ಶನಿವಾರ ಬಿಜೆಪಿಯ ವಕ್ತಾರ ಸಂಬೀತ್ ಪಾತ್ರಾ ಟ್ವೀಟ್ ಒಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ 18 ಸೆಕೆಂಡುಗಳ ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ‘ಸರ್ ಅವರು ಕೃಷಿ ಕಾಯ್ದೆಯ ಅನುಕೂಲಗಳನ್ನು ತಿಳಿಸಿದ್ದಾರೆ ನೋಡಿ’ ಎಂದು ಶೀರ್ಷಿಕೆ ನೀಡಿದ್ದಾರೆ.
ಆ ವಿಡಿಯೋದಲ್ಲಿ ಕೇಜ್ರಿವಾಲ್, ‘ನಿಮ್ಮ ಭೂಮಿ, ಎಂಎಸ್ಪಿ ಮತ್ತು ಮಂಡಿಗಳಿಗೆ ಯಾವುದೇ ಧಕ್ಕೆ ಇಲ್ಲ. ರೈತರು ಈಗ ತಮ್ಮ ಬೆಳೆಗಳನ್ನು ದೇಶದ ಎಲ್ಲಿಯಾದರೂ ಮಾರಬಹುದು. ಇದರಿಂದ ರೈತ ಒಳ್ಳೆಯ ದರ ಪಡೆಯುತ್ತಾನೆ, ಮಂಡಿಯ ಹೊರಗೆ ಎಲ್ಲಿಯದರೂ ಮಾರಬಹುದು. ಮಿ. ದಿಲೀಪ್, ದೇಶದ 70 ವರ್ಷದ ಇತಿಹಾಸದಲ್ಲಿ ಕೃಷಿಯಲ್ಲಿ ಇದು ದೊಡ್ಡ ಕ್ರಾಂತಿಕಾರಕ ಹೆಜ್ಜೆ’ ಎಂದು ಹೇಳುತ್ತಾರೆ.
तीनो farm bills के लाभ गिनाते हुए …Sir जी: pic.twitter.com/nBu1u7gkS7
— Sambit Patra (@sambitswaraj) January 30, 2021
ಪಾತ್ರಾ ಟ್ವೀಟ್‌ಗೆ ಸಾವಿರಾರು ಲೈಕ್‌ಗಳು, ರಿಟ್ವೀಟ್‌ಗಳು ದೊರೆತಿವೆ. ಬಿಜೆಪಿ ಕಾರ್ಯಕರ್ತ ವಿಕಾಸ್ ಪ್ರೀತಂ ಸಿನ್ಹಾ ಇದೇ ವಿಡಿಯೋ ಟ್ವೀಟ್ ಮಾಡಿ, ‘ಸುಳ್ಳು, ಮೋಸ, ವಂಚನೆಗಳಿಗೆ ಮುಖ ಅಂತಾ ಇದ್ದರೆ ಅದು ಇದೆ’ ಎಂದು ಬರೆದಿದ್ದಾನೆ. ಇದನ್ನು ಡಿಡಿ ನ್ಯೂಸ್‌ನ ಅಶೋಕ್ ಶ್ರೀವಾತ್ಸವ್ ರಿಟ್ವೀಟ್ ಮಾಡಿದ್ದಾರೆ. ಇನ್ನು ಕೆಲ ಬಿಜೆಪಿಗರು ಕೇಜ್ರಿವಾಲ್ ಸತ್ಯ ಹೇಳಿದ್ದಾರೆ ಎಂದು, ಮತ್ತೆ ಕೆಲವರು ಕೇಜ್ರಿವಾಲ್ ವಂಚಕ ಎಂದು ಟ್ವೀಟ್ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್: ಅದು ತಿರುಚಿದ ವಿಡಿಯೋ
ಸಂಬೀತ್ ಪಾತ್ರಾ ಕೇಜ್ರಿವಾಲ್‌ರವರ ತಿರುಚಿದ ವಿಡಿಯೋ ಟ್ವೀಟ್ ಮಾಡಿದ್ದಾರೆ. ಮೂಲ ಕ್ಲಿಪ್‌ನಲ್ಲಿ ಕೇಜ್ರಿವಾಲ್ ಕೃಷಿ ಕಾಯ್ದೆ ವಿರುದ್ಧ ಮಾತನಾಡಿದ್ದಾರೆ, ಇದನ್ನು ಅನೇಕ ಸಾಮಾಜಿಕ ಜಾಲತಾಣಿಗರು ಗುರುತಿಸಿದ್ದಾರೆ.
ಜನವರಿ 15ರಂದು ಝೀ ಹರಿಯಾಣ ಹಿಮಾಚಲಪ್ರದೇಶ ಈ ವಿಡಿಯೋವನ್ನು ಸಂಪೂರ್ಣ ಅಪ್‌ಲೋಡ್ ಮಾಡಿತ್ತು. ಅದರ ಸಂಪಾದಕ ದಿಲೀಪ್ ತಿವಾರಿ ಮತ್ತು ಜಗದೀಪ್ ಸಂಧು ಕೇಂಜ್ರಿವಾಲ್‌ರನ್ನು ಸಂದರ್ಶಿಸಿದ ವಿಡಿಯೋ ಅದು.
