ಕುಲಾಂತರಿ ಬದನೆಕಾಯಿ ವಿರುದ್ಧ ನಡೆದ ಪ್ರತಿಭಟನೆಗಳ ಕಾರಣಕ್ಕೆ ಅದರ ವ್ಯಾವಹಾರಿಕೆ ಬಳಕೆಗೆ ತಡೆಯೊಡ್ಡಲಾಗಿದೆ. ಇಂತಹ ಸಂದರ್ಭದಲ್ಲಿ ಕುಲಾಂತರಿ ಸಾಸಿವೆ ಬಳಕೆ ಸಂಬಂಧಿಸಿದಂತೆ ಮತ್ತೆ ವಿವಾದ ಭುಗಿಲೆದ್ದಿದೆ. ಈ ಹಿಂದೆಯೇ ಕುಲಾಂತರಿಗಳ ಸಮಗ್ರ ಅಧ್ಯಯನ ನಡೆಸದೆ ಅವುಗಳ ವಾಣಿಜ್ಯ ಬಳಕೆ ಬೇಡವೆಂದು 2012ರಲ್ಲಿ ಸಂಸದೀಯ ಸಮಿತಿ ಹಾಗೂ 2013ರಲ್ಲಿ ಸರ್ವೋಚ್ಚ ನ್ಯಾಯಾಲಯದ ತಾಂತ್ರಿಕ ಸಮಿತಿ ಶಿಫಾರಸು ಮಾಡಿದವು. ಆದರೂ ಧಾರಾ ಮಸ್ಟರ್ಡ್ ಹೈಬ್ರಿಡ್ -11 (ಡಿಎಂಎಚ್-11) ಎಂಬ ಕುಲಾಂತರಿ ಸಾಸಿವೆಯನ್ನು ಮುಕ್ತ ಪರಿಸರದಲ್ಲಿ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರದ ಕುಲಾಂತರ ತಳಿ ಪರಿಶೀಲನಾ ಸಮಿತಿ (ಜಿಇಎಸಿ) ಅಕ್ಟೋಬರ್ 18ರಂದು ಅನುಮತಿ ನೀಡಿದೆ.
ಆದರೆ ಸಾಮಾಜಿಕ ಕಾರ್ಯಕರ್ತರು ವೈಜ್ಞಾನಿಕ ಪ್ರಯೋಗಳುಗಳು ನಡೆಯದೆ ಅನುಮತಿ ನೀಡಲಾಗಿದೆ ಮತ್ತು ಇದರ ಬಳಕೆಯು ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಉಲ್ಲೇಖಿಸಿ ವಾಣಿಜ್ಯ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಸಹ ಹೂಡಿದ್ದಾರೆ. ಆದರೆ ಕೆಲ ವಿಜ್ಞಾನಿಗಳು ಮತ್ತು ಕೇಂದ್ರ ಸರ್ಕಾರ ಸಾಸಿವೆ ಎಣ್ಣೆಯ ಅಗತ್ಯತೆ ಉಲ್ಲೇಖಿಸಿ ವಾಣಿಜ್ಯ ಬಳಕೆಗೆ ಅವಕಾಶ ನೀಡಬೇಕೆಂದು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್ ಪರಿಸರದ ಪರೀಕ್ಷೆಗೆ ತಡೆಯಾಜ್ಞೆ ನೀಡಿದ್ದು, ನವೆಂಬರ್ 10ರೊಳಗೆ ಕೇಂದ್ರ ಸರ್ಕಾರ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಸೂಚಿಸಿದೆ. ಆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ಧಾರಾ ಮಸ್ಟರ್ಡ್ ಹೈಬ್ರಿಡ್ -11 ಕುರಿತು
ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯಾಗಿದ್ದ, ವಿಶ್ವವಿದ್ಯಾಲಯದ ದಿ ಸೆಂಟರ್ ಫಾರ್ ಜೆನೆಟಿಕ್ ಮ್ಯಾನಿಪ್ಯುಲೇಷನ್ ಆಫ್ ಕ್ರಾಪ್ ಪ್ಲಾಂಟ್ಸ್‌ನ ನಿರ್ದೇಶಕರಾಗಿರುವ ದೀಪಕ್ ಪೆಂಟಾಲ್ ಧಾರಾ ಮಸ್ಟರ್ಡ್ ಹೈಬ್ರಿಡ್ -11 ಎಂಬ ಕುಲಾಂತರಿ ಸಾಸಿವೆಯನ್ನು ಅಭಿವೃದ್ದಿಪಡಿಸಿದ್ದಾರೆ. ಬರ್ನೇಸ್ ಮತ್ತು ಬಸ್ತಾರ್ ಎಂಬ ಎರಡು ವಂಶವಾಹಿಗಳನ್ನು ಮಣ್ಣಿನಲ್ಲಿ ಅಡಕವಿರುವ ಬ್ಯಾಕ್ಟಿರಿಯಾ ಆದ ಬಾಸಿಲಸ್ ಅಮೈಲೋ ಲಿಕ್ವಿಫೇಸಿಯನ್ಸ್ ಎಂಬುದರಿಂದ ತೆಗೆದು ಹೈಬ್ರೀಡ್ ಸಾಸಿವೆಯ ಅಂಗಾಂಶದಲ್ಲಿ ಸೇರಿಸುವ ಮೂಲಕ ಈ ತಳಿಯನ್ನು ತಯಾರಿಸಲಾಗಿದೆ.
