ಬಜರಂಗದಳವು ಭಾರತದಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರವನ್ನು ಬೆಂಬಲಿಸುವ ಅಪಾಯಕಾರಿ ಸಂಘಟನೆಯೆಂದು ಫೇಸ್‌ಬುಕ್‌ನ ಭದ್ರತಾ ತಂಡವು ಗುರುತಿಸಿದ್ದರೂ, ರಾಜಕೀಯ ಮತ್ತು ವ್ಯವಹಾರದ ರಕ್ಷಣೆಯ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಮುಂದುವರೆಯಲು ಅವಕಾಶ ನೀಡಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಬಜರಂಗದಳವು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಫೇಸ್‌ಬುಕ್ ಅರಿತುಕೊಂಡು, “ಬಜರಂಗದಳದ ವಿರುದ್ದ ಕ್ರಮ ಕೈಗೊಂಡರೆ ಕಂಪನಿ ವ್ಯವಹಾರದ ಭವಿಷ್ಯ ಮತ್ತು ಭಾರತದಲ್ಲಿನ ತನ್ನ ಸಿಬ್ಬಂದಿಗೆ ಅಪಾಯವಾಗಬಹುದು” ಎಂದು ಫೇಸ್‌ಬುಕ್ ಹೆದರಿತ್ತು ಎಂದು ಪತ್ರಿಕೆ ಉಲ್ಲೇಖಿಸಿದೆ.
ಇದನ್ನೂ ಓದಿ: ಅಂಬೇಡ್ಕರ್ ಮೊಮ್ಮಗ ’ರಾಜರತ್ನ’ ಪೇಜನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ ಫೇಸ್‌ಬುಕ್!
ವಾಲ್ ಸ್ಟ್ರೀಟ್ ಜರ್ನಲ್‌ನ ಹೊಸ ವರದಿಯು, ಜೂನ್ ತಿಂಗಳಲ್ಲಿ ನವದೆಹಲಿಯ ಹೊರ ವಲಯದಲ್ಲಿರುವ ಚರ್ಚ್ ಮೇಲೆ ನಡೆದ ದಾಳಿಯ ವಿಡಿಯೋವನ್ನು ಉಲ್ಲೇಖಿಸಿದೆ. ಈ ದಾಳಿಯ ಹೊಣೆಯನ್ನು ಬಜರಂಗದಳ ವಹಿಸಿಕೊಂಡಿತ್ತು. ಆದರೆ ಆ ವಿಡಿಯೋ 2.5 ಲಕ್ಷ ವೀಕ್ಷಣೆ ಆಗುವವರೆಗೂ ಅನುಮತಿ ನೀಡಿತ್ತು. ಈ ವಿಡಿಯೋವನ್ನು ತೆಗೆದು ಹಾಕಬೇಕು ಎಂದು ಫೇಸ್‌ಬುಕ್ ಭದ್ರತಾ ತಂಡ ಹೇಳಿದ್ದರೂ, “ನಿಷೇಧಿಸುವುದರಿಂದ ಫೇಸ್‌ಬುಕ್ ಸಿಬ್ಬಂದಿ ಅಥವಾ ಸೌಲಭ್ಯಗಳ ವಿರುದ್ಧ ದೈಹಿಕ ದಾಳಿ ನಡೆಯಬಹುದು” ಎಂದು ಆಂತರಿಕ ಫೇಸ್‌ಬುಕ್ ಸಿಬ್ಬಂದಿಯೊಬ್ಬರು ತಿಳಿಸಿದ್ದರು ಎಂದು ಜರ್ನಲ್ ವರದಿ ಮಾಡಿದೆ.
