ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ನಫೆ ಸಿಂಗ್ ರಾಥಿ ಅವರನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ಬಹದ್ದೂರ್‌ಗಢದ ಮಾಜಿ ಬಿಜೆಪಿ ಶಾಸಕ ನರೇಶ್ ಕೌಶಿಕ್ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಾಜಿ ಬಿಜೆಪಿ ಶಾಸಕ ನರೇಶ್ ಕೌಶಿಕ್, ಬಹದ್ದೂರ್‌ಗಢ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ಸರೋಜ್ ರಥೀ ಅವರ ಪತಿ ರಮೇಶ್ ರಾಥಿ, ಅವರ ನಿಕಟವರ್ತಿಗಳಾದ ಕರಂಬಿರ್ ರಥಿ ಮತ್ತು ಕಮಲ್ ರಥಿ, ಮಾಜಿ ಸಚಿವ ಮಾಂಗೆ ರಾಮ್ ರಥಿ ಅವರ ಪುತ್ರ ಸತೀಶ್ ನಂಬರ್‌ದಾರ್, ಮೊಮ್ಮಗ ಗೌರವ್, ರಾಹುಲ್ ಮತ್ತು ಐವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೊಲೆ ಮತ್ತು ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಬಂಧನಕ್ಕೆ ಪಟ್ಟು:
ಆರೋಪಿಗಳನ್ನು ಬಂಧಿಸುವವರೆಗೆ ದಾಳಿಯಲ್ಲಿ ಹತರಾದ ಐಎನ್‌ಎಲ್‌ಡಿ ನಾಯಕ ನಫೆ ಸಿಂಗ್ ರಾಥಿ ಮತ್ತು ಅವರ ಭದ್ರತಾ ತಂಡದ ಸದಸ್ಯ ಜೈ ಕಿಶನ್ ಅವರ ಶವಗಳನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ನಫೆ ಸಿಂಗ್ ಅವರ ಕುಟುಂಬದ ಸದಸ್ಯರು ಮತ್ತು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಮೃತರ ಶವಗಳನ್ನು ಇರಿಸಲಾಗಿರುವ ಬಹದ್ದೂರ್‌ಗಢ ಸಿವಿಲ್ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಎಫ್‌ಐಆರ್:
ಘಟನೆಯ ಬಗ್ಗೆ ನಫೆ ಸಿಂಗ್ ರಾಥಿ ಅವರ ಸೋದರಳಿಯ ಮತ್ತು ಚಾಲಕ ರಾಕೇಶ್ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ರಾಕೇಶ್ ಅವರು ಬಿಳಿ ಬಣ್ಣದ ಫಾರ್ಚುನರ್ ಕಾರು ಚಲಾಯಿಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ನಫೆ ಸಿಂಗ್ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ಐಎನ್‌ಎಲ್‌ಡಿ ನಾಯಕ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರೆ, ಅವರ ಇಬ್ಬರು ಭದ್ರತಾ ಸಿಬ್ಬಂದಿಗಳಾದ ಸಂಜೀತ್ ಮತ್ತು ಜೈ ಕಿಶನ್ ಹಿಂದೆ ಇದ್ದರು. ಕಾರು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ರಾಕೇಶ್ ಅವರು ಕಾರನ್ನು ವೇಗಗೊಳಿಸಲು ಪ್ರಯತ್ನಿಸಿದರು ಆದರೆ ಅವರು ದಾರಿಯಲ್ಲಿದ್ದ ರೈಲ್ವೆ ಕ್ರಾಸಿಂಗ್‌ನ ಗೇಟ್ ಮುಚ್ಚಿದ್ದರಿಂದ ನಿಲ್ಲಿಸಬೇಕಾಯಿತು. ಅವರು ಕಾರನ್ನು ನಿಲ್ಲಿಸಿದಾಗ, ಪಿಸ್ತೂಲುಗಳೊಂದಿಗೆ ಶಸ್ತ್ರಸಜ್ಜಿತವಾದ ಐವರು ದಾಳಿಕೋರರು ಹೊರಬಂದು ಗುಂಡಿನ ದಾಳಿಯನ್ನು ನಡೆಸಿದ್ದಾರೆ.
