ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಸೆಪ್ಟೆಂಬರ್ 12 ರಂದು ತನ್ನ 72ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ನಂತರ, ಪಾರ್ಥಿವ ಶರೀರವನ್ನು ದೆಹಲಿಯ ಪ್ರತಿಷ್ಠಿತ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಗೆ ‘ಶವಪೆಟ್ಟಿಗೆ’ಯಲ್ಲಿ ಕೊಂಡೊಯ್ಯಲಾಗಿತ್ತು. ವಿವಿಯ ವಿದ್ಯಾರ್ಥಿಗಳು ಮಾರ್ಕ್ಸ್‌ವಾದಿ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದ್ದರು.
ಈ ಕುರಿತ ಫೋಟೋವನ್ನು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳಲಾಗಿತ್ತು. ಫೋಟೋ ಗಮನಿಸಿದ ಅನೇಕ ಬಲಪಂಥೀಯರು ಸೀತಾರಾಂ ಯೆಚೂರಿ ಕ್ರೈಸ್ತ ಧರ್ಮದವರು, ರಾಜಕೀಯ ಜೀವನದಲ್ಲಿ ಹಿಂದೂ ಹೆಸರಿಟ್ಟುಕೊಂಡು ಹಿಂದೂಗಳಿಗೆ ವಂಚನೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು.
ಸದಾ ಸುಳ್ಳು ಕೋಮುದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವ ಬಲಪಂಥೀಯ ಎಕ್ಸ್ ಬಳಕೆದಾರ ರಿಶಿ ಬಾಗ್ರೀ ಸೆಪ್ಟೆಂಬರ್ 14ರಂದು ಜೆಎನ್‌ಎಸ್‌ಯು ಪೋಸ್ಟ್‌ಗೆ ಪ್ರತಿಕ್ರಿಯಿಸಿ “ಹಾಗಾದರೆ ಸೀತಾರಾಮ್ ಯೆಚೂರಿ ಅವರು ಕ್ರಿಶ್ಚಿಯನ್. ಅವರು ಹಿಂದೂ ಧರ್ಮವನ್ನು ಏಕೆ ದ್ವೇಷಿಸುತ್ತಿದ್ದರು ಎಂಬುದರಲ್ಲಿ ಆಶ್ಚರ್ಯವಿಲ್ಲ. ಅಂದಹಾಗೆ, ಅವರು ತಮ್ಮ ಸಕ್ರಿಯ ರಾಜಕೀಯ ಜೀವನದಲ್ಲಿ ತಮ್ಮ ಧಾರ್ಮಿಕ ಗುರುತನ್ನು ಏಕೆ ಮರೆ ಮಾಚುತ್ತಿದ್ದರು?” ಎಂದು ಬರೆದುಕೊಂಡಿದ್ದರು.
So Sitaram Yechury was a Christian, no wonder why he hate Hinduism.
By the way why they hide their religious identity in their active political life ??? https://t.co/1sXmDxPIn1
— Rishi Bagree (@rishibagree) September 14, 2024
ಸೀತಾರಾಂ ಯೆಚೂರಿ ಅವರಿಗೆ ಜೆಎನ್‌ಯುನಲ್ಲಿ ಗೌರವ ಸಲ್ಲಿಸಿದ್ದ ಫೋಟೋವನ್ನು ಸೆ.14ರಂದು ಎಕ್ಸ್ ಹಂಚಿಕೊಂಡಿದ್ದ ಮತ್ತೊಂದು ಬಲಪಂಥೀಯ ಎಕ್ಸ್ ಖಾತೆ ಓಕ್‌ಫ್ಲಿಕ್ಸ್ (@wokeflix) “ಹೆಸರು: ಸೀತಾರಾಮ್ ಯೆಚೂರಿ, ಧರ್ಮ: ಕ್ರಿಶ್ಚಿಯನ್ : ಇಷ್ಟು ದಿನ ಅಕ್ಕಿ ಮೂಟೆಯಾಗಿ ತನ್ನ ಹಿಂದೂ ಹೆಸರಿನಿಂದ ಎಷ್ಟು ಜನರನ್ನು ಮೂರ್ಖರನ್ನಾಗಿಸಿದ್ದಾನೆ ಎಂದು ಊಹಿಸಿಕೊಳ್ಳಿ” ಎಂದು ಬರೆದುಕೊಂಡಿತ್ತು.
