HomeಮುಖಪುಟExplainer: ಏನಿದು ಮೇಕೆದಾಟು ಯೋಜನೆ? ಪರಿಸರವಾದಿಗಳ ವಿರೋಧವೇಕೆ?

Explainer: ಏನಿದು ಮೇಕೆದಾಟು ಯೋಜನೆ? ಪರಿಸರವಾದಿಗಳ ವಿರೋಧವೇಕೆ?

- Advertisement -

ಕರ್ನಾಟಕ ಮತ್ತು ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ 67 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಬೆಂಗಳೂರು ಸೇರಿದಂತೆ ಸುತ್ತಲಿನ ಹಳ್ಳಿ-ನಗರಗಳಿಗೆ ಮುಂದಿನ 100 ವರ್ಷಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಉದ್ದೇಶವೆಂದು ಸರ್ಕಾರ ಹೇಳಿದೆ. 5,000 ಎಕರೆ ಪ್ರದೇಶದಲ್ಲಿ ಸುಮಾರು 6,000 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಇದರ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಪರಿಸರ ಇಲಾಖೆಯ ಅನುಮತಿ ದೊರೆತ ಕೂಡಲೇ ಯೋಜನೆ ಆರಂಭಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ.

1960ರಿಂದಲೂ ಕರ್ನಾಟಕ ಈ ಯೋಜನೆ ಬಗ್ಗೆ ಆಸಕ್ತಿ ವಹಿಸಿದೆ. ಆದರೆ ಅದೇ ಸಮಯಕ್ಕೆ ತಮಿಳುನಾಡು ಸಹ ಹೊಗೇನಕಲ್ ಯೋಜನೆ ಘೋಷಿಸಿತು. ಆದರೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಎರಡು ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಈ ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು. 1996-97ರ ನಂತರ ಕರ್ನಾಟಕ-ತಮಿಳುನಾಡು ನಡುವೆ ಐದು ಸುತ್ತಿನ ಮಾತುಕತೆಗಳು ನಡೆದು ಕೇಂದ್ರ ಸರ್ಕಾರ ಎರಡೂ ರಾಜ್ಯಗಳು ತಲಾ ಎರಡೆರಡು ಯೋಜನೆ ಕೈಗೆತ್ತಿಕೊಳ್ಳಲು ಅನುಮತಿಸಿತು. 2007ರಲ್ಲಿ ಕಾವೇರಿ ನೀರು ಹಂಚಿಕೆ ಕುರಿತು ಅಂತಿಮ ಆದೇಶದಲ್ಲಿ ಕೃಷಿ ನೀರಾವರಿಗಲ್ಲದ ಯೋಜನೆಗಳನ್ನು ತನ್ನ ಆದೇಶಕ್ಕೆ ಧಕ್ಕೆಯಾಗದಂತೆ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತು. 2018ರ ತೀರ್ಪಿನ ಬದಲಾವಣೆಗಳಲ್ಲಿಯೂ ಅದನ್ನೇ ಹೇಳಲಾಗಿದೆ. ತದನಂತರ ಕರ್ನಾಟಕ ಈ ಯೋಜನೆಗೆ ಸಾಕಷ್ಟು ಆಸಕ್ತಿ ವಹಿಸಿದೆ. 2013ರಿಂದ ಆರಂಭವಾಗಿ 2019ರಲ್ಲಿ ಈ ಯೋಜನೆಯ ಸಾಧ್ಯತಾ ವರದಿ ತಯಾರಿಸಿ ಕಾಮಗಾರಿ ನಡೆಸಲು ಮುಂದಾಯಿತು.

ಆದರೆ, ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತು. ಈ ಯೋಜನೆ ಕುರಿತು ತಮಿಳುನಾಡಿಗಿರುವ ಅನುಮಾನ ಬಗೆಹರಿಸಿಕೊಳ್ಳಲು ಸಭೆ ನಡೆಸೋಣ ಎಂದು ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ರವರಿಗೆ ಪತ್ರ ಬರೆದಿದ್ದರು. ಆದರೆ ಸಭೆಗೆ ಒಪ್ಪದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸರ್ವಪಕ್ಷ ಸಭೆ ನಡೆಸಿ ಯೋಜನೆಯನ್ನು ಕೈಬಿಡುವಂತೆ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.