ದುಷ್ಕರ್ಮಿಗಳು ಈ ವೇಳೆ ಸತೀಶ್, ಕರಂಬಿರ್ ರಥಿ ಮತ್ತು ನರೇಶ್ ಕೌಶಿಕ್ ಜೊತೆ ದ್ವೇಷ ಬೆಳೆಸಿಕೊಂಡಿದ್ದಕ್ಕೆ ಪಾಠ ಕಲಿಸುತ್ತೇವೆಂದು ಗುಂಡಿನ ದಾಳಿ ನಡೆಸುತ್ತೇವೆ ಎಂದು ಹೇಳಿ ಫೈರಿಂಗ್ ಮಾಡಿದ್ದಾರೆ. ಅವರಲ್ಲೊಬ್ಬ ನನ್ನ ಕಡೆಗೆ ಬಂದು ನಾನು ನಿನ್ನನ್ನು ಜೀವಂತವಾಗಿ ಬಿಡುತ್ತಿದ್ದೇನೆ. ನರೇಶ್ ಕೌಶಿಕ್, ಕರಂಬಿರ್ ರಾಥಿ, ಸತೀಶ್ ರಾಥಿ, ಗೌರವ್ ರಾಥಿ, ರಾಹುಲ್ ಮತ್ತು ಕಮಲ್ ವಿರುದ್ಧ ನ್ಯಾಯಾಲಯಕ್ಕೆ ಹೋದರೆ ಅವರನ್ನು ಕೂಡ ಕೊಲ್ಲಲಾಗುವುದು ಎಂದು ಅವರ ಕುಟುಂಬಕ್ಕೆ ಹೇಳಿ ಎಂದು ಹೇಳಿರುವುದಾಗಿ ರಾಕೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಚಿಕ್ಕಪ್ಪ ನಫೆ ಸಿಂಗ್ ಮತ್ತು ಜೈ ಕಿಶನ್ ಆ ವೇಳೆಗೆ ಮೃತಪಟ್ಟಿರುವುದನ್ನು ನಾನು ನೋಡಿದೆ, ಆದರೆ ಸಂಜೀತ್ ಗಂಭೀರ ಸ್ಥಿತಿಯಲ್ಲಿದ್ದರು. ವ್ಯಕ್ತಿಯೊಬ್ಬರು ಅವರನ್ನು ಬಹದ್ದೂರ್‌ಗಢದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ. ತನ್ನ ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ಸಂಚು ರೂಪಿಸಿ ಕೊಲೆಯ ಹಿಂದೆ ಇದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಹರ್ಯಾಣದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಘಟನೆಯ ಬಗ್ಗೆ ಸಂತಾಪ ಸೂಚನೆಗಳ ಸಂದರ್ಭದಲ್ಲಿ ಹರ್ಯಾಣದಲ್ಲಿ ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ. ನಫೆ ಸಿಂಗ್ ಅವರ ಹತ್ಯೆಯನ್ನು ರಾಜಕೀಯ ಹತ್ಯೆ ಎಂದು ಕರೆದ ಪ್ರತಿಪಕ್ಷಗಳು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆಗೆ ಒತ್ತಾಯಿಸಿದೆ.
ಜನವರಿ 2023ರಲ್ಲಿ ಮಾಜಿ ಸಚಿವ ಮಂಗೇ ರಾಮ್ ಅವರ ಪುತ್ರ, ಸ್ಥಳೀಯ ಬಿಜೆಪಿ ನಾಯಕ ಜಗದೀಶ್ ನಂಬರ್‌ದಾರ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ನಫೆ ಸಿಂಗ್ ಮತ್ತು ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಮೃತರ ಮಗ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ರಾಜಕೀಯ ಪಿತೂರಿಯ ಭಾಗವಾಗಿ ಅವರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಐಎನ್‌ಎಲ್‌ಡಿ ಹಿರಿಯ ನಾಯಕ ಅಭಯ್ ಸಿಂಗ್ ಚೌಟಾಲಾ ಆರೋಪಿಸಿದ್ದರು.


