸಲಹೆಗಳು ಇಂತಿವೆ:
ಮೊದಲನೆಯದಾಗಿ, ಚುನಾವಣಾ ಆಯೋಗ ‘ಹ್ಯಾಕಥಾನ್ ಸವಾಲು’ಗಳನ್ನು ಆಯೋಜಿಸುವ ಬದಲಿಗೆ ದೇಶದ ಯಾವುದೇ ಭಾಗದಲ್ಲಿ ಇಟ್ಟ ಹೊಸ ಯಂತ್ರಗಳ ಒಂದು ರ್ಯಾಂಡಮ್ ನಮೂನೆಯನ್ನು ಪರೀಕ್ಷಿಸಲು ಯಾವುದೇ ನೋಂದಾಯಿತ ಪಕ್ಷದಿಂದ ಹೆಸರಿಸಿದ ಪರಿಣಿತರಿಗೆ ಆಯೋಗ ಅನುವು ಮಾಡಿಕೊಡಬೇಕು. ಎರಡನೆಯದಾಗಿ, ಒಂದು ವೇಳೆ ಪೇಪರ್ ಸ್ಲಿಪ್ ತಾನು ಮತದಾನ ಮಾಡಿದ ಪಕ್ಷಕ್ಕೆ ಹೊಂದಾಣಿಕೆಯಾಗದಿದ್ದಲ್ಲಿ ಆ ಮತದಾರರಿಗೆ ಒಂದು ಆಕ್ಷೇಪಣೆಯನ್ನು ನೋಂದಾಯಿಸಲು ಅನುವು ಮಾಡಿಕೊಡುವಂತೆ ಚುನಾವಣಾ ಆಯೋಗ ನಿಯಮಗಳಲ್ಲಿ ತಿದ್ದುಪಡಿ ತರಬೇಕು. ಒಂದು ವೇಳೆ ಒಂದು ಮತಗಟ್ಟೆಯಲ್ಲಿ 20ಕ್ಕಿಂತ ಹೆಚ್ಚು ಇಂತಹ ಆಕ್ಷೇಪಣೆಗಳು ಬಂದಲ್ಲಿ, ಮತ ಎಣಿಕೆಯ ಸಮಯದಲ್ಲಿ ಇವಿಎಂ ಎಣಿಕೆಯೊಂದಿಗೆ ಪೇಪರ್ ಸ್ಲಿಪ್ ಎಣಿಕೆ ಕಡ್ಡಾಯವಾಗಿಸಬೇಕು. ಮೂರನೆಯದಾಗಿ, ಮತದಾರರು ತಮ್ಮ ಮತವನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಮತ್ತು ಅವಶ್ಯಕತೆ ಬಿದ್ದಲ್ಲಿ ಆಕ್ಷೇಪಣೆಯನ್ನು ಹೇಗೆ ನೋಂದಾಯಿಸುವುದು ಹಾಗೂ ಹೊಸ ಯಂತ್ರಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಬೇಕು. ನಾಲ್ಕನೆಯದಾಗಿ, ಕೆಟ್ಟುಹೋದ ಯಂತ್ರಗಳನ್ನು 30 ನಿಮಿಷಗಳ ಒಳಗೆ ಬದಲಾಯಿಸಬೇಕು ಅಥವಾ ಮರುಮತದಾನ ಮಾಡಿಸಬೇಕೆನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇವಿಎಂಗಳಲ್ಲಿ ಆಗಬಹುದಾದ ತೊಂದರೆಗಳ ಸ್ವರೂಪದ ಬಗ್ಗೆ ಮತ್ತು ಹಾಗೆ ಆದಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ವಿಸ್ತøತವಾದ ಪ್ರಚಾರ ನೀಡಬೇಕು.
ಕೊನೆಯದಾಗಿ, ಮತಎಣಿಕೆಯ ಪ್ರಕ್ರಿಯೆಯನ್ನು ಸ್ವಲ್ಪಮಟ್ಟಿಗೆ ಮಾರ್ಪಡಿಸಬೇಕು. ಪ್ರತಿಯೊಂದು ಮತಎಣಿಕೆಯ ಮೇಜಿಗೆ ಒಂದು ರ್ಯಾಂಡಮ್ ಆಗಿ ಆಯ್ಕೆ ಮಾಡಿದ ಮತಗಟ್ಟೆಯ ಪೇಪರ್ ಟ್ರಯಲ್ ಎಣಿಕೆಯನ್ನು ಇವಿಎಂ ಎಣಿಕೆಯೊಂದಿಗೆ ತಾಳೆ ಮಾಡಬೇಕು. ಫಲಿತಾಂಶ ಪ್ರಕಟಿಸುವುದಕ್ಕೂ ಮುಂಚೆ, ಎಚ್ಚರಿಕೆಯ ಕ್ರಮವಾಗಿ, 2ನೇ ಮತ್ತು 3ನೇ ಸ್ಥಾನದಲ್ಲಿರುವ ಅಭ್ಯರ್ಥಿಗಳು ತಮ್ಮ ಆಯ್ಕೆಯ ಯಾವುದೇ ಒಂದು ಮತಗಟ್ಟೆಯ ಪೇಪರ್ ಟ್ರಯಲ್ ತಾಳೆ ಮಾಡುವಂತೆ ಕೇಳಲು ಅವಕಾಶವಿರಬೇಕು.
ಈ ಪ್ರಕ್ರಿಯೆಯಿಂದ ಮತಎಣಿಕೆ ಒಂದೆರಡು ಗಂಟೆಗಳ ಕಾಲ ತಡವಾಗಬಹುದು ಮತ್ತು ಅದರಿಂದ ಮತಎಣಿಕೆಯ ದಿನ ಖಿ-20 ತರಹದ ಮಜಾ ಕಡಿಮೆಯಾಗಬಹುದು. ಆದರೆ, ನಮ್ಮ ಪ್ರಜಾಪ್ರಭುತ್ವದ ಪವಿತ್ರವಾದ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಪುನಃಸ್ಥಾಪಿಸಲು ಹಾಗೂ ಅನವಶ್ಯಕ ಮತ್ತು ಅಪಾಯಕಾರಿಯಾದ ವಿವಾದಗಳಿಗೆ ಪೂರ್ಣವಿರಾಮವನ್ನಿಡಲು ತೆರಬೇಕಾದ ಅತೀ ಸಣ್ಣ ಬೆಲೆಯಿದು. ಚುನಾವಣೆಯಲ್ಲಿ ಸೋತವರನ್ನೊಳಗೊಂಡು ಈ ಆಟದ ನಿಯಮಗಳಿಗೆ ಬದ್ಧರಾಗಿರುವ ಎಲ್ಲರ ಮೇಲೆ ಪ್ರಜಾಪ್ರಭುತ್ವದ ಚುನಾವಣೆಗಳ ಪಾವಿತ್ರ್ಯ ಅವಲಂಬಿಸಿದೆ.
– ಯೋಗೇಂದ್ರ ಯಾದವ್
ಅನುವಾದ: ರಾಜಶೇಖರ ಅಕ್ಕಿ


