ಸಿಎಎ ವಿರುದ್ಧದ ನಾಟಕವಾಡಿಸಿದ ಕಾರಣಕ್ಕೆ ವಿವಾದದಲ್ಲಿರುವ ಬೀದರ್‌ನ ಶಾಹಿನ್ ಶಾಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ, ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ವಿದ್ಯಾರ್ಥಿಗಳು ಅಭಿನಯಿಸಿದ್ದ ಸಣ್ಣ ನಾಟಕದಿಂದಾಗಿ ರಾಜದ್ರೋಹದ ಆರೋಪ ಎದುರಿಸುತ್ತಿರುವ ಬೀದರ್‌ನ ಶಾಹಿನ್ ಶಾಲೆಗೆ ಹೋಗಿ ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಮಾತನಾಡಿ ಧೈರ್ಯ ತುಂಬಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ನಂತರ ಬಂಧಿತರಾಗಿರುವ ವಿದ್ಯಾರ್ಥಿನಿಯ ತಾಯಿ ನಜ್ಬುನ್ನಿಸಾ ಮತ್ತು ಶಿಕ್ಷಕಿ ಫರಿದಾ ಬೇಗಮ್ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಪುಟ್ಟ ಮಕ್ಕಳ ನಾಟಕದ ಮಾತುಗಳನ್ನು ಕೂಡಾ ಸಹಿಸಿಕೊಳ್ಳದೆ ಸೇಡಿಗೆ ಇಳಿದಿರುವ ಬಿಜೆಪಿ ಸೈದ್ಧಾಂತಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ. ಬೇಟಿ ಬಚಾವೋ ಎಂದು ಕೂಗುತ್ತಾ ತಮ್ಮ ಬೆನ್ನನ್ನು ತಾವೆ ಚಪ್ಪರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿಯವರಿಗೆ ಬೀದರ್‌ನ ಶಾಹಿನ್ ಶಾಲೆಯ ವಿದ್ಯಾರ್ಥಿನಿ ತನ್ನದಲ್ಲದ ತಪ್ಪಿಗೆ ತಾಯಿಯಿಂದ ದೂರವಾಗಿ ಮಾನಸಿಕ ಕ್ಷೋಭೆಗೊಳಗಾಗಿರುವುದು ಕಾಣ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಜನವರಿ 20ರಂದು ಈ ಶಾಲೆಯಲ್ಲಿ ಸಿಎಎ ವಿರುದ್ಧ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಮಕ್ಕಳಿಂದ ನಾಟಕ ಆಡಿಸಲಾಗಿತ್ತು. ಅದರಲ್ಲಿ ಯಾರಾದರೂ ದಾಖಲೆ ಕೇಳಿಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂಬ ಸಂಭಾಷಣೆ ಇದ್ದ ಕಾರಣ ದೂರು ದಾಖಲಾಗಿತ್ತು.
ನಂತರ ಪೊಲೀಸರು ಶಾಲೆಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಮತ್ತು ಶಾಲೆಯ ಮಗುವಿನ ತಾಯಿ ನೈಜುಬುನ್ನೀಶ ಎಂಬುವವರನ್ನು ಕಳೆದ 15 ದಿನಗಳಿಂದ ಬಂಧಿಸಿ ಜೈಲಿನಟ್ಟಿದ್ದಾರೆ. ಇಂದು ಅವರ ಜಾಮೀನು ವಿಚಾರಣೆಯ ತೀರ್ಪು ಬರಬೇಕಿದೆ.
ಬಿಜೆಪಿ ಸರ್ಕಾರವು ಪೊಲೀಸ್ ಇಲಾಖೆಯನ್ನು ದುರುಪಯೋಗಿಸಿಕೊಂಡು ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿದ ಕಾರಣಕ್ಕೆ ಶಿಕ್ಷಕರು ಮತ್ತು ಪೋಷಕರ ಮೇಲೆ ದೇಶದ್ರೋಹದ ಮೊಕದ್ದಮೆ ಹೂಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೀದರ್ ಶಾಲೆಯಲ್ಲಿ ಪ್ರದರ್ಶನವಾದ ನಾಟಕವೊಂದರ ವಿಷಯವು ನರೇಂದ್ರ ಮೋದಿ ಮತ್ತು ಅವರ ನೀತಿಗಳನ್ನು ಟೀಕಿಸಿತು. ಅದು ಹೇಗೆ ದೇಶದ್ರೋಹವಾಗುತ್ತದೆ? ತಾಯಿಯನ್ನು ಬಂಧಿಸುವುದು ಅಸಂವಿಧಾನಿಕ ಮತ್ತು ಖಂಡನಾರ್ಹವಾಗಿದೆ. ತಾಯಿ ಮತ್ತು ಮಗಳನ್ನು ಬೇರ್ಪಡಿಸಿದ್ದಕ್ಕಾಗಿ ಈ ರಾಜ್ಯದ ತಾಯಂದಿರು ಬಿ ಎಸ್ ಯಡಿಯೂರಪ್ಪ ಅವರನ್ನು ಕ್ಷಮಿಸುವುದಿಲ್ಲ ಎಂದು ನಿನ್ನೆ ಸಿದ್ದರಾಮಯ್ಯ ಕಿಡಿಕಾರಿದ್ದರು.
ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಸಹ ಅವರ ಜೊತೆಗಿದ್ದರು.


