ಸಾಮಾಜಿಕ ಮಾಧ್ಯಮಗಳಲ್ಲಿ AIMIM ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಸುದ್ದಿಯ ಪೇಪರ್ ಕಟಿಂಗ್‌ವೊಂದು ವೈರಲ್ ಆಗಿದೆ. “ಭಾರತ ಪಾಕ್ ಮೇಲೆ ದಾಳಿ ಮಾಡಿದರೆ, ಭಾರತೀಯ ಮುಸ್ಲಿಮರು ಪಾಕ್ ಸೇನೆಗೆ ಸೇರುತ್ತಾರೆ: ಓವೈಸಿ” ಎಂಬ ಶೀರ್ಷಿಕೆಯಿರುವ ನ್ಯೂಸ್ ಪೇಪರ್ ಕಟಿಂಗ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಭಾರತವು ಪಾಕಿಸ್ತಾನದೊಂದಿಗೆ ಯುದ್ಧದಲ್ಲಿ ತೊಡಗಿದರೆ, 25 ಕೋಟಿ ಭಾರತೀಯ ಮುಸ್ಲಿಮರು ಪಾಕಿಸ್ತಾನ ಸೇನೆಗೆ ಸೇರುತ್ತಾರೆ ಎಂದು ಅಸಾದುದ್ದೀನ್ ಓವೈಸಿ 10 ವರ್ಷದ ಹಿಂದೆ ಹೇಳಿದ್ದರು ಎಂಬ ಪೋಸ್ಟ್‌ಅನ್ನು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಫೇಸ್‌ಬುಕ್ ಬಳಕೆದಾರರೊಬ್ಬರು ಇದೇ ಪ್ರತಿಪಾದನೆಯೊಂದಿಗೆ ಅಸಾದುದ್ದೀನ್ ಓವೈಸಿ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುತ್ತಾರೆ. ಈತ ಭಾರತಕ್ಕೆ ನಿಷ್ಟನಾಗಿಲ್ಲ ಈತನನ್ನು ಸಂಸತ್ತಿಗೆ ಯಾಕೆ ಕಳಿಸಬೇಕು? ಈತನನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದರೆ ಅರ್ಥ ಮಾಡಿಕೊಳ್ಳಿ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ನಿಜವಾಗಿಯೂ ಇಂತಹ ಹೇಳಿಕೆಯನ್ನು ಅಸಾದುದ್ದೀನ್ ಓವೈಸಿ ನೀಡಿದ್ದಾರೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಇಂತಹ ಹೇಳಿಕೆ ನೀಡಿದ್ದರು ಎಂಬುದನ್ನು ದಾಖಲಿಸಿ ಯಾವುದೇ ಪ್ರತಿಷ್ಠಿತ ಸುದ್ದಿ ನಿಯತಕಾಲಿಕೆ ಅಥವಾ ಮಾಧ್ಯಮಗಳು ವರದಿ ಮಾಡಿಲ್ಲ.

ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೀವರ್ಡ್ ಸರ್ಚ್ ನಡೆಸಿದಾಗ, 2014 ರಲ್ಲಿ ಕಾಶ್ಮೀರ ಅಬ್ಸರ್ವರ್‌ನ ನಲ್ಲಿ ಪ್ರಕಟವಾದ ಲೇಖನವೊಂದು ಲಭ್ಯವಾಗಿದೆ. “ಭಾರತವು ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಹೋದರೆ, 25 ಕೋಟಿ ಭಾರತೀಯ ಮುಸ್ಲಿಮರು ಪಾಕಿಸ್ತಾನದ ಸೈನ್ಯಕ್ಕೆ ಸೇರುತ್ತಾರೆ” ಎಂಬ ಹೇಳಿಕೆಯನ್ನು ಅಸಾದುದ್ದೀನ್‌ಗೆ ಆರೋಪಿಸುವ ಲೇಖನವೊಂದು ಲಭ್ಯವಾಗಿದೆ. ಅಸಾದುದ್ದೀನ್ ಇಂತಹ ಹೇಳಿಕೆಗಳನ್ನು ನೀಡಿದ್ದರೆ, ದೇಶಾದ್ಯಂತ ಪ್ರಮುಖ ಪತ್ರಿಕೆಗಳು ಮತ್ತು ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡುತ್ತಿದ್ದವು. ಆದರೆ, ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.