Name: Sitaram Yechuri
Religion: ChristianImagine how many people he had fooled with his Hindu name while being a rice bag all along. pic.twitter.com/LOoWioyo9f
— Wokeflix (@wokeflix_) September 14, 2024
ಇವಿಷ್ಟೇ ಅಲ್ಲದೆ, ಇನ್ನೂ ಹಲವು ಎಕ್ಸ್ ಖಾತೆಗಳಲ್ಲಿ ಸೀತಾರಾಂ ಯೆಚೂರಿ ಕ್ರೈಸ್ತ ಧರ್ಮದವರು ಎಂದು ಪ್ರತಿಪಾದಿಸಿ ಬರೆದುಕೊಳ್ಳಲಾಗಿತ್ತು.
ಫ್ಯಾಕ್ಟ್‌ಚೆಕ್ : ಸೀತಾರಾಂ ಯೆಚೂರಿ ಯಾವ ಧರ್ಮದವರು? ಅವರ ಕೌಟುಂಬಿಕ ಹಿನ್ನೆಲೆ ಏನು? ಎಂಬುವುದರ ಬಗ್ಗೆ 2017ರಲ್ಲಿ ರಾಜ್ಯಸಭೆಯಲ್ಲಿ ಮಾಡಿದ ವಿದಾಯ ಭಾಷಣದಲ್ಲಿ ಸ್ವತಃ ಯೆಚೂರಿ ಅವರೇ ವಿವರಿಸಿದ್ದಾರೆ. ಅವರ ಭಾಷಣವನ್ನು ಕೆಳಗೆ ಅಕ್ಷರ ರೂಪದಲ್ಲಿ ಕೊಡಲಾಗಿದೆ.
“ಈಗ ಚೆನ್ನೈ ಎಂದು ಕರೆಯಲ್ಪಡುವ ಮದ್ರಾಸ್‌ನ ಜನರಲ್ ಆಸ್ಪತ್ರೆಯಲ್ಲಿ ತೆಲುಗು ಮಾತನಾಡುವ ಬ್ರಾಹ್ಮಣ ಕುಟುಂಬದಲ್ಲಿ ನಾನು ಜನಿಸಿದೆ. ನನ್ನ ಅಜ್ಜ ನ್ಯಾಯಾಧೀಶರು…ಗುಂಟೂರಿಗೆ ಹೋಗಬೇಕಾಗಿತ್ತು. 1954ರಲ್ಲಿ ನಾವು ಅಲ್ಲಿಗೆ ಸ್ಥಳಾಂತರಗೊಂಡೆವು. ನಾನು 1952ರಲ್ಲಿ ಜನಿಸಿದೆ. 1956ರಲ್ಲಿ ನಾವು ಹೈದರಾಬಾದ್‌ಗೆ ಸ್ಥಳಾಂತರಗೊಂಡೆವು. ಸ್ವಾತಂತ್ರ್ಯ ದೊರೆತ ಆರಂಭದಲ್ಲಿ ನಾನು ಹೈದರಾಬಾದ್‌ನ ನಿಝಾಮರ ಆಡಳಿತಡಿ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ನನ್ನ ಶಾಲಾ ಶಿಕ್ಷಣ ಪಡೆದೆ. ನಂತರ ನಾನು ದೆಹಲಿಗೆ ಬಂದೆ, ಇಲ್ಲಿ ಓದಿದೆ. ನಾನು ಒಬ್ಬರು ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ಆಕೆಯ ತಂದೆ ಇಸ್ಲಾಮಿಕ್ ಸೂಫಿ ಪಂಥದವರು ಮತ್ತು ಅವರ ಉಪನಾಮ ಚಿಸ್ತಿ… ಆಕೆಯ ತಾಯಿ ರಜಪೂತ ಸಮುದಾಯದವರು. 8ನೇ ಶತಮಾನದಲ್ಲಿ ವಲಸೆ ಬಂದ ಮೈಸೂರಿನ ರಜಪೂತರು. ನಾವೀಗ 21ನೇ ಶತಮಾನದಲ್ಲಿದ್ದೇವೆ. ನಾನು ಈ ಮಹಿಳೆಯನ್ನು ಮದುವೆಯಾಗಿರುವ ದಕ್ಷಿಣ ಭಾರತದ ಬ್ರಾಹ್ಮಣ ಕುಟುಂಬದಿಂದ ಬಂದವನು. ಹಾಗಾಗಿ, ನನ್ನ ಮಗನನ್ನು ಏನೆಂದು ಕರೆಯುತ್ತಾರೆ ಸರ್?. ನನ್ನ ಮಗನನ್ನು ಭಾರತೀಯ ಎನ್ನುವುದಕ್ಕಿಂತ ಹೆಚ್ಚಾಗಿ ಹೇಳಲು ಸಾಧ್ಯವೇ ಇಲ್ಲ. ಇದು ನಮ್ಮ ದೇಶ. ಇದು ನನ್ನ ಉದಾಹರಣೆ, ಇಂತಹ ಎಷ್ಟು ಜನರಿದ್ದಾರೆ ನೋಡಿ.”
