ಅಮೇರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಫೇಸ್‌ಬುಕ್ ಇಂಡಿಯಾ ಬಿಜೆಪಿ ಪರವಾಗಿದೆ ಎಂದು ಆರೋಪಿಸಿದ ನಂತರ ಭಾರತದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಬರೆದಿದ್ದ ಎರಡು ಪತ್ರಗಳಿಗೆ ಕಂಪನಿಯು ಉತ್ತರ ನೀಡಿದೆ.
ಫೇಸ್‌ಬುಕ್‌ನ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ನೀಲ್ ಪಾಟ್ಸ್, “ಕಾಂಗ್ರೆಸ್ ಪಕ್ಷದ ಪರವಾಗಿ ನೀವು ಎತ್ತಿದ ವಿಚಾರಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ” ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಇಂಡಿಯಾ ಬಗ್ಗೆ ವಿಚಾರಣೆ ನಡೆಸಿ: ಮಾರ್ಕ್ ಜುಕರ್‌ಬರ್ಗ್‌ಗೆ ಕೆ.ಸಿ.ವೇಣುಗೋಪಾಲ್ ಪತ್ರ
ಆದರೆ ಭಾರತದಲ್ಲಿ ಫೇಸ್‌ಬುಕ್‍ನ ಉನ್ನತ ಸಿಬ್ಬಂದಿ ಎದುರಿಸುತ್ತಿರುವ ಆರೋಪಗಳ ಕುರಿತಂತೆ ಉನ್ನತ ಮಟ್ಟದ ತನಿಖೆಯನ್ನು ಸಮಯಮಿತಿಯೊಳಗೆ ನಡೆಸಬೇಕೆಂಬ ಕಾಂಗ್ರೆಸ್ ಆಗ್ರಹವನ್ನು ಹಾಗೂ ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನಾಧರಿಸಿ ಫೇಸ್ ಬುಕ್ ಇಂಡಿಯಾದ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ಅಂಖಿ ದಾಸ್ ಅವರ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ಫೇಸ್‌ಬುಕ್ ಪತ್ರದಲ್ಲಿ ಉಲ್ಲೇಖ ಮಾಡಿಲ್ಲ.
ಫೇಸ್‌ಬುಕ್ ನಿಷ್ಪಕ್ಷಪಾತಿ ಎಂದು ಮತ್ತೆ ಪುನುಚ್ಚರಿಸಿರುವ ಫೇಸ್‌ಬುಕ್, ಜನರು ತಮ್ಮ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸಲು ತಮ್ಮ ಸಂಸ್ಥೆಯ ವೇದಿಕೆಗಳು ಅವಕಾಶ ಒದಗಿಸುತ್ತವೆ ಎಂದಿದ್ದಾರೆ.
“ತಾರತಮ್ಯ ಕುರಿತಾದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಹಾಗೂ ದ್ವೇಷ ಮತ್ತು ನಿಂದನೆಯ ಎಲ್ಲಾ ವಿಧಗಳನ್ನು ಖಂಡಿಸುತ್ತೇವೆ. ಸಾರ್ವಜನಿಕ ವ್ಯಕ್ತಿಗಳ ದ್ವೇಷಪೂರಿತ ಪೋಸ್ಟ್‌ಗಳ ಕುರಿತಂತೆ ನಮ್ಮ ನೀತಿಯಂತೆ ಅಂತಹ ಪೋಸ್ಟ್ ಗಳನ್ನು ನಾವು ತೆಗೆದುಹಾಕುತ್ತೇವೆ ಮತ್ತು ಮುಂದೆಯೂ ನಮ್ಮ ವೇದಿಕೆಗಳಲ್ಲಿ ಸಾರ್ವಜನಿಕ ವ್ಯಕ್ತಿಗಳ ದ್ವೇಷಪೂರಿತ ಹೇಳಿಕೆಗಳನ್ನು ತೆಗೆದು ಹಾಕುತ್ತೇವೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ತೆಲಂಗಾಣದ ಬಿಜೆಪಿ ಶಾಸಕನನ್ನು ನಿಷೇಧಿಸಿದ ಫೇಸ್‌ಬುಕ್


