ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ.
ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಸ್ತುತ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಪತ್ತನಂತಿಟ್ಟದ ಮಹಿಳೆಯೊಬ್ಬರು ಮಾಂಕೂಟತ್ತಿಲ್ ವಿರುದ್ಧ ಮೂರನೇ ಅತ್ಯಾಚಾರ ದೂರು ದಾಖಲಿಸಿದ ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ದೂರಿನಲ್ಲಿ, ಮಹಿಳೆ ಮಾಂಕೂಟತ್ತಿಲ್ ವಿರುದ್ಧ ಕ್ರೂರ ಲೈಂಗಿಕ ದೌರ್ಜನ್ಯ, ಬಲವಂತದ ಗರ್ಭಪಾತ ಮತ್ತು ಆರ್ಥಿಕ ಶೋಷಣೆ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ದೂರು ದಾಖಲಾದ ನಂತರ ಪೊಲೀಸರು ಮಾಂಕೂಟತ್ತಿಲ್‌ನನ್ನು ವಶಕ್ಕೆ ಪಡೆಯಲು ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಮಹಿಳೆ ತಾನು ಗರ್ಭಿಣಿಯಾಗಿರುವುದಾಗಿ ಮತ್ತು ಭ್ರೂಣದ ಡಿಎನ್ಎ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಪ್ರಯೋಗಾಲಯವು ಮಾಂಕೂಟತ್ತಿಲ್‌ಗೆ ಮಾದರಿಯನ್ನು ನೀಡುವಂತೆ ಕೇಳಿದೆ, ಆದರೆ ಅವರು ಡಿಎನ್ಎ ಪರೀಕ್ಷಾ ಪ್ರಕ್ರಿಯೆಗೆ ಸಹಕರಿಸಿಲ್ಲ ಎಂದು ಮಹಿಳೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಮಹಿಳೆ ತನ್ನ ಆರೋಪವನ್ನು ಬೆಂಬಲಿಸಲು ತನ್ನ ಬಳಿ ಪುರಾವೆಗಳಿವೆ ಎಂದು ಹೇಳಿಕೊಂಡು ಅದನ್ನು ತನಿಖಾ ತಂಡಕ್ಕೆ ಸಲ್ಲಿಸಿದ್ದಾರೆ ಎಂದು ಎನ್‌ಡಿವಿ ವರದಿ ಉಲ್ಲೇಖಿಸಿದೆ.
ತನ್ನ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭೇಟಿಯಾದೆ. ನಂತರ ಅವರು ತನ್ನೊಂದಿಗೆ ಸಂಬಂಧ ಬೆಳೆಸಿಕೊಂಡು ಪತಿಗೆ ವಿಚ್ಚೇದನ ನೀಡುವಂತೆ ಒತ್ತಡ ಹೇರಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ರಾಹುಲ್ ಮಾಂಕೂಟತ್ತಿಲ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾರೆ, ಮಗು ಬೇಕು ಎಂದು ಒತ್ತಾಯಿಸಿದ್ದಾರೆ. ಮಗುವಾದರೆ ತನ್ನ ಕುಟುಂಬದಿಂದ ಮದುವೆಗೆ ತ್ವರಿತ ಅನುಮೋದನೆ ದೊರೆಯುತ್ತದೆ ಎಂದು ಹೇಳಿದ್ದಾರೆ ಎಂಬುವುದಾಗಿ ಮಹಿಳೆ ತಿಳಿಸಿದ್ದಾರೆ.
ರಾಹುಲ್ ಪದೇ ಪದೇ ತನ್ನನ್ನು ಭೇಟಿಯಾಗುವ ಭಯಕೆ ವ್ಯಕ್ತಪಡಿಸುತ್ತಿದ್ದರು. ನಾನು ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗೋಣ ಎಂದಾಗ ಅವರು ಅದಕ್ಕೆ ನಿರಾಕರಿಸಿದ್ದರು. ತಾನು ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ಅದು ಸಾಧ್ಯವಿಲ್ಲ ಎಂದಿದ್ದರು. ರೆಸ್ಟೋರೆಂಟ್ ಬದಲಾಗಿ ಪಾಲಕ್ಕಾಡ್‌ನಲ್ಲಿರುವ ಹೋಟೆಲ್‌ನಲ್ಲಿ ಭೇಟಿಯಾಗುವಂತೆ ಅವರು ಸೂಚಿಸಿದ್ದರು. ಅದಕ್ಕಾಗಿ ಅವರು ಕೊಠಡಿ ಕಾಯ್ದಿರಿಸಿದ್ದರು. ತಾನು ಹೋಟೆಲ್‌ಗೆ ಹೋದಾಗ, ನಾನು ಮಾತನಾಡುವ ಮೊದಲೇ ಅವರು ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಸಾಕ್ಷ್ಯಾಧಾರಗಳು ಮತ್ತು ಹೇಳಿಕೆಗಳ ಆಧಾರದ ಮೇಲೆ ತನಿಖೆ ಮುಂದುವರೆದಿದ್ದು, ಮುಂದಿನ ಕಾನೂನು ಕ್ರಮಗಳು ಅನುಸರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಮಾಂಕೂಟತ್ತಿಲ್ ವಿರುದ್ದ ಈಗ ದಾಖಲಾಗಿರುವುದು ಮೂರನೇ ಅತ್ಯಾಚಾರ ಪ್ರಕರಣವಾಗಿದೆ.
ಮೊದಲ ಪ್ರಕರಣದಲ್ಲಿ ತನ್ನ ಮದುವೆಯಾಗುವುದಾಗಿ ಭರವಸೆ ನೀಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಾರೆ ಎಂದು ರಾಹುಲ್ ವಿರುದ್ಧ ಮಹಿಳೆಯೊಬ್ಬರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್‌ಗೆ ಕೇರಳ ಹೈಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.
ಮತ್ತೊಂದು ಪ್ರಕರಣದಲ್ಲಿ ಮದುವೆಯಾಗುವ ಭರವಸೆ ನೀಡಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಆರೋಪಿಸಿದ್ದರು. ಇದರಲ್ಲೂ ತಿರುವನಂತಪುರದ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿತ್ತು.
ಮೂರನೇ ಪ್ರಕರಣವನ್ನು ಪ್ರಸ್ತುತ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಪತ್ತನಂತಿಟ್ಟ ಮೂಲದ ಮಹಿಳೆ ನೀಡಿದ ದೂರು ಆಧರಿಸಿ ದಾಖಲಿಸಲಾಗಿದೆ. ಈ ಪ್ರಕರಣ ದಾಖಲಾದ ಕೂಡಲೇ ರಾಹುಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.


