ಜನನಿಬಿಡ ರಸ್ತೆಯ ಮಧ್ಯದಲ್ಲಿ ಯುವತಿಯ ಶವದ ಬಳಿ ಯುವಕನೊಬ್ಬ ನಿಂತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅನೇಕರು, ಸಲೀಂ ಎಂಬ ಮುಸ್ಲಿಂ ಯುವಕ ಆರತಿ ಎಂಬ ಹಿಂದೂ ಹುಡುಗಿಯನ್ನು ಕೊಲೆ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ಒಟ್ಟು 24 ಸೆಕೆಂಡ್‌ನ ವಿಡಿಯೋದಲ್ಲಿ ಯುವಕ ತನ್ನ ಎಡೆಗೈಯಲ್ಲಿ ಸ್ಪ್ಯಾನರ್ ಹಿಡಿದು ನಿಂತಿದ್ದರೆ, ಯುವತಿಯ ಶವ ರಸ್ತೆ ಮಧ್ಯ ಇದೆ. ಸುತ್ತಲು ಹಲವಾರು ಜನರು ಸುಮ್ಮನೆ ನಿಂತು ನೋಡುವ ದೃಶ್ಯವಿದೆ.

ವಿಡಿಯೋ ಹಂಚಿಕೊಂಡಿರುವ ಅನೇಕರು ” ಸಲೀಂ ಆರತಿಗೆ ಪ್ರೇಮ ನಿವೇದನೆ (ಪ್ರಪೋಸ್) ಮಾಡಿದ್ದ. ಆದರೆ, ಆರತಿ ಅದನ್ನು ತಿರಸ್ಕರಿಸಿದ್ದಳು.ಈ ಕಾರಣಕ್ಕೆ ಸಲೀಂ ಆರತಿಯನ್ನು ನಡು ರಸ್ತೆಯಲ್ಲಿ ಹತ್ಯೆ ಮಾಡಿ ಶವದ ಪಕ್ಕದಲ್ಲೇ ನಿಂತಿದ್ದಾನೆ. ಆತನಿಗೆ ಏನೂ ಹೇಳಲು ಯಾರಿಗೂ ಧೈರ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದ ಪೋಸ್ಟ್‌ನ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಯುವತಿಯನ್ನು ಯುವಕನೋರ್ವ ಹತ್ಯೆ ಮಾಡಿರುವುದು ಹೌದು. ಆದರೆ, ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಹತ್ಯೆ ಮಾಡಿದ್ದಾನೆ ಎಂಬ ಪ್ರತಿಪಾದನೆ ಸುಳ್ಳು ಎಂದು ತಿಳಿದು ಬಂದಿದೆ.
ಜೂನ್ 18, 2024ರಂದು ಬೆಳಿಗ್ಗೆ 8:30ರ ಸುಮಾರಿಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೂರ್ವ ವಾಸಿ ಪ್ರದೇಶದ ಚಿಂಚ್‌ಪಾಡದಲ್ಲಿ ಯುವತಿಯ ಹತ್ಯೆ ಘಟನೆ ನಡೆದಿದೆ. ಆರೋಪಿ 29 ವರ್ಷದ ರೋಹಿತ್ ಯಾದವ್ ಮತ್ತು ಮೃತ ಯುವತಿ 22 ವರ್ಷದ ಆರತಿ ಯಾದವ್ ಎಂದು ತಿಳಿದು ಬಂದಿದೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, “ಮೃತ ಯುವತಿ ಆರತಿ ಆರೋಪಿ ರೋಹಿತ್‌ನ ಮಾಜಿ ಪ್ರೇಯಸಿಯಾಗಿದ್ದು, ಆಕೆ ಇತ್ತೀಚೆಗೆ ಇನ್ನೊಬ್ಬ ಯುವಕನ ಜೊತೆ ಸುತ್ತಾಡುತ್ತಿದ್ದಳು. ಅದನ್ನು ನೋಡಿ ಕುಪಿತಗೊಂಡ ರೋಹಿತ್ ಯಾದವ್ ಹಾಡಹಗಲೇ ರಸ್ತೆ ಮಧ್ಯೆ ಸ್ಫ್ಯಾನರ್‌ನಿಂದ ತಲೆಗೆ ಹೊಡೆದು ಆರತಿಯನ್ನು ಹತ್ಯೆ ಮಾಡಿದ್ದಾನೆ”.

ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, “ಆರತಿಯನ್ನು ಹಿಂಬಾಲಿಸಿಕೊಂಡು ಬಂದ ರೋಹಿತ್, ರಸ್ತೆ ಮಧ್ಯೆ ಹಿಂಬದಿಯಿಂದ ಆಕೆಯ ತಲೆಗೆ ಸ್ಪ್ಯಾನರ್ ಮೂಲಕ ಹೊಡೆದಿದ್ದಾನೆ. ಆಕೆ ನೆಲಕ್ಕೆ ಬಿದ್ದಾಗ ಆಕೆಯ ತಲೆಗೆ ಹೊಡೆಯುವುದನ್ನು ಮುಂದುವರೆಸಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ರಕ್ತದ ಮಡುವಿನಲ್ಲಿ ಆರತಿ ಪ್ರಾಣ ಬಿಟ್ಟಿದ್ದಾಳೆ. ಸುತ್ತಮುತ್ತಲಿದ್ದ ಜನ ಈ ಕೃತ್ಯವನ್ನು ಸುಮ್ಮನೆ ನಿಂತು ನೋಡಿದ್ದಾರೆ”.

“ಪೊಲೀಸರ ಪ್ರಕಾರ, ರೋಹಿತ್ ಮತ್ತು ಆರತಿ ಇಬ್ಬರೂ ನಲಸೊಪರ ಮೂಲದವರು. ಇಬ್ಬರು ಸುಮಾರು 6 ವರ್ಷಗಳ ಕಾಲ ಸಂಪರ್ಕದಲ್ಲಿದ್ದರು. ಪೂರ್ವ ವಾಸಿಯ ಫ್ಯಾಕ್ಟರಿಯೊಂದರಲ್ಲಿ ಆರತಿ ಕೆಲಸ ಮಾಡುತ್ತಿದ್ದಳು. ನಿರೋದ್ಯೋಗಿಯಾಗಿದ್ದ ರೋಹಿತ್, ಇತ್ತೀಚೆಗೆ ಆರತಿ ಪುರುಷ ಸಹೋದ್ಯೋಗಿಗಳ ಜೊತೆ ಸುತ್ತಾಡುವುದನ್ನು ನೋಡಿ ಕುಪಿತಗೊಂಡಿದ್ದ. ಇದು ಇಬ್ಬರ ನಡುವೆ ಗಲಾಟೆಗೆ ಕಾರಣವಾಗಿತ್ತು. ಇದೇ ಕೋಪದಲ್ಲಿ ಆತ ಆರತಿಯನ್ನು ಹತ್ಯೆ ಮಾಡಿದ್ದಾನೆ”.
ನಾವು ನಡೆಸಿದ ಪರಿಶೀಲನೆಯಲ್ಲಿ ಆರತಿ ಎಂಬ ಯುವತಿಯನ್ನು ಹತ್ಯೆ ಮಾಡಿದವನ ಹೆಸರು ರೋಹಿತ್ ಯಾದವ್, ಸಲೀಂ ಅಲ್ಲ ಎಂದು ತಿಳಿದು ಬಂದಿದೆ. ಆರೋಪಿ ಮುಸ್ಲಿಂ ಎಂದು ಬಿಂಬಿಸಿ ಘಟನೆಗೆ ಕೋಮು ಬಣ್ಣ ಹಚ್ಚುವ ಪ್ರಯತ್ನ ನಡೆದಿರುವ ಹಿನ್ನೆಲೆ ನಾವು ಸತ್ಯಾಸತ್ಯತೆ ತೆರೆದಿಟ್ಟಿದ್ದೇವೆ. ಅಲ್ಲದೆ, ಕೊಲೆ ಪ್ರಕರಣದಲ್ಲಿ ಕೋಮು ಹುಡುಕುವ ಪ್ರಯತ್ನ ಇದಲ್ಲ.
ಇದನ್ನೂ ಓದಿ : FACT CHECK : ನೀಟ್ ಅಕ್ರಮದ ಆರೋಪಿಗಳನ್ನು ಕಾಂಗ್ರೆಸ್ ಕಚೇರಿಯಿಂದ ಬಂಧಿಸಲಾಗಿದೆ ಎಂಬುವುದು ಸುಳ್ಳು


