”ಮೇಕೆದಾಟು ಡ್ಯಾಂ ಕಟ್ಟುವ ಹಕ್ಕು ಕರ್ನಾಟಕಕ್ಕಿದ್ದರೆ, ಅದನ್ನು ನಿಲ್ಲಿಸುವ ಹಕ್ಕು ನಮಗೂ ಇದೆ’

ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಕರ್ನಾಟಕ ಸರ್ಕಾರ ಆರಂಭಿಸಿರುವ ಮೇಕೆದಾಟು ಯೋಜನೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಮೇಕೆದಾಟು ಯೋಜನೆ  ವಿರುದ್ಧ ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆ ನಡೆಸಿ, ಯೋಜನೆ ವಿರೋಧಿಸುವ ನಿರ್ಣಯ ತೆಗೆದುಕೊಂಡಿತ್ತು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ “ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಯಿಂದ ಹಿಂದೆ ಸರಿಯುವುದಿಲ್ಲ” ಎಂದು ಹೇಳಿಕೆ ನೀಡಿದ್ದರು. ಸಚಿವ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್, “ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ತೀರ್ಪಿನ ವಿರುದ್ಧ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಹಕ್ಕು ಕರ್ನಾಟಕಕ್ಕೆ ಇದ್ದರೆ, ಕಾನೂನು ಮಾರ್ಗದ ಮೂಲಕ ಯೋಜನೆಯನ್ನು ಸ್ಥಗಿತಗೊಳಿಸುವ ಹಕ್ಕು ನಮಗೂ ಇದೆ” ಎಂದು ಹೇಳಿದ್ದಾರೆ.

ಸೋಮವಾರ ಸರ್ವಪಕ್ಷ ಸಭೆ ನಡೆಸಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದೆಂದು ಕೇಂದ್ರವನ್ನು ಒತ್ತಾಯಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಗಿತ್ತು.

ಆದರೆ, ಈ ಬಗ್ಗೆ ಕಟು ಹೇಳಿಕೆ ನೀಡಿದ್ದ ಸಚಿವ ಬಸವರಾಜ ಬೊಮ್ಮಾಯಿ, “ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಸಿದ್ದವಾಗಿರುವ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಇದು ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆ. ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕುಗಳು ಕರ್ನಾಟಕಕ್ಕೆ ಇವೆ” ಎಂದು ಪ್ರತಿಪಾಸಿದ್ದರು.

ಇದನ್ನೂ ಓದಿ: ಮೇಕೆದಾಟು ಯೋಜನೆ: ಸರ್ವ ಪಕ್ಷ ಸಭೆ ನಡೆಸಿದ ತಮಿಳುನಾಡು ಸಿಎಂ ಸ್ಟಾಲಿನ್

ತಮಿಳುನಾಡು ಸಚಿವ ದೊರೈ ಮುರುಗನ್, “ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ. ಈ ಪರಿಸ್ಥಿತಿಯಲ್ಲಿ, ತಮಿಳುನಾಡಿನ ಕಡೆಗೆ ಹರಿಯುವ ನೀರಿನ ಹಾದಿಯನ್ನು ತಡೆಯುವ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಮೂಲಕ ಕರ್ನಾಟಕ ಸರ್ಕಾರ ಉನ್ನತ ನ್ಯಾಯಾಲಯದ ತೀರ್ಪನ್ನು ಕಡೆಗಣಿಸುತ್ತಿದೆ” ಎಂದಿದ್ದಾರೆ.

“ಕರ್ನಾಟಕದ ಸಚಿವರು ಕಾವೇರಿ ಟ್ರಿಬ್ಯೂನಲ್ ಮತ್ತು ಸುಪ್ರೀಂ ಕೋರ್ಟ್​ನ ತೀರ್ಪುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಆಶ್ಚರ್ಯವಾಗುತ್ತಿದೆ. ಇದು ಪ್ರಜಾಪ್ರಭುತ್ವ ದೇಶ. ಕರ್ನಾಟಕದಲ್ಲಿ ಇಂತಹ ಪ್ರವೃತ್ತಿಗಳು ಬೆಳೆಯುತ್ತಿರುವಾಗ ಕೇಂದ್ರ ಸರ್ಕಾರ ಪ್ರೇಕ್ಷಕರಾಗಿ ಉಳಿಯುವುದು ಸರಿಯಲ್ಲ. ನೆರೆಯ ರಾಜ್ಯಗಳ ನಡುವಿನ ಆರೋಗ್ಯಕರ ಸಂಬಂಧಕ್ಕೆ ಇದು ಒಳ್ಳೆಯದಲ್ಲ” ಎಂದು ತಮಿಳುನಾಡು ಸಚಿವ ದೊರೈ ಮುರುಗನ್ ತಿಳಿಸಿದ್ದಾರೆ.

ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ, ಮೇಕೆದಾಟು ಯೋಜನೆಯನ್ನು ಮುಂದುವರಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಸಂಘಟನೆಗಳು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಖಂಡಿಸಿ ತಂಜಾವೂರಿನಲ್ಲಿ ಬ್ಯಾನರ್‌ಗಳನ್ನು ಹೊತ್ತುಕೊಂಡು ಘೋಷಣೆಗಳನ್ನು ಕೂಗಿದ್ದಾರೆ.

ರಾಜ್ಯದಲ್ಲಿ ಆಡಳಿತ ಮತ್ತು ವಿಪಕ್ಷಗಳು ಕೂಡ ಮೇಕೆದಾಟು ಯೋಜನೆಗೆ ಬೆಂಬಲ ಸೂಚಿಸಿವೆ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಈ ಬಗ್ಗೆ ಪ್ರತಿಕ್ರಿಯಿಸಿ, “ಈ ಯೋಜನೆಗೆ ತಮಿಳುನಾಡು ಬೇಕಾದರೆ ಒತ್ತಡ ಹಾಕಲಿ. ನಾಳೆಯೇ ಯೋಜನೆಗೆ ಅಡಿಗಲ್ಲು ಹಾಕಲಿ, ಕೆಲಸ ಆರಂಭಿಸಲಿ, ಭೂಮಿ ಪೂಜೆ ಮಾಡಿಬಿಡಲಿ. ಯಡಿಯೂರಪ್ಪ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದೇ ತಪ್ಪು. ನಮಗೆ ಯೋಜನೆ ಮಾಡಲು ಯಾರ ಒಪ್ಪಿಗೆ ಬೇಕಿಲ್ಲ’ ಎಂದು ಹೇಳಿದ್ದರು.


ಇದನ್ನೂ ಓದಿ: ‘ಮೇಕೆದಾಟು’ ಯೋಜನೆ ರಾಜ್ಯದ ಹಕ್ಕು, ಅದನ್ನು ನಿಲ್ಲಿಸುವುದಿಲ್ಲ: ಗೃಹ ಸಚಿವ

LEAVE A REPLY

Please enter your comment!
Please enter your name here