“ಕೇಸರಿ ಬಟ್ಟೆ ಹೊದ್ದು ಮಲಗಿದ್ದ ವ್ಯಕ್ತಿಗೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ” ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
‘ತ್ರೀನೇತ್ರ ಸೂತ್ರಧಾರ‘ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು ಅಕ್ಟೋಬರ್ 7,2024 ರಂದು ಈ ವಿಡಿಯೋ ಹಂಚಿಕೊಂಡು, “ದೆಹಲಿಯ ಮಾಡೆಲ್ ಟೌನ್‌ನ ಕಾನೂನು ಮತ್ತು ಸುವ್ಯವಸ್ಥೆ ಇದು. ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಆರಾಮವಾಗಿ ಮಲಗಿದ್ದಾನೆ… ಶಾಂತಿದೂತರು ಬೈಕ್‌ನಲ್ಲಿ ಬಂದು ವಿನಾಕಾರಣ ದೊಣ್ಣೆಯಿಂದ ಹೊಡೆಯಲಾರಂಭಿಸಿದ್ದಾರೆ” ಎಂದು ಬರೆದುಕೊಂಡಿದ್ದರು.

ಇದೇ ಬರಹದೊಂದಿಗೆ, ಸದಾ ಕೋಮು ದ್ವೇಷದ ಸುದ್ದಿಗಳನ್ನು ಹಬ್ಬುವ ಬಲಪಂಥೀಯ ಎಕ್ಸ್ ಖಾತೆ ಶ್ರೇಯಾ (@Shreya_Sanatani)ದಲ್ಲೂ ಅಕ್ಟೋಬರ್ 7, 2024ರಂದು ವಿಡಿಯೋ ಹಂಚಿಕೊಳ್ಳಲಾಗಿತ್ತು.

ಫ್ಯಾಕ್ಟ್‌ಚೆಕ್ : ಕೇಸರಿ ಬಟ್ಟೆ ಹೊದ್ದು ಮಲಗಿದ್ದ ವ್ಯಕ್ತಿಗೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬುವುದು ಶುದ್ದ ಸುಳ್ಳು.
ವಿಡಿಯೋ ಕುರಿತು ನಾವು ಮಾಹಿತಿ ಹುಡುಕಿದಾಗ ನಮಗೆ ಅನೇಕ ವರದಿಗಳು ಲಭ್ಯವಾಗಿದೆ. ವರದಿಗಳ ಪ್ರಕಾರ, “ಸಾರ್ವಜನಿಕ ಪಾರ್ಕ್ ಒಂದರಲ್ಲಿ ಮೂತ್ರ ಮಾಡದಂತೆ ವ್ಯಕ್ತಿಯೊಬ್ಬ ಹೇಳಿದ್ದು, ಈ ಕಾರಣಕ್ಕೆ ಮರುದಿನ ಆತನನ್ನು ಅಮಾನುಷವಾಗಿ ಥಳಿಸಲಾಗಿದೆ. ಈ ಪ್ರರಕಣದಲ್ಲಿ ಭಾಗಿಯಾದವರೆಲ್ಲರೂ ಹಿಂದೂಗಳಾಗಿದ್ದಾರೆ.
ಈ ಘಟನೆಯ ಕುರಿತು ಅಕ್ಟೋಬರ್ 6, 2024 ರಂದು ರಿಪಬ್ಲಿಕ್ ವರ್ಲ್ಡ್ ಪ್ರಕಟಿಸಿದ ವರದಿ ನಮಗೆ ಲಭ್ಯವಾಗಿದೆ. ಅದರ ಪ್ರಕಾರ, ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲಾಗಿದೆ. ಉತ್ತರ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಶುಕ್ರವಾರ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಕ್ಟೋಬರ್ 6, 2024 ರಂದು ಇಂಡಿಯಾ ಟಿವಿ ಪ್ರಕಟಿಸಿದ್ದ ವರದಿಯಲ್ಲೂ, “ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪಿಯನ್ನು ತಡೆದ ವ್ಯಕ್ತಿಯೊಬ್ಬನಿಗೆ ಮಾರನೇ ದಿನ ದೊಣ್ಣೆಯಿಂದ ಥಳಿಸಲಾಗಿದೆ. ಆರ್ಯನ್ ಎಂದು ಗುರುತಿಸಲಾದ ಆರೋಪಿ ಮರುದಿನ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ತನ್ನನ್ನು ಮೂತ್ರ ಮಾಡದಂತೆ ತಡೆದ ವ್ಯಕ್ತಿಯನ್ನು ಥಳಿಸಿದ್ದಾನೆ. ಇದಾದ ಬಳಿಕ ಅವರು ಬೈಕ್ ನಲ್ಲಿ ತೆರಳಿದ್ದಾರೆ ಎಂದಿದೆ.
ಮುಂದುವರಿದು, “ಈ ಘಟನೆ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ವಾಯುವ್ಯ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಫುಟ್‌ಪಾತ್‌ನಲ್ಲಿ ಕೇಸರಿ ಬಣ್ಣದ ಬೆಡ್ ಶೀಟ್ ಹಾಕಿ ಮಲಗಿದ್ದ ರಾಮ್‌ಪಾಲ್‌ಗೆ ಆರ್ಯನ್ ಥಳಿಸಲು ಆರಂಭಿಸಿದ್ದ. ಸಂತ್ರಸ್ತ ಎದ್ದು ಕುಳಿತ ನಂತರವೂ ಆರೋಪಿ ದೊಣ್ಣೆಯಿಂದ ಹಲ್ಲೆ ಮುಂದುವರಿಸಿದ್ದಾನೆ, ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ” ಎಂದು ಹೇಳಲಾಗಿದೆ.

