ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಉದ್ಭವಿಸುವ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರದಲ್ಲಿ ಭಾರೀ ಮಟ್ಟದ ಕಡಿತಕ್ಕೆ ಮುಂದಾಗಿದೆ. ಅಲ್ಲದೆ, ಬ್ಯಾಂಕ್ ಸಾಲದ ಕಂತುಗಳಿಗೆ (ಇಎಂಐ) 3 ತಿಂಗಳ ವಿನಾಯಿತಿ ಘೋಷಿಸಿದೆ.
ಆರ್‌ಬಿಐ ಪ್ರಕಟಿಸಿರುವಂತೆ ರಿಪೋ ದರ 75 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ಇದು ಶೇ. 4.4ಕ್ಕೆ ಇಳಿದಿದೆ. ರಿವರ್ಸ್ ರಿಪೋ ದರವನ್ನು 90 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೆ. 5.5ರಷ್ಟಿದ್ದ ರಿವರ್ಸ್ ರಿಪೋ ಈಗ ಶೇ. 4.20ಕ್ಕೆ ಇಳಿದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಆರ್‌ಬಿಐ ಮೂರನೇ ಬಾರಿಗೆ ರೆಪೋ ದರ ಇಳಿಕೆ ಮಾಡಿದೆ.
ಸಿಆರ್‌ಆರ್ ಅಥವಾ ಕ್ಯಾಷ್ ರಿಸರ್ವ್ ರೇಷಿಯೋ ದರದಲ್ಲೂ ಭಾರೀ ವ್ಯತ್ಯಯವಾಗಿದೆ. 100 ಮೂಲಾಂಕಗಳಷ್ಟು ಇಳಿಕೆಗೊಂಡಿರುವ ಸಿಆರ್‌ಆರ್ ದರ ಈಗ ಶೇ. 3ಕ್ಕೆ ನಿಗದಿಯಾಗಿದೆ. ಮಾರ್ಚ್ 28ರಿಂದ ಒಂದು ವರ್ಷದ ಅವಧಿಯವರೆಗೆ ಈ ದರ ಅನ್ವಯವಾಗಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಆರ್‌ಬಿಐನ ಈ ಕ್ರಮದಿಂದ ದೇಶದ ಆರ್ಥಿಕತೆಗೆ 3.75 ಲಕ್ಷ ಕೋಟಿಯಷ್ಟು ಹಣದ ಹರಿವು ಆಗಲಿದೆ. ಇದರಿಂದ ಒಂದು ವರ್ಷದಲ್ಲಿ ಒಂದಷ್ಟು ಚೇತರಿಕೆಗೆ ದಾರಿ ಆಗುವ ನಿರೀಕ್ಷೆ ಇದೆ.
3 ತಿಂಗಳು ಇಎಂಐಗೆ ವಿನಾಯಿತಿ
ಆರ್‌ಬಿಐ ಮತ್ತೊಂದು ಮಹತ್ವದ ಪ್ರಕಟಣೆಯಲ್ಲಿ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗೆ ಸಾಲಗಳ ಕಂತುಗಳನ್ನ ಕಟ್ಟಲು ಗ್ರಾಹಕರಿಗೆ 3 ತಿಂಗಳ ವಿನಾಯಿತಿ ನೀಡುವಂತೆ ಸೂಚಿಸಿದೆ. ಅಂದರೆ ಸಾಲ ಪಡೆದವರು ಮೂರು ತಿಂಗಳ ಕಾಲ ಇಎಂಐ ಕಟ್ಟುವ ಅನಿವಾರ್ಯತೆ ಇಲ್ಲ. ಬೇಕಾದರೆ ಕಟ್ಟಬಹುದು, ಬೇಡದಿದ್ದರೆ ಇಲ್ಲ. ಆದರೆ, ಮೂರು ತಿಂಗಳ ನಂತರ ಇಎಂಐ ಮಾಮೂಲಿಯಾಗೇ ಮುಂದುವರಿಯುತ್ತದೆ. ಗಮನಿಸಬೇಕಾದ ವಿಚಾರವೆಂದರೆ ಇದು ಇಎಂಐ ಕಟ್ಟಲು ಅವಧಿ ಮುಂದೂಡಲಾಗಿದೆಯೇ ಹೊರತು ಹಣದ ಮನ್ನಾ ಆಗಿಲ್ಲ. ಜನರು ಈ ವಿಚಾರದಲ್ಲಿ ಗೊಂದಲಕ್ಕೊಳಗಾಗುವುದು ಬೇಡ.
ಏನಿದು ರೆಪೋ ದರ?
ರೆಪೋ ದರ ಎಂಬುದು ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಅಂದರೆ ವಾಣಿಜ್ಯ ಬ್ಯಾಂಕುಗಳು ಹಣದ ಕೊರತೆ ಎದುರಿಸಿದರೆ ಆರ್‌ಬಿಐನಿಂದ ಸಾಲ ಪಡೆದುಕೊಳ್ಳುತ್ತವೆ. ಆ ಹಣಕ್ಕೆ ನಿಗದಿಯಾಗಿರುವ ಬಡ್ಡಿ ದರವೇ ರೆಪೋ ರೇಟ್. ಈಗ ಅದು ಶೇ. 4.4 ಕ್ಕೆ ಇಳಿದಿದೆ.
ರಿವರ್ಸ್ ರೆಪೋ ದರ:
ಇದು ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿ ಹಣದ ಮೇಲೆ ನೀಡಲಾಗುವ ಬಡ್ಡಿ ದರವಾಗಿದೆ. ಅಂದರೆ ಆರ್‌ಬಿಐ ಈ ಠೇವಣಿ ಮೇಲೆ ಇಂತಿಷ್ಟು ಬಡ್ಡಿ ನೀಡುತ್ತದೆ