ಸಂದರ್ಶನದಲ್ಲಿ ಸಂಧು ಪ್ರಶ್ನೆ: (ವಿಡಿಯೊದಲ್ಲಿ 5,55 ಸೆಕೆಂಡ್‌ನಲ್ಲಿ) ಕೇಂದ್ರ ಈ ಕಾಯ್ದೆಯಿಂದ ರೈತರ ಆದಾಯ ದ್ವಿಗುಣ ಆಗುತ್ತದೆ ಎಂದು ಹೇಳುತ್ತಿದೆಯಲ್ಲ?
ಇದಕ್ಕೆ ಉತ್ತರಿಸುವಾಗ ಅರವಿಂದ್ ಕೇಜ್ರಿವಾಲ್, ಬಿಜೆಪಿ ನಾಯಕರು ಹೇಳುತ್ತಾರೆ: ಮಸೂದೆ ನಿಮ್ಮ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು. ಇದೇನೂ ಅನುಕೂಲವಲ್ಲ, ಭೂಮಿ ಅವರದೇ ಎನ್ನುತ್ತಾರೆ. ಎಂಎಸ್‌ಪಿ ತೆಗೆದುಹಾಕುವುದಿಲ್ಲ ಎನ್ನುತ್ತಾರೆ. ಇಲ್ಲಿ ಬೋಲ್ಡ್ ಮಾಡಿ ಇಟಾಲಿಯನ್‌ನಲ್ಲಿರುವ ವಾಕ್ಯಗಳನ್ನು ಮಾತ್ರ ತಿರುಚಿದ ವಿಡಿಯೋದಲ್ಲಿ ಬಳಸಲಾಗಿದೆ.
ಹೀಗೆ ‘ಕೇಜ್ರಿವಾಲ್ ಬಿಜೆಪಿ ನಾಯಕರು ಹೀಗೆ ಹೇಳುತ್ತಾರೆ’ ಎಂದಿದ್ದನ್ನು ಮಾತ್ರ ಎತ್ತಿಕೊಳ್ಳಲಾಗಿದೆ. ಆದರೆ ಬಿಜೆಪಿ ನಾಯಕರು ಹೇಳಿದ್ದೆಲ್ಲ ಸತ್ಯವಲ್ಲ ಎಂದು ಕೇಜ್ರಿವಾಲ್ ಹೇಳುವ ಮುಂದಿನ ಸಾಲುಗಳನ್ನು ಕೈ ಬಿಡಲಾಗಿದೆ.
ಕೊನೆಯಲ್ಲಿ, ‘ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂಎಸ್‌ಪಿ ನಿರ್ಧರಿಸಿದರೆ, ಮಿ. ದಿಲೀಪ್, ದೇಶದ 70 ವರ್ಷದ ಇತಿಹಾಸದಲ್ಲಿ ಕೃಷಿಯಲ್ಲಿ ಇದು ದೊಡ್ಡ ಕ್ರಾಂತಿಕಾರಕ ಹೆಜ್ಜೆ’ ಎಂದು ಹೇಳುತ್ತಾರೆ. ಈ ಮಾತಿನ ಮೊದಲಿಗೆ ಹೇಳುವ ‘ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂಎಸ್‌ಪಿ ನಿರ್ಧರಿಸಿದರೆ’ ಎಂಬುದನ್ನು ತೆಗೆದು ಹಾಕಲಾಗಿದೆ.
ಹೀಗೆ ಒಂದು ಸುದೀರ್ಘ ವಿಡಿಯೋವನ್ನು ಎಡಿಟ್ ಮಾಡಿ, ಅರವಿಂದ್ ಕೇಜ್ರಿವಾಲ್ ಕೃಷಿ ಕಾಯ್ದೆ ಪರ ಮಾತನಾಡಿದರು ಎಂದು ಬಿಜೆಪಿಯ ಸಂಬಿತ್ ಪಾತ್ರಾ ಟ್ವೀಟ್ ಮಾಡಿದ್ದಾರೆ.
ನಿನ್ನೆ ಭಾನುವಾರ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಂಬೀತ್ ಪಾತ್ರಾ ಮತ್ತು ಬಿಜೆಪಿಯವರ ತಿರುಚಿದ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೇ, ರೈತ ಹೋರಾಟ ನೋಡಿ ಬಿಜೆಪಿ ಹತಾಶಗೊಂಡಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.
ಬಿಜೆಪಿ ಐಟಿ ಸೆಲ್ ರೆಡಿ ಮಾಡಿಕೊಟ್ಟಿರಬಹುದಾದ ಈ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಪಾತ್ರಾ ಮತ್ತೊಮ್ಮೆ ನಗೆಪಾಟಿಲಿಗೀಡಾಗಿದ್ದಾರೆ. ಇದೇನೂ ಅವರಿಗೆ ಹೊಸದಲ್ಲ ಬಿಡಿ. ಅದಕ್ಕಾಗಿಯೇ ಅವರಿನ್ನೂ ಆ ಟ್ವೀಟ್ ಅನ್ನು ಡಿಲೀಟ್ ಮಾಡಿಲ್ಲ.
ಕೃಪೆ: ಆಲ್ಟ್ ನ್ಯೂಸ್
ಇದನ್ನೂ ಓದಿ; ರೈತರ ಪರ ವರದಿ ಮಾಡಿದ ಪತ್ರಕರ್ತೆಗೆ ಅತ್ಯಾಚಾರ, ಕೊಲೆ ಬೆದರಿಕೆ: ಎಬಿವಿಪಿ ಸದಸ್ಯನ ಬಂಧನ