2017ರಲ್ಲಿ ಆಗಿನ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನೀಡಿದ ಹೇಳಿಕೆಯನ್ನು ಟೀಕಿಸಿದ್ದ ಯೆಚೂರಿ ಅವರು ‘ನಾನು ನಾಸ್ತಿಕ’ ಎಂದು ಎಕ್ಸ್‌ನಲ್ಲಿ ತಿಳಿಸಿದ್ದರು.
Indians who are Hindus, Muslims, Christians, Sikhs or Atheists (like me) are all Indian citizens. #NotCharity #Constitution
— Sitaram Yechury (@SitaramYechury) April 22, 2017
ಸೀತಾರಾಮ್ ಯೆಚೂರಿ ಕ್ರೈಸ್ತ ಧರ್ಮದವರು ಎಂಬ ವಾದದ ಕುರಿತು ಖ್ಯಾತ ಫ್ಯಾಕ್ಟ್ ಚೆಕ್ ಸಂಸ್ಥೆ ಆಲ್ಟ್ ನ್ಯೂಸ್ ಸಿಪಿಐ(ಎಂ) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರಿಂದ ಪ್ರತಿಕ್ರಿಯೆ ಕೇಳಿದೆ. “ಈ ವೇಳೆ ಮಾತನಾಡಿದ ಸಲೀಂ ಅವರು “ನವ ಭಾರತ’ದ ವಿಷಕಾರಿ ಸಾಮಾಜಿಕ-ರಾಜಕೀಯ ವಾತಾವರಣದಲ್ಲಿ, ಎಲ್ಲವನ್ನೂ ಧರ್ಮದೊಂದಿಗೆ ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ, ಧಾರ್ಮಿಕ ನಂಬಿಕೆಗಳನ್ನು ಮಾನವ ಮತ್ತು ವೈಯಕ್ತಿಕ ಹಾಗೂ ಪೂಜಕ ಮತ್ತು ಪೂಜಿಸಲ್ಪಡುವುದರ ನಡುವಿನ ಸಂಬಂಧ ಎಂದು ಪರಿಗಣಿಸಲಾಗುತ್ತದೆ. ಕಾಮ್ರೇಡ್ ಸೀತಾರಾಂ ಯೆಚೂರಿ ಅವರೇ ತಮ್ಮ ರಾಜ್ಯಸಭಾ ಭಾಷಣದಲ್ಲಿ ತಮ್ಮ ಕೌಟುಂಬಿಕ ಹಿನ್ನೆಲೆ ವಿವರಿಸಿದ್ದಾರೆ. ಇನ್ನು ಕ್ರೈಸ್ತರ ರೀತಿಯ ಶವಪೆಟ್ಟಿಗೆ ಬಳಸಿದ್ದರ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಸಂಕುಚಿತ ನಂಬಿಕೆಗಳ ಆಧಾರದ ಮೇಲೆ ಎಲ್ಲವನ್ನೂ ವಿಭಜಿಸಲು ಬಯಸುವವರನ್ನು ಹೊರತು, ಶವ ಪೆಟ್ಟಿಗೆಗೆ ಯಾವುದೇ ನಿರ್ದಿಷ್ಟ ಧರ್ಮವಿಲ್ಲ” ಎಂದು ಹೇಳಿದ್ದಾರೆ.