ಅಕ್ಟೋಬರ್ 7, 2024 ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲೂ “ವಾಯವ್ಯ ದೆಹಲಿಯ ಮಾಡೆಲ್ ಟೌನ್ನಲ್ಲಿ ಇಬ್ಬರು ಪುರುಷರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಆಕ್ಷೇಪಿಸಿದ್ದಕ್ಕಾಗಿ 28 ವರ್ಷದ ವ್ಯಕ್ತಿಯನ್ನು ದೊಣ್ಣೆಯಿಂದ ಥಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತನನ್ನು ಮಾಡೆಲ್ ಟೌನ್ ನಿವಾಸಿ ರಾಮ್ ಪಾಲ್ ಎಂದು ಗುರುತಿಸಲಾಗಿದ್ದು, ಟೆಂಟ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಆತನ ಅಂಗಡಿಯ ಮುಂದೆ ಮಲಗಿದ್ದಾಗ ಈ ಘಟನೆ ನಡೆದಿದೆ” ಎಂದಿದೆ.

ಒಟ್ಟಿನಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುದನ್ನು ಆಕ್ಷೇಪಿಸಿದ ರಾಮ್‌ಪಾಲ್ ಎಂಬ ವ್ಯಕ್ತಿಗೆ ಆರ್ಯನ್ ಎಂಬಾತ ಹಲ್ಲೆ ನಡೆಸಿರುವ ವಿಡಿಯೋ ಆಗಿದೆ ವೈರಲ್ ಆಗಿರುವುದು. ಅಲ್ಲದೆ, ಅದರಲ್ಲಿ ಯಾವುದೇ ಕೋಮು ಆಯಾಮ ಇಲ್ಲ. ಕೇಸರಿ ಬಟ್ಟೆ ಹೊದ್ದು ಮಲಗಿದ್ದ ವ್ಯಕ್ತಿಗೆ ಶಾಂತಿದೂತರು (ಮುಸ್ಲಿಮರು) ಥಳಿಸಿದ್ದಾರೆ ಎಂಬುವುದು ಶುದ್ದ ಸುಳ್ಳು ಮತ್ತು ಕೋಮು ದ್ವೇಷದ ಪ್ರತಿಪಾದನೆಯಾಗಿದೆ.
ಇದನ್ನೂ ಓದಿ : FACT CHECK : ಹಿಂದೂ ಮಹಿಳೆ ಮುಂದೆ ಶರ್ಟ್ ಬಿಚ್ಚಿದ ಮುಸ್ಲಿಂ ಯುವಕನಿಗೆ ಥಳಿತ..ವೈರಲ್ ವಿಡಿಯೋದ ಅಸಲಿಯತ್ತೇನು?


