ಸಾರ್ವಜನಿಕ ಸ್ಥಳದಲ್ಲಿ ಹಿಂದೂ ಮಹಿಳೆ ಮುಂದೆ ಶರ್ಟ್ ಬಿಚ್ಚಿದ ಮುಸ್ಲಿಂ ಯುವಕನಿಗೆ ಥಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
‘ಬಾಬಾ ಬನಾರಸ್’ (@RealBababanaras) ಎಂಬ ಬಲಪಂಥೀಯ ಎಕ್ಸ್ ಖಾತೆಯಲ್ಲಿ ಅಕ್ಟೋಬರ್ 15ರಂದು ವಿಡಿಯೋ ಹಂಚಿಕೊಂಡು ” ಚಪ್ರಿ ಅಬ್ದುಲ್ ತನ್ನ ಶರ್ಟ್ ಬಿಚ್ಚಿ ಹಿಂದೂ ಮಹಿಳೆಗೆ ದೇಹ ತೋರಿಸಲು ಮುಂದಾದಾಗ, ಧೈರ್ಯಶಾಲಿ ಹಿಂದೂ ಮಹಿಳೆ ಆತನಿಗೆ ತಕ್ಷ ಶಾಸ್ತ್ರಿ ಮಾಡಿದ್ದಾರೆ. ಅಧರ್ಮವನ್ನು ವಿರೋಧಿಸಿ. ಇದು ಸರಿಯಾದ ಮಾರ್ಗವಾಗಿದೆ. ಸೆಲ್ಯೂಟ್” ಎಂದು ಬರೆದುಕೊಂಡಿದ್ದರು.

ನ್ಯೂಸ್ ನೇಷನ್ ಎಂಬ ಸುದ್ದಿ ವೆಬ್‌ಸೈಟ್ ಅಕ್ಟೋಬರ್ 15ರಂದು ವಿಡಿಯೋ ಕುರಿತು ದೊಡ್ಡ ಸುದ್ದಿಯನ್ನೇ ಮಾಡಿತ್ತು. ಆದರೆ, ಅದರಲ್ಲಿ ಹಿಂದೂ-ಮುಸ್ಲಿಂ ಎಂದು ಉಲ್ಲೇಖಿಸಿರಲಿಲ್ಲ.

ಸೆಪ್ಟೆಂಬರ್ 24ರಂದು ವಿಡಿಯೋ ಕುರಿತು ಸ್ಟೋರಿ ಹಾಕಿದ್ದ ಟಿವಿ9 ಭಾರತ್ ವರ್ಷ್ ” ಮಹಿಳೆಗೆ ದೇಹ ತೋರಿಸಲು ಮುಂದಾದ ಯುವಕನಿಗ ಥಳಿಸಲಾಗಿದೆ” ಎಂದು ವಿವರಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ ಎಂದಿತ್ತು.

ಸೆಪ್ಟೆಂಬರ್ 24ರಂದು ಆಜ್‌ತಕ್ ಸುದ್ದಿ ಸಂಸ್ಥೆ ಕೂಡ ವಿಡಿಯೋ ಕುರಿತು ಸ್ಟೋರಿ ಹಾಕಿತ್ತು. ಅದರಲ್ಲೂ ವಿಡಿಯೋ ವೈರಲ್ ಆಗುತ್ತಿದೆ ಎಂದು ಹೇಳಿತ್ತು. ಅದು ಎಲ್ಲಿ ನಡೆದ ಘಟನೆಯದ್ದು ಎಂದು ಹೇಳಿರಲಿಲ್ಲ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾವು ಮಾಹಿತಿ ಹುಡುಕಿದಾಗ ‘tamannakohli786787‘ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.

ಇನ್‌ಸ್ಟಾಗ್ರಾಂ ಖಾತೆಯನ್ನು ನಾವು ಪರಿಶೀಲಿಸಿ ನೋಡಿದಾಗ ವೈರಲ್ ವಿಡಿಯೋ ರೀತಿಯ ಹಲವು ವಿಡಿಯೋಗಳು ಕಂಡು ಬಂದಿವೆ. ಆ ಎಲ್ಲಾ ವಿಡಿಯೋಗಳಲ್ಲಿ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮೂವರು ಇರುವುದನ್ನು ಕಾಣಬಹುದು. ಹಾಗಾಗಿ, ಆ ವಿಡಿಯೋಗಳು ಸ್ಕ್ರಿಪ್ಟೆಡ್ ಎಂಬುವುದು ನಮಗೆ ಗೊತ್ತಾಗಿದೆ.

ಸಾಮಾಜಿಕ ಜಾಲತಾಣಲ್ಲಿ ಹಿಂದೂ-ಮುಸ್ಲಿಂ ಹೆಸರಿನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಸ್ಕ್ರಿಪ್ಟೆಡ್ ಎಂಬುವುದನ್ನು ಖ್ಯಾತ ಫ್ಯಾಕ್ಟ್‌ಚೆಕ್ ಸಂಸ್ಥೆ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಖಚಿತಪಡಿಸಿದ್ದಾರೆ.

ಒಟ್ಟಿನಲ್ಲಿ tamannakohli786787 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ಸ್ಕ್ರಿಪ್ಟೆಡ್ ವಿಡಿಯೋವನ್ನು ಮುಸ್ಲಿಂ ಯುವಕ ಅಬ್ದುಲ್ ಹಿಂದೂ ಮಹಿಳೆ ಮುಂದೆ ಶರ್ಟ್ ಬಿಚ್ಚಿದ್ದಕ್ಕೆ ಮಹಿಳೆ ಅಲ್ಲೇ ಕಪಾಳಕ್ಕೆ ಬಾರಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
ಇದನ್ನೂ ಓದಿ : FACT CHECK : ಮುಸ್ಲಿಮರು ದುರ್ಗಾ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ ಎಂಬುವುದು ಸುಳ್ಳು