ತಮಿಳುನಾಡಿನ ವಾದವೇನು?

ಕಾವೇರಿ ನದಿಯಿಂದ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣದ ಕುರಿತು ಕಾವೇರಿ ಟ್ರಿಬ್ಯೂನಲ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿನ ಕಡೆಗೆ ಹರಿಯುವ ನದಿ ನೀರಿಗೆ ತಡೆಯೊಡ್ಡಿ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಮೂಲಕ ಕರ್ನಾಟಕ ಸರ್ಕಾರ ಸುಪ್ರೀಂ ತೀರ್ಪನ್ನು ಕಡೆಗಣಿಸುತ್ತಿದೆ. ಬೆಂಗಳೂರಿನ ಕುಡಿಯುವ ನೀರಿಗೆ ಈಗಾಗಲೇ ಸಾಕಷ್ಟು ಯೋಜನೆಗಳಿವೆ. 4.75 ಟಿಎಂಸಿ ಕುಡಿಯುವ ನೀರಿಗಾಗಿ 67.17 ಟಿಎಂಸಿ ನೀರು ಸಂಗ್ರಹಿಸುವ ಅಣೆಕಟ್ಟು ಕಟ್ಟುವುದು ಸರಿಯಲ್ಲ. ಯೋಜನೆಯನ್ನು ನಿಲ್ಲಿಸುವ ಕಾನೂನುಬದ್ಧ ಹಕ್ಕು ನಮಗೂ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಹೇಳಿದ್ದಾರೆ.

ಕರ್ನಾಟಕದ ಸಮರ್ಥನೆ

ಈ ಜಲಾಶಯವು ಕರ್ನಾಟಕದ ಗಡಿಯೊಳಗೆ ನಿರ್ಮಾಣವಾಗುತ್ತಿದೆ. ಉತ್ತಮ ಮಳೆಯಾಗುವ ವರ್ಷಗಳಲ್ಲಿ ಕಾವೇರಿ ನೀರು ಬಳಕೆಯಾಗದೆ ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಹಾಗಾಗಿ ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆ ಇದು. ಜಲಾಶಯ ನಿರ್ಮಾಣವಾದ ನಂತರವು ಸುಪ್ರೀಂ ನಿರ್ದೇಶನದಂತೆ ತಮಿಳುನಾಡು ಪಾಲಿನ ನೀರನ್ನು ಯಾವುದೇ ತಡೆಯಿಲ್ಲದೆ ಕೊಡಲಾಗುತ್ತದೆ.
ಆದ್ದರಿಂದ ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕು ಕರ್ನಾಟಕಕ್ಕೆ ಇದೆ ಎಂದು ಸರ್ಕಾರ ಹೇಳಿದೆ.

ಸಾಮಾನ್ಯ ವರ್ಷದಲ್ಲಿ ಕರ್ನಾಟಕವು 192 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂ ಹೇಳಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅದಕ್ಕಿಂತಲೂ ಹೆಚ್ಚಿನ ನೀರನ್ನು ಹರಿಸಲಾಗುತ್ತಿದೆ. ಅದು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂಬುದು ಕರ್ನಾಟಕದ ವಾದ. ಅಲ್ಲದೇ ನಾವು ಸುಪ್ರೀಂ ತೀರ್ಪನ್ನು ಉಲ್ಲಂಘಿಸುತ್ತಿಲ್ಲ ಮತ್ತು ಅಣೆಕಟ್ಟು ಕಟ್ಟಿದ ನಂತರ ಸಂಕಷ್ಟದ ವರ್ಷಗಳಲ್ಲಿ ಹೆಚ್ಚುವರಿ ನೀರನ್ನು ತಮಿಳುನಾಡಿನೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ವಾಗ್ದಾನ ನೀಡಿದ್ದಾರೆ.