ಇದನ್ನು ದೇಸಿಯ ಹೈಬ್ರಿಡ್ ಎಂದು ಕೇಂದ್ರ ಸರ್ಕಾರ ಪ್ರಚಾರ ಮಾಡಿದರೆ, ಹೋರಾಟಗಾರರು ಬರ್ನೇಸ್ ಮತ್ತು ಬಸ್ತಾರ್ ಎಂಬ ಎರಡು ವಂಶವಾಹಿಗಳು ಜರ್ಮನ್ ಮೂಲದ ಬಾಯರ್ ಆಗ್ರೋ ಸೈನ್ಸ್ ನವರ ಪೇಟೆಂಟ್ ಆಗಿದೆ ಎಂದು ಆರೋಪಿಸಿದ್ದಾರೆ.
ಕುಲಾಂತರಿ ತಳಿ ಪರ ಇರುವವರ ವಾದ
ಭಾರತದಲ್ಲಿ ಸಾಸಿವೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಹೊಸ ಕುಲಾಂತರಿ ತಳಿಯು ಸ್ಥಳೀಯ ತಳಿಗಿಂತ 28% ಹೆಚ್ಚಿನ ಇಳುವರಿಯನ್ನು ಕೊಡುತ್ತದೆ.
ಇದರ ಕಳೆ ನಿರ್ವಹಣೆ ಅತಿ ಸುಲಭವಾಗಿದೆ. ಕಳೆನಾಶಕ ಸಿಂಪಡಿಸಿದರೆ ಕಳೆ ಮಾತ್ರವೇ ನಾಶವಾಗುತ್ತದೆ. ಸಾಸಿವೆ ಗಿಡಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಭಾರತವು ಖಾದ್ಯ ತೈಲ ಉತ್ಪಾದನೆಯಲ್ಲಿ ತೀರಾ ಹಿಂದಿದೆ. ಪ್ರತಿ ವರ್ಷ ಬಳಕೆಯ ಮೂರನೇ ಎರಡರಷ್ಟನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದೆ. 2020-21ರಲ್ಲಿ ₹1,17,000 ಕೋಟಿ ವೆಚ್ಚದಲ್ಲಿ ಸುಮಾರು 13.3 ಮಿಲಿಯನ್ ಟನ್ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. ಅದನ್ನು ತಪ್ಪಿಸಬೇಕಾದರೆ ಹೆಚ್ಚು ಇಳುವರಿ ಕೊಡುವ ಕುಲಾಂತರಿ ತಳಿ ಬಳಕೆ ಅನಿವಾರ್ಯ.
ಕುಲಾಂತರಿ ತಳಿ ವಿರೋಧಿಗಳ ವಾದ
ಬಾಯರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಕುಲಾಂತರಿ ತಳಿ ಬೀಜಗಳು ಮತ್ತು ಆಹಾರೋತ್ಪಾದನೆಗಳಿಗೆ ಅವಕಾಶ ನೀಡುವ ಮೂಲಕ ಭಾರತದಲ್ಲಿ ಅದರ ವಸಾಹತು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡಬಾರದು.
28% ಹೆಚ್ಚಿನ ಇಳುವರಿ ಕೊಡುತ್ತದೆ ಎಂಬುದಕ್ಕೆ ವೈಜ್ಞಾನಿಕ ದಾಖಲೆಗಳಿಲ್ಲ. ಅದರ ಬದಲಿಗೆ ನಮ್ಮ ರೈತರಿಗೆ ಸಾಕಷ್ಟು ಪ್ರೋತ್ಸಾಹ ನೀಡಿದರೆ ಈಗ ಬೆಳೆಯುತ್ತಿರುವುದರ ಮೂರು ಪಟ್ಟು ಅಧಿಕ ಸಾಸಿವೆ ಬೆಳೆಯುತ್ತಾರೆ.
ಈ ಸಾಸಿವೆ ಬೆಳೆಗೆ ಕಳೆನಾಶಕ ಗ್ಲುಫೊಸಿನೇಟ್ ಬಳಕೆ ಅನಿವಾರ್ಯವಾಗಿದೆ. ಬಾಯರ್ ಬಹರಾಷ್ಟ್ರೀಯ ಕಂಪನಿಯೇ ಆ ಕಳೆನಾಶಕದ ತಯಾರಿಸುತ್ತಿದ್ದು ಅದರ ಲಾಭಕ್ಕಾಗಿಯೇ ಈ ತಳಿ ಪರಿಚಯಿಸಿದ್ದಾರೆ.
