ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಛಲವಾದಿಪಾಳ್ಯ ವಾರ್ಡ್ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಹತ್ಯೆ ಪ್ರಕರಣದ ಏಳು ಅಪರಾಧಿಗಳಿಗೆ ನಗರದ 72ನೇ ಸಿಸಿಹೆಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ ಮಂಗಳವಾರ (ಡಿ.31) ಆದೇಶಿಸಿದೆ ಎಂದು ವರದಿಯಾಗಿದೆ.
ಪೀಟರ್ (49), ಸೂರ್ಯ ಅಲಿಯಾಸ್ ಸೂರಜ್ (23), ಸ್ಟೀಫನ್ (24), ಪುರುಷೋತ್ತಮ (25), ಅಜಯ್ (24), ಅರುಣ್ ಕುಮಾರ್ (39) ಹಾಗೂ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ (36) ಜೀವಾವಧಿ ಶಿಕ್ಷೆಗೆ ಒಳಗಾದವರು ಎಂದು ವರದಿಗಳು ಹೇಳಿವೆ.
ಅಂಜನಪ್ಪ ಗಾರ್ಡನ್ ನಿವಾಸಿ ರೇಖಾ ಕದಿರೇಶ್ ಅವರನ್ನು 2021ರ ಜೂನ್‌ನಲ್ಲಿ ಅವರ ಕಚೇರಿ ಎದುರೇ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದ ಕಾಟನ್‌ಪೇಟೆ ಪೊಲೀಸರು ತನಿಖೆ ಪೂರ್ಣಗೊಳಿಸಿ 2021ರ ಸೆಪ್ಟೆಂಬರ್‌ನಲ್ಲಿ ನಗರದ 31ನೇ ಎಸಿಎಂಎಂ ನ್ಯಾಯಾಲಯಕ್ಕೆ 780 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿದ್ದು, ಈ ವೇಳೆ ಆರೋಪಿಗಳು ಹತ್ಯೆ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಏಳು ಅಪರಾಧಿಗಳಲ್ಲಿ ಮೂವರು ಷರತ್ತುಬದ್ದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ನಾಲ್ವರು ಜೈಲಿನಲ್ಲಿದ್ದರು. ಇದೇ ಪ್ರಕರಣದ ಆರೋಪಿ ಮಾಲಾ (63) ವಿಚಾರಣೆ ವೇಳೆ ಮೃತಪಟ್ಟಿದ್ದರು.
ವರದಿಗಳ ಪ್ರಕಾರ, 2018ರಲ್ಲಿ ಪತಿ ಕದಿರೇಶ್ ಹತ್ಯೆಯಾದ ಬಳಿಕ ರೇಖಾ ಅವರು ಪರ್ಯಾಯ ರಾಜಕೀಯ ಮುಖಂಡರಾಗಿ ಬೆಳೆಯುತ್ತಿದ್ದರು. ಅದನ್ನು ಸಹಿಸದ ಕದಿರೇಶ್ ಅವರ ಅಕ್ಕ ಮಾಲಾ ಮತ್ತು ಸಂಬಂಧಿಕರು ಕೊಲೆ ಸಂಚು ರೂಪಿಸಿದ್ದರು. ಕದಿರೇಶ್ ಹತ್ಯೆಯಾದ ಬಳಿಕ ರೇಖಾ ಅವರ ಜೊತೆ ಓಡಾಡುತ್ತಿದ್ದ ಪೀಟರ್ ಈ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಇದನ್ನೂ ಓದಿ : ದಲಿತ ಚಳವಳಿ ಹಿರಿಯ ನಾಯಕ ಲಕ್ಷ್ಮಿನಾರಾಯಣ ನಾಗವಾರ ನಿಧನ