ಮಾಧ್ಯಮವೊಂದರಲ್ಲಿ ಪ್ರಕಟವಾದ ಲೇಖನ ಆಧಾರರಹಿತವಾಗಿದ್ದು ಅದನ್ನು ಮಾಡಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳುವುದಾಗಿ 2 ಸೆಪ್ಟೆಂಬರ್ 2014 ರಂದು ಅಸಾದುದ್ದೀನ್ ಓವೈಸಿ ಅವರ ಅಧಿಕೃತ X ಹ್ಯಾಂಡಲ್‌ನಿಂದ ಮಾಡಲಾದ ಟ್ವೀಟ್ ವೊಂದು ಲಭ್ಯವಾಗಿದ್ದು “ ಕಾಶ್ಮೀರ ಅಬ್ಸರ್ವರ್‌ನ ಸಂಸ್ಥೆ ಕ್ಷಮೆಯಾಚಿಸದಿದ್ದರೆ, ನನ್ನ ವಕೀಲರು ಅವರಿಗೆ ಕಾನೂನು ಪ್ರಕಾರ ನೋಟಿಸ್ ಕಳುಹಿಸುತ್ತಾರೆ, ಇಲ್ಲದಿದ್ದರೆ ದಂಡ ವಿಧಿಸುತ್ತಾರೆ ನಂತರ ಅವರ ವಿರುದ್ಧ ಅಪರಾಧ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ” ಎಂದು ಹಂಚಿಕೊಂಡಿರುವ ಪೋಸ್ಟ್ ಲಭ್ಯವಾಗಿದೆ.
ಇದಲ್ಲದೆ, 10 ಜನವರಿ 2015 ರಂದು ಅಪ್‌ಲೋಡ್ ಮಾಡಲಾದ ಹೆಡ್‌ಲೈನ್ಸ್ ಟುಡೇ ಜೊತೆಗಿನ ಒವೈಸಿ ಸಂದರ್ಶನದ ವಿಡಿಯೋ ಲಭ್ಯವಾಗಿದೆ. “ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದರೆ ?? ಭಾರತೀಯ ಮುಸ್ಲಿಮರು ಪಾಕ್ ಸೇನೆ ಸೇರುತ್ತಾರಾ ? ಎಂದು ಕರಣ್ ತಾಫರ್ ಕೇಳಿದ ಪ್ರಶ್ನೆಗೆ ಉತ್ತರಿಸುವ ಅಸಾದುದ್ದೀನ್ ಓವೈಸಿ ”ತಮ್ಮ ಮೇಲೆ ಆರೋಪಿಸಿದ ಹೇಳಿಕೆಗಳನ್ನು ನಿರಾಕರಿಸಿದರು. ಸುದ್ದಿ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿದ ಅವರು, ಇಂತಹ ಆಧಾರ ರಹಿತ ಹೇಳಿಕೆಗಳಿಗಾಗಿ ಕೆಲವು ಸಂಘಟನೆಗಳು ಕ್ಷಮೆಯಾಚಿಸಿವೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ‘ಭಾರತ ಪಾಕ್ ಮೇಲೆ ದಾಳಿ ಮಾಡಿದರೆ ಭಾರತೀಯ ಮುಸ್ಲಿಮರು ಪಾಕ್ ಸೇನೆ ಸೇರುತ್ತಾರೆ’ ಎಂದು ಹೇಳಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂತಹ ಸುದ್ದಿ ಪ್ರಕಟಿಸಿದ ಸುದ್ದಿ ಸಂಸ್ಥೆಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24 ಸಾವಿರ ರೂ. ಸ್ಕಾಲರ್‌ಶಿಪ್…ವೈರಲ್ ಸಂದೇಶದ ಸತ್ಯಾಸತ್ಯತೆ ಏನು?


