ಗುರುವಾರ (ಮೇ.8) ರಾತ್ರಿ ಭಾರತದ ಹಲವು ಪ್ರದೇಶಗಳ ಮೇಲೆ ವಿವಿಧ ರೀತಿಯಲ್ಲಿ ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನಿಸಿತ್ತು. ಅದನ್ನು ಭಾರತ ಯಶಸ್ವಿಯಾಗಿ ತಡೆದಿದೆ ಎಂದು ವರದಿಯಾಗಿದೆ.
ದೇಶದ ಬಹುತೇಕ ದೃಶ್ಯ ಮಾಧ್ಯಮಗಳು ಗುರುವಾರ ರಾತ್ರಿ ಪಾಕಿಸ್ತಾನ ದಾಳಿ ನಡೆಸಿದೆ ಎಂಬ ಸುದ್ದಿಯನ್ನು ನೇರ ಪ್ರಸಾರ ರೀತಿಯಲ್ಲಿ ಪ್ರಕಟಿಸಿತ್ತು. ಇದೇ ವೇಳೆ ಸಾಮಾಜಿಕ ಮಾಧ್ಯಮಗಳಲ್ಲೂ ಭಾರತ-ಪಾಕಿಸ್ತಾನ ಪರಸ್ಪರ ದಾಳಿ ಮಾಡಿಕೊಂಡಿವೆ ಎಂಬ ಹಲವು ಸುದ್ದಿ ಮತ್ತು ವಿಡಿಯೋಗಳು ಹರಿದಾಡಿತ್ತು. ಅಂತಹ ವಿಡಿಯೋಗಳನ್ನು ದೇಶದ ಮುಖ್ಯವಾಹಿನಿ ಮಾಧ್ಯಮಗಳೂ ಪ್ರಸಾರ ಮಾಡಿತ್ತು.
ವೈರಲ್ ವಿಡಿಯೋಗಳ ಪೈಕಿ 37 ಸೆಕೆಂಡ್ ವಿಡಿಯೋವೊಂದನ್ನು ಹೆಚ್ಚಿನ ಜನರು ಹಂಚಿಕೊಂಡಿದ್ದರು. ಅದರಲ್ಲಿ, ಯಾವುದೋ ಸ್ಪೋಟ ಸಂಭವಿಸಿದ ಬಳಿಕದ ಚಿತ್ರಣ ಇತ್ತು. ಸುತ್ತಲು ಕಾರುಗಳು ನಿಂತಿರುವುದು, ಬೆಂಕಿ ಹೊತ್ತಿ ಉರಿಯುತ್ತಿರುವುದು ಮತ್ತು ಒಬ್ಬರು ವ್ಯಕ್ತಿ ಹಿಂದಿ/ಉರ್ದು ಭಾಷೆಯಲ್ಲಿ “ನಿಮ್ಮ ಮಕ್ಕಳು ಮತ್ತು ವೃದ್ಧರನ್ನು ಕರೆದುಕೊಂಡು ಹೋಗಿ, ನಿಮ್ಮ ಮನೆಗೆ ಬೀಗ ಹಾಕಿ ಮತ್ತು ಮುಂದಿನ ರಸ್ತೆಯ ಕಡೆಗೆ ಹೋಗಿ…”ಇತ್ಯಾದಿ ಹೇಳುವುದು ಆ ವಿಡಿಯೋದಲ್ಲಿ ಇತ್ತು.
ಬಂಗಾಳಿ ಸುದ್ದಿ ವಾಹಿನಿ ಎಬಿಪಿ ಆನಂದ ತನ್ನ ನೇರ ಪ್ರಸಾರದ ಸಮಯದಲ್ಲಿ ಮೇಲೆ ತಿಳಿಸಿದ ವಿಡಿಯೋವನ್ನು ಪ್ಲೇ ಮಾಡಿತ್ತು. ವಾಹಿನಿಯ ನಿರೂಪಕರಲ್ಲಿ ಒಬ್ಬರು “ಇದೀಗ ನೀವು ಕರಾಚಿಯ ದೃಶ್ಯಗಳನ್ನು ನೋಡುತ್ತಿದ್ದೀರಿ, ಅಲ್ಲಿ ಎಲ್ಲವೂ ನಾಶವಾಗಿದೆ” ಎಂದಿದ್ದರು. ಮತ್ತೊಬ್ಬ ನಿರೂಪಕ “ಇದು ಐಎನ್ಎಸ್ ವಿಕ್ರಾಂತ್ ನಡೆಸಿದ ದಾಳಿ ದೃಶ್ಯವಾಗಿದೆ” ಎಂದಿದ್ದರು.
ಎಬಿಪಿ ಆನಂದ ಈಗ ನೇರ ಪ್ರಸಾರ ವಿಡಿಯೋವನ್ನು ಡಿಲಿಟ್ ಮಾಡಿದೆ. ಅದರೆ, ಅದರ ಸಂಗ್ರಹ ತುಣುಕು ಮತ್ತು ಆರ್ಕೈವ್ ಲಿಂಕ್ ಕೆಳಗಿದೆ. ವಿಡಿಯೋದಲ್ಲಿ 5 ನಿಮಿಷ 8 ಸೆಕೆಂಡ್ ಅವಧಿಯಲ್ಲಿ ನಾವು ಮೇಲ್ಗಡೆ ವಿವರಿಸಿದ ದೃಶ್ಯವಿದೆ.
VC : youtube.com/@abpanandatv Via altnews.in
ಎಬಿಪಿ ಆನಂದ ತನ್ನ ವೆಬ್‌ಸೈಟ್‌ನಲ್ಲಿ ‘ಆಪರೇಷನ್ ಸಿಂಧೂರ್’ ಎಂಬ ಹೆಸರಿನಲ್ಲಿ ಲೈವ್ ಅಪ್ಡೇಟ್ ನೀಡಲು ಮತ್ತು ಭಾರತ-ಪಾಕಿಸ್ತಾನ ಉದ್ವಿಗ್ನತೆ ಕುರಿತು ವರದಿ ಪ್ರಕಟಿಸಲೂ ಅದೇ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಇಮೇಜ್ ಬಳಸಿಕೊಂಡಿತ್ತು. ಅದರ ಆರ್ಕೈವ್ ಲಿಂಕ್ ಇಲ್ಲಿ, ಇಲ್ಲಿ ನೋಡಬಹುದು.
ಎರಡೂ ಪುಟಗಳ ಸ್ಕ್ರೀನ್ ಶಾಟ್‌ಗಳು ಕೆಳಗಿವೆ
ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್ ಅನ್ನು ಎಬಿಪಿ ಆನಂದ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ “ಬಿಗ್ ಬ್ರೇಕಿಂಗ್: ಐಎನ್‌ಎಸ್ ವಿಕ್ರಾಂತ್‌ನ ಪ್ರಮುಖ ಕಾರ್ಯಾಚರಣೆ, ಬೃಹತ್ ಸ್ಫೋಟ, ಕರಾಚಿ ಧ್ವಂಸ, ಭಾರತದಿಂದ ಸತತ ದಾಳಿಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿತ್ತು. ನಂತರ ಪೋಸ್ಟ್ ಎಡಿಟ್ ಮಾಡಿ ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್ ಜಾಗಕ್ಕೆ ಪಾಕಿಸ್ತಾನದ ರಾಷ್ಟ್ರ ಧ್ವಜದ ಚಿತ್ರವನ್ನು ಬದಲಿಸಿದೆ (ಆರ್ಕೈವ್)

ಅದೇ ವೈರಲ್ ವಿಡಿಯೋವನ್ನು ಹಲವಾರು ಎಕ್ಸ್ ಹ್ಯಾಂಡಲ್‌ಗಳು ಹಂಚಿಕೊಂಡಿತ್ತು.
ಎಕ್ಸ್ ಬಳಕೆದಾರರಾದ ನೈನಾ ಯಾದವ್ (@NAINAYADAV_06) (ತಮ್ಮ ಎಕ್ಸ್ ಬಯೋದಲ್ಲಿ ಪತ್ರಕರ್ತೆ ಎಂದು ಹೇಳಿಕೊಂಡಿದ್ದಾರೆ) ಅವರು ಮೇ 8 ರಂದು ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಅದರ ಜೊತೆಗೆ “ಲಾಹೋರ್‌ನ ಜಿನ್ನಾ ಮಾರುಕಟ್ಟೆ ರಸ್ತೆ ಸಂಪೂರ್ಣವಾಗಿ ನಾಶವಾಯಿತು” #IndiaPakistanWar ಎಂದು ಬರೆದುಕೊಂಡಿದ್ದರು. (ಆರ್ಕೈವ್)

@IndiaTales7, @JaipurDialogues, @mkr4411, @wokeflix_, @iSinghApurva, @SonOfBharat7, @KreatelyMedia, @madhur_panktiya ಮುಂತಾದ ಎಕ್ಸ್ ಬಳೆದಾರರು ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಅವುಗಳು ಕೆಲವು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿವೆ.
ನಾವು ಇಲ್ಲಿ ಉಲ್ಲೇಖಿಸಿದ ಬಹುತೇಕ ಎಕ್ಸ್ ಬಳಕೆದಾರರು ಈ ಹಿಂದೆ ಹಲವು ಸುಳ್ಳು ಸುದ್ದಿಗಳನ್ನು ಹಂಚಿಕೊಂಡವರಾಗಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಕ್ಲಿಪ್‌ನ ಸತ್ಯಾಸತ್ಯತೆ ತಿಳಿಯಲು ನಾವು ಅದರ ಸ್ಕ್ರೀನ್ ಶಾಟ್ ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ ಮತ್ತು ವಿವಿಧ ಕೀ ವರ್ಡ್‌ಗಳನ್ನು ಬಳಸಿ ವಿಡಿಯೋ ಕುರಿತು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಸಾಮಾಜಿಕ ಜಾಲತಾಣ ಥ್ರೆಡ್‌ನಲ್ಲಿ ವೈರಲ್ ಕ್ಲಿಪ್‌ಗೆ ಹೋಲಿಕೆಯಾಗುವ ಫೋಟೋವೊಂದು ನಮಗೆ ದೊರೆತಿದೆ.
ಫೆಬ್ರವರಿ 1, 2025ರಂದು joe.kendra ಎಂಬವರು ಫೋಟೋ ಪೋಸ್ಟ್ ಮಾಡಿದ್ದು, “ಮತ್ತೊಂದು ಅಪಘಾತ ಅಮೆರಿಕದ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ಜನನಿಬಿಡ ಪ್ರದೇಶದಲ್ಲಿ ವೈದ್ಯಕೀಯ ಸಾರಿಗೆ ಲಿಯರ್‌ಜೆಟ್ ಅವಳಿ ಎಂಜಿನ್ ಜೆಟ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ವರದಿಗಳು ಹೇಳಿವೆ. ಈ ಪ್ರದೇಶದಲ್ಲಿ ಮೂರು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ” ಎಂದು ಬರೆದುಕೊಂಡಿದ್ದರು.

ಈ ಪೋಸ್ಟ್‌ನ ಸುಳಿವು ಹಿಡಿದುಕೊಂಡ ನಾವು ಕೀ ವರ್ಡ್ ಬಳಸಿ ವಿಡಿಯೋಗಾಗಿ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಫೆಬ್ರವರಿ 1, 2025ರಂದು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ನಮಗೆ ಲಭ್ಯವಾಗಿದೆ. Hakan Tuluhan ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ 1 ನಿಮಿಷ 4 ಸೆಕೆಂಡ್‌ನ ವಿಡಿಯೋದಲ್ಲಿ, 25 ಸೆಕಂಡ್‌ನಿಂದ ಎಬಿಪಿ ಆನಂದ ಸುದ್ದಿ ವಾಹಿನಿ ಮತ್ತು ಇತರ ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋ ತುಣುಕನ್ನು ನೋಡಬಹುದು.
ವಿಡಿಯೋದ ಡಿಸ್ಕ್ರಿಪ್ಶನ್‌ನಲ್ಲಿ “ಇದು ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದ್ದು” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ವಿಡಿಯೋದಲ್ಲಿ ಅದನ್ನು ರೆಕಾರ್ಡ್ ಮಾಡಿದ ವ್ಯಕ್ತಿಯು ಡಂಕಿನ್ ಡೋನಟ್ಸ್ ಔಟ್‌ಲೆಟ್‌ಗೆ ಪ್ರವೇಶಿಸುತ್ತಿರುವಂತೆ ಕಾಣುತ್ತಿದೆ. ದೃಶ್ಯಗಳು ಸ್ವಲ್ಪ ಅಸ್ಪಷ್ಟವಾಗಿದ್ದರೂ, ಡಂಕಿನ್ ಡೋನಟ್ಸ್ ಸೈನ್‌ಬೋರ್ಡ್ ಸ್ಪಷ್ಟವಾಗಿ ಗೋಚರಿಸುತ್ತದೆ. ಔಟ್‌ಲೆಟ್ ಇರುವಿಕೆ ಮತ್ತು ಸೈನ್‌ನೇಜ್‌ನ ಆಕಾರ ಮತ್ತು ಬಣ್ಣವನ್ನು ಆಧರಿಸಿ, ಅದನ್ನು ಗುರುತಿಸಬಹುದು.

ಔಟ್‌ಲೆಟ್ ಇರುವಿಕೆಯನ್ನು ಗೂಗಲ್ ಮ್ಯಾಪ್ ಮೂಲಕ ನೋಡಬಹುದು..ಲಿಂಕ್ ಇಲ್ಲಿದೆ

ಆದ್ದರಿಂದ, ಐಎನ್ಎಸ್ ವಿಕ್ರಾಂತ್‌ನ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಪಾಕಿಸ್ತಾನದಲ್ಲಿ ನಾಶ ಸಂಭವಿಸಿದೆ ಎಂದು ಎಬಿಪಿ ಆನಂದ ಮತ್ತು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದ ವೈರಲ್ ಕ್ಲಿಪ್ ವಾಸ್ತವವಾಗಿ ಮೂರು ತಿಂಗಳ ಹಳೆಯದು ಮತ್ತು ಫಿಲಡೆಲ್ಫಿಯಾದ್ದಾಗಿದೆ.
ಭಾರತ-ಪಾಕಿಸ್ತಾನ ಸಂಘರ್ಷ | ವಿಡಿಯೊ ಗೇಮ್ ದೃಶ್ಯ ಹಂಚಿ ಪಾಕಿಸ್ತಾನದ ದೃಶ್ಯ ಎಂದ ಪಬ್ಲಿಕ್ ಟಿವಿ!


