“ಸ್ಟಾರ್ ಚಿಹ್ನೆಯಿರುವ 500 ರೂಪಾಯಿಯ ಕರೆನ್ಸಿ ನೋಟುಗಳು ನಕಲಿಯಾಗಿದ್ದು, ಮಾರುಕಟ್ಟೆಯಲ್ಲಿ ಹರಿದಾಡುತ್ತಿವೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅನೇಕ ಎಕ್ಸ್ ಮತ್ತು ವಾಟ್ಸಾಪ್ ಬಳಕೆದಾರರು ಈ ಸುದ್ದಿ ನಿಜವೆಂದು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್ : ಸ್ಟಾರ್ ಚಿಹ್ನೆಯಿರುವ 500 ರೂಪಾಯಿಯ ಕರೆನ್ಸಿ ನೋಟುಗಳು ನಕಲಿ ಎಂಬ ಸಂದೇಶ ಸುಳ್ಳು ಎಂಬುವುದು ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದಿದೆ.
ಈ ಹಿಂದೆ ಇದೇ ರೀತಿಯ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆಗ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಈ ಸಂದೇಶ ಸುಳ್ಳು ಎಂದು ಖಚಿತಪಡಿಸಿತ್ತು.
ಡಿಸೆಂಬರ್ 7, 2023ರಂದು ಪಿಐಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್ ಕೆಳಗಿದೆ.

ಜುಲೈ 31, 2023ರಂದು ಹಿಂದೂಸ್ತಾನ್ ಟೈಮ್ಸ್ 500 ರೂ. ನೋಟುಗಳಲ್ಲಿ ಸ್ಟಾರ್ ಚಿಹ್ನೆ ಇರುವುದರ ಕುರಿತು ಸುದ್ದಿ ಪ್ರಕಟಿಸಿತ್ತು. ಸುದ್ದಿಯಲ್ಲಿ 500 ರೂ. ಕರೆನ್ಸಿ ನೋಟಿನಲ್ಲಿ ಸ್ಟಾರ್ ಚಿಹ್ನೆಯಿದ್ದರೆ ಭಯಪಡಬೇಡಿ. ಅದು ನಕಲಿ ಅಲ್ಲ ಎಂದು ಆರ್‌ಬಿಐ ಖಚಿತಪಡಿಸಿರುವುದಾಗಿ ಹೇಳಿತ್ತು.

ಇನ್ನು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ 500 ರೂಪಾಯಿ ಹೊಸ ಕರೆನ್ಸಿ ನೋಟಿನ ಕುರಿತು ಮಾಹಿತಿಯಿದೆ.
ಡಿಸೆಂಬರ್ 16,2016ರಂದು ಹೊಸ 500 ರೂ. ಕರೆನ್ಸಿ ನೋಟುಗಳ ಕುರಿತು ಆರ್‌ಬಿಯ ಹೊರಡಿಸಿದ ಪತ್ರಿಕಾ ಪ್ರಕಟಣೆ ಇಂದಿಗೂ ಅದರ ವೆಬ್‌ಸೈಟ್‌ನಲ್ಲಿದೆ. ಪ್ರಕಟಣೆಯಲ್ಲಿ “ಆರ್‌ಬಿಐ ಶೀಘ್ರದಲ್ಲೇ ಮಹಾತ್ಮಾ ಗಾಂಧಿ (ಎಂ.ಜಿ) ಸರಣಿಯಲ್ಲಿ ರೂ. 500 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಿದೆ. ಈ ನೋಟಿನ ಎರಡೂ ನಂಬರ್ ಪ್ಯಾನೆಲ್‌ಗಳಲ್ಲಿ ‘E’ಎಂಬ ಇನ್‌ಸೆಟ್ ಅಕ್ಷರ ಇರಲಿದೆ. ಜೊತೆಗೆ‘*’ (ನಕ್ಷತ್ರ) ಗುರುತು ಕೂಡ ಇರಲಿದೆ. ಇದೇ ಮೊದಲ ಬಾರಿಗೆ ನಕ್ಷತ್ರ ಚಿಹ್ನೆಯೊಂದಿಗೆ 500 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 10, 20, 50 ಮತ್ತು 100 ರೂ. ಸರಣಿಯ ನಕ್ಷತ್ರ ಗುರುತು ಹೊಂದಿರುವ ನೋಟುಗಳು ಈಗಾಗಲೇ ಚಲಾವಣೆಯಲ್ಲಿವೆ. ನವೆಂಬರ್ 8, 2016 ರಂದು ಹೊರ ತರಲಾದ ಈ ನೋಟುಗಳು ಕಾನೂನು ಬದ್ಧವಾಗಿವೆ. ಅಲ್ಲದೆ, ಹೊಸ ನೋಟು ಆರ್‌ಬಿಐ ಗವರ್ನರ್ ಡಾ.ಉರ್ಜಿತ್ ಆರ್.ಪಟೇಲ್ ಅವರ ಸಹಿ ಮತ್ತು ಹಿಂಬದಿಯಲ್ಲಿ ಸ್ವಚ್ಛ ಭಾರತ ಲೋಗೋ ಹೊಂದಿರಲಿದೆ” ಎಂದು ಹೇಳಲಾಗಿದೆ.

ಆರ್‌ಬಿಐ ಅಧಿಕೃತ ಪ್ರಕಟಣೆಯಲ್ಲೇ ಹೊಸ 500 ರೂ. ಮುಖಬೆಲೆಯ ಕರೆನ್ಸಿ ನೋಟುಗಳು ಸ್ಟಾರ್ ಅಥವಾ ನಕ್ಷತ್ರ ಚಿಹ್ನೆ ಹೊಂದಿರಲಿದೆ ಎಂದು ತಿಳಿಸಿದೆ. ಹಾಗಾಗಿ, ಸ್ಟಾರ್ ಗುರುತಿನ ನೋಟುಗಳು ನಕಲಿ ಎಂಬ ಸಂದೇಶ ಸುಳ್ಳು.
ಆದರೆ, ಅಸಲಿ ನೋಟಿನಂತೆಯೇ ಸ್ಟಾರ್ ಚಿಹ್ನೆಯಿರುವ ನಕಲಿ ನೋಟುಗಳು ಕೂಡ ಮಾರುಕಟ್ಟೆಯಲ್ಲಿ ಹರಿದಾಡುತ್ತಿರಬಹುದು. ನಕಲಿ ನೋಟು ದಂದೆಕೋರರು ಅಸಲಿ ನೋಟಿನಂತೆಯೇ ನಕಲಿ ನೋಟು ತಯಾರಿಸಿರಬಹುದು. ಹಾಗಾಗಿ, ನೋಟುಗಳನ್ನು ಪರಿಶೀಲಿಸಿ ಚಲಾಯಿಸುವುದು ಉತ್ತಮ.
ಇದನ್ನೂ ಓದಿ : FACT CHECK : ಸ್ವೀಡನ್‌ನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ಆಗುವ ರಸ್ತೆ ನಿರ್ಮಿಸಲಾಗಿದೆ ಎಂಬುವುದು ನಿಜವೇ?