ಜರ್ನಲ್ ವರದಿಗೆ ಫೇಸ್‌ಬುಕ್ ವಕ್ತಾರ ಆಂಡಿ ಸ್ಟೋನ್ ಪ್ರತಿಕ್ರಿಯಿಸಿದ್ದು, “ರಾಜಕೀಯ ಸ್ಥಾನಮಾನ ಅಥವಾ ಪಕ್ಷದ ಸಂಬಂಧವನ್ನು ಪರಿಗಣಿಸದೆ ನಾವು ಜಾಗತಿಕವಾಗಿ ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ದ ನೀತಿಯನ್ನು ಜಾರಿಗೊಳಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ದ್ವೇಷದಿಂದ ಲಾಭ ಗಳಿಸುತ್ತಿದೆ: ಮಾಜಿ ಫೇಸ್‌ಬುಕ್ ಉದ್ಯೋಗಿ ಮಾರ್ಕ್ ಲಕ್ಕಿ
ಕಳೆದ ಆಗಸ್ಟ್‌ನಲ್ಲಿ ತನ್ನ ನೀತಿಗಳಲ್ಲಿ ಫೇಸ್‌ಬುಕ್ ಪಕ್ಷಪಾತ ಮಾಡುತ್ತಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ವರದಿಯಲ್ಲಿ, “ಆಡಳಿತರೂಡ ಬಿಜೆಪಿಯ ಬಗ್ಗೆ ತನ್ನ ವ್ಯಾಪಾರ ಹಿತಾಸಕ್ತಿಗಳಿಗಾಗಿ ಒಲವು ತೋರಿಸಿದೆ ಹಾಗೂ ಫೇಸ್‌ಬುಕ್‌ನ ಕಾರ್ಯನಿರ್ವಾಹಕಿಯಾಗಿದ್ದ ಆಂಖೀ ದಾಸ್ ಮುಸ್ಲಿಂ ವಿರೋಧಿ ಟೀಕೆಗಳನ್ನು ಮಾಡಿದ್ದ ಬಿಜೆಪಿ ನಾಯಕನ ಪರವಾಗಿ ಲಾಬಿ ಮಾಡಿದ್ದಾರೆ” ಎಂದು ಹೇಳಲಾಗಿತ್ತು.
ಈ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜಕಾರಣಿಯೊಬ್ಬರ ಖಾತೆಯನ್ನು ಅಮಾನತ್ತು ಮಾಡಿದ್ದ ಫೇಸ್‌ಬುಕ್, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತಾದರೂ ದ್ವೇಷ ಭಾಷಣಗಳನ್ನು ನಿಗ್ರಹಿಸಲು ಇನ್ನೂ ಉತ್ತಮವಾಗಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಒಪ್ಪಿಕೊಂಡಿತ್ತು. ಅಲ್ಲದೆ ಅದರ ಕಾರ್ಯನಿರ್ವಾಹಕಿಯಾಗಿದ್ದ ಆಂಖೀ ದಾಸ್ ಕೂಡಾ ಫೇಸ್‌ಬುಕ್ ತೊರೆದಿದ್ದರು.
ಭಾರತದಲ್ಲಿ ಐದು ಕಚೇರಿಗಳನ್ನು ನಡೆಸುತ್ತಿರುವ ಫೇಸ್‌ಬುಕ್, ಅಕ್ಟೋಬರ್ ತಿಂಗಳೊಂದರಲ್ಲೇ ಶತಕೋಟಿ ಡಾಲರ್‌ಗಳಷ್ಟು ದುಡ್ಡನ್ನು ಹೂಡಿಕೆ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಫೇಸ್‌ಬುಕ್ ಭಾರತವನ್ನು ಬಳಕೆದಾರರ ವಿಷಯದಲ್ಲಿ ತನ್ನ ಅತಿದೊಡ್ಡ ಮಾರುಕಟ್ಟೆಯೆಂದು ಪರಿಗಣಿಸಿದೆ.
ಇದನ್ನೂ ಓದಿ: ಬಿಜೆಪಿ-ಫೇಸ್‌ಬುಕ್ ಸಖ್ಯ: ಹುದ್ದೆ ತ್ಯಜಿಸಿದ ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್!