ಸೀತಾರಾಂ ಯೆಚೂರಿಗೆ ಶವಪೆಟ್ಟಿಗೆ ಬಳಸಿದ್ದು ಏಕೆ?
ದೆಹಲಿ ಏಮ್ಸ್‌ನ ಮಾಧ್ಯಮ ಉಸ್ತುವಾರಿ ಮತ್ತು ಪ್ರಾಧ್ಯಾಪಕಿ ಡಾ. ರಿಮಾ ದಾದಾ ಅವರ ಪ್ರಕಾರ, ಸೀತಾರಾಂ ಯೆಚೂರಿ ಅವರ ಕುಟುಂಬವು ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದೆ. ಹಾಗಾಗಿ, ದೇಹವನ್ನು ರಕ್ಷಿಸಿಡಬೇಕಾದ ಅಗತ್ಯವಿದೆ. ಬೋಧನಾ ಉದ್ದೇಶಗಳಿಗಾಗಿ ಸಂರಕ್ಷಿಸಿಡಲು ಕೆಲ ಚುಚ್ಚು ಮದ್ದುಗಳನ್ನು ದೇಹಕ್ಕೆ ಚುಚ್ಚಲಾಗುತ್ತದೆ. ಹಾಗಾಗಿ, ದೇಹವನ್ನು ಶವಪೆಟ್ಟಿಗೆಯಲ್ಲಿ ಇಡಲಾಗಿತ್ತು ಎಂದು ತಿಳಿಸಿದ್ದಾರೆ. ಯೆಚೂರಿ ಅವರ ಕುಟುಂಬದ ನಿರ್ಧಾರವನ್ನು ರಿಮಾ ಅವರು ಶ್ಲಾಘಿಸಿದ್ದಾರೆ.
‘ದಿ ಹಿಂದೂ ಪತ್ರಿಕೆ’ಯ ವರದಿಯೊಂದರ ಪ್ರಕಾರ, ಸೀತಾರಾಂ ಯೆಚೂರಿ ಅವರ ದೇಹವನ್ನು ಎಮ್ಸ್‌ಗೆ ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದ್ದರಿಂದ ಯಾವುದೇ ಅಂತಿಮ ವಿಧಿಗಳನ್ನು ನಡೆಸಿಲ್ಲ. ಅವರ ಮರಣದ ಒಂದು ದಿನದ ನಂತರ, ದೇಹವನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಮತ್ತು ನಂತರ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತ್ತು. ಸೆಪ್ಟೆಂಬರ್ 14, ಶನಿವಾರದಂದು ದೇಹವನ್ನು ದೆಹಲಿಯ ಎಕೆಜಿ ಭವನದಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ತರಲಾಗಿತ್ತು.
ಒಟ್ಟಿನಲ್ಲಿ ಶವ ಪೆಟ್ಟಿಗೆ ಬಳಸಿದ್ದ ಕಾರಣಕ್ಕೆ ಬಲಪಂಥೀಯರು ಸೀತಾರಾಂ ಯೆಚೂರಿ ಕ್ರೈಸ್ತರು ಎಂದು ಸುದ್ದಿ ಹಬ್ಬಿಸಿದ್ದರು. ಅಸಲಿಗೆ ಯೆಚೂರಿ ಯಾವುದೇ ಧರ್ಮದ ಅನುಯಾಯಿ ಎಂದು ಗುರುತಿಸಿಕೊಂಡಿರಲಿಲ್ಲ. ಅವರೇ ಹೇಳಿದಂತೆ, ಯೆಚೂರಿ ಹುಟ್ಟಿದ್ದು ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ. ಆದರೆ, ಅವರು ಧರ್ಮದಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ಸತ್ತಾಗ ಯಾವುದೇ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ಮಾಡಿಲ್ಲ. ದೇಹವನ್ನು ದೆಹಲಿಯ ಏಮ್ಸ್ ವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ದಾನ ಮಾಡಲಾಗಿದೆ.
ಇದನ್ನೂ ಓದಿ | FACT CHECK : ಕರ್ನಾಟಕ ಸರ್ಕಾರದಿಂದ ಗಣೇಶ ಮೆರವಣಿಗೆಗೆ ಅಡ್ಡಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಲಪಂಥೀಯರು


