ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನೀಡುವ ವಿಡಿಯೋದ ಸ್ಕ್ರೀನ್ ಶಾಟ್ ಒಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, “ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆಯ ನಡುವೆ, ಮುಸ್ಲಿಮರು ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ” ಎಂದು ಪ್ರತಿಪಾದಿಸಲಾಗಿದೆ.
ವೈರಲ್ ಸ್ಕ್ರೀನ್ ಶಾಟ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಲಪಂಥೀಯ ಎಕ್ಸ್ ಖಾತೆ “हम लोग We The People (@ajaychauhan41)” ಮತ್ತೊಂದು ಭಯನಾಕ ಘಟನೆಯೊಂದು ಬಾಂಗ್ಲಾದೇಶದಿಂದ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದಾದ್ಯಂತ ಜಿಹಾದಿಗಳು ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡುತ್ತಿದ್ದಾರೆ. ಈ ಪ್ರತಿಭಟನೆ ವಿದ್ಯಾರ್ಥಿ ಪ್ರತಿಭಟನೆಯಾಗಿ ಪ್ರಾರಂಭಗೊಂಡಿತ್ತು. ಈಗ ಹಿಂದೂಗಳ ಹತ್ಯಾಕಾಂಡವಾಗಿ ಬದಲಾಗಿದೆ” ಎಂದು ಬರೆದುಕೊಂಡಿದೆ.

ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ಇನ್ನೂ ಅನೇಕ ಎಕ್ಸ್ ಬಳಕೆದಾರು ವೈರಲ್ ಸ್ಕ್ರೀಟ್ ಶಾಟ್ ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
2023ರಲ್ಲಿ ಮಣಿಪುರದ ಘಟನೆ ಎಂದು ವಿಡಿಯೋ ವೈರಲ್ ಆಗಿತ್ತು
ಕಳೆದ ವರ್ಷ (2023) ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಂಡಿದ್ದ ವೇಳೆ ಈಗ ಸ್ಕ್ರೀನ್ ಶಾಟ್ ವೈರಲ್ ಆಗಿರುವ ವಿಡಿಯೋ ವ್ಯಾಪಕವಾಗಿ ಹರಿದಾಡಿತ್ತು. ಅನೇಕರು “ಮಣಿಪುರದಲ್ಲಿ ಕ್ರಿಶ್ಚಿಯನ್ ಯುವತಿಯನ್ನು ಅಪಹರಿಸಿರುವ ಹಿಂದೂಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅದನ್ನು ವಿಡಿಯೋ ಮಾಡಿ ಹಂಚಿದ್ದಾರೆ” ಎಂದು ಪ್ರತಿಪಾದಿಸಿದ್ದರು.

ಫ್ಯಾಕ್ಟ್‌ಚೆಕ್ : ಅಸಲಿಗೆ ವೈರಲ್ ಆಗಿರುವ ವಿಡಿಯೋದಲ್ಲಿರುವ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲೋ ಅಲ್ಲ, ಮಣಿಪುರದಲ್ಲೋ ಅಲ್ಲ. ನಮ್ಮದೇ ಬೆಂಗಳೂರಿನಲ್ಲಿ.
ಮೇ 28, 2021ರಂದು ಈ ಕುರಿತು ಡೆಕ್ಕನ್ ಹೆರಾಲ್ಡ್ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ವರದಿಯೊಂದು ನಮಗೆ ಲಭ್ಯವಾಗಿದೆ. ವರದಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ.

“ಸಂತ್ರಸ್ತೆ ಜೊತೆಯಲ್ಲೇ ಇದ್ದಳು. ಉದ್ಯೋಗದ ಭರವಸೆ ನೀಡಿ ಆಕೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತಂದವರು, ನಂತರ ಇಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದರು” ಎಂದು ವರದಿ ತಿಳಿಸಿದೆ.
ಜುಲೈ 8, 2021ರಂದು ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿ ವೆಬ್‌ಸೈಟ್ ಇದೇ ಘಟನೆಗೆ ಸಂಬಂಧಿಸಿದಂತೆ ವರದಿ ಪ್ರಕಟಿಸಿತ್ತು. ಅದರಲ್ಲಿ “ಬೆಂಗಳೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವಾರಗಳಲ್ಲಿ ಪೊಲೀಸರು 1,019 ಪುಟಗಳ ಆರೋಪಪಟ್ಟಿ (ಚಾರ್ಜ್ ಶೀಟ್) 12 ಆರೋಪಿಗಳನ್ನು ಅದರಲ್ಲಿ ಹೆಸರಿಸಿದ್ದಾರೆ” ಎಂದು ಹೇಳಿತ್ತು.

“ಮೇ ಕೊನೆಯ ವಾರದಲ್ಲಿ, ಪೂರ್ವ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಚಿತ್ರಹಿಂಸೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ 12 ಜನರನ್ನು ಬಂಧಿಸಲಾಗಿತ್ತು. ಅಸ್ಸಾಂನಲ್ಲಿ ಘಟನೆಯ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದರು” ಎಂದು ವರದಿ ತಿಳಿಸಿತ್ತು.
ಜುಲೈ 8, 2021ರಂದು ಈ ಪ್ರಕರಣ ಸಂಬಂಧ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತರು “ಬಾಂಗ್ಲಾದೇಶದ ಮಹಿಳೆಯ ದೌರ್ಜನ್ಯ ಪ್ರಕರಣದಲ್ಲಿ 12 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ 11 ಆರೋಪಿಗಳು ಮತ್ತು ಸಂತ್ರಸ್ತ ಮಹಿಳೆ ಬಾಂಗ್ಲಾದೇಶದವರು. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ವಿಸ್ಕೃತ ಮತ್ತ ವ್ಯವಸ್ಥಿತ ದೋಷಾರೋಪ ಪಟ್ಟಿಯನ್ನು ಗೌರವಾನ್ವಿತ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ” ಎಂದಿದ್ದರು.

ಬಾಂಗ್ಲಾದೇಶದ ಮಹಿಳೆಯನ್ನು, ಬಾಂಗ್ಲಾದೇಶದವರೇ ಆದ ಆರೋಪಿಗಳು ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿಗೆ ಕರೆ ತಂದಿದ್ದರು. ಇಲ್ಲಿ ಆರೋಪಿಗಳ ಜೊತೆಯೇ ಮಹಿಳೆ ವಾಸವಿದ್ದಳು. ನಂತರ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನ ನಡೆದಿತ್ತು. ಬಳಿಕ ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಚಿತ್ರೀಕರಣ ಮಾಡಿದ್ದರು. ಆ ವಿಡಿಯೋ ಅಸ್ಸಾಂ ಮತ್ತು ಬಾಂಗ್ಲಾದೇಶದಲ್ಲಿ ವೈರಲ್ ಆದ ಬಳಿಕ, ಬಾಂಗ್ಲಾ ಪೊಲೀಸರು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದರು. ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಏಳು ಅಪರಾಧಿಗಳಿಗೆ ಮೇ 20, 2022ರಂದು ಬೆಂಗಳೂರಿನ 54ನೇ ಸಿಟಿ ಸಿವಿಲ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : FACT CHECK : ಪ್ರತಿಭಟನಾಕಾರರು ಬಾಂಗ್ಲಾ ಪ್ರಧಾನಿಯ ನಿವಾಸಕ್ಕೆ ನುಗ್ಗಿದ್ದು ಎಂದು ಸಂಬಂಧವಿಲ್ಲದ ಫೋಟೋ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