ಆ ಕಳೆನಾಶಕದ ಬಳಕೆ ಹೆಚ್ಚಿದರೆ ಈ ಕಳೆನಾಶಕಗಳು ಕ್ಯಾನ್ಸರ್‌ಕಾರಕ ಅಂಶಗಳನ್ನು ಹೊಂದಿದ್ದು, ಮಾನವನ ಮತ್ತು ಪ್ರಾಣಿಗಳ ದೇಹದ ಕೋಶಕ್ಕೆ ಅಪಾಯಕಾರಿಯಾಗಿವೆ. ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅದರ ಬಳಕೆಯನ್ನು ನಿಷೇಧಿಸಲಾಗಿದೆ.
ಪರಿಸರ ಮತ್ತು ಒಟ್ಟಾರೆ ಜೈವಿಕ ವ್ಯವಸ್ಥೆಯ ಆರೋಗ್ಯಕ್ಕೂ ಇದು ಹಾನಿಕಾರಕವಾಗಿದೆ. ಒಮ್ಮೆ ಇಂತಹ ಕುಲಾಂತರಿ ತಳಿಗಳನ್ನು ಪರಿಸರಕ್ಕೆ ವ್ಯಾಪಿಸಿದರೆ ಅದರಿಂದಾಗುವ ಹಾನಿಯನ್ನು ಮತ್ತೆ ಸರಿಪಡಿಸಲಾಗದು.
ಕುಲಾಂತರಿ ಸಾಸಿವೆ ಎಣ್ಣೆ ಬಳಕೆಯಿಂದ ಆಗುವ ಅಪಾಯಗಳ ಕುರಿತು ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿಲ್ಲ.
ಸದ್ಯ ಸಾಸಿವೆ ಗಿಡದ ಕಡುಹಳದಿ ಬಣ್ಣದ ಹೂವುಗಳು ಕೀಟಗಳು ಮತ್ತು ಜೇನುಗಳನ್ನು ಆಕರ್ಷಿಸುವ ಕೆಲಸ ಮಾಡುತ್ತ, ಉಳಿದ ಬೆಳೆಗಳನ್ನು ಪರೋಕ್ಷವಾಗಿ ರಕ್ಷಿಸುತ್ತಿವೆ. ಕುಲಾಂತರಿ ಸಾಸಿವೆಯಿಂದ ಈ ಸರಪಳಿ ಕಳಚುವ ಅಪಾಯವಿದೆ.
ಮುಂದುವರಿದ ದೇಶಗಳ ಕಾನೂನು ಏನು ಹೇಳುತ್ತದೆ?
ಅಮೆರಿಕ, ಚೀನಾ ಸೇರಿದಂತೆ ಹಲವು ಅಭಿವೃದ್ದಿ ಹೊಂದಿದ ದೇಶಗಳು ಕುಲಾಂತರಿ ಬೀಜಗಳನ್ನು ನಿಷೇಧಿಸಿವೆ ಮತ್ತು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಿವೆ. ಆದರೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಈ ರೀತಿಯ ಪ್ರಯೋಗಗಳನ್ನು ನಡೆಸುತ್ತವೆ ಎಂಬ ಆರೋಪವಿದೆ.
ಅಲ್ಲದೆ ಕುಲಾಂತರಿ ಬೀಜಗಳು ದೇಶದ ವೈವಿದ್ಯ ಬೀಜ ಉತ್ಪಾದನೆಗೆ ಮಾರಕವಾಗಿ ಪರಿಣಿಮಿಸಿರುವ ಉದಾಹರಣಗಳಿವೆ. ಭಾರತದಂತಹ ದೇಶದಲ್ಲಿ ಬೀಜ ಸಂರಕ್ಷಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಹೈಬ್ರೀಡ್, ಕುಲಾಂತರಿ ಬೀಜಗಳ ಪ್ರಭಾವದಿಂದಾಗಿ ನಮ್ಮ ಬೀಜ ಸ್ವಾತಂತ್ರ್ಯ ನಶಿಸಿ ಬಹುರಾಷ್ಟ್ರೀಯ ಕಂಪನಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಇದು ದೊಡ್ಡ ಅಪಾಯಕಾರಿ ಎಂಬುದು ಪರಿಸರ ತಜ್ಞರ ಅಭಿಮತವಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿ ಕುಲಾಂತರಿ ಬೀಜಗಳ ಬಳಕೆ ಬೇಕೆ ಬೇಡವೆ ಎಂದದನ್ನು ಭಾರತೀಯರು ನಿರ್ಧರಿಸಬೇಕಿದೆ.
ಇದನ್ನೂ ಓದಿ: ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2