ಯೋಜನೆ ತ್ವರಿತಗೊಳಿಸಲು ಒತ್ತಾಯಿಸಿ ಕಾಂಗ್ರೆಸ್‌ನಿಂದ ಪಾದಯಾತ್ರೆ

ಮೇಕೆದಾಟು ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ವಿಳಂಬ ಮಾಡುತ್ತಿದೆ. ಆದರೆ ಕೂಡಲೇ ಆರಂಭಿಸಬೇಕು ಮತ್ತು ಗುದ್ದಲಿಪೂಜೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆ. ಮೊದಲಿಗೆ ಬಿ.ಎಸ್ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ ತಪ್ಪು. ಈಗ ತಮಿಳುನಾಡು ವಿರೋಧ ಎಂಬ ನೆಪವೊಡ್ಡಿ ಯೋಜನೆ ವಿಳಂಬವಾಗಲು ಬಿಡಬಾರದು. ಕೂಡಲೇ ಕೇಂದ್ರ ಸರ್ಕಾರದಿಂದ ಪರಿಸರ ಸಂಬಂಧಿ ಅನುಮತಿ ಪಡೆದು ಯೋಜನೆ ಆರಂಭಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೇಕೆದಾಟು ಯೋಜನೆಯನ್ನು ಕೂಡಲೇ ಆರಂಭಿಸಲು ಒತ್ತಾಯಿಸಿ ಜನವರಿ 09 ರಿಂದ ಮೇಕೆದಾಟುವಿನಿಂದ ಬೆಂಗಳೂರಿಗೆ 100 ಕಿ.ಮೀ ಗಳ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ನಮ್ಮ ಈ ಯೋಜನೆಗೆ ಯಾವುದೇ ಕಾನೂನು ತೊಡಕುಗಳು ಇಲ್ಲ. ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಆದರೂ ಯೋಜನೆ ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇಚ್ಛಾಶಕ್ತಿ ಇಲ್ಲ. ಅವರು ಯಾವುದೋ ಒತ್ತಡದಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪರಿಸರವಾದಿಗಳ ತೀವ್ರ ವಿರೋಧ

“ಈ ಯೋಜನೆಯು ಪರಿಸರದ ದೃಷ್ಟಿಯಲ್ಲಿ ಮಾರಕವಾಗಿ ಪರಿಣಮಿಸಲಿದೆ; ಅಣೆಕಟ್ಟು ಕಟ್ಟಲು ಮುಂದಾದರೆ ಈಗಾಗಲೇ ಬರಿದಾಗುತ್ತಿರುವ ಕಾಡು ಇನ್ನಷ್ಟು ನಶಿಸಲಿದೆ. ಇದು ದಟ್ಟ ಕಾಡಿಗೆ ಗೋಡೆ ಕಟ್ಟಿದಂತಾಗಿ ಅಲ್ಲಿನ ಜೀವ ವೈವಿದ್ಯೆತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಪರೂಪದ ಪ್ರಾಣಿ – ಪಕ್ಷಿಗಳು, ಜಲಚರಗಳು ನಾಶವಾಗುತ್ತವೆ. ಇದರಿಂದ ಆನೆ, ಹುಲಿ, ಚಿರತೆ ಸೇರಿದಂತೆ ಹಲವು ಪ್ರಾಣಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ. ಆಗ ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚಾಗುತ್ತದೆ. ಇದುವರೆಗೂ ಅಣೆಕಟ್ಟು ಕಟ್ಟಿದ ಕಡೆಗಳಲ್ಲೆಲ್ಲಾ ಈ ಸಂಘರ್ಷ ಹೆಚ್ಚಾಗಿರುವುದನ್ನು ನಾವು ನೋಡಬಹುದು” ಎನ್ನುತ್ತಾರೆ ಪರಿಸರವಾದಿಗಳಾದ ಲಿಯೋ ಸಾಲ್ಡಾನರವರು.

“ಕುಡಿಯುವ ನೀರು ಅಗತ್ಯವಿದೆ. ಆದರೆ ಅದೇ ಕಾವೇರಿ ನೀರನ್ನೆ ಕುಡಿಯಬೇಕು ಎಂದೇನಿಲ್ಲ. ಏಕೆಂದರೆ ಅಲ್ಲಿ ಡ್ಯಾಮ್ ಕಟ್ಟಿದರೆ ನಾವು ಬೆಂಗಳೂರು, ರಾಮನಗರ, ಮಂಡ್ಯ ಮೈಸೂರಿನಿಂದ ಕೊಳಚೆ ನೀರನ್ನು ಅಲ್ಲಿಗೆ ಹರಿಸುತ್ತೇವೆ. ಡ್ಯಾಮ್‌ನಲ್ಲಿ ಸಂಗ್ರಹವಾದ ಕೊಳಚೆ ನೀರನ್ನು ಮತ್ತೆ ಶುದ್ಧೀಕರಿಸಿ ಬೆಂಗಳೂರಿಗೆ ತಂದು ಕುಡಿಯಬೇಕಾಗುತ್ತದೆ. ಇದರಿಂದ ಪ್ರಯೋಜನವೇನು? ಅದರ ಬದಲು ಮಳೆ ನೀರು ಕೊಯ್ಲು ಮಾಡಿದರೆ, ಕೆರೆಗಳಲ್ಲಿ ಊಳೆತ್ತಿಸಿ ಪುನರುಜ್ಜೀವನ ಮಾಡಿದರೆ, ಸಾಕಷ್ಟು ಕಾಡು ಬೆಳೆಸಿದರೆ ಅನುಕೂಲ ಜಾಸ್ತಿ” ಎಂದು ಅವರು ಹೇಳುತ್ತಾರೆ.

“ಇನ್ನೊಂದು ಮುಖ್ಯ ಅಂಶವೆಂದರೆ ಬೆಂಗಳೂರು ನಗರದ ಬೆಳವಣಿಗೆಗೆ ಮಿತಿ ಏಕಿಲ್ಲ? ರಾಜ್ಯದ ಬೇರೆ ನಗರಗಳನ್ನು ಬೆಳೆಸಬಹುದು ಅಲ್ಲವೇ? ಏರ್‌ಪೋರ್ಟ್ ಅಕ್ಕಪಕ್ಕದಲ್ಲಿ ದೊಡ್ಡ ಶ್ರೀಮಂತರು ರೆಸಾರ್ಟ್, ಗಾಲ್ಫ್ ಕೋರ್ಟ್‌ಗಳನ್ನು ಕಟ್ಟುತ್ತಿದ್ದಾರೆ. ಅವರಿಗೆ ನೀರು ಕೊಡಲು ಈ ಯೋಜನೆಗಳನ್ನು ಮಾಡುತ್ತಿದ್ದಾರೆ ಹೊರತು ಬೆಂಗಳೂರಿನ ಸಾಮಾನ್ಯ ಜನರಿಗಲ್ಲ. ಕಾವೇರಿಯಿಂದ ನಾಲ್ಕು ಪೈಪ್‌ಲೈನ್‌ಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರು ತರುತ್ತಿದ್ದರೂ ಸಹ ಬೆಂಗಳೂರಿನ ಶೇ.60 ರಷ್ಟು ಜನಕ್ಕೆ ಸಮರ್ಪಕ ಕುಡಿಯುವ ನೀರು ಸಿಕ್ಕಿಲ್ಲ. ಇಂದಿಗೂ ಅಂತರ್ಜಲವನ್ನೆ ಬಳಸುತ್ತಿದ್ದಾರೆ” ಎನ್ನುತ್ತಾರೆ ಲಿಯೋ ಸಾಲ್ಡಾನ.

ಈ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಪರಿಸರವಾದಿ ನಾಗೇಶ್ ಹೆಗಡೆ ಅವರು “ನನ್ನನ್ನು ಕೇಳಿದರೆ ಕಾವೇರಿಯಿಂದ ಬೆಂಗಳೂರಿಗೆ ನೀರು ಕೊಡಲೇಬೇಡಿ ಎನ್ನುತ್ತೇನೆ. ನೀರು ಕೊಟ್ಟಷ್ಟು ಬೆಂಗಳೂರಿಗರು ಉಡಾಳರಾಗುತ್ತಾರೆ ಅಷ್ಟೇ. ಇಷ್ಟೊಂದು ಮಳೆ ಬಿದ್ದರೂ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೇ? ಬೆಂಗಳೂರಿನಲ್ಲಿ ಎಷ್ಟೊಂದು ಕೆರೆಗಳಿವೆ, ಅವುಗಳ ಊಳೆತ್ತಿಸಿ ಹೆಚ್ಚು ಹೆಚ್ಚು ನೀರು ಸಂಗ್ರಹಿಸಲು ಸಾಧ್ಯವಿಲ್ಲವೇ? ಅದನ್ನು ಏಕೆ ಮಾಡುತ್ತಿಲ್ಲ ಕರ್ನಾಟಕದ ಎಲ್ಲಾ ನದಿಗಳು ನೀರು ಬೆಂಗಳೂರಿಗರಿಗೆ ಬೇಕೆ” ಎಂದು ಕಟುವಾಗಿ ಪ್ರಶ್ನಿಸುತ್ತಾರೆ.

“ನಾನು ಎಲ್ಲಾ ದೊಡ್ಡ ಅಣೆಕಟ್ಟು ಯೋಜನೆಗಳನ್ನು ವಿರೋಧಿಸುತ್ತೇನೆ. ಎಷ್ಟೋ ದೇಶಗಳಲ್ಲಿ ಅಣೆಕಟ್ಟುಗಳಿಂದಾದ ಅಪಾಯಗಳನ್ನು ನಿವಾರಿಸಿಕೊಳ್ಳಲಾಗದೇ ಇರುವ ಅಣೆಕಟ್ಟುಗಳನ್ನು ಸಹ ಒಡೆದುಹಾಕುತ್ತಿದ್ದಾರೆ. ಈಗ ಕಲುಷಿತ ನೀರನ್ನು ಶುದ್ಧೀಕರಿಸುವ ಹಲವಾರು ತಂತ್ರಜ್ಞಾನಗಳು ಬಂದಿವೆ. ಬಿಲ್‌ಗೇಟ್ಸ್ ಆಸಕ್ತಿವಹಿಸಿ ಒಂದು ಯಂತ್ರ ಸಿದ್ಧಪಡಿಸಲು ನೆರವಾಗಿದ್ದಾರೆ. ನೇರವಾಗಿ ಚರಂಡಿ ನೀರು ಶುದ್ದ ಕುಡಿಯುವ ನೀರಾಗಿ ಪರಿವರ್ತನೆಯಾಗುತ್ತಿದೆ. ಬೆಂಗಳೂರಿನಲ್ಲಿ ಇಷ್ಟೊಂದು ತಂತ್ರಜ್ಞಾನ ತಿಳಿದವರು ಅದನ್ನು ಮಾಡಲು ಸಾಧ್ಯವಿಲ್ಲವೇ? ಮೇಕೆದಾಟು ಯೋಜನೆಗಾಗಿ ಸುರಿಯುವ ಅರ್ಧ ಹಣದಲ್ಲಿ ಈ ತಂತ್ರಜ್ಞಾನವನ್ನು ಸಿದ್ಧಪಡಿಸಿ, ಎಲ್ಲ ಬೆಂಗಳೂರಿಗೆ ಕುಡಿಯುವ ನೀರು ಒದಗಿಸಬಹುದು” ಎನ್ನುತ್ತಾರೆ ನಾಗೇಶ್ ಹೆಗಡೆ..


ಇದನ್ನೂ ಓದಿ: ಮೇಕೆದಾಟು ಡ್ಯಾಂ ಕಟ್ಟುವ ಹಕ್ಕು ಕರ್ನಾಟಕಕ್ಕಿದ್ದರೆ, ಅದನ್ನು ನಿಲ್ಲಿಸುವ ಹಕ್ಕು ನಮಗೂ ಇದೆ: ತಮಿಳುನಾಡು

ಮುತ್ತುರಾಜು
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial